ಹಳ್ಳಿ ಕಡೆಯಲ್ಲಿ ಸಾಕಷ್ಟು ರೀತಿಯ ವಿಧ ವಿಧವಾದ ಅಡುಗೆಗಳನ್ನು ಮಾಡಿ ಉಣಬಡಿಸುತ್ತಾರೆ. ಪೇಟೆಗೆ ಹೋಗಿ ತರಕಾರಿಗಳನ್ನು ತಂದೆ ಅಡುಗೆ ಮಾಡಬೇಕು ಎಂದೇನೂ ಇರುವುದಿಲ್ಲ ತಮ್ಮ ತಮ್ಮ ಕೈ ತೋಟದಲ್ಲಿ ಬೆಳೆದ ತರಕಾರಿ ಕಾಳು ಬೇಳೆಗಳನ್ನೆ ಬಳಸಿಕೊಂಡು ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವವರೂ ಇರುತ್ತಾರೆ. ಹಳ್ಳಿಗಳಲ್ಲಿ ಸಾಕಷ್ಟು ಜನರು ಈಗಲೂ ಸಹ ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ ಉಪ್ಸಾರು ಬಳಕೆ ಮಾಡುವುದು ಹೆಚ್ಚು. ಹಾಗಾಗಿ ಹಳ್ಳಿ ಕಡೆ ಮಾಡುವಂತಹ ಒಂದು ರೆಸಿಪಿ ಉಪ್ಸಾರು ಅಲಸಂದಿ ಕಾಳಿನಿಂದ ಮಾಡಬಹುದಾದ ಉಪ್ಸಾರು ಹೇಗೆ ಮಾಡುವುದು ಮತ್ತು ಇದಕ್ಕೆ ಬೇಕಾದ ಸಾಮಗ್ರಿಗಳು ಏನು ಇವೆಲ್ಲವನ್ನೂ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಲಸಂದಿ ಕಾಳಿನ ಉಪ್ಸಾರು ಮಾಡಲು ಬೇಕಾಗುವ ಸಾಮಗ್ರಿಗಳು:- ಹಸಿಯಾದ ಸಿಪ್ಪೆ ತೆಗೆದ ಅಲಸಂದಿ ಕಾಳು ಅರ್ಧ ಕೆಜಿ, ದೊಡ್ಡಗಾತ್ರದ ಈರುಳ್ಳಿ ಒಂದು, ಒಣ ಮೆಣಸಿನಕಾಯಿ ಇಪ್ಪತ್ತು, ಕಾಯಿ ತುರಿ ನಾಲ್ಕು ಟೇಬಲ್ ಸ್ಪೂನ್ ಅಷ್ಟು, ಕೊತ್ತಂಬರಿ ಸೊಪ್ಪು, ಇಡೀ ಬೆಳ್ಳುಳ್ಳಿ ಗಡ್ಡೆ ಒಂದು, ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು , ಕರಿಬೇವಿನ ಸೊಪ್ಪು ಎಣ್ಣೆ, ಜೀರಿಗೆ ಕಾಲು ಟೀ ಸ್ಪೂನ್, ಕಾಳು ಮೆಣಸು ಐದರಿಂದ ಆರು, ಸಾಸಿವೆ ಅರ್ಧ ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು. ಇವಿಷ್ಟು ಸಾಗ್ರಿಗಳು ನಮಗೆ ಹಳ್ಳಿ ಶೈಲಿಯಲ್ಲಿ ಅಲಸಂದಿ ಕಾಳಿನ ಉಪ್ಸಾರು ಮಾಡಲು ಬೇಕಾಗಿರುವ ಪದಾರ್ಥಗಳು.ಇನ್ನು ಇವೆಲ್ಲ ಪದಾರ್ಥಗಳನ್ನು ಬಳಸಿಕೊಂಡು ಉಪ್ಸಾರು ಮಾಡೋದು ಹೇಗೆ ಅನ್ನೋದನ್ನ ನೋಡೋಣ.

ಅಲಸಂದಿ ಕಾಳಿನ ಉಪ್ಸಾರು ಮಾಡುವ ವಿಧಾನ:- ಅಲಸಂದಿ ಕಾಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೀಟರ್ ಅಥವಾ ಬೇಕಿದ್ದರೆ ಅದಕ್ಕೂ ಜಾಸ್ತಿ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಸಿಲ್ ಕುಗಿಸಿಕೊಳ್ಳಬೇಕು. ಕುಕ್ಕರ್ ತಣ್ಣಗಾದ ಮೇಲೆ ಅಲಸಂದಿ ಕಾಳು ಮತ್ತು ನೀರನ್ನು ಸೋಸಿ ಬೇರ್ಪಡಿಸಿಕೊಳಬೇಕು ಹಾಗೆ ಒಂದು ಸೌಟ್ ಆಗುವಷ್ಟು ಅಲಸಂದಿ ಕಾಳನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಹದಿನೈದು ಒಣಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು.

ಇನ್ನು ಉಪ್ಸಾರು ಮಾಡಲು ಬೇಕಾದ ಖಾರ ಮಸಾಲೆ ತಯಾರಿಸಿಕೊಳ್ಳಬೇಕು. ಅದಕ್ಕೆ ಒಂದು ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಒಣಮೆಣಸಿನಕಾಯಿ ಹುಣಸೆಹಣ್ಣು, ಬೆಳ್ಳುಳ್ಳಿ, ಜೀರಿಗೆ ಸ್ವಲ್ಪ, ಆರು ಕಾಳುಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಮೊದಲೇ ತೆಗೆದಿಟ್ಟುಕೊಂಡ ಅಲಸಂದಿ ಕಾಳು ಇವೆಲ್ಲವನ್ನೂ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ಸೋಸಿ ಇಟ್ಟುಕೊಂಡ ಅಲಸಂದಿ ಕಾಳು ಬೇಯಿಸಿದ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿದರೆ ಉಪ್ಸಾರು ರೆಡಿ.

ಇನ್ನು ಬೇಯಿಸಿ ಇಟ್ಟುಕೊಂಡ ಅಲಸಂದಿ ಕಾಳಿನ ಪಲ್ಯ ಮಾಡುವುದು ಹೇಗೆ ಅಂತಾ ನೋಡುವುದಾದರೆ, ಒಂದು ಬಾಣಲೆ ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಆದ ನಂತರ ಸ್ವಲ್ಪ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಐದು ಕತ್ತರಿಸಿದ ಕೆಂಪು ಮೆಣಸಿನ ಕಾಯಿ, ಕಟ್ ಮಾಡಿದ ಈರುಳ್ಳಿ, ಸ್ವಲ್ಪ ಕರಿಬೇವಿನ ಸೊಪ್ಪು ಇವೆಲ್ಲವನ್ನೂ ಹಾಕಿ ಸ್ವಲ್ಪ ಬಾಡಿಸಿಕೊಳ್ಳಬೇಕು. ನಂತರ ಮೊದಲೇ ಬೇಯಿಸಿ ಇಟ್ಟುಕೊಂಡ ಅಲಸಂದಿ ಕಾಳು, ಸ್ವಲ್ಪ ತೆಂಗಿನ ಕಾಯಿ ತುರಿ ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಗ್ಯಾಸ್ ಆಫ್ ಮಾಡಿ ಮೇಲಿನಿಂದ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದರೆ ಉಪ್ಸಾರಿನ ಜೊತೆಗೆ ರುಚಿಯಾದ ಅಲಸಂದಿ ಕಾಳಿನ ಪಲ್ಯ ಕೂಡಾ ರೆಡಿ.

Leave a Reply

Your email address will not be published. Required fields are marked *