ಗರ್ಭಿಣಿ ಸ್ತ್ರೀಯರ ಆರೋಗ್ಯವು ಬಹಳ ಮುಖ್ಯವಾಗಿರುತ್ತದೆ. ಒಂಭತ್ತು ತಿಂಗಳ ಅವಧಿಯಲ್ಲಿ ಪ್ರತಿಯೊಂದು ತಿಂಗಳಿನಲ್ಲಿ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಗರ್ಭಿಣಿ ಸ್ತ್ರೀಯರ ಒಂದನೆ ತಿಂಗಳಿನಿಂದ 9ನೆ ತಿಂಗಳಿನವರೆಗಿನ ಬದಲಾವಣೆಗಳನ್ನು ನೋಂದಣಿ ಮಾಡುವ ತಾಯಿ ಕಾರ್ಡ್ ಅನ್ನು ಎಲ್ಲಾ ಗರ್ಭಿಣಿ ಸ್ತ್ರೀಯರು ಪಡೆಯಲೇಬೇಕು. ತಾಯಿ ಕಾರ್ಡ್ ಪಡೆಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಹಾಗೂ ತಾಯಿ ಕಾರ್ಡ್ ಅನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಗರ್ಭಿಣಿ ಸ್ತ್ರೀಯರಿಗೆ ತಾಯಿ ಕಾರ್ಡ್ ಮಾಡಿಕೊಡಲಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಪ್ರಸವಪೂರ್ವ ಮತ್ತು ಪ್ರಸವ ನಂತರ ಆರೈಕೆ ಅವಶ್ಯಕವಾಗಿದೆ. ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಯಾವುದೇ ವರ್ಗದವರಾಗಿರಲಿ, ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಕೊಳ್ಳುತ್ತಿದ್ದರೂ ತಾಯಿ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಅಂಗನವಾಡಿಗಳಿಂದ ತಾಯಿ ಕಾರ್ಡ್ ಮೂಲಕ ಸೌಲಭ್ಯವನ್ನು ಒದಗಿಸಲಾಗುತ್ತದೆ. ಗರ್ಭಿಣಿ ಸ್ತ್ರೀಯ ವಯಸ್ಸು, ಹೆಸರು, ಗಂಡನ ಹೆಸರು, ವಿಳಾಸ ಇತ್ಯಾದಿ ಮಾಹಿತಿಗಳು ತಾಯಿ ಕಾರ್ಡ್ ನಲ್ಲಿ ನೋಂದಣಿ ಆಗಿರುತ್ತದೆ. ಈ ಎಲ್ಲಾ ಮಾಹಿತಿಗಳು 9 ತಿಂಗಳ ನಂತರ ಹೆರಿಗೆ ಮಾಡುವ ವೈದ್ಯರಿಗೆ ಅವಶ್ಯಕವಾಗಿ ಬೇಕಾಗುತ್ತದೆ. ತಾಯಿ ಕಾರ್ಡ್ ಇಲ್ಲದೆ ಇದ್ದರೆ, ಯಾವುದೆ ಮಾಹಿತಿ ವೈದ್ಯರಿಗೆ ತಿಳಿಯದೆ ಹೆರಿಗೆ ಮಾಡಿಸಲು ಕಷ್ಟವಾಗುತ್ತದೆ.
ಮೊದಲು ಗರ್ಭಿಣಿ ಸ್ತ್ರೀಯರು ಆರ್ ಸಿಎಚ್ ಪೋರ್ಟಲ್ ಎಂಬ ಜಾಲತಾಣದಲ್ಲಿ ನೋಂದಣಿಯಾಗಬೇಕು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ತಾಯಿ ಕಾರ್ಡ್ ವಿತರಿಸಲಾಗುತ್ತದೆ. ತಾಯಿ ಕಾರ್ಡ್ ನಲ್ಲಿ ಆರ್ಸಿಎಚ್ ಐಡಿ ನಂಬರ್ ಇರುತ್ತದೆ ಅದನ್ನು ನೆನಪಿಟ್ಟುಕೊಂಡರೆ ತಾಯಿ ಕಾರ್ಡ್ ಇಲ್ಲದಿದ್ದರೂ ನಂಬರ್ ಮೂಲಕ ಗರ್ಭಿಣಿ ಸ್ತ್ರೀಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಪ್ರತಿ ತಿಂಗಳಿನ ತಪಾಸಣೆ ಮಾಡುವಾಗಲೂ ತಾಯಿ ಕಾರ್ಡ್ ಅನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು ಇದರಿಂದ ತಪಾಸಣೆ ಮಾಡಿದ ವೈದ್ಯರು ತಾಯಿ ಕಾರ್ಡ್ ನಲ್ಲಿ ಬಿಪಿ ಇನ್ನಿತರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಎಂಟ್ರಿ ಮಾಡುತ್ತಾರೆ. ಇದರಿಂದ ಮುಂದಿನ ತಪಾಸಣೆಗೆ ಅನುಕೂಲವಾಗುತ್ತದೆ. ತಾಯಿ ಕಾರ್ಡ್ ನಲ್ಲಿ ಯಾವ ತಿಂಗಳಿನಲ್ಲಿ ಯಾವ ರೀತಿ ಆಹಾರವನ್ನು ತೆಗೆದುಕೊಳ್ಳಬೇಕು, ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕು ಎಂಬೆಲ್ಲಾ ಮಾಹಿತಿಯನ್ನು ಕೊಡಲಾಗಿದೆ ಅಲ್ಲದೆ ಹೆರಿಗೆಯ ನಂತರ ಮಗುವಿನ ಆರೋಗ್ಯದ ಬಗ್ಗೆಯೂ ಮಾಹಿತಿಯನ್ನು ಕೊಡಲಾಗಿದೆ. ತಾಯಿ ಕಾರ್ಡ್ ಮೂಲಕ ಮಗುವಿನ ಗ್ರೋಥ್ ಬಗ್ಗೆ ತಿಳಿದುಕೊಳ್ಳಬಹುದು ಹಾಗೆಯೆ ಮಗುವಿನ ಚುಚ್ಚುಮದ್ದಿನ ಬಗ್ಗೆಯೂ ತಾಯಿ ಕಾರ್ಡ್ ನಲ್ಲಿ ತಿಳಿಸಲಾಗಿದೆ. ಯಾವ, ಯಾವ ಸಮಯದಲ್ಲಿ ಮಗುವಿಗೆ ಯಾವ ಚುಚ್ಚುಮದ್ದನ್ನು ಕೊಡಬೇಕು ಎಂಬುದರ ಬಗ್ಗೆಯೂ ತಾಯಿ ಕಾರ್ಡ್ ನಲ್ಲಿ ತಿಳಿದುಕೊಳ್ಳಬಹುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜನನಿ ಸುರಕ್ಷಾ ಕಾರ್ಯಕ್ರಮದ ಮೂಲಕ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತದೆ. ಯಾವುದೆ ಸರ್ಕಾರಿ ಆರೋಗ್ಯ ಸಂಸ್ಥೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸಮಸ್ಯೆ ಆದಲ್ಲಿ ಆರೋಗ್ಯ ಇಲಾಖೆಯ ಸಹಾಯವಾಣಿ 104 ಈ ನಂಬರ್ ಗೆ ಕರೆ ಮಾಡಿ ದೂರನ್ನು ದಾಖಲಿಸಬಹುದು. ಈ ಕಾರ್ಯಕ್ರಮದ ಉದ್ದೇಶವೆಂದರೆ ಎಲ್ಲಾ ಗರ್ಭಿಣಿ ಸ್ತ್ರೀಯರ ಹೆರಿಗೆ ಸುಸೂತ್ರವಾಗಿ ಆಗಬೇಕು ಮತ್ತು ಉಚಿತವಾಗಿ ಹೆರಿಗೆ ಆಗಬೇಕು. ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯರು ತಾಯಿ ಕಾರ್ಡ್ ಅನ್ನು ತಪ್ಪದೆ ಪಡೆಯಿರಿ. ಸರ್ಕಾರದ ಪ್ರಮುಖವಾದ ಯೋಜನೆಯ ಉಪಯೋಗವನ್ನು ಪಡೆಯಿರಿ. ನಿಮ್ಮ ಆರೋಗ್ಯದೊಂದಿಗೆ ನಿಮ್ಮ ಮಗುವಿನ ಆರೋಗ್ಯವನ್ನು ತಾಯಿ ಕಾರ್ಡ್ ಮೂಲಕ ಕಾಪಾಡಿಕೊಳ್ಳಿರಿ. ನಿಮ್ಮ ಸುತ್ತಮುತ್ತಲಿನ ಗರ್ಭಿಣಿ ಮಹಿಳೆಯರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸಿ.