ಸಿದ್ದರಬೆಟ್ಟವನ್ನು ಕರ್ನಾಟಕ ರಾಜ್ಯದ ಮತ್ತು  ನಮ್ಮ ದೇಶದ ಸಂಜೀವಿನಿ ಬೆಟ್ಟವೆಂದು ಕರೆಯಲಾಗುತ್ತದೆ. ಕಾರಣ ತ್ರೇತಾಯುಗದ ರಾಮಾಯಣದ ಕಾಲದಲ್ಲಿ  ರಾಮ ಮತ್ತು ರಾವಣನ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನು ಗಂಭೀರವಾಗಿ ಗಾಯಗೊಂಡಾಗ ಹನುಮಂತನು ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ಬೆಟ್ಟವನ್ನು ಹೊತ್ತು ತರುವ ಸಂದರ್ಭದಲ್ಲಿ ಸಂಜೀವಿನಿ ಪರ್ವತದ ಸಣ್ಣ ಸಣ್ಣ ತುಣುಕುಗಳು ಹನುಮಂತನ ಬರುವ ಮಾರ್ಗದಲ್ಲಿ ಬೀಳುತ್ತವೆ. ಇಂತಹ ತುಣುಕುಗಳಲ್ಲಿ ಒಂದು ತುಣುಕು ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಬಿದ್ದಿದೆ ಎಂದು ಪ್ರತೀತಿಯಿದೆ. ಆ ಪ್ರದೇಶವೇ ತುಮಕೂರು ಜಿಲ್ಲೆಯ  ಕೊರಟಗೆರೆ ಸಮೀಪದಲ್ಲಿರುವ  ಸಿದ್ದರಬೆಟ್ಟ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಸಿದ್ದರಬೆಟ್ಟ ವು ಅಗಾಧವಾದ ಔಷಧಿ ಗುಣಗಳನ್ನು ಹೊಂದಿರುವ ಗಿಡಮೂಲಿಕೆಯನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಇಲ್ಲಿ ಬರೋಬ್ಬರಿ 900 ಬಗೆಯ ಔಷಧಿ ಸಸ್ಯಗಳು ಇವೆ. ಈ ಬೆಟ್ಟಕ್ಕೆ ನಿಜಗಲ್ ಬೆಟ್ಟ, ಸುವರ್ಣಗಿರಿ,ಸಂಜೀವಿನಿ ಬೆಟ್ಟ, ಮತ್ತು ಸಿದ್ಧರಬೆಟ್ಟ ಎಂದು ಕರೆಯುತ್ತಾರೆ. ಸಿದ್ಧರಬೆಟ್ಟದಲ್ಲಿ ಕೇವಲ ಔಷಧಿ ಗಿಡಮೂಲಿಕೆಗಳೊಂದೆ ಅಲ್ಲದೆ ಬಂಡೆಗಳಿಂದ ಆವೃತವಾದ ಕೆಲವು ಗುಹೆಗಳು ಕೂಡ ಇವೆ. ಈ ಗುಹೆಗಳಲ್ಲಿ ಅನೇಕ ಸಾಧುಸಂತರು ಋಷಿಮುನಿಗಳು ತಪಸ್ಸನ್ನು ಆಚರಿಸಿ ಈ ಬೆಟ್ಟವನ್ನು ಪುನೀತ ಗೊಳಿಸಿದ್ದಾರೆ. ಋಷಿಮುನಿಗಳು ಹಾಗೂ ಸಿದ್ಧಪುರುಷರು ಧ್ಯಾನಿಸುತ್ತಿದ್ದ ಗುಹೆಗಳನ್ನು ಇಂದು ರುದ್ರ ಗವಿ, ಲಕ್ಷ್ಮೀ ಗವಿ, ಸೂರ್ಯ ಗವಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತಿದೆ. ಈಗಲೂ ಸಹ ಇಲ್ಲಿಯ ಗುಹೆಗಳಲ್ಲಿ ಸಾಧು-ಸಂತರು ತಪಸ್ಸನ್ನಾಚರಿಸುವುದನ್ನು ಕಾಣಬಹುದಾಗಿದೆ.

ಈ ಬೆಟ್ಟವು ಸಮುದ್ರ ಮಟ್ಟದಿಂದ 2560 ಅಡಿ ಎತ್ತರದಲ್ಲಿ ಸ್ಥಿತ ವಿದೆ. ಸಿದ್ಧರ ಬೆಟ್ಟದಲ್ಲಿ ಸುಮಾರು 200 ವರ್ಷಗಳ ಹಿಂದೆ ಗೋಶಾಲ ಮಠದ ಶ್ರೀ ಶಿವಯೋಗಿ ಸಿದ್ಧೇಶ್ವರರು ತಪಸ್ಸನ್ನಾಚರಿಸಿ ಸಮಾಧಿಸ್ಥರಾಗಿದ್ದಾರೆ. ಸಿದ್ಧೇಶ್ವರರ ಸಮಾಧಿಯ ಮುಂದೆ ಶಿವಲಿಂಗವೊಂದು ಉದ್ಭವವಾಗಿದೆ. ಈ ಶಿವಲಿಂಗದಲ್ಲಿ ಇವರು ಇದ್ದಾರೆ ಎಂದು ಜನರು ನಂಬಿದ್ದಾರೆ ಮತ್ತು ಪ್ರತಿನಿತ್ಯವೂ ಈ ಶಿವಲಿಂಗ ದರ್ಶನಕ್ಕಾಗಿ ಹಲವಾರು ಭಕ್ತರು ಆಗಮಿಸುತ್ತಾರೆ. ಈ ಲಿಂಗದ ಬುಡದಲ್ಲಿ ಒಂದು ನೀರಿನ ವರತೆ ಇದೆ. ಇದೇ ಸುವರ್ಣಮುಖಿ ನದಿಯ ಉಗಮ ಸ್ಥಾನವಾಗಿದೆ. ಹಾಗಾಗಿ ಈ ಗವಿಯನ್ನು ಸುವರ್ಣಮುಖಿ ಗವಿ ಎಂದು ಕೂಡ ಕರೆಯಲಾಗುತ್ತದೆ. ಈ ನೀರಿನಲ್ಲಿ ಬಹುಮುಖ್ಯ ಔಷಧೀಯ ಗುಣಗಳಿವೆ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ರೋಗರುಜಿನಗಳು ಮಾಯವಾಗುತ್ತದೆ ಎಂದು ಭಕ್ತಾದಿಗಳು ನಂಬುತ್ತಾರೆ. ಚರ್ಮರೋಗಗಳಿಗೆ, ಮೈ ಕೈ ನೋವುಗಳಿಗೆ ಈ ನೀರನ್ನು ಬಳಸುತ್ತಾರೆ.

ಈ ಸಿದ್ದೇಶ್ವರ ಬೆಟ್ಟದ ಮೇಲೆಯೇ ಕೋಟೆ ಇದೆ. ಇದನ್ನು ಮಧುಗಿರಿ ಮಹಾ ನಾಡಪ್ರಭು ಇಮ್ಮಡಿ ಚಿಕ್ಕಪ್ಪ ಗೌಡರ ಸೇನಾನಿ ಕುರಂಗನಾಯಕ ಎಂಬುವವರು ಕಟ್ಟಿಸಿದ್ದಾರೆ. ಇತಿಹಾಸ ಪ್ರಸಿದ್ಧ ಸಿದ್ಧರಬೆಟ್ಟವು ಸಾಹಸಿಗರು ಹಾಗೂ ತಾಣಪ್ರಿಯರಿಗೆ ಸಹ ಮೆಚ್ಚಿನ ತಾಣವಾಗುತ್ತದೆ. ಈ ಬೆಟ್ಟವನ್ನು ಏರುವ ಸಂದರ್ಭದಲ್ಲಿ ಅನೇಕ ಋಷಿಮುನಿಗಳು, ಸಿದ್ಧರು, ತಪಸ್ಸನ್ನು ಮಾಡುವುದನ್ನು ಕಾಣಬಹುದಾಗಿದೆ. ಇತಿಹಾಸದ ಪ್ರಕಾರ ಕಾಕಾಸುರ ಎಂಬ ಕಾಗೆ ಋಷಿಮುನಿಗಳ ತಪಸ್ಸಿಗೆ ಭಂಗ ನೀಡುತ್ತಿದ್ದ ಸಂದರ್ಭದಲ್ಲಿ ಆ ಋಷಿ ಮುನಿಗಳ ಶಾಪದಿಂದ ಕಾಗೆಗಳು ಈ ಬೆಟ್ಟದಲ್ಲಿ ಕಾಣಿಸಿಕೊಳ್ಳುವುದಿಲ್ಲ.  ಇಂದಿಗೂ ಸಹ ಈ ಬೆಟ್ಟದಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ.

ಮೊದ ಮೊದಲು ಈ ಬೆಟ್ಟದಿಂದ ಅನೇಕ ಗಿಡಮೂಲಿಕೆ ಬೇರುಗಳು, ಸಸ್ಯಗಳು, ವಿದೇಶಕ್ಕೆ ನಿಗೂಢವಾಗಿ ರವಾನೆಯಾಗುತ್ತಿದವು. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ಈ ಕಾಡನ್ನು ರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಪರವಾನಗಿ ಇಲ್ಲದೆ ಇಲ್ಲಿಯ ಗಿಡಮೂಲಿಕೆಗಳನ್ನು ಯಾರು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಮಹಾಶಿವರಾತ್ರಿಯಂದು ಸಿದ್ಧರಬೆಟ್ಟದಲ್ಲಿ ಅನೇಕ ಭಕ್ತಾದಿಗಳು ಬಂದು ಶಿವಲಿಂಗದ ದರ್ಶನವನ್ನು ಪಡೆಯುತ್ತಾರೆ. ಇಂತಹ ಒಂದು ಸಂಜೀವಿನಿ ಪರ್ವತದ ತುಣುಕು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ.