ಮೋದಿ ಸರ್ಕಾರ ಸ್ವದೇಶಿ ಬ್ರ್ಯಾಂಡ್ ಗಳ ಬೆಳವಣಿಗೆ ಹಾಗೂ ಔದ್ಯೋಗಿಕ ಅವಕಾಶಗಳ ಸೃಷ್ಟಿಗೆ ಮಹತ್ವ ಕೊಡುತ್ತಿದೆ. ಈಗಿರುವ ಸ್ಥಿತಿಯಲ್ಲಿ ಸ್ವದೇಶಿ ಕಂಪನಿಗಳನ್ನು ಉಳಿಸಿಕೊಳ್ಳಲು ಸಾಹಸ ಪಡುತ್ತಿದ್ದಾರೆ. 37% ನಷ್ಟು ಸ್ವದೇಶಿ ಕಂಪನಿಗಳು ಹಲವು ಕಾರಣಗಳಿಂದ ಮುಚ್ಚಲ್ಪಟ್ಟಿದೆ ಎಂದು 2019ರ ವರದಿಯಲ್ಲಿ ಕಂಡುಬಂದಿದೆ. ಅವುಗಳಲ್ಲಿ ಎಚ್ಎಮ್ ಟಿ ವಾಚ್ ಸಂಸ್ಥೆಯು ಒಂದು. ಈ ಸಂಸ್ಥೆಯು ಹೇಗೆ ಸ್ಥಾಪನೆಯಾಯಿತು ಹಾಗೂ ಹೇಗೆ ನಷ್ಟ ಅನುಭವಿಸಿತು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ದೇಶದಲ್ಲಿ ವಿದೇಶಿ ವಸ್ತುಗಳ ಬಳಕೆಯ ವ್ಯಾಮೋಹ ಹೊಂದಿರುವ ಜನರು ಹೆಚ್ಚಿರುವುದರಿಂದ ನಮ್ಮ ಕಂಪನಿಗಳ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಯಿತು. ಸಾಫ್ಟ್ ವೇರ್ ನಿಂದ ಹಾರ್ಡ್ ವೇರ್ ವರೆಗೆ ಎಲ್ಲಾ ವಸ್ತುಗಳು ವಿದೇಶದ್ದೇ ಬೇಕು. ಮನೆಯಲ್ಲಿ ಎಳನೀರಿದ್ದರೂ ಬೇಕರಿಯ ಪಾನೀಯ ಕುಡಿಯುತ್ತೇವೆ ಇಂತಹ ಮನೋಭಾವನೆಯಿಂದಲೇ ಸ್ವದೇಶಿ ಕಂಪನಿಗಳು ನಷ್ಟ ಅನುಭವಿಸಿತು. ವಿದೇಶಿ ವ್ಯಾಮೋಹದ ಬಲೆಗೆ ಒಳಗಾದ ಸ್ವದೇಶಿ ಕಂಪನಿಗಳಲ್ಲಿ ನಮ್ಮ ಹೆಮ್ಮೆಯ ಎಚ್ಎಂಟಿ ವಾಚ್ ಸಂಸ್ಥೆಯು ಒಂದು. ನಮ್ಮ ರಾಜ್ಯದ, ದೇಶದ ಹೆಮ್ಮೆಯ ಬ್ರ್ಯಾಂಡ್ ಎಚ್ಎಂಟಿ ವಾಚ್ ವೈಭವವನ್ನು ಕಳೆದುಕೊಂಡು ಮೂಲೆಗೆ ಸೇರಿದೆ. ಹಿಂದೂಸ್ತಾನ್ ಮಷೀನ್ ಟೂಲ್ಸ್ ಎಂದು 1953 ರಲ್ಲಿ ಭಾರತ ಸರ್ಕಾರದಿಂದ ಮೊಟ್ಟಮೊದಲಿಗೆ ಆರಂಭವಾಯಿತು. ಇದು ಮೊದಲು ಮಿಷನರಿಗಳ ಟೂಲ್ ಗಳ ತಯಾರಿಕಾ ಘಟಕವಾಗಿ ಪ್ರಾರಂಭವಾಯಿತು.
ಸ್ಥಾಪನೆಯಾಗಿ 6-7 ವರ್ಷದ ನಂತರ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ವಾಚ್, ಟ್ರ್ಯಾಕ್ಟರ್ ವಾಹನಗಳನ್ನು, ಪ್ರಿಂಟಿಂಗ್ ಮಷೀನ್ ಗಳನ್ನು, ಇನ್ನು ಕೆಲವು ಉಪಕರಣಗಳನ್ನು ತಯಾರಿಸುವ ಭಾರತದ ಪ್ರಮುಖ ಮಷೀನರಿ ಸಂಸ್ಥೆಯಾಗಿ ಬೆಳೆಯಿತು. ಒಂದು ಕಾಲದಲ್ಲಿ ಎಚ್ಎಂಟಿ ವಾಚ್ ದೇಶದ ಸ್ಟೈಲಿಶ್ ಹಾಗೂ ಗತ್ತಿನ ವಾಚ್ ಆಗಿತ್ತು. ಮದುವೆ ಸಮಯದಲ್ಲಿ ವರನ ಕಡೆಯವರು ಕೇಳುವ ಸಾಮಾನ್ಯ ಬೇಡಿಕೆಯಲ್ಲಿರುವ ಮೊದಲ ಸ್ಥಾನ ಈ ವಾಚ್ ಪಡೆದಿತ್ತು. ಎಚ್ಎಂಟಿ ವಾಚ್ ಧರಿಸುವುದು ಯುವಕರ ಮಹತ್ತರ ಕನಸು ಹಾಗೂ ಪ್ರೆಸ್ಟೀಜ್ ವಿಷಯವಾಗಿತ್ತು. ಈ ಸಂಸ್ಥೆ ಕ್ರಮೇಣ ವಿಶ್ವದ ಅತ್ಯುನ್ನತ ಮೆನುಫ್ಯಾಕ್ಚರಿಂಗ್ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ತನ್ನ ಟೆಕ್ನಾಲಜಿ ಸುಧಾರಿಸಿಕೊಂಡು ಮುನ್ನಡೆಯಿತು. ಜನರಿಗೆ ಬೇಕಾಗುವಂತೆ ಡಿಸೈನ್ ಮಾಡಿ ಮಾರಾಟ ಮಾಡಿತು. ಹಲವಾರು ಜನರಿಗೆ ಈ ಸಂಸ್ಥೆಯಲ್ಲಿ ಕೆಲಸ ದೊರೆಯಿತು. 1961ರಲ್ಲಿ ಮೊಟ್ಟಮೊದಲ ಬಾರಿಗೆ ಈ ಸಂಸ್ಥೆ ಜಪಾನಿನ ವಾಚ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ತನ್ನ ವಾಚ್ ತಯಾರಿಕಾ ಘಟಕವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿತು. ಇಲ್ಲಿ ತಯಾರಾದ ಮೊದಲ ವಾಚನ್ನು ಅಂದಿನ ಪ್ರಧಾನಿ ನೆಹರು ಅವರು ಬಿಡುಗಡೆಗೊಳಿಸಿದರು.
ಎಚ್ಎಂಟಿ ಜನತಾ, ಎಚ್ಎಂಟಿ ಝಲಕ್, ಎಚ್ಎಂಟಿ ಸೋನ ಹೀಗೆ ಹಲವು ಹೆಸರುಗಳ ಡಿಸೈನ್ ಗಳು ರಿಲೀಸ್ ಆಗಿತ್ತು. ನಂತರ ದೇಶದ ಬಹುಬೇಡಿಕೆಯ ಘನತೆಯ ವಾಚ್ ಎಂದು ಗುರುತಿಸಿಕೊಂಡಿತು ಹಾಗೂ ಈ ಸಂಸ್ಥೆಯು ಹೆಚ್ಚು ವಿಸ್ತರಣೆಯಾಯಿತು. ಬೇರೆ ಬೇರೆ ಕಡೆ ತನ್ನ ಶಾಖೆಯನ್ನು ಪ್ರಾರಂಭ ಮಾಡಿತು, ತುಮಕೂರಿನಲ್ಲೂ ಪ್ರಾರಂಭವಾಯಿತು. ಸಣ್ಣ ವಾಚ್ ನಿಂದ ಬೃಹತ್ ಗಡಿಯಾರದವರೆಗೆ ಇಂಟರ್ ನ್ಯಾಷನಲ್ ಕ್ಲಾಕ್, ಟವರ್ ಕ್ಲಾಕ್ ಮುಂತಾದವುಗಳ ತಯಾರಿಕೆಯ ಪ್ರಧಾನ ಸಂಸ್ಥೆಯಾಗಿ ಹೊರಹೊಮ್ಮಿತು. ಬೆಂಗಳೂರಿನಲ್ಲಿರುವ ಭವ್ಯವಾದ ಗಾರ್ಡನ್ ಕ್ಲಾಕ್ ಈ ಸಂಸ್ಥೆಯ ಕಾರ್ಯವೈಖರಿಯ ಫಲವಾಗಿದೆ.
2000ರಲ್ಲಿ ಬಿಸಿನೆಸ್ ಗ್ರೂಪ್ ಎಚ್ಎಂಟಿ ವಾಚ್ ಲಿಮಿಟೆಡ್ ಎಂಬ ಪ್ರತ್ಯೇಕ ಹಾಗೂ ಸ್ವತಂತ್ರ ಅಂಗಸಂಸ್ಥೆಯಾಗಿ ಪುನರ್ ನಿರ್ಮಾಣಗೊಂಡಿತು. ಆಗಲಿನಿಂದಲೇ ಜನರ ಮನಸ್ಸು ವಿದೇಶಿ ಬ್ರ್ಯಾಂಡ್ ಗಳತ್ತ ಸೆಳೆಯಿತು. ಖಾಸಗೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಸ್ವದೇಶಿ ಕಂಪನಿಗಳಿಗೆ ವಿದೇಶಿ ಕಂಪನಿಗಳು ಸವಾಲಾಗಿ ನಿಂತವು. ಸ್ವದೇಶಿ ಹೆಮ್ಮೆಯ ಎಚ್ಎಂಟಿ ವಾಚ್ ಗೆ ಪರ್ಯಾಯವಾಗಿ ಫಾಸ್ಟ್ರ್ಯಾಕ್, ರ್ಯಾಡೋ ವಾಚುಗಳ ಕಂಪನಿ ತಲೆ ಎತ್ತಿತು. ನಂತರ ವಿದೇಶಿ ವಾಚುಗಳ ಮುಂದೆ ಎಚ್ಎಂಟಿ ವಾಚ್ ಜನರಿಗೆ ಹಳೆಯ ಮೋಡೆಲ್ ಆಯಿತು. ನಂತರ ಬಂದ ಡಿಜಿಟಲ್ ಕೈಗಡಿಯಾರವು ಎಚ್ಎಂಟಿ ವಾಚ್ ಘನತೆಯನ್ನು ಕಸಿದುಕೊಂಡಿತು.

ಆಗಲೂ ಎಚ್ಎಂಟಿ ವಾಚ್ ತನ್ನ ಡಿಸೈನ್, ಹೆಸರನ್ನು ಬದಲಾಯಿಸಿಕೊಳ್ಳದೆ ಮುನ್ನೆಡೆಯಿತು. ಜನರ ಅಭಿರುಚಿ ಬದಲಾದಂತೆ ಎಚ್ಎಂಟಿ ಮಾರುಕಟ್ಟೆ ಮೌಲ್ಯ ಕುಸಿಯಿತು. ಎಚ್ಎಂಟಿ ವಾಚ್ ಖರೀದಿಸುವವರು ಕಡಿಮೆಯಾದರು ಇದರ ಪರಿಣಾಮ 2010ರಲ್ಲಿ ಭಾರಿ ನಷ್ಟ ಅನುಭವಿಸಿತು. ಇದು ಸರ್ಕಾರಿ ಸಂಸ್ಥೆ ಇದರಿಂದ ಅದರ ನಷ್ಟವನ್ನು ಸರ್ಕಾರವೇ ಭರಿಸಿದ್ದು ಆದರೆ ನಷ್ಟ ಮುಂದುವರೆಯುತ್ತಲೇ ಹೋದಾಗ ಸರ್ಕಾರವೇ ಈ ಸಂಸ್ಥೆಯನ್ನು ಮುಚ್ಚುವ ನಿರ್ಧಾರ ಮಾಡಿತು 2016 ರಲ್ಲಿ ಸರ್ಕಾರ ಅಂತಿಮವಾಗಿ ಹಾಗೂ ಅಧಿಕೃತವಾಗಿ ಸಂಸ್ಥೆಯನ್ನು ಮುಚ್ಚಿತು. ನಂತರ ಆನ್ಲೈನ್ ಸೇವೆಗಳಲ್ಲಿ ಎಚ್ಎಂಟಿ ವಾಚ್ ಗಳಿಗೆ ಬೇಡಿಕೆ ಬಂದಿತು ಈಗಲೂ ಆನ್ಲೈನ್ ನಲ್ಲಿ ಎಚ್ಎಂಟಿ ಡಿಸೈನ್ ವಾಚ್ ಲಭ್ಯವಿದೆ. ಎಚ್ಎಂಟಿ ಸಂಸ್ಥೆಯ ನಿಧಾನವಾದ ನಿರ್ಧಾರ ತೆಗೆದುಕೊಳ್ಳುವ ಹಾಗೂ ಸ್ಪರ್ಧಾತ್ಮಕ ಮನೋಭಾವನೆಯ ಕೊರತೆಯಿಂದ ಕುಸಿತ ಕಂಡಿತು ಎಂದು ಹಲವರ ಅಭಿಪ್ರಾಯ.