ಈ ಕಲಿಗಾಲದಲ್ಲಿ ಮನೆ ಬಿಟ್ಟು ಹೊರಗೆ ಹೊಗಬೇಕು ಅಂದರೆ ಮನೆಗೆ ಬೀಗ ಹಾಕಿಯೇ ಹೊರಗೆ ಹೋಗಬೇಕು. ಸಿಟಿಯೇ ಆಗಿರಲಿ ಅಥವಾ ಹಳ್ಳಿಯೇ ಆಗಿರಲಿ ಕಳ್ಳರು ಹೆಚ್ಚಾಗಿರುವ ಈ ಕಾಲದಲ್ಲಿ ಜನರು ತಮ್ಮ ತಮ್ಮ ಮನೆಗಳಿಗೆ ಭದ್ರವಾದ ಬಾಗಿಲುಗಳನ್ನು ಮಾಡಿಕೊಳ್ಳುತ್ತಾರೆ. ಅಪರಚಿತ ವ್ಯಕ್ತಿಗಳು ಮನೆಯ ಬಾಗಿಲಿಗೆ ಬಂದರೆ, ಬಾಗಿಲು ತೆಗೆಯಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಒಂದು ಅಚ್ಚರಿಯ ಗ್ರಾಮವಿದೆ. ಈ ಗ್ರಾಮದಲ್ಲಿ ಯಾವುದೇ ಮನೆಗಳಿಗೆ, ಅಂಗಡಿಗಳಿಗೆ, ಬ್ಯಾಂಕ್ ಗಳಿಗೆ ಯಾವುದೇ ಕಚೇರಿಗಳಿಗೆ ಬಾಗಿಲುಗಳೇ ಇರುವುದಿಲ್ಲ. ಆದರೂ ಯಾವುದೇ ಕಳ್ಳ ಕಾಕರ ಭಯ ಇಲ್ಲದೇ ಇಲ್ಲಿಯ ಜನ ನೆಮ್ಮದಿಯ ಜೀವನ ನಡೆಸುತ್ತಾ ಇದ್ದಾರೆ. ಇದಕ್ಕೆಲ್ಲ ಕಾರಣ ಆ ಗ್ರಾಮದಲ್ಲಿ ನೆಸಿರುವ ಶನಿ ದೇವರ ಮೇಲೆ ಇರುವ ಅಚಲವಾದ ಅಪಾರವಾದ ನಂಬಿಕೆಯೇ ಕಾರಣ. ಈ ಕೌತುಕವನ್ನು ವೀಕ್ಷಿಸಲು ವಿಶ್ವದ ಹಲವಾರು ಕಡೆಗಳಿಂದ ಜನರು ಈ ಪುಟ್ಟ ಪಟ್ಟಣಕ್ಕೆ ಆಗಮಿಸುತ್ತಾರೆ. ಆ ಪಟ್ಟಣವೇ “ಶನಿ ಸಿಂಗನಾಪುರ” .
ಪಕ್ಕದ ರಾಜ್ಯ ಮಹಾರಾಷ್ಟ್ರದ ಅಹಮದ್ ನಹರದಲ್ಲಿರುವ ಶನಿ ಸಿಂಗನಾಪುರವು ಶನೇಶ್ವರ ದೇವಾಲಯದಿಂದಾಗಿಯೇ ಇಡೀ ವಿಶ್ವದಲ್ಲಿ ಪ್ರಸಿದ್ಧಿ ಆಗಿದೆ. ಇಲ್ಲಿರುವ ಶನೇಶ್ವರನ ವಿಶೇಷತೆ ಏನು ಎಂದರೆ ಇಲ್ಲಿನ ಶನೇಶ್ವರನಿಗೆ ನಿರ್ಧಿಷ್ಟವಾದ ಒಂದು ಮೂರ್ತಿಯ ರೂಪ ಇಲ್ಲ . ಒಂದು ಕಲ್ಲಿನ ಸ್ತಂಭ ಇದ್ದು ಅದರಲ್ಲಿ ಶನೀಶ್ವರನು ನೆಲೆಸಿದ್ದಾನೆ. ಅಲ್ಲಿಗೆ ಹೋಗುವ ಭಕ್ತಾದಿಗಳು ಆ ಕಂಬವನ್ನು ಅಪಾರ ಭಕ್ತಿ ಭಾವದಿಂದ ಪೂಜಿಸುತ್ತಾರೆ. ಇನ್ನೊಂದು ವಿಶೇಷತೆ ಎಂದರೆ ಈ ಶನಿ ದೇವರ ವಿಗ್ರಹಕ್ಕೆ ಮೇಲ್ಛಾವಣಿ ಇಲ್ಲ ಆಕಾಶದ ಕೇಳಗೆಯೇ ಒಂದು ಸಣ್ಣ ಮಂಟಪದಲ್ಲಿ ಶನಿ ದೇವರು ಕಲ್ಲಿನ ರೂಪದಲ್ಲಿ ನೆಲೆಸಿದ್ದಾರೆ. ಶಿಲ ಸ್ತಂಭದ ಪಕ್ಕದಲ್ಲಿ ಒಂದು ತ್ರಿಶೂಲ ಇದ್ದು ಅಲ್ಲಿ ಶಿವ, ಹನುಮಂತ ಮತ್ತು ನಂದಿ ನೆಲೆಸಿದ್ದಾರೆ ಎನ್ನಲಾಗುತ್ತದೆ.
ಇಲ್ಲಿ ನ ಇನ್ನೊಂದು ವಿಶೇಷತೆ ಎಂದರೆ ಪೂಜೆ ಮಾಡಲು ಅಲ್ಲಿ ಯಾವುದೇ ಅರ್ಚಕರು ಇರುವುದಿಲ್ಲ. ದೇವಾಲಯಕ್ಕೆ ಬರುವ ಪುರುಷ ಭಕ್ತಾದಿಗಳು ಪೂಜೆಯನ್ನು ನೆರವೇರಿಸುತ್ತಾರೆ. ದೇವಾಲಯಕ್ಕೆ ಬರುವ ಪುರುಷ ಭಕ್ತರು ದೇವಾಲಯದ ಬಳಿ ಇರುವ ಭಾವಿಯಲ್ಲಿ ಸ್ನಾನ ಮಾಡಿ ಖಾವಿಯನ್ನು ಧರಿಸಬೇಕು. ನಂತರ ಮಂತ್ರ ಪಠಣ ಮಾಡುತ್ತಾ ಶಿಲಾ ಸ್ತಂಭಕ್ಕೆ ಪ್ರದಕ್ಷಿಣೆ ಹಾಕುವುದೇ ಇಲ್ಲಿನ ಪೂಜಾ ವಿಧಾನ. ಖಾವಿಯನ್ನು ಧರಿಸದ ಗಂಡಸರು ಮತ್ತು ಹೆಂಗಸರು ದೂರದಿಂದಲೇ ದರ್ಶನ ಪಡೆಯಬೇಕು. ದೇವಾಲಯದ ಸಮೀಪ ಪೂಜಾ ತಟ್ಟೆ ಸಿದ್ಧ ಇರುತ್ತದೆ ಅದರಲ್ಲಿ ಎಳ್ಳೆಣ್ಣೆ, ಎಕ್ಕದ ಹೂವು, ಕಪ್ಪು ಬಟ್ಟೆ , ದಾರ, ದೃಷ್ಟಿ ಗೊಂಬೆ ಎಲ್ಲವನ್ನು ನೀಡಲಾಗುತ್ತದೆ. ಮೊದಲಿಗೆ ಎಳ್ಳಿನ ಎಣ್ಣೆಯನ್ನು ಶನಿದೇವರ ಶಿಲಾ ಸ್ತಂಭಕ್ಕೆ ಅಭಿಷೇಕ ಮಾಡಿ, ಪಕ್ಕದಲ್ಲಿರುವ ತ್ರಿಶೂಲಕ್ಕೆ ಎಕ್ಕದ ಹೂವುನ ಹಾರವನ್ನು ಹಾಕಿ ಪ್ರದಕ್ಷಿಣೆ ಮಾಡಬೇಕು. ಅಲ್ಲಿಂದ ತಂಡ ದೃಷ್ಟಿ ಗೊಂಬೆಯನ್ನು ಮನೆಯಲ್ಲಿ ಹಾಕಿದರೆ ಇಂತಹ ದೃಷ್ಟಿ ದೋಷ ಉದ್ದರು ನಿವಾರಣೆ ಆಗುವುದು ಎಂದು ಜನರ ನಂಬಿಕೆ.
ಶನಿ ಸಿಂಗನಾಪುರದಲ್ಲಿ ಸುಮಾರು 3000 ಮನೆಗಳಿವೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ ಆ ಹಳ್ಳಿಯನ್ನು ಸ್ವತಃ ಶನಿ ದೇವರೇ ಕಾಯುತ್ತಾ ಇದ್ದಾರೆ. ಹಾಗಾಗಿ ಅಲ್ಲಿನ ಯಾವುದೇ ಮನೆಗಳಿಗೂ ಕಛೇರಿಗಳಿಗೂ ಯಾವುದೇ ಸುರಕ್ಷಿತ ಬಾಗಿಲುಗಳು ಇಲ್ಲ. ಇದು ಇಲ್ಲಿನ ಪದ್ಧತಿ ಆಗಿದ್ದು ಶಿಸ್ತಿನಿಂದ ಪಾಲಿಸಿಕೊಂಡು ಬರಲಾಗಿದೆ. ಒಂದುವೇಳೆ ಇಲ್ಲಿ ಯಾರಾದರು ಕಳ್ಳತನಕ್ಕೆ ಯತ್ನಿಸಿದರೆ ಅವರು ಊರಿನ ಗಡಿ ದಾಟುತ್ತಲೇ ರಕ್ತ ಕಾರಿ ಸಾಯುತ್ತಾರೆ. ಇದಕ್ಕೆ ಪ್ರತ್ಯಕ್ಷ ನಿದರ್ಶನಗಳು ಸಹ ಲಭ್ಯವಿದೆ ಹಾಗೆ ವಸ್ತುಗಳನ್ನು ಕಳೆದುಕೊಂಡವರು ಅದನ್ನು ಮರಳಿ ಪಡೆದ ಉದಾಹರಣೆ ಸಹ ಇದೆ. ಯಾರಿಗಾದರೂ ಹಾವು ಕಚ್ಚಿದರೆ ಈ ಗ್ರಾಮಕ್ಕೆ ಕರೆತಂದರೆ ಹಾವು ಕಚ್ಚಿದ ವಿಷ ಇಳಿದು ವ್ಯಕ್ತಿಗಳು ಬಹಳ ಬೇಗ ಗುಣಮುಖ ಆಗುತ್ತಾರೆ ಎನ್ನುತ್ತಾರೆ. ಶನಿ ದೋಷದಿಂದ ಮುಕ್ತರಾಗಲು ಇಲ್ಲಿ ದಿನಕ್ಕೆ ಸುಮಾರು 45000 ಭಕ್ತಾದಿಗಳು ಬರುತ್ತಾರೆ. ಶನಿವಾರದ ಹುಣ್ಣಿಮೆಯಂದು ದೊಡ್ಡ ಉತ್ಸವ ನಡೆಯುತ್ತದೆ. ಅಂದಿನ ದಿನ ಶನಿ ದೇವರಿಗೆ ನೀರು ಮತ್ತು ಎಣ್ಣೆಯಲ್ಲಿ ಅಭಿಷೇಕ ಮಾಡು ಹೂವು ಮತ್ತು ಉದ್ದೀನಬೆಳೆಯನ್ನು ಅರ್ಪಿಸಲಾಗುತ್ತದೆ.
ಇಲ್ಲಿನ ಸ್ಥಳ ಪುರಾಣ ನೋಡುವುದಾದರೆ, ಸುಮಾರು 150 ವರ್ಷಗಳ ಹಿಂದೆ ಶನಿ ಸಿಂಗನಾಪುರದಲ್ಲಿ ಧಾರಾಕಾರ ಮಳೆ ಆಗಿ ಪ್ರವಾಹದಲ್ಲಿ ಉದ್ದನೆಯ ಕಪ್ಪಾಗಿನ ಶಿಲೆ ಒಂದು ತೇಲಿ ಬರುತ್ತದೆ. ಅಲ್ಲಿ ಆಟ ಆಡುತ್ತಿರುವ ಕುರಿ ಕಾಯುವ ಹುಡುಗರು ಬೆತ್ತದಿಂದ ಆ ಶಿಲೆಗೆ ಹಿಡಿಯುತ್ತಾರೆ. ಆಗ ಸುರಿಯಲು ಆರಂಭಿಸುತ್ತದೆ. ಆಗ ಹಿರಿಯರೆಲ್ಲ ಆ ಶಿಲೆಯಲ್ಲಿ ಏನೋ ಮಹಿಮೆ ಇರಬಹುದು ಎಂದು ತಿಳಿದು ಪೂಜಿಸಲು ಆರಂಭಿಸುತ್ತಾರೆ. ಒಂದು ರಾತ್ರಿ ಊರಿನ ಹಿರಿಯರ ಕನಸಲ್ಲಿ ಶನಿದೇವರು ಬಂದು ತಾನು ಈ ಊರಿನಲ್ಲಿ ಶಿಲೆಯ ರೂಪದಲ್ಲಿ ನೆಲೆಸಲು ಬಂದಿರುವುದಾಗಿ ತಿಳುಸುತ್ತಾರೆ. ಇದನ್ನು ತಿಳಿದ ಗ್ರಾಮಸ್ಥರು ಆ ಶಿಲೆಯನ್ನು ಇಟ್ಟ ಜಾಗದಲ್ಲಿ ಒಂದು ಛಾವಣಿ ನಿಲ್ಲಿಸಲು ಪ್ರಯತ್ನಿಸಿದರು ಆದರೆ ಎಷ್ಟೇ ಪ್ರಯತ್ನಿಸಿದರೂ ಛಾವಣಿ ನಿಲ್ಲಲಿಲ್ಲವಂತೆ. ಹೀಗಾಗಿ ಈ ದೇವಾಲಯಕ್ಕೆ ಮೇಲ್ಛಾವಣಿ ಇಲ್ಲದೇ ತೆರೆದ ಆಕಾಶದಲ್ಲಿ ಶನಿ ದೇವರು ನೆಲೆ ನಿಂತಿದ್ದಾರೆ. ಶನಿ ದೇವರ ಶಿಲಾ ಸ್ತಂಭದ ಪಕ್ಕದಲ್ಲಿ ಒಂದು ಬೇವಿನ ಮರ ಇದೆ ಈ ಮರದ ಯಾವುದೇ ಒಂದು ರೆಂಬೆ ಉದ್ದಕ್ಕೆ ಬೆಳೆದು ಶನಿ ದೇವರ ಸ್ತಂಭಕ್ಕೆ ನೆರಳು ನೀಡಿದರೆ ಇದ್ದಕ್ಕಿದ್ದಂತೆ ಆ ರೆಂಬೆ ಉದುರಿ ಬೀಳುತ್ತದೆಯಂತೆ. ಆದರೆ ಅದು ಶನಿ ದೇವರ ಮೇಲೆ ಮಾತ್ರ ಬೀಳುವುದಿಲ್ಲ. ಹಾಗಾಗಿ ಮರವಿದ್ದು ನೆರಳು ಇಲ್ಲ ಎಂಬ ನುಡಿ ಅಲ್ಲಿ ಪ್ರಚಲಿತದಲ್ಲಿದೆ. ಈ ದೇವಾಲಯವು ಭಕ್ತರಿಗಾಗಿ 24 ಗಂಟೆಯು ತೆರೆದೆ ಇರುತ್ತದೆ. ಮಹಾರಾಷ್ಟ್ರದ ಶಿರಡಿ , ಶನಿ ಸಿಂಗನಾಪುರದಿಂದ ೭೯ ಕಿ.ಮೀ ದೂರದಲ್ಲಿದೆ. ಹಾಗೆ ಅಜಂತಾ ಎಲ್ಲೋರ ಗುಹೆಗಳು ಸಹ ಶನಿ ಸಿಂಗನಾಪುರದಿಂದ ದಕ್ಷಿಣ ದಿಕ್ಕಿಗೆ ಕೇವಲ ೮೦ ಕಿಮಿ ದೂರದಲ್ಲಿದೆ. ಶನಿದೇವರ ಕೃಪೆ ಕಟಾಕ್ಷ ನಮ್ಮೆಲ್ಲರ ಮೇಲು ಇರಲಿ.