ಮಾತುಗಳು ಒಳ್ಳೆಯದ್ದೊ ಕೆಟ್ಟದ್ದೊ ತಿಳಿದಿಲ್ಲ. ಆದರೆ ಕೆಲವೊಮ್ಮೆ ಮಾತನಾಡುವ ಶೈಲಿಯೋ, ಮಾತುಗಳೊ ಇನ್ನೊಬ್ಬರನ್ನು ಘಾಸಿಗೊಳಿಸುತ್ತದೆ. ಕೆಲವೊಮ್ಮೆ ಖುಷಿ ಪಡಿಸುತ್ತದೆ. ಆದರೆ ಯಾವ ಸಮಯದಲ್ಲಿ ಮಾತನಾಡಬೇಕು, ಯಸವ ಸಮಯದಲ್ಲಿ ಮೌನವೇ ಲೇಸು ಎಂಬುದನ್ನು ಅರಿಯಬೇಕು. ಕೆಲವೊಮ್ಮೆ ಮಾತಿಗಿಂತ ಮೌನವೇ ಒಳ್ಳೆಯದನ್ನು ಮಾಡುತ್ತದೆ. ಅಂತಹ ಸಂಧರ್ಭದಲ್ಲಿ ಮೌನದಿಂದ ಇದ್ದರೆ ನಮಗೆ ಒಳ್ಳೆಯದೆ ಆಗುತ್ತದೆ. ಮೌನ ವಹಿಸುವುದರ ಮಹತ್ವವನ್ನು ಸಾರುವ ಕಥೆ ಇಲ್ಲಿದೆ. ಒಂದು ಊರಿನಲ್ಲಿ ಒಬ್ಬ ವರ್ತಕ ತನ್ನ ಕುದುರೆಯನ್ನು ಒಂದು ಮರಕ್ಕೆ ಕಟ್ಟಿ ತನ್ನ ಕೆಲಸಕ್ಕೆ ಹೋಗಲು ಮುಂದಾಗುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ ಸೈನಿಕ ಅವನ ಕುದುರೆಯನ್ನು ವರ್ತಕ ತನ್ನ ಕುದುರೆ ಕಟ್ಟಿದ ಮರಕ್ಕೆ ಕಟ್ಟಿ ಹಾಕಲು ಹೋಗುತ್ತಾನೆ. ಇದನ್ನು ಗಮನಿಸಿದ ವರ್ತಕ ಅಯ್ಯಾ ಸೈನಿಕ ನಿನ್ನ ಕುದುರೆಯನ್ನು ಬೇರೆ ಯಾವುದಾದರು ಮರಕ್ಕೆ ಕಟ್ಟು. ಯಾಕೆಂದರೆ ನನ್ನ ಕುದುರೆ ಬಹಳ ಮೊಂಡು. ನಿನ್ನ ಕುದುರೆಗೆ ನನ್ನ ಕುದುರೆ ತೊಂದರೆ ಕೊಡಬಹುದು, ಗಾಯ ಮಾಡಬಹುದು, ಇಲ್ಲವೇ ಸಾಯಿಸಲುಬಹುದು ಎನ್ನುತ್ತಾನೆ. ಅದಕ್ಕೆ ಬೇರೆ ಯಾವುದಾದರೂ ಮರಕ್ಕೆ ಆ ಕುದುರೆಯನ್ನು ಕಟ್ಟು ಇಲ್ಲಿ ಕಟ್ಟಬೇಡ ಎನ್ನುತ್ತಾನೆ. ಅಷ್ಟು ಹೇಳಿದರೂ ಅದೇ ಮರಕ್ಕೆ ಕಟ್ಟುವ ಸೈನಿಕ ಏನಾಗುತ್ತದೆ ನೋಡುವ ಎಂಬ ಅಹಂ ಬರುತ್ತದೆ.
ವರ್ತಕ ಹಾಗೂ ಸೈನಿಕ ಅವರವರ ಕೆಲಸಗಳಿಗೆ ಹೋಗುತ್ತಾರೆ. ಇಲ್ಲಿ ಕುದುರೆಗಳ ಮಧ್ಯ ಜಗಳ ಪ್ರಾರಂಭವಾಗುತ್ತದೆ. ವರ್ತಕನ ಕುದುರೆ ಸೈನಿಕನ ಕುದುರೆಯನ್ನು ಘಾಸಿಗೊಳಿಸಿ, ಸೈನಿಕನ ಕುಡದುರೆಯ ಕಾಲನ್ನು ಮುರಿದು ಹಾಕುತ್ತದೆ. ಸ್ವಲ್ಪ ಸಮಯದ ನಂತರ ಇಬ್ಬರೂ ಕೆಲಸ ಮುಗಿಸಿ ಬರುತ್ತಾರೆ. ಬಂದು ನೋಡಿದರೆ ಸೈನಿಕನ ಕುದುರೆಯ ಕಾಲು ಮುರಿದಿರುತ್ತದೆ. ವರ್ತಕನ ಕುದುರೆ ಹೂಂಕರಿಸುತ್ತಾ ನಿಂತಿರುತ್ತದೆ. ಇದನ್ನು ನೋಡಿದ ಸೈನಿಕ ತನಗೆ ಪರಿಹಾರ ತುಂಬಿಕೊಡಬೇಕು ನಿನ್ನ ಕುದುರೆ ನನ್ನ ಕುದುರೆಯ ಕಾಲು ಮುರಿದಿದೆ ಎಂದು ಕೋಪದಲ್ಲಿ ಕೂಗಾಡಲು ಶುರು ಮಾಡುತ್ತಾನೆ. ವರ್ತಕ ನಾನು ಮೊದಲೆ ಹೇಳಿದ್ದೆ ಈ ಮರಕ್ಕೆ ಕಟ್ಟಬೇಡ ನನ್ನ ಕುದುರೆ ತೊಂದರೆ ಕೊಡುತ್ತದೆ ಎಂದು ನೀನು ಕೇಳಲಿಲ್ಲವೆಂದು ಹೇಳುತ್ತಾನೆ. ಮಾತಿಗೆ ಮಾತು ಬೆಳೆದು ಇವರಿಬ್ಬರ ಜಗಳ ಹೆಚ್ಚಾಗಲು ಜನರು ಇವರನ್ನು ನ್ಯಾಯಾಧೀಶರ ಎದುರು ನಿಲ್ಲಿಸುತ್ತಾರೆ.ನ್ಯಾಯಾಧೀಶರು ಸಮಸ್ಯೆ ಏನು ವಿವರಿಸಲು ಹೇಳಿದಾಗ ಸೈನಿಕನೆ ಮೊದಲಿಗನಾಗಿ ಈ ವರ್ತಕನ ಕುದುರೆ ನನ್ನ ಕುದುರೆಗೆ ಘಾಸಿ ಮಾಡಿದೆ, ಕಾಲು ಮುರಿದಿದೆ ಪರಿಹಾರ ತುಂಬಿಕೊಡಲು ವರ್ತಕ ಒಪ್ಪುತ್ತಿಲ್ಲ ಎಂದು ಹೇಳಿ ಎಲ್ಲಾ ಕಥೆಯನ್ನು ವಿವರಿಸುತ್ತಾನೆ..
ಸೈನಿಕನ ಮಾತು ಕೇಳಿದ ನ್ಯಾಯಾಧೀಶರು ನಾನು ಒಬ್ಬರ ಮಾತಿಂದಲೆ ತೀರ್ಪು ನೀಡಲು ಸಾಧ್ಯವಿಲ್ಲ ವರ್ತಕನು ಅವನ ಪರವಾಗಿ ಮಾತನಾಡಲಿ ಎಂದು ವರ್ತಕನಿಗೆ ವಿಷಯ ತಿಳಿಸುವ ಅವಕಾಶ ನೀಡುತ್ತಾರೆ. ಆದರೆ ವರ್ತಕ ಏನೂ ಮಾತನಾಡದೆ ಸುಮ್ಮನೆ ನಿಂತಿರುತ್ತಾನೆ. ಎಷ್ಟು ಸಲ ಪ್ರಶ್ನಿಸಿದರು ಸುಮ್ಮನಿರುವ ವರ್ತಕನನ್ನು ಕಂಡು ನ್ಯಾಯಾಧೀಶರು ವರ್ತಕ ಮೂಗ ಇರಬಹುದು ಎಂದುಕೊಂಡು. ಸೈನಿಕನಿಗೆ ಹೇಳುತ್ತಾರೆ ನಿಮ್ಮ ಒಬ್ಬರ ಮಾತು ಕೇಳಿ ತೀರ್ಪು ನೀಡಲು ಸಾಧ್ಯವಿಲ್ಲ ಆದರೆ ವರ್ತಕನಿಗೆ ಮಾತುಬರದ ಕಾರಣ ಈ ಪ್ರಕರಣವನ್ನು ವಜಾ ಮಾಡುತ್ತಿದ್ದೆನೆ ಎಂದು ಹೇಳುವಷ್ಟರಲ್ಲಿ ಸೈನಿಕ ಆ ತಕ್ಷಣವೇ ಹೇಳುತ್ತಾನೆ. ಸ್ವಾಮಿ ವರ್ತಕನಿಗೆ ಮಾತು ಬರುತ್ತದೆ. ಈಗ ನಾಟಕ ಮಾಡುತ್ತಿದ್ದಾನೆ. ಅವನು ಆಗ ಹೇಳಿದ್ದ ನಿನ್ನ ಕುದುರೆ ಇಲ್ಲಿ ಕಟ್ಟಬೇಡ ನನ್ನ ಕುದುರೆ ಮಾಡುತ್ತದೆ. ನನ್ನ ಕುದುರೆ ಒರಟು ಎಂದಿದ್ದ ಈಗ ನಾಟಕ ಮಾಡುತ್ತಿದ್ದಾನೆ ಎಂದು ಆದೇಶದಲ್ಲಿ ಹೇಳುತ್ತಾನೆ. ಎಲ್ಲರಿಗೂ ಮೊದಲು ನಗುವ ನ್ಯಾಯಾಧೀಶರು ನೋಡಿದೆಯಾ. ನೀನೇ ಸತ್ಯ ಏನೆಂಬುದನ್ನು ಒಪ್ಪಿಕೊಂಡೆ. ವರ್ತಕ ಆ ಮರಕ್ಕೆ ಕಟ್ಟಬೇಡ ಎಂದು ಹೇಳಿ ಅವನ ಕರ್ತವ್ಯ ಮಾಡಿದ್ದಾನೆ. ನೀನೆ ಅವನ ಮಾತು ಕೇಳದೆ ತಪ್ಪು ಮಾಡಿದ್ದಿಯಾ. ತಪ್ಪು ಮಾಡಿ ಆ ವರ್ತಕನ ಮೇಲೆ ಆರೋಪ ಹೋರಿಸುತ್ತಿಯಾ ಎಂದು ಕೇಳುತ್ತಾರೆ. ಇಲ್ಲಿ ವರ್ತಕ ಮಾತನಾಡಿದ್ದರೆ ಅವನೆ ದಂಡ ತುಂಬುವ ಪರಿಣಾಮ ಉಂಟಾಗುವ ಸಾಧ್ಯತೆ ಇತ್ತು ಆದರೆ ವರ್ತಕ ಮೌನದ ಮೋರೆಹೋಗಿ ಪರಿಸ್ಥಿತಿ ಗೆದ್ದಿದ್ದ. ಇದರಿಂದ ಅರ್ಥವಾಗುವುದೆನೆಂದರೆ ಯಾವ ಪರಿಸ್ಥಿತಿಯಲ್ಲಿ ನಾವು ಮಾತನಾಡಬೇಕು ಯಾವ ಪರಿಸ್ಥಿತಿಯಲ್ಲಿ ಸುಮ್ಮನಿರಬೇಕು ಎಂಬ ಸತ್ಯ ತಿಳಿದುಕೊಂಡಿರಬೇಕು.