ನಾವು ತಿಳಿದು ಅಥವಾ ತಿಳಿಯದೆಯೇ ಪ್ರತಿನಿತ್ಯ ಪುದೀನಾವನ್ನು ಬಳಸುತ್ತಿದ್ದೇವೆ. ತುಂಬಾ ಜನರಿಗೆ ಪುದೀನಾ ಎಲೆಯ ಔಷದೀಯ ಗುಣಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಪುದೀನಾ ಎಲೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಪುದೀನಾ ಒಂದು ಗಿಡ ಮೂಲಿಕೆಯಾಗಿದ್ದು ವಿಶೇಷ ಔಷಧಿ ಗುಣಗಳಿವೆ. ಇತ್ತೀಚಿನ ದಿನಗಳಲ್ಲಿ ಬಬ್ಬಲ್ ಗಮ್, ಟೂತ್ ಪೇಸ್ಟ್ ನಲ್ಲಿ ತಾಜಾ ಉಸಿರಿನ ಅನುಭವ ಪಡೆಯಲು ಪುದೀನಾವನ್ನು ಬಳಸಲಾಗುತ್ತಿದೆ. ಮಹಿಳೆಯರು ಪರಿಮಳಕ್ಕಾಗಿ ಹಾಗೂ ಉತ್ತಮ ರುಚಿ ಕೊಡುತ್ತದೆ ಎಂಬ ಕಾರಣಕ್ಕೆ ಸಾಂಬಾರ್, ಚಟ್ನಿ ಯಲ್ಲಿ ಬಳಸುತ್ತಾರೆ. ಪುದೀನಾ ಯುರೋಪ್, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಕ್ಕೆ ಸ್ಥಳೀಯವಾದ ಸಸ್ಯ ಎಂದು ಹೇಳಲಾಗುತ್ತದೆ. ಪುದೀನಾ ಸುಮಾರು 10 ರಿಂದ 20 ಸೆಂಟಿ ಮೀಟರ್ ನಷ್ಟು ಉದ್ದವಾಗಿ ಬೆಳೆಯುತ್ತದೆ. ಕೆಲವೊಮ್ಮೆ ನೂರು ಸೆಂಟಿ ಮೀಟರ್ ಗಳಷ್ಟು ಬೆಳೆಯುತ್ತದೆ. ಇದು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯುತ್ತದೆ. ಇದನ್ನು ಇಂಗ್ಲೀಷ್ ನಲ್ಲಿ ಮಿಂಟ್ ಅಥವಾ ಮೆಂತಾ ಎಂದು ಕರೆಯುತ್ತಾರೆ ಇದರ ವೈಜ್ಞಾನಿಕ ಹೆಸರು ಮೆಂತಾ ಸಿಕಾಟ. ಇದು ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿದೆ. ಇದನ್ನು ಋಷಿ ಮುನಿಗಳ ಕಾಲದಲ್ಲಿಯೂ ಸಹ ಉಪಯೋಗ ಮಾಡಲಾಗುತ್ತಿತ್ತು. ಪುದೀನಾ ಬೆಳೆಯಲು ನೀರಿನ ಅವಶ್ಯಕತೆ ತುಂಬಾ ಇದೆ. ನೀರು ಎಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಪುದೀನಾ ತುಂಬಾ ಸೊಂಪಾಗಿ ಬೆಳೆಯುತ್ತದೆ. ಪುದೀನಾದಲ್ಲಿ ಮೆಂತೋಲ್ ಎಂಬ ಸಾರ ಶೇಕಡ 40 ರಿಂದ 90 ರಷ್ಟು ಇರುತ್ತದೆ. ಇದನ್ನು ಸೌಂದರ್ಯವರ್ಧಕ ಹಾಗೂ ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ.
ಪುದೀನಾವನ್ನು ಕೃಷಿಯಲ್ಲಿ ಸಹ ಬಳಸುತ್ತಾರೆ. ಇದು ಒಂದು ಪರಿಸರ ಸ್ನೇಹಿ ಕೀಟನಾಶಕವಾಗಿ ಕೆಲಸ ಮಾಡುತ್ತದೆ. ಇರುವೆಗಳು, ಜಿರಲೆಗಳನ್ನು ಕೊಲ್ಲುವ ಸಾಮರ್ಥ್ಯ ಈ ಪುದೀನಾ ಎಣ್ಣೆಯಲ್ಲಿದೆ. ಪುದೀನಾದಿಂದ ಎಣ್ಣೆ ತೆಗೆದು ಕೀಟನಾಶಕವಾಗಿ ಬಳಸುತ್ತಾರೆ. ಇದರ ಎಲೆಗಳಿಂದ ಬರುವ ಸುವಾಸನೆಯಿಂದ ವಾಕರಿಕೆಯನ್ನು ಕಡಿಮೆ ಮಾಡಲು ಮತ್ತು ಆಹಾರದಲ್ಲಿ ಬಳಸುವುದರಿಂದ ದೇಹವನ್ನು ತಂಪಾಗಿರಿಸಲು ಸಹಾಯಕಾರಿಯಾಗಿದೆ. ಕೇವಲ ಪುದೀನಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಶರೀರದಲ್ಲಿ ದ್ರವ ಸಂಚಯ ಹಾಗೂ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಚರ್ಮದ ಆರೋಗ್ಯ ಕೂಡ ಸುಧಾರಿಸುವಲ್ಲಿ ಸಹಾಯಕಾರಿಯಾಗುತ್ತದೆ. ಪ್ರತಿನಿತ್ಯ ಆಹಾರದಲ್ಲಿ ನಿಯಮಿತವಾಗಿ ಬಳಸಿದರೆ ಜೀರ್ಣ ವ್ಯವಸ್ಥೆಯನ್ನು ಸುಧಾರಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕೊಬ್ಬಿನ ಅಂಶವನ್ನು ಹೊರಹಾಕುತ್ತದೆ. ಹಸಿವಾಗುತ್ತಿಲ್ಲ, ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತಿಲ್ಲವೆಂದರೆ ದಿನಕ್ಕೆ ನಾಲ್ಕರಿಂದ ಐದು ಎಲೆಯನ್ನು ಹಸಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಾಗಿ ಹಸಿವು ಸರಿಯಾಗಿ ಆಗುತ್ತದೆ. ಗಂಟಲು ಮೂಗು ಕಟ್ಟುವ ಸಮಸ್ಯೆಗಳು ಕಂಡುಬಂದಲ್ಲಿ ಪುದೀನಾ ಎಲೆಗಳನ್ನು ತಿನ್ನುವುದರಿಂದ ನಮ್ಮ ಶ್ವಾಸಕೋಶವನ್ನು ಶುಚಿಗೊಳಿಸುತ್ತದೆ ಹಾಗೂ ಗಂಟಲು ಮೂಗು ಕಟ್ಟುವುದು ವಾಸಿಯಾಗುತ್ತದೆ.
ಪುದೀನಾ ಎಲೆಯ ಪಾನೀಯ ಮಾಡಿ ಕುಡಿಯುವುದರಿಂದ ಬಾಯಿಂದ ಬರುವ ದುರ್ವಾಸನೆ ಕಡಿಮೆ ಮಾಡಬಹುದು. ಆಹಾರದಲ್ಲಿ ನಿಯಮಿತವಾಗಿ ಬಳಸುತ್ತ ಬಂದರೆ ಅಸ್ತಮಾ ತೊಂದರೆ ಕಡಿಮೆಯಾಗುತ್ತದೆ. ತಲೆನೋವು ಸ್ನಾಯು ನೋವು ಇದ್ದರೆ ಪುದೀನಾ ಎಲೆಯ ರಸವನ್ನು ಮಾಡಿ ಹಚ್ಚಬೇಕು. ಪ್ರತಿನಿತ್ಯ ಒಂದರಿಂದ ಎರಡು ಎಲೆಗಳನ್ನು ತಿನ್ನುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ವಯಸ್ಕರಿಗೆ ಹೆಚ್ಚಾಗಿ ಕಾಡುವ ಮೊಡವೆ, ಕಪ್ಪು ಕಲೆ, ತುರಿಕೆಗಳಿಗೆ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದು ಬಾಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆರೋಮ ತೆರೆಪಿಯಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಸುವಾಸನೆ ಮಾನಸಿಕ ಖಿನ್ನತೆ ಮತ್ತು ಒತ್ತಡ ಭಾವನೆಯನ್ನು ಶಾಂತಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಡಿ ಇ ಬಿ ಕ್ಯಾಲ್ಸಿಯಂ ಹಾಗೂ ರಂಜಕ ಮತ್ತು ಆಂಟಿ ಆಕ್ಸಿಡೆಂಟ್ ಹೊಂದಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಉಪಯೋಗದಿಂದ ಹಲ್ಲಿನ ವಸಡು ಬಲ ಪಡಿಸುವಲ್ಲಿ ಸಹಾಯಕ ಮತ್ತು ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ಕಡಿಮೆ ಮಾಡುವ ಶಕ್ತಿಯಿದೆ. ಮೂತ್ರದ ಸಮಸ್ಯೆ ಇದ್ದವರು ಇದನ್ನು ಬಳಸಬೇಕು. ದೇಹದಲ್ಲಿನ ವಿಷ ದ್ರವ್ಯವನ್ನು ಹೊರ ಹಾಕಲು ಸಹಾಯಕವಾಗಿದೆ. ಹೆಣ್ಣುಮಕ್ಕಳ ಋತು ಸಮಯದ ನಾಲ್ಕು ದಿನದ ಮುಂಚೆ ಕಷಾಯ ಮಾಡಿ ಕುಡಿದರೆ ಹೊಟ್ಟೆ ನೋವು ಬರುವುದಿಲ್ಲ. ಪುದೀನಾ ರಸದ ಜೊತೆ ಬೆಳ್ಳುಳ್ಳಿ ರಸ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ.
ಪುದೀನಾ ಜ್ಯೂಸ್ ಅನ್ನು ಬಳಸುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಇದರಿಂದ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚುತ್ತದೆ. ಇದನ್ನು ಮಾಡುವ ವಿಧಾನವೇನೆಂದರೆ
2 ಕಪ್ ಅಷ್ಟು ಸ್ವಚ್ಛವಾದ ಪುದೀನಾ ಕುಡಿಯನ್ನು (ಚಿಗುರು) ಸ್ವಲ್ಪ ನೀರಿನ ಜೊತೆ ಮಿಕ್ಸರ್ ಗೆ ಹಾಕಿ ನುಣ್ಣಗೆ ಬೀಸಿಕೊಳ್ಳಬೇಕು ನಂತರ ಒಂದು ಕಪ್ ಪುಡಿ ಮಾಡಿಕೊಂಡ ಕೆಂಪು ಕಲ್ಲು ಸಕ್ಕರೆಯನ್ನು ಸಣ್ಣ ಬೆಂಕಿಯಲ್ಲಿ ಅರ್ಧ ಲೋಟ ನೀರನ್ನು ಹಾಕಿ ಸಕ್ಕರೆಯ ಪಾಕವನ್ನು ಮಾಡಿಕೊಳ್ಳಬೇಕು. ಕೆಂಪು ಕಲ್ಲು ಸಕ್ಕರೆ ಕಫ ಕೆಮ್ಮುಗಳಿಗೆ ಉತ್ತಮವಾಗಿದೆ. ಇದರಲ್ಲಿ ಯಾವುದೇ ರಾಸಾಯನಿಕ ಬೆರಿಕೆ ಇರುವುದಿಲ್ಲ. ಇದು ಎಳೆಪಾಕ ಬಂದ ಕೂಡಲೇ ಪಾಕಕ್ಕೆ ಬೀಸಿದ ಪುದೀನಾವನ್ನು ಹಾಕಿ ಮತ್ತೆ ಕುದಿಯಲು ಬಿಡಬೇಕು. ಸುಮಾರು ಜೇನು ತುಪ್ಪದ ಹದದಲ್ಲಿ ಬಂದ ಮೇಲೆ ಇದಕ್ಕೆ ಎರಡು ಚಿಟಕಿ ಉಪ್ಪು ಹಾಗೂ ಕಾಲು ಲೋಟ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಣ್ಣಗಾಗಲು ಬಿಡಬೇಕು. ಈ ಪಾಕವು ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟರೆ ಸುಮಾರು ಒಂದು ತಿಂಗಳಿಂದ ಮೂರು ತಿಂಗಳವರೆಗೆ ಕೆಡುವುದಿಲ್ಲ. ಒಂದು ಗ್ಲಾಸ್ ಗೆ 3 ಚಮಚ ಪಾಕವನ್ನು ಹಾಕಿ ಒಂದು ಲೋಟ ತಣ್ಣನೆಯ ನೀರನ್ನು ಬೆರೆಸಿದರೆ ಕುಡಿಯಲು ಸಿದ್ಧವಾಗುತ್ತದೆ. ಪುದೀನಾದ ಔಷಧೀಯ ಗುಣಗಳ ಬಗ್ಗೆ ಹಾಗೂ ಜ್ಯೂಸ್ ಮಾಡುವ ವಿಧಾನವನ್ನು ಎಲ್ಲರಿಗೂ ತಿಳಿಸಿ ಇದರ ಪ್ರಯೋಜನ ಪಡೆಯಿರಿ.