ದೊಡ್ಮನೆಯ ಮಗ, ಕರುನಾಡಿನ ರಾಜರತ್ನ ಗಂಧದಗುಡಿಯ ಅರಸು, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ಕುಟುಂಬಸ್ಥರು ಅಭಿಮಾನಿ ದೇವರುಗಳು ಕರುನಾಡಿನ ಜನರು ಹೊರರಾಜ್ಯದ ಮಂದಿಯಷ್ಟೇ ಕಣ್ಣೀರಾಕಿಲ್ಲ. ಇವರಷ್ಟೇ ದುಃಖ, ಇವರಷ್ಟೇ ನೋವು , ಇವರಷ್ಟೇ ಸಂಕಟವನ್ನ ಬೆಳ್ಳಿತೆರೆಯೂ ಅನುಭವಿಸಿದೆ. ಆದರೆ, ಬಾಯ್ದಿಟ್ಟು ಹೇಳಿಕೊಳ್ಳೋದಕ್ಕೆ ಉಸಿರಿಲ್ಲ ಕಣ್ಣೀರು ಸುರಿಸೋದಕ್ಕೆ ಜೀವ ಇಲ್ಲ.
ಬಾಲನಟನಾಗಿ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಬಾಲ್ಯದಲ್ಲೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ ಮಾಸ್ಟರ್ ಲೋಹಿತ್, ನಟಸಾರ್ವಭೌಮನಾಗಿ ಬೆಳೆದು ಗಂಧದಗುಡಿಯ ಅರಸನಾದರು. 45 ವರ್ಷದ ತಮ್ಮ ಸಿನಿಜರ್ನಿಯಲ್ಲಿ 46 ಸಿನಿಮಾ ಮಾಡಿದರು. ನಟನಾಕೌಶಲ್ಯದಿಂದ, ನಯ ವಿನಯದಿಂದ, ಸರಳ ಮನೋಭಾವದಿಂದ, ದಾನ – ಧರ್ಮದಿಂದ ಶ್ರದ್ಧಾ ಭಕ್ತಿಯಿಂದ ಹಾಗೂ ಪ್ರೀತಿ ವಾತ್ಸಲ್ಯದಿಂದ ಕೇವಲ ಒಂದೇ ಒಂದು ಜನ್ಮದಲ್ಲಿ ಏಳು ಜನ್ಮಕ್ಕಾಗುವಷ್ಟು ಪ್ರೀತಿ ಕೀರ್ತಿ ಹೆಸರನ್ನು ಸಂಪಾದನೆ ಮಾಡಿ ಎಲ್ಲವನ್ನೂ, ಎಲ್ಲರನ್ನೂ ಅಗಲಿ ನಡೆದರು. ಆದರೆ ಅವರು ಗಳಿಸಿದ ಅಪಾರ ಪ್ರೀತಿಯಿಂದ ಎಷ್ಟೇ ವರ್ಷಗಳು ಉರುಳಿದರೂ ಕೂಡ ಕರುನಾಡಿನ ಕನ್ನಡಿಗರ ಹೃದಯದಲ್ಲಿ , ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದೊಡ್ಮನೆ ಮಗನ ಹೆಸರು ಅಜರಾಮರ.
ಇಷ್ಟೆಲ್ಲದರ ಜೊತೆಗೆ ಪವರ್ ಸ್ಟಾರ್ ಜೀವನದಲ್ಲಿ ಬೆಳ್ಳಿತೆರೆಯ ಪಾತ್ರವೆಷ್ಟು ಎನ್ನುವುದರ ಬಗ್ಗೆ ಕೊಂಚ ಮಾತನಾಡಲೇ ಬೇಕು. ದೊಡ್ಮನೆ ಹುಡುಗನನ್ನು ಬೆಳ್ಳಿತೆರೆ ಬರೋಬ್ಬರಿ 45 ವರ್ಷಗಳ ಕಾಲ ತಲೆ ಮೇಲೆ ಹೊತ್ತು ಹೊತ್ತು ಮೆರೆಸಿದೆ. ಕರ್ನಾಟಕದ ಮೂಲೆಮೂಲೆ ಮಾತ್ರವಲ್ಲ ಭರತಖಂಡ ಸುತ್ತೆಲ್ಲ ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದೆ. ನಟಸಾರ್ವಭೌಮ ಎನ್ನುವ ಪಟ್ಟ ಕಟ್ಟಿ ಗಡಿದಾಟಿಸಿದೆ. ಖಜಾನೆಗೆ ಕೋಟಿ ಕೋಟಿ ಹರಿದುಬರುವಂತೆ ಮಾಡಿದೆ ಮಾತ್ರವಲ್ಲ ಬೆಲೆಯೇ ಕಟ್ಟಲಾಗದ ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಮಾಡಿಕೊಟ್ಟಿದೆ. ಇಷ್ಟೆಲ್ಲಾ ಸಾಧ್ಯವಾಗಿದ್ದು ಬೆಳ್ಳಿತೆರೆಯಿಂದ ಮತ್ತು ಅಪ್ಪು ನಟನಾಚಾತುರ್ಯದಿಂದ..
ದೊಡ್ಮನೆ ರಾಜಕುಮಾರನ ಸಿನಿಮಾ ಬರ್ತಿದೆ ಎಂದರೆ ಸಾಕು ಬೆಳ್ಳಿಪರದೆ ಕೇಕೆ ಹಾಕುತ್ತಿತ್ತು. ಬಾಕ್ಸ್ ಆಫೀಸ್ ಬೆಟ್ಟದ ಹೂ ಮುಡಿದುಕೊಂಡು ಕುಣಿಯುತ್ತಿತ್ತು. ಇದನ್ನೆಲ್ಲಾ ನೋಡೋದಕ್ಕೆ ಅಣ್ಣಾಬಾಂಡ್ ಥಿಯೇಟರ್ ಗೆ ಎಂಟ್ರಿಕೊಡ್ತಿದ್ದರು. ಅಭಿಮಾನಿ ದೇವರುಗಳು ಜೊತೆ ಕುಳಿತು ಸಿನಿಮಾ ನೋಡ್ತಿದ್ದರು . ಇನ್ನೆಲ್ಲಿ ಯುವರತ್ನನಿಗಾಗಿ ಕಾದು ಕುಳಿತರು ಬರುವುದಿಲ್ಲ. ಈ ಕಟು ಸತ್ಯ ಅರಿತಿರುವ ಸಿಲ್ವರ್ ಸ್ಕ್ರೀನ್ ನಂತೆ ಫ್ಯಾನ್ಸ್ ಕೂಡ ಎದೆಭಾಗ ಹಿಡಿದು ನೋವುಣ್ಣುತ್ತಿದ್ದಾರೆ. ನಮ್ಮ ಜೊತೆ ಇನ್ಯಾವತ್ತೂ ಕುಳಿತುಕೊಂಡು ಸಿನಿಮಾ ನೋಡೋದಕ್ಕೆ ಅಪ್ಪು ಸಾರ್ ಬರಲ್ಲವಲ್ಲ ಎಂದು ಕಣ್ಣೀರಾಗುತ್ತಿದ್ದಾರೆ. ಮಿಡ್ ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋ, ಫಸ್ಟ್ ಡೇ ಫಸ್ಟ್ ಶೋ ಅಂತ ರಾತ್ರೋರಾತ್ರಿ ಅಪ್ಪುನಾ ನೋಡಲಿಕ್ಕೆ ಆಗಲ್ಲವಲ್ಲ ದೇವಾ ಎಂದು ಹೃದಯ ಹಿಡಿದು ನೊಂದುಕೊಳ್ಳುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ಜೇಮ್ಸ್ ನಿನ್ನೆ ವಿಶ್ವಾದ್ಯಂತ ರಿಲೀಸ್ ಆಗಿದೆ. ಪುನೀತ್ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಈ ಸಿನೆಮಾ ನೋಡಿದ ಪ್ರತಿಯೊಬ್ಬ ಅಪ್ಪು ಅಭಿಮಾನಿಯೂ ಕಣ್ಣೀರು ಸುರಿಸಿದರು. ಜೇಮ್ಸ್ ಚಿತ್ರ ಎಲ್ಲಾ ಕನ್ನಡ ಸಿನೆಮಾ ದಾಖಲೆಯನ್ನೇ ಧೂಳಿಪಟ ಮಾಡಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ಅಭಿಮಾನಿಯೂ ಅಪ್ಪು ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಜೇಮ್ಸ್ ಚಿತ್ರ ನೋಡಿ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.