ಇದೀಗ ಪ್ರಪಂಚದಾದ್ಯಂತ ಹೆಚ್ಚು ಜನರು ಸಿರಿಧಾನ್ಯ ಬಳಕೆಗೆ ಒತ್ತು ಕೊಡುತ್ತಿದ್ದಾರೆ ಹಾಗೂ ಅವುಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಿದ್ದಾರೆ. ಸಿರಿಧಾನ್ಯ ಎಂದರೇನು, ಸಿರಿಧಾನ್ಯಗಳ ಪ್ರಕಾರಗಳು ಹಾಗೂ ಅವುಗಳಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಸಿರಿಧಾನ್ಯವು ಮಾನವನಿಗೆ ತಿಳಿದಿರುವ ಹಳೆಯ ಆಹಾರದಲ್ಲಿ ಒಂದಾಗಿದೆ. ಸಿರಿಧಾನ್ಯ ಒಂದು ಸಣ್ಣ ಬೀಜದ ಹುಲ್ಲಿನ ಗುಂಪಾಗಿದೆ ಇದನ್ನು ಏಕದಳ ಬೆಳೆಗಳು ಅಥವಾ ಧಾನ್ಯಗಳಾಗಿ ವಿಶ್ವದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಸಿರಿಧಾನ್ಯಗಳಲ್ಲಿ ಕೆಲವು ಬಗೆಗಳಿವೆ ಧನಾತ್ಮಕ ಧಾನ್ಯ, ತಟಸ್ಥ ಧಾನ್ಯ, ನಕಾರಾತ್ಮಕ ಧಾನ್ಯಗಳೆಂದು ಮೂರು ವಿಧವಾಗಿ ವರ್ಗೀಕರಿಸಲಾಗಿದೆ. ರಾಗಿ, ಜೋಳ, ಸಜ್ಜೆ, ಮೆಕ್ಕೆಜೋಳ, ಬರಗು ಇವುಗಳು ತಟಸ್ಥ ಧಾನ್ಯಗಳಾಗಿವೆ. ತಟಸ್ಥ ಧಾನ್ಯಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಆದರೆ ಇವುಗಳಲ್ಲಿ ರೋಗ ಗುಣಪಡಿಸುವ ಲಕ್ಷಣಗಳಿಲ್ಲ. ಈ ಧಾನ್ಯವನ್ನು ಸೇವಿಸುವುದರಿಂದ ಅಸ್ತಿತ್ವದಲ್ಲಿರುವ ರೋಗ ನಿವಾರಣೆಯಾಗುವುದಿಲ್ಲ ಹೀಗಾಗಿ ಇವುಗಳಿಗೆ ತಟಸ್ಥ ಧಾನ್ಯ ಎಂದು ಕರೆಯುತ್ತಾರೆ.
ಅಕ್ಕಿ ಮತ್ತು ಗೋಧಿಯನ್ನು ನಕಾರಾತ್ಮಕ ಧಾನ್ಯ ಎಂದು ಕರೆಯುತ್ತಾರೆ. ಇವುಗಳನ್ನು ನಿರಂತರವಾಗಿ ಸೇವಿಸಿದರೆ ಬೊಜ್ಜು, ರಕ್ತದೊತ್ತಡ, ಡಯಾಬಿಟೀಸ್ ನಂಥಹ ಖಾಯಿಲೆಗೆ ಕಾರಣವಾಗುತ್ತದೆ ಆದ್ದರಿಂದ ಈ ಧಾನ್ಯವನ್ನು ನಕಾರಾತ್ಮಕ ಧಾನ್ಯ ಎಂದು ಕರೆಯುತ್ತಾರೆ. ಸಕಾರಾತ್ಮಕ ಸಿರಿಧಾನ್ಯ ಉತ್ತಮ ರೋಗ ಗುಣಪಡಿಸುವ ಲಕ್ಷಣಗಳನ್ನು ಹೊಂದಿದೆ. ಅರ್ಕ, ನವಣೆ, ಸಾಮೆ, ಊದಲು, ಕೊರ್ಲೆ ಸಕಾರಾತ್ಮಕ ಧಾನ್ಯಗಳಾಗಿವೆ. ಸಾಮಾನ್ಯವಾಗಿ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ನಾರಿನಂಶ ಅನುಪಾತ 10 ಕ್ಕಿಂತ ಕಡಿಮೆ ಇದ್ದರೆ ಅವುಗಳು ಉತ್ತಮ ವೈದ್ಯಕೀಯ ಹಾಗೂ ರೋಗ ಗುಣಪಡಿಸುವ ಲಕ್ಷಣಗಳನ್ನು ಹೊಂದಿರುತ್ತವೆ ಅವು ಆರೋಗ್ಯಕ್ಕೆ ಉತ್ತಮ. ಸಿರಿಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್ ಹಾಗೂ ನಾರಿನಂಶ ಅನುಪಾತ 10 ಕ್ಕಿಂತ ಕಡಿಮೆ ಇದೆ ಆದ್ದರಿಂದ ಸಿರಿಧಾನ್ಯವನ್ನು ಹೆಚ್ಚಾಗಿ ಸೇವಿಸಬೇಕು.
ಸಿರಿಧಾನ್ಯ ಪೌಷ್ಟಿಕಾಂಶ ಹೊಂದಿದೆ, ಸುಸ್ಥಿರ ಆಹಾರವಾಗಿದೆ. ಸಿರಿಧಾನ್ಯಗಳನ್ನು ಕೆಟ್ಟ ಹವಾಮಾನ ಸ್ಥಿತಿ ಇದ್ದಾಗಲೂ ಬೆಳೆಯಬಹುದು ಆದ್ದರಿಂದ ಇವು ಭವಿಷ್ಯದ ಬೆಳೆಗಳಾಗಿದೆ. ಇವುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿದೆ, ಕಾರ್ಬೋಹೈಡ್ರೇಟ್ ಮೊತ್ತ ಒಂದೆ ಆಗಿರುತ್ತದೆ ಹೆಚ್ಚು ನಾರಿನಂಶ ಇರುವುದರಿಂದ ಜಾಸ್ತಿ ಹೊತ್ತು ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ಸಿರಿಧಾನ್ಯ ಹೆಚ್ಚು ಪ್ರೊಟೀನ್ ಅಂಶ ಹೊಂದಿದೆ ಹಾಗಾಗಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ನವಣೆ ಹಳದಿ ಬಣ್ಣದಲ್ಲಿರುತ್ತದೆ 8% ನಾರಿನಂಶ ಹೊಂದಿರುತ್ತದೆ. ಊದಲು ಇದು ಮಬ್ಬು ಬಿಳುಪಾಗಿರುತ್ತದೆ 10% ನಾರಿನಂಶ ಹೊಂದಿರುತ್ತದೆ. ಅರ್ಕ ಇದು ನಸುಗೆಂಪು ಗುಲಾಬಿ ಬಣ್ಣದಲ್ಲಿರುತ್ತದೆ, 9% ನಾರಿನಂಶ ಹೊಂದಿರುತ್ತದೆ. ಸಾಮೆ ಇದು ಮಬ್ಬು ಬಿಳುಪು ಬಣ್ಣದಲ್ಲಿರುತ್ತದೆ, 10% ನಾರಿನಂಶ ಹೊಂದಿರುತ್ತದೆ. ಕೊರ್ಲೆ ಇದು ತಿಳಿ ಹಸಿರು ಬಣ್ಣದಲ್ಲಿರುತ್ತದೆ, 12.5% ನಾರಿನಂಶ ಹೊಂದಿರುತ್ತದೆ.
ಅರ್ಕ ಧಾನ್ಯವು ನಮ್ಮ ದೇಹದ ಮೂಳೆ ಮಜ್ಜೆಯನ್ನು, ರಕ್ತ ಹಾಗೂ ರೋಗ ನಿರೋಧಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ನವಣೆ ಧಾನ್ಯದಲ್ಲಿ ನರನಾಡಿಗಳನ್ನು ಶುದ್ಧ ಮಾಡುವ ಶಕ್ತಿ ಇದೆ. ಸಾಮೆ ಧಾನ್ಯದಲ್ಲಿ ಗರ್ಭಕೋಶ, ಅಂಡಾಣುಗಳನ್ನು ಶುದ್ಧ ಮಾಡುವ ಶಕ್ತಿ ಇದೆ. ಊದಲು ಧಾನ್ಯದಲ್ಲಿ ಮೂತ್ರಪಿಂಡ, ಯಕೃತ್ತು, ಪಿತ್ತಕೋಶಗಳನ್ನು ಶುದ್ಧ ಮಾಡುವ ಗುಣವಿದೆ.
ಕೊರ್ಲೆ ಧಾನ್ಯದಲ್ಲಿ ಗ್ಯಾಸ್ಟ್ರೊ ಇಂಟೆಸ್ಟಿನಲ್, ಪಚನನಾಳವನ್ನು ಶುದ್ಧ ಮಾಡುವ ಶಕ್ತಿ ಇದೆ, ಚರ್ಮಕ್ಕೆ ಒಳ್ಳೆಯದು, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವ ಗುಣ ಹೊಂದಿದೆ ಅಲ್ಲದೆ ಆಂಟಿ ಕ್ಯಾನ್ಸರ್ ಗುಣ ಹೊಂದಿದೆ. ಸಿರಿಧಾನ್ಯಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಡಯಾಬಿಟೀಸ್ ಬರದಂತೆ ತಡೆಯುತ್ತದೆ. ರಕ್ತದೊತ್ತಡ ನಿವಾರಿಸುತ್ತದೆ. ಉಸಿರಾಟದ ಸಮಸ್ಯೆಯನ್ನು ಸಿರಿಧಾನ್ಯ ನಿವಾರಿಸುತ್ತದೆ ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಿರಿಧಾನ್ಯಗಳನ್ನು ರಾತ್ರಿಯಿಡಿ ಅಥವಾ ಅಡುಗೆ ಮಾಡುವ 4-5 ಗಂಟೆಗಳ ಮೊದಲು ನೆನೆಹಾಕಬೇಕು, ನಯಗೊಳಿಸಿದ ಸಿರಿಧಾನ್ಯವನ್ನು ಖರೀದಿಸಬಾರದು. ಪ್ರತಿದಿನ ಒಂದೆ ರೀತಿಯ ಸಿರಿಧಾನ್ಯ ಬಳಸಬಾರದು. ಸಿರಿಧಾನ್ಯಗಳನ್ನು ಮಿಶ್ರಣ ಮಾಡಬಾರದು ಪ್ರತ್ಯೇಕವಾಗಿ ಬಳಸಬೇಕು. ಸಿರಿಧಾನ್ಯ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನಮ್ಮ ಜೀವನದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ, ನೀವು ಕೂಡ ಇನ್ನು ಸಿರಿಧಾನ್ಯ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.