ಮದುವೆಯಾದಂತಹ ದಂಪತಿಗಳಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹೆಚ್ಚಿರಬೇಕು. ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ದಾಂಪತ್ಯ ಜೀವನ ವಿರಸಮಯವಾಗಿರುತ್ತದೆ. ದಾಂಪತ್ಯ ಜೀವನದ ಸುಖ ಸಂತೋಷದಲ್ಲಿ ಗ್ರಹಗಳ, ರಾಶಿಗಳ ಪಾತ್ರ ಮುಖ್ಯವಾಗಿದೆ. ಹಾಗಾದರೆ ದ್ವಾದಶ ರಾಶಿಗಳಲ್ಲಿ ತುಲಾ ರಾಶಿಯ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ತುಲಾ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ಎಂದು ತಿಳಿದುಕೊಳ್ಳಬೇಕಾದರೆ ಮೊದಲು ತುಲಾ ರಾಶಿಯ ರಾಶ್ಯಾಧಿಪತಿ ಶುಕ್ರ ಗ್ರಹ ಹಾಗೂ ತುಲಾರಾಶಿಯ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ತುಲಾ ರಾಶಿಯವರು ಇನ್ನೊಬ್ಬರ ಮಾತಿನ ಮೋಡಿಗೆ ಒಳಗಾಗುತ್ತಾರೆ. ಪ್ರೀತಿ ಪ್ರೇಮದ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಯಾರನ್ನಾದರೂ ಅತಿಯಾಗಿ ಹಚ್ಚಿಕೊಳ್ಳುತ್ತಾರೆ. ತುಲಾ ರಾಶಿಯವರು ವಿವಾಹವಾಗುವವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಲ್ಲದೆ ಇಷ್ಟಪಡುತ್ತಾರೆ. ತುಲಾ ರಾಶಿಯವರು ಇದ್ದಾಗ ದಾಂಪತ್ಯ ಜೀವನ ಅನ್ಯೋನ್ಯತೆಯಿಂದ ಕೂಡಿರುತ್ತದೆ. ಪ್ರೀತಿ, ಪ್ರೇಮ, ವಿಶ್ವಾಸಕ್ಕೆ ಕೊರತೆ ಇರುವುದಿಲ್ಲ.
ತುಲಾ ರಾಶಿಯವರ ಪ್ರವೇಶದ ನಂತರ ವಾಹನಗಳನ್ನು ಖರೀದಿಸುವುದು, ಮನೆ ಕಟ್ಟುವುದು ಮುಂತಾದ ಕೆಲಸಗಳು ನಡೆಯುತ್ತದೆ ಜೊತೆಗೆ ಯೋಗ ಲಭಿಸುತ್ತದೆ. ತುಲಾ ರಾಶಿಯ ಸಪ್ತಮದಲ್ಲಿ ಮೇಷ ರಾಶಿ, ಮೇಷ ರಾಶಿಯ ರಾಶ್ಯಾಧಿಪತಿ ಕುಜ ಗ್ರಹ ಈ ಗ್ರಹ ಕೋಪಿಷ್ಟ ಆದ್ದರಿಂದ ತುಲಾ ರಾಶಿಯವರನ್ನು ವಿವಾಹವಾಗುವವರಿಂದ ಕಿರಿ ಕಿರಿ, ಮನಸ್ತಾಪಗಳನ್ನು ಅನುಭವಿಸಬೇಕಾಗುತ್ತದೆ. ತಾನೆ ಹೆಚ್ಚು ಎಂಬ ಭಾವನೆ ಮನಿಸಿನಲ್ಲಿರುತ್ತದೆ ಇದರಿಂದ ದಾಂಪತ್ಯ ಜೀವನದಲ್ಲಿ ಸ್ವಲ್ಪ ನೆಮ್ಮದಿಗೆ ಅಡ್ಡಿಯಾಗುತ್ತದೆ. ತುಲಾ ರಾಶಿಯ ಕೆಲವೊಬ್ಬರ ಜೀವನದಲ್ಲಿ ನಿರೀಕ್ಷೆ ಮಾಡಿದ ಪ್ರೀತಿ, ವಿಶ್ವಾಸ ಸಿಗುವುದಿಲ್ಲ.
ತುಲಾ ರಾಶಿಯವರ ಮದುವೆಯಾಗುವವರು ನೋಡಲು ಕೋಪಿಷ್ಟ, ಒರಟರಂತೆ ಮೇಲ್ನೋಟಕ್ಕೆ ಕಂಡುಬಂದರೂ ಅವರು ಮನಸಿನಲ್ಲಿ ಒಳ್ಳೆಯದಿರುತ್ತದೆ. ಕೆಲವೊಬ್ಬರ ಜೀವನದಲ್ಲಿ ಗಂಡ ಹೆಂಡತಿಯ ಮಧ್ಯೆ ಸ್ವಲ್ಪ ಮನಸ್ತಾಪ ಕಂಡುಬರುತ್ತದೆ, ದಾಂಪತ್ಯದಲ್ಲಿ ನಾನು ಹೆಚ್ಚು ಎಂಬ ಹೆಚ್ಚುಗಾರಿಕೆ ಕಂಡುಬರುವ ಸಾಧ್ಯತೆಗಳಿವೆ. ತುಲಾ ರಾಶಿಯವರ ಗ್ರಹಗತಿ ಚೆನ್ನಾಗಿದ್ದರೆ ದಾಂಪತ್ಯ ಜೀವನ ಬಹಳ ಚೆನ್ನಾಗಿರುತ್ತದೆ, ಪ್ರೀತಿ, ಪ್ರೇಮ ಹೆಚ್ಚಿರುತ್ತದೆ. ತುಲಾ ರಾಶಿಯವರ ಜಾತಕದಲ್ಲಿ ಗ್ರಹಗಳ ವ್ಯತಿರಿಕ್ತ ಪರಿಣಾಮದಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆ ಕಂಡುಬರುತ್ತದೆ.
ಕೆಲವೊಬ್ಬರ ಜೀವನದಲ್ಲಿ ಮೂರನೆ ವ್ಯಕ್ತಿಯ ಪ್ರವೇಶದಿಂದ ವಿರಸ ಉಂಟಾಗುತ್ತದೆ. ಈ ಎಲ್ಲ ಅಂಶಗಳನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಜೀವನದಲ್ಲಿ ಹೆಜ್ಜೆ ಇಟ್ಟಾಗ ಒಳ್ಳೆಯದಾಗುತ್ತದೆ. ತುಲಾ ರಾಶಿಯವರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದರಿಂದ ಜೊತೆಗಾರರು ಸಂಶಯದಿಂದ ನೋಡುವ ಸಾಧ್ಯತೆಗಳು ಇವೆ. ತುಲಾ ರಾಶಿಯವರು ಎಚ್ಚರಿಕೆಯಿಂದ ಜೀವನ ನಡೆಸಿದಾಗ ದಾಂಪತ್ಯ ಜೀವನದಲ್ಲಿ ಒಳ್ಳೆಯದಾಗುತ್ತದೆ. ತುಲಾ ರಾಶಿಯವರು ತಮ್ಮ ದಾಂಪತ್ಯ ಜೀವನದಲ್ಲಿ ಬರುವ ಕಷ್ಟಗಳ ಪರಿಹಾರಕ್ಕಾಗಿ ಸುಬ್ರಮಣ್ಯ ದೇವರ ಆರಾಧನೆ ಮಾಡಬೇಕು, ಮಂಗಳವಾರ ನಾಗರಕಟ್ಟೆಗೆ ಹಾಲೆರದು ಪ್ರದಕ್ಷಿಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಆಶ್ಲೇಷ ಬಲಿ ಪೂಜೆಯನ್ನು ಮಾಡಬೇಕು ಇದರಿಂದ ದಾಂಪತ್ಯ ಜೀವನದಲ್ಲಿ ಸುಖ ನೆಮ್ಮದಿ ಕಂಡುಬರುತ್ತದೆ. 9 ಮಂಗಳವಾರದಂದು 900 ಗ್ರಾಂ ತೊಗರಿಬೇಳೆ ಅಥವಾ ತೋಗರಿಕಾಳುಗಳನ್ನು ಸುಬ್ರಮಣ್ಯ ದೇವಸ್ಥಾನಕ್ಕೆ ಅಥವಾ ಬಡವರಿಗೆ ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ. ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದರೆ ಇಬ್ಬರ ಜಾತಕವನ್ನು ನೋಡಬೇಕಾಗುತ್ತದೆ. ಜಾತಕಗಳಲ್ಲಿ ದಶಾಭುಕ್ತಿ, ಸಪ್ತಮ ಸ್ಥಾನ, ಗುರುವಿನ ದೃಷ್ಟಿ, ಶನಿ ಪ್ರಭಾವ, ಸರ್ಪದೋಷ ಮುಂತಾದ ಅಂಶಗಳನ್ನು ಪರಿಶೀಲಿಸಿ ಪರಿಹಾರವನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.