ರಾಗಿ ಲಡ್ಡು ಪೌಷ್ಟಿಕಾಂಶ ಭರಿತ ಆಹಾರ ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ

0 82

ರಾಗಿ ಏಕದಳ ಧಾನ್ಯವಾಗಿದ್ದು ಸಾಸಿವೆಯನ್ನೇ ಹೋಲುವ ಆದರೆ ಸಾಸಿವೆಗೂ ಚಿಕ್ಕ ಗಾಢ ಕಂದು ಬಣ್ಣದ ಹೊರಪದರವಿರುವ ಧಾನ್ಯವಾಗಿದೆ. ಇಡಿಯ ಧಾನ್ಯದ ಖಾದ್ಯ ತಯಾರಿಸುವುದು ಸುಲಭವೂ ಅಲ್ಲ ಹಾಗೂ ಬೆಂದಾಗ ಇದು ಒಡೆಯುವ ಕಾರಣ ಸಾಮಾನ್ಯವಾಗಿ ರಾಗಿ ಹಿಟ್ಟನ್ನೇ ಆಹಾರಕ್ಕಾಗಿ ಬಳಸಲಾಗುತ್ತದೆ. ರಾಗಿ ಹಿಟ್ಟನ್ನು ರೊಟ್ಟಿ, ಮುದ್ದೆ, ಉಂಡೆ ಮೊದಲಾದ ಖಾದ್ಯಗಳನ್ನು ತಯಾರಿಸಲು ಬಳಸುವಾಗ ಅತಿ ನುಣುಪಲ್ಲದ ಕೊಂಚ ದೊರಗಾಗಿ ಇರುವಂತೆ ಬೀಸಲಾಗುತ್ತದೆ. ಆದರೆ ರಾಗಿ ಉಂಡೆ ಮೊದಲಾದ ಸಿಹಿ ಪದಾರ್ಥಗಳಿಗೆ ನುಣ್ಣಗೆ ಬೀಸಿಕೊಳ್ಳಬಹುದು. ರಾಗಿ ತಿಂದವ ನಿರೋಗಿಯಾಗಿರಬೇಕಾದರೆ ಇದರ ಮಹತ್ವವೂ ಇರಲೇಬೇಕಲ್ಲ? ಈ ಲೇಖನದ ಮೂಲಕ ನಾವು ರಾಗಿಯ ಪ್ರಯೋಜನ ಹಾಗೂ ಅದರಿಂದ ಮಾಡಬಹುದಾದ ಒಂದು ಸಿಹಿ ಅಡುಗೆಯ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಪ್ರೋಟೀನ್ ಪ್ರಾಣಿ ಜನ್ಯ ಆಹಾರದಿಂದ ಲಭಿಸುವ ಪೋಷಕಾಂಶವಾಗಿದೆ. ಆದರೆ ಸಸ್ಯಾಹಾರಿಗಳಿಗೆ ಕೆಲವು ಆಹಾರಗಳಿಂದಲೂ ಪ್ರೋಟೀನ್ ದೊರಕುತ್ತದೆ. ಅತ್ಯಧಿಕ ಪ್ರಮಾಣದ ಪ್ರೋಟೀನ್ ನಮಗೆ ಮೊಳಕೆ ಬರಿಸಿದ ಕಾಳುಗಳಿಂದ ದೊರಕುತ್ತದೆ. ಅದೇ ರೀತಿ ರಾಗಿಯೂ ಪ್ರೋಟೀನ್ ನಿಂದ ಸಮೃದ್ದವಾಗಿದೆ. ಎಷ್ಟು ಎಂದರೆ ಒಂದು ಕಪ್ ರಾಗಿಯಲ್ಲಿ ಅಂದರೆ ಸುಮಾರು 144 ಗ್ರಾಂ ರಾಗಿಯಲ್ಲಿ 10.3ಗ್ರಾಂ ಅಷ್ಟು ಪ್ರೋಟೀನ್ ಇದೆ. ನಮ್ಮ ದೇಹದ ಪ್ರತಿ ಜೀವಕೋಶ ಸವೆದು ಹೊಸ ಜೀವಕೋಶ ಹುಟ್ಟಬೇಕಾದರೆ ಈ ಪ್ರೋಟೀನ್ ಬೇಕೇ ಬೇಕು. ಅಲ್ಲದೇ ರಕ್ತ ಆಮ್ಲಜನಕವನ್ನು ದೇಹದ ಪ್ರತಿ ಭಾಗಕ್ಕೆ ಕೊಂಡೊಯ್ಯಲೂ ಪ್ರೋಟೀನ್ ಬೇಕು. ಒಂದುಕಪ್ ರಾಗಿಯಲ್ಲಿ ಸುಮಾರು 16.1 ಗ್ರಾಂ ಕರಗದ ನಾರು ಇದೆ. ಈ ನಾರಿನಂಶ ಬಹುತೇಕವಾಗಿ ಇದರ ಕಂದು ಬಣ್ಣದ ಸಿಪ್ಪೆಯಲ್ಲಿಯೇ ಇದೆ. ಈ ನಾರಿನಂಶ ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಹೊತ್ತು ಇರುವಂತೆ ಮಾಡಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಪಚನಗೊಂಡ ಆಹಾರ ಚಲಿಸಲು ಮತ್ತು ಸುಲಭವಾಗಿ ತ್ಯಾಜ್ಯಗಳು ವಿಸರ್ಜನೆಗೊಳ್ಳಲೂ ಈ ನಾರಿನಂಶ ಅಗತ್ಯವಾಗಿದೆ.

ಉತ್ಕರ್ಷಣಶೀಲ ಒತ್ತಡ ಅಥವಾ ಆಕ್ಸಿಡೇಷನ್ ಎಂಬ ಪ್ರಕ್ರಿಯೆಯನ್ನು ತಡೆಯಲು ಇದರ ವಿರುದ್ದ ಗುಣವಿರುವ ಪೋಷಕಾಂಶಗಳ ಅಗತ್ಯವಿದೆ. ಇವನ್ನೇ ಆಂಟಿ ಆಕ್ಸಿಡೆಂಟುಗಳು ಎಂದು ಕರೆಯುತ್ತಾರೆ. ರಾಗಿಯಲ್ಲಿ ಇಂತಹ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ಹಲವಾರು ಬಗೆಯ ಕ್ಯಾನ್ಸರ್ ವಿರುದ್ದ ನಮ್ಮ ದೇಹಕ್ಕೆ ರಕ್ಷಣೆ ಒದಗಿಸುತ್ತದೆ. ರಾಗಿಯಲ್ಲಿ ಸಕ್ಕರೆಯ ಅಂಶ ಅತಿ ಕಡಿಮೆ ಇದ್ದು ಇದನ್ನು ಸೇವಿಸಿದವರ ರಕ್ತದಲ್ಲಿ ಅತಿ ನಿಧಾನವಾಗಿ ಸಕ್ಕರೆಯ ಮಟ್ಟ ಏರುವಂತೆ ಮಾಡುತ್ತದೆ. ಈ ಗುಣ ಮಧುಮೇಹಿಗಳಿಗೆ ಅತಿ ಸೂಕ್ತವಾಗಿದೆ. ಅಲ್ಲದೇ ರಾಗಿಯಲ್ಲಿರುವ ಮೆಗ್ನೀಶಿಯಂ ಇನ್ಸುಲಿನ್ ನಿರೋಧಕತೆಯನ್ನು ತಗ್ಗಿಸಿ ದೇಹ ಇನ್ಸುಲಿನ್ ಗೆ ನೀಡುವ ಸ್ಪಂದನೆಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳ ಅಹಾರದಲ್ಲಿ ಮೆಗ್ನೀಶಿಯಂ ಕೊರತೆ ಇದ್ದಾಗ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಸ್ರವಿಸುವುದಿಲ್ಲ. ಹಾಗಾಗಿ ರಾಗಿ ಮಧುಮೇಹಿಗಳಿಗೆ ಅತಿ ಸೂಕ್ತವಾದ ಆಹಾರವಾಗಿದೆ.

ಹಾಗಾದರೆ ಇಷ್ಟೊಂದು ಆರೋಗ್ಯಕರ ಲಾಭ ಇರವು ರಾಗಿಯಿಂದ ಯಾವ ಬಗೆಯ ಸಿಹಿ ತಿಂಡಿಯನ್ನು ಮಾಡಬಹುದು? ಅದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಏನೂ? ಹಾಗೂ ಮಾಡುವ ವಿಧಾನ ಹೇಗೆ ಎನ್ನುವುದನ್ನು ನೋಡೋಣ. ರಾಗಿ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು. ರಾಗಿ ಹಿಟ್ಟು ಒಂದು ಕಪ್, ಅದೇ ಅಳತೆಯಲ್ಲಿ ರವೆ ಒಂದು ಕಪ್ ತುಪ್ಪ ಒಂದು ಟೀ ಸ್ಪೂನ್ , ಬೆಲ್ಲ ಒಂದು ಕಾಲು ಕಪ್ , ಒಣ ಕೊಬ್ಬರಿ ಒಂದು ಕಪ್, ದ್ರಾಕ್ಷಿ , ಗೋಡಂಬಿ, ಲವಂಗ , ಕಾಯಿಸಿ ಆರಿಸಿದ ಹಾಲು ಎರಡರಿಂದ ಮೂರು ಸ್ಪೂನ್.

ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಒಂದು ಬಾಣಲೆಗೆ ಒಂದು ಟೀ ಸ್ಪೂನ್ ತುಪ್ಪ ಒಂದು ಕಪ್ ರವೆ ಹಾಗೂ ಒಂದು ಕಪ್ ರಾಗಿ ಹಾಕಿ ಅದನ್ನು ಚೆನ್ನಾಗಿ ಐದರಿಂದ ಎಂಟು ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಸ್ವಲ್ಪ ಇದರ ಬಣ್ಣ ಬದಲಾದ ಮೇಲೆ ಸ್ಟೋವ್ ಬಂದ್ ಮಾಡಿ ಬಿಸಿ ಇರುವಾಗಲೇ ತುರಿದ ಬೆಲ್ಲ ಒಣ ಕೊಬ್ಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿ ಇಡಬೇಕು. ನಂತರ ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹಾಗೂ ನಾಲ್ಕು ಲವಂಗ ಸೇರಿಸಿ ಚೆನ್ನಾಗಿ ಹುರಿದುಕೊಂಡು ರಾಗಿ ಮಿಶ್ರಣಕ್ಕೆ ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಎರಡು ಸ್ಪೂನ್ ಅಷ್ಟು ಹಾಲು ಹಾಕಿಕೊಂಡು ಚೆನ್ನಾಗಿ ಕಲಸಿ ಉಂಡೆ ಕಟ್ಟಿದರೆ ರುಚಿಯಾದ ಹಾಗೂ ಆರೋಗ್ಯಕರವಾದ ರಾಗಿ ಲಾಡು ರೆಡಿ.

Leave A Reply

Your email address will not be published.