ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿರುವ ತುಳಸಿ ಸಸ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತದೆ, ಏಕೆಂದರೆ ಇದನ್ನು ಹಿಂದೂಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿ ಎಂದೂ ಕರೆಯಲ್ಪಡುವ ಈ ಮೂಲಿಕೆಯು ನೆಗಡಿ, ಜ್ವರ ಮತ್ತು ಕೆಮ್ಮು ಮುಂತಾದ ವಿವಿಧ ಕಾಲೋಚಿತ ರೋಗಗಳಿಗೆ ಉತ್ತಮ ಪರಿಹಾರ. ವಾಸ್ತು ಪ್ರಕಾರ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ಕುಟುಂಬದಲ್ಲಿ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ. ಮನೆಯಂಗಳಗಳಲ್ಲಿ ತುಳಸಿಯನ್ನು ನೆಟ್ಟು, ತುಳಸಿ ಕಟ್ಟೆ ಕಟ್ಟಿ, ಅದಕ್ಕೆ ನಿತ್ಯವೂ ಪೂಜಿಸುತ್ತಾರೆ. ತುಳಸಿಗೆ ಮಹಾಲಕ್ಷ್ಮಿಯ ಸ್ಥಾನವಿದೆ.
ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವ-ದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದಿತು. ಆ ಸ್ಥಳಗಳಲ್ಲಿ ಅಮೃತದ ಹನಿ ತುಳಸಿ ಸಸ್ಯಗಳಾಗಿ ಬೆಳೆಯಿತು ಎಂಬ ನಂಬಿಕೆ ಇದೆ. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು.
ಇಂಥಾ ತುಳಸಿಯನ್ನು ನಿಗದಿತ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಸಂಪತ್ತಿನ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ವಾಸ್ತುವೂ ಇದನ್ನೇ ಹೇಳುತ್ತದೆ. ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖ ಮಾಡಿ ನಿಲ್ಲಬೇಕು. ಮುಖ್ಯ ದ್ವಾರದಿಂದ ಬಲಗಡೆಗೆ ಅರ್ಧ ಅಡಿ ದೂರದಲ್ಲಿ ಒಂದು ಗುರುತು ಮಾಡಿ. ಅಲ್ಲಿಂದ ಪೂರ್ವದಿಕ್ಕಿನಲ್ಲಿ 3 ಅಡಿ ದೂರ ಬಿಟ್ಟು ತುಳಸಿ ಕಟ್ಟೆ ಮಾಡಬಹುದು. ಅಂದರೆ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿ ಕಟ್ಟೆಯಿಡಬೇಕು.
ಸಿಟಿಯಲ್ಲಿ ಇರುವವರೂ ಈ ನಿಯಮಾನುಸಾರ ಕಾಂಪಾಂಡ್ ಒಳಗೆ ತುಳಸಿಗಿಡ ಹಾಕಬಹುದು. ಕೆಲವೊಮ್ಮೆ ಮನೆ ಪಶ್ಚಿಮಾಭಿಮುಖವಾಗಿರುತ್ತದೆ. ಅಥವಾ ಉತ್ತರಾಭಿಮುಖವಾಗಿರುತ್ತದೆ. ಆಗ ಮನೆಯ ಮುಖ್ಯ ದ್ವಾರದ ಎದುರು ನಿಂತು ಎಡಗಡೆಗೆ ಅರ್ಧ ಅಡಿ ದೂರದಲ್ಲಿ ಗುರುತು ಮಾಡಿ ಅಲ್ಲಿಂದ ಪಶ್ಚಿಮಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ 3 ಅಡಿ ದೂರದಲ್ಲಿ ತುಳಸಿ ಕಟ್ಟೆ ನಿರ್ಮಿಸಬಹುದು. ಆಗ ಮನೆಯ ಮುಖ್ಯದ್ವಾರದಿಂದ ವಾಯವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿ ಕಟ್ಟೆಯನ್ನು ನಿರ್ಮಿಸಿದ ಹಾಗಾಗುತ್ತದೆ.
ಮನೆಯ ಫ್ಲೋರ್ ಲೆವೆಲ್‌ಗಿಂತ ಕೆಳಗೆ ತುಳಸಿ ಕಟ್ಟೆ ಇದ್ದರೆ ಉತ್ತಮ. ಇಲ್ಲವಾದಲ್ಲಿ ಸಮಾನಾಂತರವಾಗಿಯಾದರೂ ಇರಬೇಕು. ಹಾಗಿದ್ದಲ್ಲಿ ಉತ್ತಮ. ಸಾಮಾನ್ಯವಾಗಿ ಶನಿವಾರ, ಬುಧವಾರ ಅಥವಾ ಗುರುವಾರದ ದಿನ ಬೆಳಗ್ಗಿನ ಹೊತ್ತು ಶ್ರೀ ಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು. ಕೃಷ್ಣ ತುಳಸಿ ಅಂದರೆ ಕೆಂಪು ಅಥವಾ ನಸುಗಪ್ಪು ಬಣ್ಣದ ತುಳಸಿಗಿಡ ಶ್ರೇಷ್ಠ. ಇಲ್ಲವಾದಲ್ಲಿ ಬಿಳಿ ತುಳಸಿಯೂ ಉತ್ತಮವೇ. ತುಳಸಿ ಪೂಜೆಯ ಸಂದರ್ಭದಲ್ಲಿ ಸತ್ತ್ವಗುಣವಿರುವ ಎಳ್ಳೆಣ್ಣೆಯ ಹಣತೆಗಳನ್ನು ಹಚ್ಚಿದರೆ ಒಳ್ಳೆಯದು.
ಇದು ಮನೆಯಲ್ಲಿ ಕಟು ಮಾತುಗಳು ಬರದಂತೆ ತಡೆದು ಸದಾ ಶಾಂತಿ, ನೆಮ್ಮದಿ ಜೊತೆಗೆ ಪಾಸಿಟಿವ್ ವೈಬ್ಸ್ ಮೂಡುವಂತೆ ಮಾಡುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಬಯಸಿದರೆ, ಈ ಗಿಡವನ್ನು ನೆಡಲು ಉತ್ತಮ ಸಮಯವೆಂದರೆ ಕಾರ್ತಿಕ ಮಾಸ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ಮನೆಗೆ ತಂದು ನೆಟ್ಟರೆ ಲಕ್ಷ್ಮಿ ದೇವಿಯೂ ಮನೆಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ.