ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಕ್ಕೆ ಹೋದಾಗ ಪೂಜೆ ಮುಗಿದ ನಂತರ ಸ್ವಲ್ಪ ಹೊತ್ತು ಅಲ್ಲೇ ಕಳೆಯುತ್ತಾರೆ. ಹೆಚ್ಚಾಗಿ ಹಳೇಕಾಲದ ಜನರು ದೇವಸ್ಥಾನಕ್ಕೆ ಹೋದರೆ ಸ್ವಲ್ಪ ಸಮಯ ಕುಳಿತು ಬರಬೇಕು ಎಂದು ಹೇಳುತ್ತಾರೆ. ಏಕೆ ದೇವಾಲಯಕ್ಕೆ ಹೋದರೆ ಸ್ವಲ್ಪ ಸಮಯದ ಬಳಿಕ ಕುಳಿತು ಬರಬೇಕು ಎನ್ನುವುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ದೇವಸ್ಥಾನಕ್ಕೆ ಮನಕ್ಕೆ ಶಾಂತಿ ಸಿಗಲಿ ಮತ್ತು ಮನಸಿನ ದ್ವಂದ್ವಗಳ ಪರಿಹಾರಕ್ಕಾಗಿ ಹೋಗುತ್ತಾರೆ. ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ಹಾಗೆಯೇ ದೇವರದರ್ಶನ ಮಾಡುವುದರಿಂದ ಬಹಳಷ್ಟು ಏಕಾಗ್ರತೆ ದೊರೆಯುತ್ತದೆ. ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ದೊರಕಿದ ಹಾಗೆ ಆಗುತ್ತದೆ. ದೇವಾಲಯದಲ್ಲಿ ಪೂಜೆ ನಡೆಯುವಾಗ ನಿಂತಿರುತ್ತಾರೆ. ಅಭಿಷೇಕ, ಮಂಗಳಾರತಿ ನಡೆಯುವ ತನಕ ನಿಂತು ದೇವರ ಆರಾಧನೆಗಳನ್ನು ಮಾಡುತ್ತಿರುತ್ತಾರೆ. ನಂತರ ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾರೆ. ಪ್ರಸಾದ ಮತ್ತು ತೀರ್ಥವನ್ನು ಸೇವಿಸಿದ ನಂತರ ಕುಳಿತುಕೊಳ್ಳಬೇಕು.
ಸದಾಕಾಲ ನಿಂತು ಓಡಾಡಿ ಸುಸ್ತಾಗಿರುತ್ತದೆ. ಹಾಗಾಗಿ ವಿಶ್ರಾಂತಿಗಾಗಿ ಪೂಜೆಯ ನಂತರ ಕುಳಿತುಕೊಳ್ಳಬೇಕು ಎನ್ನುವುದು ಒಂದು ಕಾರಣವಾಗಿದೆ. ಇದರ ಜೊತೆಗೆ ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸು ಬಹಳ ಶಾಂತವಾಗುತ್ತದೆ. ಮನಸ್ಸು ಶಾಂತವಾದಾಗ ಏನು ಮಾಡಬೇಕು ಏನು ಮಾಡಬಾರದು ಎನ್ನುವುದನ್ನು ಅವಲೋಕನ ಮಾಡುತ್ತದೆ. ಈ ಸ್ಥಳದಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರುವುದಿಲ್ಲ. ಮನಸ್ಸು ಒಳ್ಳೆಯ ಆಲೋಚನೆ ಮಾಡುತ್ತದೆ.
ಹಾಗಾಗಿ ಯಾವುದಾದರೂ ದೊಡ್ಡ ಅಲೋಚನೆ ಮಾಡಬೇಕು ಎಂದಾದಾಗ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಅಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳುವುದರಿಂದ ನಿರ್ಧಾರ ಬಹಳಷ್ಟು ಗಟ್ಟಿಯಾಗಿ ಇರುತ್ತದೆ. ಆ ನಿರ್ಧಾರದಿಂದ ಬಹಳಷ್ಟು ಸಂತುಷ್ಟಗೊಳ್ಳಬಹುದು. ಹಾಗಾಗಿ ದೇವಸ್ಥಾನದಲ್ಲಿ ಕೂರುವುದರಿಂದ, ಗಂಟೆಯ ನಾದ ಕೇಳುವುದರಿಂದ ಮತ್ತು ಮಂಗಳಾರತಿಯ ಘಮ ತೆಗೆದುಕೊಳ್ಳುವುದರಿಂದ ಮನಸ್ಸು ಬಹಳಷ್ಟು ಉಲ್ಲಾಸಗೊಳ್ಳುತ್ತದೆ.