ನಾಯಿಕೊಡೆ ಎಂದೂ ಕರೆಯಲ್ಪಡುವ ಅಣಬೆಯನ್ನು ನಾವು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಣಬೆ ಸಸ್ಯಹಾರವೋ, ಮಾಂಸಹಾರವೋ ಎಂಬ ಬಗ್ಗೆ ಒಬ್ಬೊಬ್ಬರು ತಮ್ಮ ತಿಳಿವಳಿಕೆಗೆ ಅನುಗುಣವಾಗಿ ಒಂದೊಂದು ತೆರನಾಗಿ ಮಾತನಾಡುತ್ತಾರೆ.
ನಾವು ಆಹಾರದಲ್ಲಿ ಸೇವಿಸಲು ಯೋಗ್ಯವಾಗಿರುವ ಅಣಬೆ ಪ್ರಭೇದಗಳಲ್ಲಿ 100 ಪ್ರಬೇಧಗಳನ್ನು ಪ್ರಾಯೋಗಿಕವಾಗಿ, 50 ಪ್ರಭೇದಗಳನ್ನು ಖರ್ಚು ವೆಚ್ಚವಿಲ್ಲದೆ, 30 ಪ್ರಭೇದಗಳನ್ನು ವಾಣಿಜ್ಯೋದ್ಯಮ ಉದ್ದೇಶದಿಂದ ಮತ್ತು ಕೇವಲ 6 ಪ್ರಭೇದಗಳನ್ನು ಮಾತ್ರ ಹಲವಾರು ದೇಶಗಳಲ್ಲಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗಾಗಿ ಬೆಳೆಯಲಾಗುತ್ತದೆ. ಬಟನ್, ಓಯಿಸ್ಟರ್, ಮಿಲ್ಕಿ, ಸೀಟೆಕ್, ಪ್ಯಾಡಿ ಸ್ಟ್ರೇವ್, ಜ್ವೆಸ್ ಇಯರ್, ಸಿಲ್ವರ್ ಇಯರ್, ಮೈಟೆಕ್, ಟರ್ಕಿ ಟೈಲ್, ರೀಶಿ ಇವು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಪ್ರಮುಖ ಅಣಬೆ ಪ್ರಭೇದಗಳಾಗಿವೆ.
ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಇದರಿಂದ ಹಲವಾರು ಪ್ರಯೋಜನಗಳು ಇರುವ ಕಾರಣ ಆಯುರ್ವೇದದಲ್ಲಿಯೂ ಇದಕ್ಕೆ ತನ್ನದೇ ಆದ ವಿಶೇಷತೆ ಇದೆ.
ಅಣಬೆಯು ಕಡಿಮೆ ಶರ್ಕರ ಪಿಷ್ಟ, ಕಡಿಮೆ ಕೊಬ್ಬಿನ ಅಂಶ, ಹೆಚ್ಚು ಪ್ರೊಟೀನ್, ವಿಟಮಿನ್ ಬಿ-1, ಬಿ-2 , ಕಬ್ಬಿಣಾಂಶ, ಪೊಟ್ಯಾಶಿಯಂ, ಸೋಡಿಯಂ ಹಾಗೂ ಅಮೈನೋ ಆಮ್ಲಗಳು, ಆ್ಯಂಟಿಬಯೋಟಿಕ್ ಕಿಣ್ವಗಳು, ಆ್ಯಂಟಿ ಆಕ್ಸಿಡೆಂಟ್‌ಗಳ ಜತೆಗೆ ಶೇಕಡಾ 80-90 ನೀರಿನಂಶ, ಶೇಕಡಾ 8-10ರಷ್ಟು ನಾರಿನಂಶ ಹೊಂದಿದೆ. ಒಣಗಿದ ಅಣಬೆಯಲ್ಲಿ ವಿಶೇಷವಾಗಿ ವಿಟಾಮಿನ್ ಬಿ1,ಬಿ2, ಬಿ5, ಬಿ6, ಮತ್ತು ಬಿ7 ಅಂಶ ಹೆಚ್ಚಾಗಿ ಇರುತ್ತದೆ.
ಅಣಬೆಗಳು ಆಂಟಿ ಆಕ್ಸಿಡೆಂಟ್ ಹೊಂದಿರುವುದರಿಂದ ಅವು ದೇಹವನ್ನು ಕ್ಯಾನ್ಸರ್, ಹೃದ್ರೋಗ ಮುಂತಾದ ಖಾಯಿಲೆಯಿಂದ ರಕ್ಷಿಸುತ್ತದೆ. ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ, ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ.
ಬಿಳಿ ಅಣಬೆಗಳು ಕ್ಯಾಲ್ಶಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಾ ಬಂದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಬಿಳಿ ಅಣಬೆಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ನಿಯಂತ್ರಿಸುತ್ತದೆ. ಅಣಬೆಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ. ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಣಬೆಯನ್ನು ಸೇವಿಸುವುದರಿಂದ ಮುಖದಲ್ಲಿನ ಮೊಡವೆಗಳು ದೂರವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಅಣಬೆಯ ಸೇವನೆಯಿಂದ ಬಹಳ ಪ್ರಯೋಜನಗಳು ಇರುವುದರಿಂದ ಅಣಬೆಯನ್ನು ಸೇವಿಸುವುದು ಉತ್ತಮ.
ನಾವು ತಿನ್ನುವ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ಅತ್ಯಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯದಾಯಕ ದೇಹ ಹೊಂದಬಹುದು. ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ವಿಟಮಿನ್ ಡಿ ಅತ್ಯವಶ್ಯಕ. ಇದನ್ನು ಅಣಬೆ ಒದಗಿಸುತ್ತದೆ.