ಒಂದು ಸಂಸ್ಕಾರ, ಒಂದು ಸನ್ನಡತೆ, ಒಂದು ಸದ್ವಿಚಾರ, ಒಂದು ಸುಖಜೀವನ, ಒಂದು ಸುಂದರ ದಾಂಪತ್ಯ, ಒಂದು ಸರಳ ಸಂಸಾರ, ಒಂದು ಶಕ್ತಿಯುತ ಸಮಾಜ, ಒಂದು ವಿಶೇಷವಾದ ದೇಶ ಆಮೇಲೆ ಜಗತ್ತು ಎಲ್ಲವಕ್ಕೂ ವಿದ್ಯೆ ಎಂಬ ಸಾಧನ ಅಗತ್ಯ. ಗೆಲುವಿಗೆ ಮೊದಲು ಆತ್ಮವಿಶ್ವಾಸ ಬೇಕು. ಈ ಆತ್ಮವಿಶ್ವಾಸ ಹೆಚ್ಚಲು ಅಥವಾ ಸರಿಯಾದ ಮಾರ್ಗದಲ್ಲಿ ಗುರಿ ತಲುಪಲು ವಿದ್ಯೆ ಬೇಕು. ಈ ವಿದ್ಯೆ ಬದುಕನ್ನು ಹಸನಾಗಿಸುವಲ್ಲಿ ಒಂದಲ್ಲ, ಸಾವಿರ ದಾರಿ ತೋರುತ್ತದೆ.
ವಿದ್ಯೆಯ ವಿಶೇಷ ಗುಣವೆಂದರೆ ಅದು ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ, ಒಂದು ದೇಶದ ಬೆಳವಣಿಗೆಯನ್ನೂ ಆ ದೇಶದ ಸಂಸ್ಕೃತಿಯನ್ನೂ ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ವಿದ್ಯೆ ಸಂಪತ್ತೂ ಹೌದು; ಸಂಸ್ಕಾರವೂ ಹೌದು. ವಿದ್ಯೆ ಕಲಿಯಲು ಯಾವುದೇ ಜಾತಿ ಮತದ ಅಂತರವಿಲ್ಲ ಬಡವ ಶ್ರೀಮಂತ ಎನ್ನುವ ಭೇದ ಭಾವ ಸಹ ಇಲ್ಲ. ಇಲ್ಲೊಬ್ಬಳು ಹಾಲು ಮಾರುವವರ ಮಗಳು ದನದ ಕೊಟ್ಟಿಗೆಯಲ್ಲಿ ಕೂತು ಓದಿ ಮಾಡಿದ ಸಾಧನೆಗೆ ಎಲ್ಲರೂ ಮೆಚ್ಚುಗೆ ನೀಡಲೇಬೇಕು. ಹಾಗಾದರೆ ಆಕೆ ಮಾಡಿದ ಸಾಧನೆ ಏನೂ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರಾಜಸ್ಥಾನದ ಉದಯಪುರದಲ್ಲಿ ಹಾಲು ಮಾರಾಟ ಮಾಡುವ ಮಹಿಳೆಯೊಬ್ಬರ ಮಗಳು ತನ್ನ ಶ್ರಮ ಹಾಗೂ ಸಾಮರ್ಥ್ಯದಿಂದ ಒಂದು ಉನ್ನತವಾದ ಸ್ಥಾನವನ್ನು ಪಡೆದುಕೊಳ್ಳುವತ್ತ ಸಜ್ಜಾಗುತ್ತಿದ್ದಾರೆ. ಈ ಯುವತಿಯ ಹೆಸರು ಸೋನಲ್ ಶರ್ಮಾ. ಇವರು 2018ರಲ್ಲಿ ರಾಜಸ್ಥಾನ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದು, ಈಗ ನ್ಯಾಯಾಧೀಶೆಯಾಗಲು ಹೊರಟಿದ್ದಾರೆ. 26 ವರ್ಷ ವಯಸ್ಸಿನ ಸೋನಲ್ ತಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು, ಸಂಕಷ್ಟಗಳನ್ನು ಎದುರಿಸುತ್ತಲೇ ತನ್ನ ಶಿಕ್ಷಣವನ್ನು ಮುಂದುವರಿಸಿದರು.
ಸೋನಲ್ ಗೋಶಾಲೆಯಲ್ಲಿ ಕುಳಿತು ಓದುವ ಮೂಲಕ ಬಿಎ, ಎಲ್ ಎಲ್ ಬಿ, ಎಲ್ ಎಲ್ ಎಂ ಪದವಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ವರದಿಯೊಂದರ ಪ್ರಕಾರ ಒಂದು ವರ್ಷದ ತರಬೇತಿಯ ನಂತರ ರಾಜಸ್ಥಾನದ ನ್ಯಾಯಾಲಯ ವೊಂದರಲ್ಲಿ ಸೋನಾಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗುತ್ತಿದ್ದಾರೆ. ಅವರು ಬರೆದಿದ್ದ ನ್ಯಾಯಾಂಗ ಪರೀಕ್ಷೆಯ ಫಲಿತಾಂಶ ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಕಟವಾಗಿತ್ತು.
ಆದರೆ ಅದರ ಫೈನಲ್ ಲಿಸ್ಟ್ ನಲ್ಲಿ ಸೋನಲ್ ಅವರ ಹೆಸರು ಇರಲಿಲ್ಲ. ಅವರ ಹೆಸರನ್ನು ವೈಟಿಂಗ್ ಲಿಸ್ಟ್ ನಲ್ಲಿ ಇರಿಸಲಾಗಿತ್ತು. ಏಕೆಂದರೆ ಸಾಮಾನ್ಯ ಕಟ್ ಆಫ್ ಅಂಕಗಳಿಗೆ ಸೋನಲ್ ಶರ್ಮಾ ಅವರು ಒಂದು ಅಂಕ ಕಡಿಮೆ ಪಡೆದಿದ್ದರು ಎನ್ನಲಾಗಿತ್ತು. ಆದರೆ ಸೋನಲ್ ಅವರ ಅದೃಷ್ಟ ಅವರ ಜೊತೆಗಿತ್ತು. ಈ ಹಿಂದೆ ಪರೀಕ್ಷೆ ಫಲಿತಾಂಶದ ನಂತರ ಅಂತಿಮ ಪಟ್ಟಿಯಲ್ಲಿ ಪ್ರಕಟಣೆ ಮಾಡಲಾಗಿದ್ದ ಅಭ್ಯರ್ಥಿಗಳ ಹೆಸರುಗಳಲ್ಲಿ ಸ್ಥಾನ ಪಡೆದಿದ್ದ ಕೆಲವರು ಸರ್ವಿಸ್ ಗೆ ಹಾಜರಾಗಲಿಲ್ಲ. ಆದ್ದರಿಂದ ಸೋನಲ್ ಅವರಿಗೆ ಉಳಿದಿರುವ ಸೀಟುಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸೂಚನೆ ದೊರೆತ ನಂತರ ಸೋನಲ್ ತಡಮಾಡದೇ ರಾಜಸ್ಥಾನದ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅದಾದ ನಂತರ ಹೈಕೋರ್ಟ್ ಸೋನಲ್ ಅವರ ಹೆಸರನ್ನು ಫೈನಲ್ ಪಟ್ಟಿಗೆ ಸೇರ್ಪಡೆ ಮಾಡವಂತೆ ನಿರ್ದೇಶನವನ್ನು ನೀಡಿತು. ಸೋನಲ್ ಅವರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ಮಟ್ಟದಲ್ಲಿ ಇರಲಿಲ್ಲ. ಟ್ಯೂಷನ್ ಫೀಸನ್ನು ಕೊಡುವುದು ಸಹಾ ಅವರಿಗೆ ಸಾಧ್ಯವಿರಲಿಲ್ಲ. ಆದ್ದರಿಂದಲೇ ಟ್ಯೂಷನ್ ಇಲ್ಲಿದೇ ತಾನೇ ಸ್ವಂತವಾಗಿ ಆಕೆ ಅಧ್ಯಯನವನ್ನು ನಡೆಸಿದರು.
ಗೋಶಾಲೆಯ ಒಂದು ಮೂಲೆಯಲ್ಲಿ, ಪ್ಲಾಸ್ಟಿಕ್ ಡಬ್ಬದಿಂದ ಮಾಡಲಾದ ಟೇಬಲ್ ಲಿಫ್ಟ್ ಮೇಲೆ ಕುಳಿತು ಅಧ್ಯಯನವನ್ನು ನಡೆಸುತ್ತಿದ್ದರು. ಸೋನಲ್ ಕಾಲೇಜಿಗೆ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದರು. ಅಧ್ಯಯನ ಮಾಡುತ್ತಲೇ ಗೋಶಾಲೆಯಲ್ಲಿ ಇದ್ದಂತಹ ಹಸುಗಳ ಆರೈಕೆಯನ್ನು ಮಾಡುತ್ತಾ ಅಲ್ಲಿನ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ತನ್ನ ತಂದೆ ತಾಯಿ ತನ್ನ ಶಿಕ್ಷಣಕ್ಕಾಗಿ ಸಾಲವನ್ನು ಮಾಡಿದ್ದರು ಎಂದು ಹೇಳುವ ಸೋನಲ್, ತಂದೆ-ತಾಯಿಯ ಚಪ್ಪಲಿಗಳಲ್ಲಿ ಯಾವಾಗಲೂ ಕೂಡ ಸಗಣಿ ಮೆತ್ತಿಕೊಂಡಿರುತ್ತಿತ್ತು.
ಅಲ್ಲದೇ ತನಗೆ ಶಾಲೆ ಮತ್ತು ಕಾಲೇಜಿನಲ್ಲಿ ತಾನು ಹಾಲು ಮಾರುವವರ ಮಗಳು ಎಂದು ಹೇಳುವುದಕ್ಕೆ ಹಿಂಜರಿಕೆ ಯಾಗುತ್ತಿತ್ತು ಎಂದು ಸೋನಾಲ್ ಹೇಳುತ್ತಾರೆ. ಆದರೆ ಇಂದು ಅವರ ಶ್ರಮ ಹಾಗೂ ನೆರವಿನಿಂದಲೇ ತಾನು ಈ ಹಂತವನ್ನು ತಲುಪಿದ್ದು, ಅವರ ಬಗ್ಗೆ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಸೋನಲ್ ಹೇಳುತ್ತಾರೆ. ಸಂಪನ್ಮೂಲ ಕೊರತೆಯ ನಡುವೆಯೂ ಗುರಿಯತ್ತ ಸಾಗುವ ಪ್ರಯತ್ನದಲ್ಲಿ ಯಶಸ್ಸು ಪಡೆದಿರುವ ಸೋನಲ್ ಇಂದು ಅನೇಕರಿಗೆ ಸ್ಫೂರ್ತಿಯಾಗಬೇಕಾಗಿದೆ.