ಪ್ರಯತ್ನಕ್ಕೆ ತಕ್ಕ ಫಲ ಯಾವತ್ತು ದೊರೆಯುತ್ತದೆ. ಪ್ರತಿಯೊಬ್ಬರೂ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ಕೆಲವೊಂದು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ದೊರಕುತ್ತದೆ. ಏನೇ ಕಷ್ಟಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯ. ಕೆಲವೊಮ್ಮೆ ಅದೃಷ್ಟ ಕೈ ಕೊಟ್ಟರು ಪ್ರಯತ್ನ ಕೈ ಕೊಡುವುದಿಲ್ಲ. ತಾವು ಕಂಡ ಕನಸನ್ನು ತಮ್ಮ ಸರಿಯಾದ ಪ್ರಯತ್ನದ ಮೂಲಕ ಈಡೇರಿಸಿಕೊಳ್ಳುತ್ತಾರೆ. ಇದೇ ಪಥದಲ್ಲಿ ಸಾಗಿದ ಮಹಾರಾಷ್ಟ್ರದ ಒಬ್ಬ ವ್ಯಕ್ತಿಯ ಸ್ಫೂರ್ತಿದಾಯಕ ಕತೆಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

ವರುಣ ಬರನ್ವಲ್ ಮಹಾರಾಷ್ಟ್ರದ ಪಲ್ಸರ್ ಎಂಬ ಸಣ್ಣ ಹಳ್ಳಿಯಲ್ಲಿ, ಸಣ್ಣ ಬಡಕುಟುಂಬದಲ್ಲಿ ಜನಿಸುತ್ತಾನೆ. ವರುಣ್ ತಂದೆಯವರು ಒಂದು ಸಣ್ಣ ಸೈಕಲ್ ಶಾಪ ನಡೆಸಿ ಅದರಲ್ಲಿ ಬಂದ ಆದಾಯದಿಂದ ಜೀವನ ನಡೆಸುತ್ತಿದ್ದರು. ವರುಣ್ 10ನೇ ತರಗತಿ ಎಕ್ಸಾಮ್ ಮುಗಿಸಿದ ನಾಲ್ಕು ದಿವಸಗಳಲ್ಲಿಯೇ ಅವರ ತಂದೆ ಹೃದಯಘಾತದಿಂದ ಮೃತಪಟ್ಟಿದ್ದರು. ತಂದೆ ಆಸ್ಪತ್ರೆಗೆ ಸೇರಿದ್ದರಿಂದ ಕೂಡಿಟ್ಟ ಹಣವೆಲ್ಲ ಖಾಲಿಯಾಗಿ ತುಂಬಾ ಸಾಲವಾಗಿ ಬಿಡುತ್ತದೆ. ಜೀವನಕ್ಕೆ ಹಣವಿಲ್ಲದೆ ವರುಣ್ ಅವರೇ ಸೈಕಲ್ ಶಾಪ್ ಅನ್ನು ಪುನರ್ ಆರಂಭಿಸುತ್ತಾರೆ. ಮನೆಯ ಪರಿಸ್ಥಿತಿ ತುಂಬಾ ಕೆಟ್ಟಿರುವಾಗಲೇ ಅವರ ಹತ್ತನೇ ತರಗತಿಯ ರಿಸಲ್ಟ್ ಬರುತ್ತದೆ. ಅವರು ಜಿಲ್ಲೆಗೆ 2 ನೇ ಸ್ಥಾನ ಬರುತ್ತಾನೆ.

ಮುಂದೆ ಕಾಲೇಜಿಗೆ ಹೋಗಲು ದುಡ್ಡಿನ ಸಮಸ್ಯೆಯಾಗಿ ಸೈಕಲ್ ಶಾಪ್ ಅನ್ನು ಮತ್ತೆ ಪುನರಾರಂಭಿಸುತ್ತಾರೆ. ಇದೇ ಸಮಯದಲ್ಲಿ ಅವರ ತಂದೆಗೆ ಚಿಕಿತ್ಸೆ ನೀಡಿದ ವೈದ್ಯರು ಕಥೆಯನ್ನು ವಿಚಾರಿಸಿ ಹತ್ತು ಸಾವಿರ ರೂಗಳನ್ನು ನೀಡಿ ಕಾಲೇಜಿಗೆ ಹೋಗಲು ನೆರವಾಗುತ್ತಾರೆ. ಕಾಲೇಜಿನ ಎರಡು ವರ್ಷ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಕೊನೆಕೊನೆಗೆ ಅವನ ಕಷ್ಟವನ್ನು ನೋಡಲಾರದೆ ಶಿಕ್ಷಕರೆ ಹಣ ಸಹಾಯ ಮಾಡಿ ಓದಲು ನೆರವಾಗುತ್ತಿದ್ದರು. ಹೀಗೆ ಅವರು ಎಲ್ಲರ ಸಹಾಯದಿಂದ ರಾಂಕ್ ಪಡೆಯುತ್ತಾರೆ.

ಮುಂದೆ ಅವರು ತಮ್ಮ ಜಮೀನನ್ನು ಮಾರಿ ಕಷ್ಟಪಟ್ಟು ಇಂಜಿನಿಯರಿಂಗ್ ಕಾಲೇಜನ್ನು ಸೇರುತ್ತಾರೆ. ಹೀಗೆ ಇಂಜಿನಿಯರಿಂಗ್ ಸೇರಿದವರು ಮೊದಲವರ್ಷದಲ್ಲಿ ಕಾಲೇಜ್ ಟಾಪರ್ ಆಗುತ್ತಾರೆ. ಎರಡನೇ ವರ್ಷಕ್ಕೆ ಹಣದ ಸಮಸ್ಯೆ ಮತ್ತೆ ಎದುರಾಗಿ ಸ್ನೇಹಿತರಿಗೆ ಟ್ಯೂಷನ್ ಹೇಳಿಕೊಡುವ ಮೂಲಕ ಕಾಲೇಜ್ ಅಡ್ಮಿಷನ್ ಮಾಡಿಸುತ್ತಾರೆ. ನಂತರ ಸ್ಕಾಲರ್ಶಿಪ್ ನಿಂದ ಬಂದ ಹಣದಲ್ಲಿ 3 ಮತ್ತು 4ನೇ ವರ್ಷವನ್ನು ಪೂರ್ತಿಮಾಡುತ್ತಾರೆ. ಅವರಿಗೆ ಕಂಪನಿಯಲ್ಲಿ ಒಳ್ಳೆಯ ಉದ್ಯೋಗವೂ ದೊರೆಯುತ್ತದೆ. ಇದೇ ಸಮಯದಲ್ಲಿ ಲೋಕದಲ್ಲಿ ಭ್ರಷ್ಟಾಚಾರದ ವಿರುದ್ಧ ಹಜಾರೆಯವರು ಧ್ವನಿ ಎತ್ತಿರುತ್ತಾರೆ.

ಆಂದೋಲನದಲ್ಲಿ ಭಾಗವಹಿಸಿದ ಇವರು ಲೋಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮನಗಂಡವರು ಐಎಎಸ್ ಮಾಡಬೇಕೆಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಹೆಚ್ಚಿನ ಅಭ್ಯಾಸ ಮಾಡಲು ಸ್ನೇಹಿತನ ಕೊಠಡಿಯನ್ನು ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ಇನ್ನೂ ಹೆಚ್ಚಿನ ಪುಸ್ತಕಗಳ ಅವಶ್ಯಕತೆ ಇದ್ದು ಇದಕ್ಕೆ ಹಣದ ಅಭಾವವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಅನಿರೀಕ್ಷಿತವಾಗಿ ಒಂದು ಎಂಜಿಯೋದಿಂದ ಪುಸ್ತಕದ ಸಹಾಯವಾಗುತ್ತದೆ. ಕೊನೆಗೆ 2014ರಲ್ಲಿ ವರುಣ್ ಬರನ್ವಲ್ ಅವರು ದೇಶಕ್ಕೆ 32ನೇ ಸ್ಥಾನದಲ್ಲಿ ಐಎಎಸ್ ಪಾಸ್ ಆಗುತ್ತಾರೆ. ಹೀಗೆ ಎಂಟು ವರ್ಷಗಳ ಕಾಲ ತನ್ನ ಓದಿಗಾಗಿ ಕಷ್ಟಪಟ್ಟವರು ಉತ್ತಮ ಸಾಧನೆಯನ್ನು ಮಾಡುತ್ತಾರೆ. ಹೀಗೆ ಕಷ್ಟಪಟ್ಟು ನೇರ ಗುರಿಯನ್ನು ಹೊಂದಿ ನಡೆದವರಿಗೆ ಯಶಸ್ಸಿನ ಮಾರ್ಗ ದೊರಕುತ್ತದೆ. ಇದು ಪ್ರತಿಯೊಬ್ಬರಿಗೂ ಉತ್ತಮ ಉದಾಹರಣೆಯಾಗುತ್ತದೆ. ಹೀಗೆ ಕಷ್ಟಪಟ್ಟುಮಾಡಿದ ಕೆಲಸದಲ್ಲಿ ಯಾವತ್ತೂ ಯಶಸ್ಸು ಸಿಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!