ಕೊರೋನ ವೈರಸ್ ಕಾರಣದಿಂದ ಕೆಲವರು ಸಾವನ್ನಪ್ಪಿದ್ದಾರೆ, ಇನ್ನು ಕೆಲವರು ತಮ್ಮವರನ್ನು ಕಳೆದುಕೊಂಡು ನೋವಿನ ಬದುಕಿನಲ್ಲಿ ಸಾಗುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ ಆದರೆ ನಮ್ಮ ಸಮಾಜದಲ್ಲಿ ಸಹಾಯ ಮಾಡುವುದಾಗಲಿ, ಮಾನವೀಯತೆ ಆಗಲಿ ಮರೆಯಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ಮಾನವೀಯತೆಯಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಿದ್ದಾರೆ ಆದರೆ ಕೆಲವು ಕಡೆ ಮಾನವೀಯತೆಯ ಸಮಾಧಿ ಕಂಡುಬರುತ್ತಿದೆ. ಜಾರ್ಖಂಡ್ ರಾಜ್ಯದಲ್ಲಿ ನಡೆದಂತಹ ಅಮಾನವೀಯ, ಹೃದಯವಿದ್ರಾವಕ ಘಟನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ
ಕೊರೋನ ಸಂಕಷ್ಟದ ಈ ಸಮಯದಲ್ಲಿ ದೇಶದ ಹಲವು ಕಡೆಗಳಲ್ಲಿ ಮಾನವೀಯತೆಯೂ ಸಹ ಮರೆಯಾಗುತ್ತಿದೆ. ಅಂತಹ ಘಟನೆಗಳು ನಡೆಯುವ ಮೂಲಕ ಮನಸ್ಸಿಗೆ ಅಸಮಾಧಾನ ಹಾಗೂ ಬೇಸರವನ್ನುಂಟುಮಾಡುತ್ತಿದೆ. ಕೆಲವು ಕಡೆಗಳಲ್ಲಿ ಕೊರೋನದಿಂದ ಕಷ್ಟ ಅನುಭವಿಸಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಸಹಾಯವನ್ನು ನೀಡಲು ಯಾರು ಕೂಡಾ ಮುಂದೆ ಬರದೆ ದುಸ್ಥಿತಿಯು ನಿರ್ಮಾಣವಾಗುತ್ತಿದೆ. ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಟಾಟಿಝರಿಯಾ ಬ್ಲಾಕ್ ನಲ್ಲಿನ ಖಂಡ್ವಾ ಎನ್ನುವ ಹಳ್ಳಿಯಲ್ಲಿ ಯಾವುದೋ ಒಂದು ವಿವಾದದ ಕಾರಣದಿಂದಾಗಿ ಕುಂತಿದೇವಿ ಎನ್ನುವವರನ್ನು ಒಂದು ನಿರ್ದಿಷ್ಟ ಜಾತಿಯ ಜನರು ತಮ್ಮ ಜಾತಿಯಿಂದ ಬಹಿಷ್ಕಾರ ಹಾಕಿದ್ದರು. ಇದಾದ ನಂತರ 55 ವರ್ಷ ವಯಸ್ಸಿನ ಕುಂತಿದೇವಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆಕೆಗೆ ಓಡಾಡಲು ಆಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆ ಆಗಾಗ ಕಾಡುತ್ತಿತ್ತು. ಕುಂತಿದೇವಿ ಅವರ ಗಂಡ ಕೂಲಿ ಕೆಲಸವನ್ನು ಮಾಡುತ್ತಾರೆ. ಇವರಿಗೆ ಎಂಟು ಜನ ಹೆಣ್ಣುಮಕ್ಕಳಿದ್ದು ಏಳು ಜನರಿಗೆ ಈಗಾಗಲೇ ವಿವಾಹವಾಗಿದ್ದು, ಇನ್ನೊಬ್ಬ ಮಗಳಿಗೆ ವಿವಾಹವನ್ನು ಮಾಡಬೇಕಾಗಿತ್ತು.
ಕುಂತಿದೇವಿ ನಿಧನರಾದಾಗ ಅವರನ್ನು ಜಾತಿಯಿಂದ ಬಹಿಷ್ಕಾರ ಹಾಕಿರುವ ಕಾರಣ ಅವರ ಸಂಬಂಧಿಕರು ಅಥವಾ ಗ್ರಾಮಸ್ಥರು ಯಾರೊಬ್ಬರೂ ಅವರ ಮನೆಯ ಕಡೆಗೆ ಹೋಗಲಿಲ್ಲ. ಬಹಿಷ್ಕಾರದ ನಿಯಮದ ಹೆಸರಿನಲ್ಲಿ ಗ್ರಾಮಸ್ಥರು ಮಾನವೀಯತೆಯನ್ನು ಮರೆತು ಬಿಟ್ಟಿದ್ದರು. ಈ ಕುಟುಂಬದ ನೋವನ್ನು ಹಂಚಿಕೊಳ್ಳುವ ಮನಸ್ಸನ್ನು, ಧೈರ್ಯವನ್ನು ಯಾರೊಬ್ಬರೂ ಮಾಡಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕುಂತಿದೇವಿ ಅವರ ಎಂಟು ಜನ ಹೆಣ್ಣುಮಕ್ಕಳು ತಮ್ಮ ನೆರವಿಗೆ ಯಾರೂ ಬರುವುದಿಲ್ಲ ಎಂದು ಗೊತ್ತಾಗಿ, ತಮ್ಮ ತಾಯಿಯ ಅಂತ್ಯ ಸಂಸ್ಕಾರವನ್ನು ತಾವೇ ಮಾಡಲು ನಿರ್ಧಾರ ಮಾಡಿದರು. ತಾಯಿಯ ಪಾರ್ಥಿವ ಶರೀರವನ್ನು ಅಂತಿಮಯಾತ್ರೆಯಲ್ಲಿ ತೆಗೆದುಕೊಂಡು ಹೋಗಲು ಕುಂತಿ ದೇವಿಯ ಹೆಣ್ಣುಮಕ್ಕಳೇ ಹೆಗಲನ್ನು ನೀಡಿದ್ದಾರೆ. ಹೆಣ್ಣುಮಕ್ಕಳು ಗ್ರಾಮದ ಮೂಲಕ ಶವ ಯಾತ್ರೆಯನ್ನು ಮಾಡುತ್ತಾ ಹೋಗುವಾಗ ಇಡೀ ಗ್ರಾಮದಲ್ಲಿ ಒಂದು ನೀರವ ಮೌನ ತುಂಬಿತ್ತು. ಒಂದು ರೀತಿಯಲ್ಲಿ ಆ ಶವದ ಜೊತೆಗೆ ಅವರ ಮಾನವೀಯತೆ ಕೂಡಾ ಸತ್ತು ಅಲ್ಲಿ ಹೋಗುತ್ತಿದೆ ಎನ್ನುವಂತಿತ್ತು.
ಕುಂತಿ ದೇವಿಯ ಹೆಣ್ಣು ಮಕ್ಕಳು ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ತಮ್ಮ ತಾಯಿಯ ಅಂತಿಮ ಸಂಸ್ಕಾರವನ್ನು ಮಾಡಿದರು. ಗ್ರಾಮದ ಜನರು ಬಹಿಷ್ಕಾರ ಹಾಕಿದರೂ ತಾವು ಪೂರೈಸಬೇಕಾದ ಕರ್ತವ್ಯವನ್ನು ಪೂರೈಸಿದ ಹೆಣ್ಣುಮಕ್ಕಳು ಸಮಾಜದಲ್ಲಿ ತಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಘಟನೆಯು ನಮ್ಮ ಸಮಾಜದಲ್ಲಿ ಇಂದಿಗೂ ಉಳಿದುಕೊಂಡಿರುವ ಕೆಟ್ಟ ಆಚರಣೆಗಳು ಹಾಗೂ ಸಂಪ್ರದಾಯಗಳಿಗೆ ಒಂದು ಸಾಕ್ಷಿಯಾಗಿದೆ. ಅದೇ ವೇಳೆ ಹೆಣ್ಣು ಮಕ್ಕಳು ಧೈರ್ಯದಿಂದ ಮಾಡಿರುವ ಈ ಕೆಲಸ ಸಮಾಜದಲ್ಲಿ ಸ್ತ್ರೀ ಹಾಗೂ ಪುರುಷರು ಸಮಾನ ಎನ್ನುವುದನ್ನು ತೋರಿಸಿಕೊಟ್ಟಿದೆ. ಮಾನವೀಯತೆ ಎನ್ನುವುದು ಸಮಾಜದಿಂದ ಬಹುದೂರ ಸಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೀಗೆ ಮುಂದುವರೆದರೆ ನಮ್ಮ ಸಮಾಜ ಪತನದತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಟ್ಟಿನಲ್ಲಿ ಈ ಘಟನೆಯು ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇರಿಸಿದೆ. ಇನ್ನಾದರೂ ನಾವೆಲ್ಲರೂ ಮಾನವೀಯತೆಯನ್ನು ಸಾರಬೇಕಿದೆ ಹಾಗೆಯೇ ಮಾನವೀಯತೆಯಿಂದ ನಡೆದುಕೊಳ್ಳಬೇಕಾಗಿದೆ. ಮಾನವೀಯತೆಯು ಮನುಷ್ಯನಲ್ಲಿ ಸಹಜವಾಗಿ ಇರಬೇಕಾಗಿತ್ತು ಆದರೆ ಮನುಷ್ಯ ನಡೆದುಕೊಳ್ಳುವ ರೀತಿಯು ನಿಜಕ್ಕೂ ವಿಷಾದನೀಯವಾಗಿದೆ.