ಲೈನ್ ಮ್ಯಾನ್ ಇಸ್ ಪವರ್ ಮ್ಯಾನ್ ಎನ್ನುವ ವಾಸ್ತವದ ಬುತ್ತಿ ಕಟ್ಟಿಕೊಂಡು ಬದುಕು ರೂಢಿಸಿಕೊಂಡಿರುವ ಈ ಕಾಲಮಾನದಲ್ಲಿ ಕರೆಂಟ್ ಇಲ್ಲದೆಯೇ ನಮ್ಮ ಅದೆಷ್ಟೋ ಕೆಲಸಗಳು ಹಾಗೆಯೇ ನಿಂತಲ್ಲಿಯೇ ನಿಂತುಬಿಡುತ್ತವೆ. ಒಬ್ಬ ಲೈನ್ ಮ್ಯಾನ್ ಅವರ ಕಾರ್ಯ ನಿರ್ವಹಣೆ, ಜವಾಬ್ದಾರಿಯುತ ಕೆಲಸ, ಜನರಿಂದ ಅನುಭವಿಸುವ ಮಾನಸಿಕ ಕಿರಿ ಕಿರಿ , ಮಳೆಗಾಲದಲ್ಲಿ ಗಾಳಿ ಮಳೆಗೆ ಹಗಲು ರಾತ್ರಿ ಎನ್ನದೆ ದುಡಿಯುವ ಅವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಲೇ ಬೇಕು.
ನಾವು ಕರೆಂಟ್ ಇಲ್ಲಾ ಅಂದಾಕ್ಷಣ ಲೈನ್ ಮ್ಯಾನ್ ಗೆ ಫೋನ್ ಮಾಡಿ ಬಂದು ರಿಪೇರಿ ಮಾಡಿ ಹೋಗಲು ತಿಳಿಸುತ್ತೇವೆ ಆದರೆ ಇಲ್ಲೊಬ್ಬ ಮಹಾನುಭಾವ ಲೈನ್ ಮ್ಯಾನ್ ತನ್ನ ಲವ್ವರ್ ಭೇಟಿ ಮಾಡಲು ಹೋಗುವ ಸಲುವಾಗಿ ಒಂದು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದನಂತೆ. ಇಂತಹ ಕೆಲಸ ಮಾಡಿದ ಆ ವ್ಯಕ್ತಿ ಯಾರೂ? ಈ ಘಟನೆ ನಡೆದಿದ್ದು ಎಲ್ಲಿ ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪ್ರೇಮಿಗಳು ಪ್ರೀತಿಯಲ್ಲಿದ್ದಾಗ ಎಲ್ಲ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ. ಅವರ ಕೆಲಸಗಳು ಬೇರೆಯವರಿಗೆ ತೊಂದರೆ ಕೊಡುತ್ತೆ ಎಂಬುದನ್ನು ಮರೆತುಬಿಡುತ್ತಾರೆ. ಅದೇ ರೀತಿ ಲೈನ್‌ಮ್ಯಾನ್ ಒಬ್ಬ ಕತ್ತಲೆಯ ನೆಪದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ಆಗಾಗ್ಗೆ ಕಡಿತಗೊಳಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಬಿಹಾರದ ಪುರ್ನಿಯಾದಲ್ಲಿ ವರದಿಯಾದೆ. ಪುರ್ನಿಯಾ ಜಿಲ್ಲೆಯ ಗಣೇಶ್‍ಪುರ ಗ್ರಾಮದ ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ರೀತಿಯ ಕರೆಂಟ್ ಸಮಸ್ಯೆಯಾಗುತ್ತಿಲ್ಲ.
ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿದ್ದರು. ತಿಂಗಳಲ್ಲಿ ಒಮ್ಮೆಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು. ಇದರ ಬಗ್ಗೆ ನಂತರ ಹೆಚ್ಚೇ ಪರಿಶೀಲನೆ ಮಾಡಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ತಿಳಿದು ಗ್ರಾಮಸ್ಥರು ಆಘಾತಕ್ಕೆ ಒಳಗಾದರು.
ನಂತರ ಆ ಲೈನ್‌ಮ್ಯಾನ್ ನನ್ನು ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಒಂದು ಯೋಚನೆಯನ್ನು ರೂಪಿಸಿದರು. ಗ್ರಾಮಸ್ಥರು ಪ್ಲಾನ್ ಮಾಡಿದ ರೀತಿಯಲ್ಲಿಯೇ ಲೈನ್‌ಮ್ಯಾನ್ ಬಂದಿದ್ದು, ಎಲ್ಲರೂ ಕೋಪಗೊಂಡು ಅವನನ್ನು ಥಳಿಸಿದ್ದಾರೆ. ನಂತರ ಅವರು ಆ ಲೈನ್‌ಮ್ಯಾನ್ನನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಗ್ರಾಮದ ಮುಖ್ಯಸ್ಥ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ತೀರ್ಮಾನ ಮಾಡಿದರು.
ಗ್ರಾಮದ ಮುಖ್ಯಸ್ಥ ಮತ್ತು ಇತರ ಗ್ರಾಮ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಲೈನ್‌ಮ್ಯಾನ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಗ್ರಾಮಸ್ಥ ಮಾರಾರ್ ರಾಮ್ ಮುರ್ಮು ಗುರುವಾರ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು. ಗ್ರಾಮಸ್ಥರು ಲೈನ್‌ಮ್ಯಾನ್ ವಿರುದ್ಧ ಯಾವುದೇ ಪೊಲೀಸ್ ಕೇಸ್ ದಾಖಲಿಸಿಲ್ಲ. ಆದರೆ ದೂರು ಬಂದರೆ ಮಾತ್ರ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.