ತಮಿಳುನಾಡಿನಲ್ಲಿ ನೆಲೆಸಿರುವ ನಟಿ ವಿಜಯಲಕ್ಷ್ಮಿ ಇದೀಗ ತಾವು ಸಂಕಷ್ಟಕ್ಕೆ ಸಿಲುಕಿದ್ದು ಯಾರು ಸಹಾಯಕ್ಕೆ ಮುಂದೆ ಬರುತ್ತಿಲ್ಲ. ಅಲ್ಲದೆ ನಾನು ಕನ್ನಡಿಗಳೆಂದು ನಮಗೆ ಯಾರು ಸಹಾಯ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟಿ, ಕೊರೋನಾ ಸಮಯದಲ್ಲಿ ತನ್ನ ಅಕ್ಕ ಉಷಾ ಆರೋಗ್ಯ ಹದಗೆಟ್ಟಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ನನ್ನಿಂದ ಆಗುತ್ತಿಲ್ಲ. ಯಾವುದೇ ನಟರು ಸಹಾಯಕ್ಕೆ ಮುಂದೆ ಬರುತ್ತಿಲ್ಲ ಎಂದು ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಕನ್ನಡ ಚಿತ್ರ ನಟಿಯರಲ್ಲಿ ಒಬ್ಬರಾಗಿದ್ದು, ಕಾಲೇಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ. ಇವರು ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಯಶಸ್ವಿ ಚತುರ್ಭಾಷಾ ನಟಿಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಇವರ ಸಿನಿ ಜೀವನ ಒಂದಿಷ್ಟು ವಿವಾದಗಳಿಗೆ ಕೂಡಾ ಎಡೆಮಾಡಿ ಕೊಟ್ಟಿತ್ತು. ನಾಯಕ ನಟರು ಹಾಗೂ ನಿರ್ದೇಶಕರ ಜೊತೆಗೆ ಕಿರಿಕ್ ಮಾಡಿಕೊಳ್ಳುವ ನಟಿ ಎಂದೂ ಹೆಸರು ಬಂದಿತು. ಇವು ಸಿನಿಮಾ ಜೀವನದ ಕಥೆ ಆದರೆ ಇನ್ನೊಂದು ಕಡೆ ವೈಯಕ್ತಿಕ ಬದುಕು ಕೂಡಾ ಸಾಕಷ್ಟು ಕಷ್ಟಗಳಿಗೆ ಗುರಿ ಆಯಿತು. ನಿಶ್ಚಯ ಆಗಿದ್ದ ಎಂಗೇಜ್ಮೆಂಟ್ ಮುರಿದು ಬಿದ್ದು ಮುಂದೆ ಒಂದೊಂದೇ ಕಹಿ ಘಟನೆಗಳು ನಡೆಯುತ್ತಾ ಹೋದವು.
ಇವರು ಕೆಲವು ವಿವಾದಾತ್ಮಕ ಹೇಳಿಕೆ , ಅವರ ಸಮಸ್ಯೆಗಳಿಂದ ಸದಾ ಸುದ್ದಿಯಲ್ಲಿ ಇದ್ದರು. ಬಹುಶಃ ಇದೇ ಅವರನ್ನು ಕನ್ನಡ ಚಿತ್ರರಂಗದಿಂದ ದೂರ ಉಳಿಯುವ ಹಾಗೆ ಮಾಡಿರಬಹುದು ಅಥವಾ ಅವರೇ ಚಿತ್ರರಂಗದಿಂದ ದೂರ ಉಳಿದರೋ ಏನೋ!? ಸಿನಿಮಾ ಅವಕಾಶಗಳೂ ಕಡಿಮೆ ಆಗತೊಡಗಿದವು. ಎಷ್ಟರ ಮಟ್ಟಿಗೆ ಎಂದರೆ ಜನರು ವಿಜಯಲಕ್ಷ್ಮಿ ಎಂಬ ನಟಿ ಇದ್ದಳು ಎನ್ನುವುದನ್ನೇ ಮರೆತಿದ್ದಾರೆ ಎನ್ನುವ ಹಾಗೆ ಆಗಿತ್ತು. ಆದರೆ ಇತ್ತೀಚೆಗೆ ಕೆಲವು ಹೇಳಿಕೆಗಳಿಂದ ಮತ್ತೆ ಸುದ್ಧಿ ಆಗಿದ್ದಾರೆ ನಟಿ ವಿಜಯಲಕ್ಷ್ಮಿ. ವಿಜಯಲಕ್ಷ್ಮಿ ಹುಟ್ಟಿ ಬೆಳೆದಿದ್ದು ಎಲ್ಲಾ ಕರ್ನಾಟಕದಲ್ಲಿ ಆದರೂ ಅವರ ಮುಂದಿನ ವಿದ್ಯಾಭ್ಯಾಸ ನಡೆದಿದ್ದು ಚೆನ್ನೈ ನಲ್ಲಿ. ಇವರ ತಾಯಿ ಶ್ರೀಲಂಕಾದ ತಮಿಳು ಮೂಲದವರು. ತಂದೆ ತಮಿಳು ಮೂಲದವರೇ ಆಗಿದ್ದರೂ ಬೆಂಗಳೂರಿನಲ್ಲಿ ಸಣ್ಣ ಉದ್ಯಮಿ ಆಗಿ ಅಲ್ಲಿಯೇ ನೆಲೆಸಿದ್ದರು. ಇನ್ನು ವಿಜಯಲಕ್ಷ್ಮಿ ಅವರಿಗೆ ಉಷಾ ದೇವಿ ಹೆಸರಿನ ಸಹೋದರಿ ಕೂಡಾ ಇದ್ದಾರೆ. ಉಷಾ ದೇವಿ ಕೂಡಾ ಕನ್ನಡದ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದ ವಿಜಯಲಕ್ಷ್ಮಿ ಸಹೋದರಿ ಉಷಾ ದೇವಿ ೧೯೯೫ ರಲ್ಲಿ ತಾಳಿ ಸೌಭಾಗ್ಯ , ತುಂಬಿದ ಮನೇ , ಅಣ್ಣಾ ಅಂದ್ರೆ ನಮ್ಮಣ್ಣ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದ ನಿರ್ದೇಶಕರ T S ನಾಗಾಭರಣ ಅವರು ತಮ್ಮ ಹೊಸ ಚಿತ್ರಕ್ಕಾಗಿ ನಾಯಕಿಯ ಶೋಧದಲ್ಲಿ ಇದ್ದಾಗ ಲಾ ಮಾಡಬೇಕು ಎಂದು ಕಾಲೇಜಿಗೆ ಹೊರಟ ವಿಜಯಲಕ್ಷ್ಮಿ ಅವರ ಕಣ್ಣಿಗೆ ಬೀಳುತ್ತಾರೆ ಹಾಗೂ ನಾಗಮಂಡಲ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ ಈ ಚಿತ್ರದ ಸಮಯದಲ್ಲಿ ವಿಜಯಲಕ್ಷ್ಮಿಗೆ ಕೇವಲ ೧೭ ವರ್ಷ ವಯಸ್ಸು. ನಟಿಸಿದ ಮೊದಲ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಮಾತ್ರವಲ್ಲದೆ ತಮ್ಮ ನಟನೆಗೆ ವಿಜಯಲಕ್ಷ್ಮಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡಾ ಪಡೆದಿದ್ದರು. ನಂತರ ಚಂದನವನದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು ನಟಿ ವಿಜಯಲಕ್ಷ್ಮಿ. ವಿಷ್ಣುವರ್ಧನ್ , ಶಶಿಕುಮಾರ್ , ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್ ಹೀಗೇ ಮೊದಲಾದ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ನಟಿ ವಿಜಯಲಕ್ಷ್ಮಿ ಪರಿಚಯ ತಮಿಳು ತೆಳಗು ಚಿತ್ರರಂಗಕ್ಕೂ ಆಯಿತು. ಇವರ ಮನಮೋಹಕ ನಟನೆಯಿಂದ ಕನ್ನಡ ತೆಲುಗು ತಮಿಳು ಚಿತ್ರರಂಗ ಮಾತ್ರ ಅಲ್ಲದೆ ಮಲೆಯಾಳಂ ಚಿತ್ರದಲ್ಲಿ ಸಹ ನಟಿಸಿದರು. ಹೀಗೆ ಕೇವಲ ಮೂರು ನಾಲ್ಕು ವರ್ಷಗಳಲ್ಲಿ ಯಶಸ್ವಿ ಚತುರ್ಭಾಷಾ ನಟಿಯಾಗಿ ಹೊರ ಹೊಮ್ಮಿದರು.
ಈ ಎಲ್ಲಾ ಜನಪ್ರಿಯತೆಗಳ ನಡುವೆ ವಿಜಯಲಕ್ಷ್ಮಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದರು. ಇವರಿಗೆ ಸಾಕಷ್ಟು ಅಹಂಕಾರ ಇದೆ ಎಂದೆಲ್ಲಾ ಸುದ್ಧಿ ಆಗಿತ್ತು ಹಾಗೂ ಸಾಕಷ್ಟು ಕಷ್ಟಗಳು ಇವರನ್ನು ಹುಡುಕಿ ಬಂದವು. ನಂತರ ಹೀಗೇ ಸಾಕಷ್ಟು ಸಮಸ್ಯೆಗಳ ಮೇಲೆ ೨೦೦೬ ರಲ್ಲಿ ಇವರ ತಂದೆ ತೀರಿಕೊಳ್ಳುತ್ತಾರೆ ಇದು ಅವರಿಗೆ ಸಹಿಸಲು ಆಗದ ಆಘಾತವಾಗಿತ್ತು. ನಂತರ ತಮಿಳುನಾಡಿನ. ಚೆನ್ನೈಗೆ ಹೋಗಿ ನೆಲೆಸುತ್ತಾರೆ. ಸುದ್ದಿಗಳ ಪ್ರಕಾರ ಅಲ್ಲಿ ರಮೇಶ್ ಎಂಬ ನಿರ್ದೇಶಕರ ಪರಿಚಯ ಆಗುತ್ತದೆ. ಇವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಿದ್ರೆ ಮಾತ್ರೆ ಸೇವಿಸಿ ಸುದ್ದಿ ಆಗಿದ್ದರು. ಇಷ್ಟರ ನಂತರ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರು ಪೇರು ಉಂಟಾಗಿ ವಿಜಯಲಕ್ಷ್ಮಿ ಹಾಗೂ ಅವರ ಸಹೋದರಿ ಉಷಾ ದೇವಿ ಇಬ್ಬರೂ ಒಂಟಿ ಜೀವನ ನಡೆಸಲು ಆರಂಭಿಸಿದರು. ಚಿತ್ರರಂಗದಿಂದ ದೂರ ಉಳಿದರು ವಿವಾದಗಳು ಇವರನ್ನು ಬಿಡಲಿಲ್ಲ. ಈಗ ಪ್ರಸಾರ ಆಗುತ್ತಿರುವ ಮಜಾ ಟಾಕೀಸ್ ರೂವಾರಿ ಆದ ಸೃಜನ್ ಲೋಕೇಶ್ ಅವರ ಜೊತೆಗೆ ಎಂಗೇಜ್ಮೆಂಟ್ ಫಿಕ್ಸ್ ಆಗಿ ಅದೂ ಕೂಡಾ ನಿಗೂಡ ಕಾರಣಗಳಿಗೆ ರದ್ದಾಯಿತು. ಒಂದಷ್ಟು ಕಾಲ ಸಿನಿ ಲೋಕದಿಂದ ದೂರ ಉಳಿದ ಇವರಿಗೆ ತಮಿಳಿನ ಹೋರಾಟಗಾರ , ನಾಯಕ್ ಸೀಮನ್ ಎಂಬ ವ್ಯಕ್ತಿಯ ಪರಿಚಯ ಆಗುತ್ತದೆ. ಸೀಮನ್ ಜೊತೆ ಇವರ ಆತ್ಮೀಯ ಒಡನಾಟ ವರ್ತನೆಯಿಂದಾಗಿ ಈ ಅರಿಬ್ಬರೂ ಪ್ರೀತಿಸುತ್ತಾ ಇದ್ದಾರೆ ಇಬ್ಬರೂ ಮದುವೆ ಆಗುತ್ತಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತದೆ.
ಕಾಲಕ್ರಮೇಣ ಸೀಮನ್ ವಿರುದ್ಧ ಕೂಡಾ ನಟಿ ವಿಜಯಲಕ್ಷ್ಮಿ ಹಲವು ದೂರುಗಳನ್ನು ಮಾಡಿ ಅವರಿಂದಲೂ ಸಹ ದೂರವಾಗುತ್ತಾರೆ. ಕೆಲವು ತಿಂಗಳ ಹಿಂದೆ ಅಷ್ಟೇ ತನ್ನ ತಾಯಿಯ ಹಾಗೂ ತನ್ನ ಅನಾರೋಗ್ಯದ ಕಾರಣ ತಿಳಿಸಿ ತಮಗೆ ಸಹಾಯ ಮಾಡುವ ಹಾಗೇ ಲೈವ್ ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ ವಿಜಯಲಕ್ಷ್ಮಿ ಸಾಕಷ್ಟು ಸುದ್ದಿ ಆಗಿದ್ದರು. ಇತ್ತೀಚೆಗೆ ಮತ್ತೆ ಅದೇ ರೀತಿ ತನ್ನ ಸಹೋದರಿ ಉಷಾ ದೇವಿ ಆರೋಗ್ಯ ಕೂಡಾ ಹದಗೆಟ್ಟಿದ್ದು ಅದರ ಕುರಿತಾಗಿ ಸಹ ಹಣಕಾಸು ಸಹಾಯ ಮಾಡುವ ಹಾಗೆ ವಿಡಿಯೋ ಮಾಡಿದ್ದರು. ಈಗ ಇದರ ಕುರಿತಾಗಿ ಸಾಕಷ್ಟು ಸುದ್ದಿ ಆಗಿದ್ದಾರೆ ನಟಿ ವಿಜಯಲಕ್ಷ್ಮಿ. ಮೊದಲೇ ಅವರು ಫೇಸ್‌ಬುಕ್ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೂ ನನ್ನ ಸಾವಿಗೆ ನಟ ನಿರ್ದೇಶಕ ರಾಜಕಾರಣಿ ಸೀಮನ್ ಅವರೇ ಕಾರಣ ಎಂದು ವಿಜಯಲಕ್ಷ್ಮಿ ನೇರ ಆರೋಪ ಮಾಡಿದ್ದು ಅವರ ಈ ವಿಡಿಯೋ ಸಖತ್ ವೈರಲ್ ಆಗಿತ್ತು.
ಇದಕ್ಕೆಲ್ಲ ಕಾರಣ ನಟ, ನಿರ್ದೇಶಕ, ರಾಜಕೀಯ ಮುಖಂಡ ಸೀಮನ್ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ. ಸೀಮಾನ್ ಇಲ್ಲಿ ಸಂಘಟನೆ ಕಟ್ಟಿಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಕನ್ನಡಿಗರಿಗೆ ಅವಹೇಳನ ಮಾಡುತ್ತಿದ್ದಾನೆ. ತಾನು ಸಹ ಕನ್ನಡದವಳು ಎನ್ನುವ ಕಾರಣಕ್ಕೆ ತಮಿಳುನಾಡಿನಲ್ಲಿ ಯಾರು ಸಹಾಯಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ನಟರು ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಹಣ ನೀಡಿದ್ದಾರೆ. ಆದರೆ ತನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ. ಇದಕ್ಕೆ ಕಾರಣ ಸೀಮನ್. ತಾನು ಕನ್ನಡದಳು ಕರ್ನಾಟಕದವಳು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾನೆ. ರಜನಿ ಅವರನ್ನು ರಾಜಕೀಯಕ್ಕೆ ಬರದಂತೆ ಮಾಡಿದ ರೀತಿ ನಿಮ್ಮನ್ನೂ ಕರ್ನಾಟಕಕ್ಕೆ ಓಡಿಸುತ್ತೇನೆ ಎನ್ನುತ್ತಿದ್ದಾನೆ. ಸೀಮನ್ ಜೊತೆ ಎರಡು ವರ್ಷ ಇದ್ದು ಸಾಕಾಗಿದೆ ಎಂದು ಹೇಳಿದ್ದಾರೆ. ತನ್ನ ಅಕ್ಕನ ಆರೋಗ್ಯ ತೀರ ಗಂಭೀರವಾಗಿದೆ. ಗರ್ಭಾಶಯದ ತೊಂದರೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ. ಇನ್ನು ಚೆನ್ನೈನಲ್ಲಿ ಲಾಕ್ ಡೌನ್ ಮುಗಿದ ಮೇಲೆ ಬೆಂಗಳೂರಿಗೆ ಬರುವುದಾಗಿ ಹೇಳಿದ ವಿಜಯಲಕ್ಷ್ಮಿ ತನಗೆ ಸಹಾಯ ಮಾಡಿ ಎಂದು ಶಿವರಾಜಕುಮಾರ್ ಅವರಿಗೆ ಕೇಳಿಕೊಂಡಿದ್ದಾರೆ.