ನಾವು ಪುಸ್ತಕಗಳನ್ನು ಓದಿ ಹಾಗೆಯೆ ಇಡುತ್ತೇವೆ ಆದರೆ ಚಾಮರಾಜನಗರದ ಪ್ರಭಾಮಣಿ ಎಂಬುವವರು ಪುಸ್ತಕ, ಯೂಟ್ಯೂಬ್, ವಿಡಿಯೋಗಳನ್ನು ನೋಡಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಹತ್ತಾರು ಬೆಳೆಗಳನ್ನು ಬೆಳೆದು ಪ್ರತಿದಿನ ಆದಾಯ ಗಳಿಸುತ್ತಿದ್ದಾರೆ. ಪ್ರಭಾಮಣಿ ಅವರು ತಮ್ಮ ಜಮೀನಿನಲ್ಲಿ ಮಾಡಿದ ಸಮಗ್ರ ಕೃಷಿಯ ಬಗ್ಗೆ ಹಾಗೂ ಅವರು ಓದಿದ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಪ್ರಭಾಮಣಿ ಎನ್ನುವವರು ತನ್ನ ತಮ್ಮ ನೀಡಿದ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಹೀಗೆ ಕೃಷಿಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ, ಯೂಟ್ಯೂಬ್ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಬರುವ ಮಾಹಿತಿ ಪಡೆದು ಇಡೀ ಕುಟುಂಬವನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕುಟುಂಬಕ್ಕೆ ಆದಾಯದ ಮೂಲ ಕಂಡುಕೊಂಡಿದ್ದಾರೆ. ಸಾಲದ ಸುಳಿಯಲ್ಲಿದ್ದ ಕುಟುಂಬವನ್ನು ಮೇಲೆತ್ತಿ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿ, ಕುಟುಂಬವನ್ನು ಕೃಷಿಯಲ್ಲಿ ತೊಡಗಿಸಿ ಕುಟುಂಬಕ್ಕೆ ಆಧಾರವಾಗಿದ್ದಾರೆ. ಅವರು ತಮ್ಮ 5 ಎಕರೆ ಜಮೀನಿನಲ್ಲಿ 1 ಎಕರೆ ಪ್ರದೇಶವನ್ನು ಸೊಪ್ಪು, ತರಕಾರಿ ಬೆಳೆಯಲು ಮೀಸಲಿಟ್ಟರು ಅದನ್ನು ಭಾಗ ಮಾಡಿ 10 ಗುಂಟೆ ಜಾಗದಲ್ಲಿ ವಿವಿಧ ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆದರು ಇದರಿಂದ ವಿವಿಧ ಅವಧಿಯಲ್ಲಿ ಫಸಲು ಕೈ ಸೇರುತ್ತದೆ ಇದರಿಂದ ಪ್ರತಿದಿನ 1500ರೂ ಆದಾಯಗಳಿಸುತ್ತಾರೆ. ಇದರೊಂದಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ ಅಷ್ಟೆ ಅಲ್ಲದೆ ಹೈನುಗಾರಿಕೆ ನಡೆಸುವ ಮೂಲಕ ನಿತ್ಯ 10 ರಿಂದ 12 ಲೀಟರ್ ಹಾಲು ಹಾಕುತ್ತಾರೆ ಇದರಿಂದಲೂ ಆದಾಯ ಬರುತ್ತದೆ. ನರ್ಸರಿಯೂ ಇದ್ದೂ ಸಮಗ್ರ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ತಮ್ಮದೆ ಜಮೀನನ್ನು ಗುತ್ತಿಗೆ ಕೊಟ್ಟು ಕೂಲಿ ಮಾಡುತ್ತಿದ್ದ ಕುಟುಂಬವನ್ನು ಪ್ರಭಾಮಣಿ ಅವರು ಸಮಗ್ರ ಕೃಷಿ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿದ್ದಾರೆ. ಪ್ರಭಾಮಣಿ ಅವರು ಸಾಲದ ಶೂಲಿಗೆ ಸಿಲುಕಿದ್ದ ಪತಿಗೆ ಮಾರ್ಗದರ್ಶನ ನೀಡಿ ಸಮಗ್ರ ಕೃಷಿ ಆರಂಭಿಸಿ ಪ್ರತಿದಿನ ಆದಾಯ ಗಳಿಸುವಂತೆ ಮಾಡಿದ್ದಾರೆ.
ಪುಸ್ತಕಗಳು, ಯೂಟ್ಯೂಬ್ ವಿಡಿಯೋ, ಕೆವಿಕೆ ವಿಜ್ಞಾನಿಗಳ ಸಹಾಯ ಪಡೆದು ಕೃಷಿ ಚಟುವಟಿಕೆ ನಡೆಸುವುದಲ್ಲದೇ ನರ್ಸರಿ ಮಾಡಿಕೊಂಡಿರುವ ಪ್ರಭಾಮಣಿ ಅವರು 20ರಿಂದ 25 ಬಗೆಯ ತರಕಾರಿ, ಸೊಪ್ಪಿನ ಬೀಜಗಳನ್ನು ತಯಾರಿಸಿ, ರಾಸಾಯನಿಕ ಮುಕ್ತ ತರಕಾರಿ, ಸೊಪ್ಪನ್ನು ಬೆಳೆಯುತ್ತಿದ್ದಾರೆ ಇದು ವಿಶೇಷವಾಗಿದೆ. ಅವರು ಆದಾಯ ಗಳಿಸುತ್ತಾ ಮಿನಿ ಟ್ರ್ಯಾಕ್ಟರ್ ಕೂಡ ಕೊಂಡುಕೊಂಡು ಸ್ವಂತ ಕೆಲಸ ಮತ್ತು ಬಾಡಿಗೆಗೆ ಪತಿ ಪ್ರಕಾಶ್ ತೆರಳುತ್ತಾರೆ. ಪ್ರಭಾಮಣಿ ಹಾಗೂ ಪ್ರಕಾಶ್, ತಂದೆ ತಾಯಂದಿರು, ಮಕ್ಕಳು ಕೂಡ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇವರು ಕಾರ್ಮಿಕರನ್ನು ಬಳಸಿಕೊಳ್ಳುವುದು ಬಹಳ ಕಡಿಮೆ ಸಮಯದಲ್ಲಿ ಮಾತ್ರ ಆದ್ದರಿಂದ ಕೂಲಿ ಕಾರ್ಮಿಕರಿಗೆ ಕೊಡುವ ಹಣವು ಇವರಿಗೆ ಉಳಿತಾಯವಾಗಿದೆ. ಕ್ಯಾರೆಟ್, ಬೀನ್ಸ್, ಹೀರೆಕಾಯಿ, ಕುಂಬಳಕಾಯಿ, ಸೋರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಬೀಟ್ ರೂಟ್, ಬದನೆ, ಅಗಸೆ, ನುಗ್ಗೆ ಸೊಪ್ಪು, ಪಾಲಕ್, ದಂಟು, ಮೆಂತ್ಯೆ, ಕಿಲಕಿರೆ, ಪುದಿನಾ, ಕೊತ್ತಂಬರಿ, ಸಬಸಿಗೆ ಹಾಗೂ ಕರಿಬೇವು ಸೊಪ್ಪನ್ನು ಕೇವಲ 10 ಗುಂಟೆ ಜಾಗದಲ್ಲಿ ಬೆಳೆಯುತ್ತಿದ್ದಾರೆ. ಸೌತೆಕಾಯಿ, ಟೊಮೆಟೋ, ಪರಂಗಿ, ಬಾಳೆ, ಅರಿಶಿಣ, ಕೋಸು, ಕಬ್ಬು ಕೂಡ ಬೆಳೆದಿದ್ದು 5 ಹಸುಗಳನ್ನು ಸಾಕಿಕೊಂಡಿದ್ದಾರೆ. ಪುಸ್ತಕದ ಬದನೆಕಾಯಿ, ಕೃತಿಯೇ ಬೇರೆ, ಕಾರ್ಯವೇ ಬೇರೆ ಎಂಬ ಮಾತುಗಳಿಗೆ ವಿರುದ್ಧವಾಗಿ ಪುಸ್ತಕಗಳನ್ನು ಓದಿ ಸಮಗ್ರ ಕೃಷಿಗೆ ಪ್ರೇರೇಪಣೆ ಪಡೆದು ದಿನಕ್ಕೆ 1,500 ರೂ ಆದಾಯ ಪಡೆಯುತ್ತಿರುವ ಪ್ರಭಾಮಣಿ ಅವರು ನೈಸರ್ಗಿಕ ತೋಟಗಾರಿಕೆ ಬೆಳೆಗಳ ಪೋಷಣೆ ಶಾಸ್ತ್ರ-ಭಾಗ 1 ಮತ್ತು 2, ನೈಸರ್ಗಿಕ ಕೃಷಿಯ ತಾಂತ್ರಿಕತೆ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೃಷಿ- ಒಂದು ಸಂಚು, ಒಂದು ವಂಚನೆ, ನೈಸರ್ಗಿಕ ತೋಟಗಾರಿಕೆ, ನಾಟಿ ಹಸು, ಸುಭಾಶ್ ಪಾಳೇಕರ್ ಅವರ ಮಾದರಿ, ದಿ ಫಿಲಾಸಫಿ ಆಫ್ ಸ್ಪಿರಿಚ್ಯುವಲ್ ಫಾರ್ಮಿಂಗ್ ಪುಸ್ತಕಗಳನ್ನು ಓದಿ ಲಾಭ ಕಂಡುಕೊಂಡಿದ್ದಾರೆ. ಇದರೊಂದಿಗೆ ಯೂಟ್ಯೂಬ್ನಲ್ಲಿ ಪ್ರಗತಿಪರ ರೈತರು ಅಳವಡಿಸಿಕೊಂಡಿರುವ ಮಾದರಿಗಳ ವಿಡಿಯೋಗಳು ಕೂಡ ಇವರ ಮಾರ್ಗದರ್ಶಕವಾಗಿವೆ. ಪ್ರಭಾಮಣಿ ಅವರ ಸಾಧನೆ ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿದೆ.