ಹಿಂದಿನ ಕಾಲದಲ್ಲಿ ಆಸ್ಪತ್ರೆ ಹೋಗುವುದು ಕಡಿಮೆ. ಹೋಗುವುದೇ ಇಲ್ಲ ಎಂದರೂ ಸರಿಯೆ. ಮನೆಯ ಹಿತ್ತಲಲ್ಲಿ ಇದ್ದ ಕೆಲವು ಔಷಧ ಗುಣಗಳನ್ನು ಹೊಂದಿರುವ ಗಿಡ, ಬಳ್ಳಿ ಹಾಗೂ ಹಣ್ಣು, ಕಾಯುಗಳಿಂದ ಕಷಾಯವನ್ನು ತಯಾರಿಸಿ ಜ್ವರ, ಕೆಮ್ಮು, ನೆಗಡಿಗಳಿಗೆ ಔಷಧಿಯಾಗಿ ಬಳಸುತ್ತಿದ್ದರು. ಈಗ ಕರೋನಾ ಸಮಯದಲ್ಲಿ ಇಂತಹ ಕಷಾಯಗಳ ನೆನಪಾಗುತ್ತದೆ. ಇಂತಹ ಒಂದು ನೆಲನೆಲ್ಲಿ ಎಲೆಯ ಕಷಾಯದ ಬಗ್ಗೆ ಇಲ್ಲಿ ತಿಳಿಯೋಣ.
ನೆಲನೆಲ್ಲಿ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಬಿಳಿ ನೆಲನೆಲ್ಲಿ ಕಷಾಯ ಒಳ್ಳೆಯದು. ನೆಲನೆಲ್ಲಿ ಗಿಡವನ್ನು ಕಳೆ ಎಂದು ಕಿತ್ತು ಬಿಸಾಕುವವರು ಇದ್ದಾರೆ. ಆದರೆ ಈ ಕಳೆ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಷ್ಟೋ ಸಮಸ್ಯೆಗೆ ಪರಿಹಾರ. ಹೊಟ್ಟೆಯಲ್ಲಿ ಇರುವ ಕಲ್ಮಶಗಳನ್ನು ಹೊರಹಾಕುತ್ತದೆ. ಕಿಡ್ನಿಗೆ ಉತ್ತಮ ಈ ನೆಲನೆಲ್ಲಿ. ಕಾಮಾಲೆ ಕಾಯಿಲೆಗೆ ದಿವ್ಯ ಔಷಧಿ. ನೆಲನೆಲ್ಲಿ ಎಲೆ ಹಾಗೂ ಕಾಂಡವನ್ನು ಜಜ್ಜಿ ನೆತ್ತಿಗೆ ಹಾಕಿ ವಿಳ್ಯದೆಲೆ ಅಂಟಿಸಿಕೊಳ್ಳಬೇಕು. ಐದಾರು ಕೊಡ ನೀರು ನೆತ್ತಿಯ ಮೇಲೆ ಹಾಕಬೇಕು. ಹೀಗೆ ಮಾಡಿದರೆ ಕಾಮಾಲೆ ಕಾಯಿಲೆ ಗುಣವಾಗುತ್ತದೆ. ನೆಲನೆಲ್ಲಿ ಪಿತ್ತಕ್ಕೂ ಒಳ್ಳೆಯದು. ತುಂಬಾ ತಂಪು ಈ ನೆಲನೆಲ್ಲಿ. ಹೆಣ್ಣು ಮಕ್ಕಳ ತಿಂಗಳ ಸಮಸ್ಯೆಗೆ ಒಂದು ಚಮಚ ಜೀರಿಗೆ ಒಂದು ಸ್ವಲ್ಪ ಮೆಂತೆ ಹಾಕಿ ಕಷಾಯ ಮಾಡಿ ಮೂರು ದಿನವೂ ಕುಡಿಯುವುದರಿಂದ ಕಡಿಮೆ ಆಗುತ್ತದೆ.
ನೆಲನೆಲ್ಲಿ ಕಷಾಯ ಮಾಡುವಾಗ ನೆಲನೆಲ್ಲಿಯ ಬೇರುಗಳು, ಕಾಂಡ ಹಾಗೂ ಎಲೆ ಎಲ್ಲವನ್ನು ತೆಗೆದುಕೊಳ್ಳಬೇಕು. ನೆಲನೆಲ್ಲಿ ಗಿಡದಲ್ಲಿ ಇರುವ ನೆಲ್ಲಿಕಾಯಿ ಎಲ್ಲವನ್ನು ತೆಗೆದುಬಿಡಬೇಕು. ಒಬ್ಬರಿಗೆ ಕಷಾಯ ಮಾಡುವಾಗ ಎರಡು ಗ್ಲಾಸ್ ನೀರನ್ನು ಹಾಕಿ ಅದು ಒಂದು ಗ್ಲಾಸ್ ಆಗುವಷ್ಟು ಕುದಿಸಬೇಕು. ಹಾಲು ಬೇಕಾದಲ್ಲಿ ಹಾಕಬಹುದು. ಈ ನೆಲನೆಲ್ಲಿ ಕಷಾಯವನ್ನು ಯಾರೂ ಬೇಕಾದರೂ ಕುಡಿಯಬಹುದು. ವಯಸ್ಸಾದವರು, ಮಕ್ಕಳು ಮಧುಮೇಹ ಇರುವವರು, ಗರ್ಭಿಣಿಯರು ಎಲ್ಲರೂ ಬಳಸಬಹುದು. ನೆಲನೆಲ್ಲಿ ಜೊತೆಗೆ ಒಂದು ಚಮಚ ಜೀರಿಗೆ ಪುಡಿಮಾಡಿ ಬಳಸಬೇಕು. ಎರಡು ಲೋಟ ನೀರು, ನೆಲನೆಲ್ಲಿ ಗಿಡ, ಒಂದು ಚಮಚ ಜೀರಿಗೆ ಪುಡಿ ಹಾಕಿ ಕುಡಿಸಬೇಕು. ಹೀಗೆ ಕುದಿಸಿದ ನೀರು ಎರಡು ಗ್ಲಾಸ್ ನಿಂದ ಒಂದು ಗ್ಲಾಸ್ ಗೆ ಬಂದಾಗ ಶೋಧಿಸಿಕೊಳ್ಳಬೇಕು. ಸರಿಯಾಗಿ ಕುದಿಸಿದ ಕಷಾಯದ ಬಣ್ಣ ಬದಲಾಗುತ್ತದೆ. ನೆಲನೆಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಸಸ್ಯ.
ಆದಷ್ಟು ನೆಲನೆಲ್ಲಿ ಗಿಡ ಗುರುತಿಸಿ ಕಷಾಯ ಮಾಡಿ ಕುಡಿಯುವುದು ಒಳ್ಳೆಯದು. ಹೀಗೆ ಹಿತ್ತಲಲ್ಲಿ ಕಳೆ ಎಂದುಕೊಳ್ಳುವ ಸಸ್ಯಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳು ಸಿಕ್ಕಲ್ಲಿ ಪೊಟ್ ಗಳಲ್ಲಿ ಹಾಕಿ ಬೆಳೆಸುವುದು ಒಳ್ಳೆಯದು. ಆರೋಗ್ಯಕ್ಕೆ ಉತ್ತಮವಾದದ್ದು ಹತ್ತಿರದಲ್ಲಿ ಇದ್ದರೆ ಒಳ್ಳೆಯದು.