ಈಗಾಗಲೇ ಬಿಸಿಲು ಹೆಚ್ಚಾಗುತ್ತಿದ್ದು, ಜನ ಬಿಸಿಲಿನ ಶಾಖದಿಂದ ದೇಹವನ್ನು ತಂಪಾಗಿಡಲು ಅಧಿಕ ನೀರು, ಎಳನೀರು, ಜ್ಯೂಸ್ ಮೊರೆ ಹೋಗಿದ್ದಾರೆ. ಜ್ಯೂಸ್, ಎಳನೀರು ಸ್ವಲ್ಪ ದುಬಾರಿಯಾದ ಹಿನ್ನೆಲೆಯಲ್ಲಿ ನೀವು ಮನೆಯಲ್ಲೇ ಕುಳಿತು ರಾಗಿ ಅಂಬಲಿ ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹವನ್ನು ತಂಪಾಗಿ ಇಡಬಹುದು. ‘ರಾಗಿ ತಿಂದರೆ ರೋಗವಿಲ್ಲ’ ಎನ್ನುವ ಗಾದೆ ಮಾತಿನಂತೆ ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ತಾಪಮಾನ ಕಡಿಮೆಯಾಗುತ್ತದೆ. ಹೀಗಾಗಿ ಇಲ್ಲಿ ನಿಮಗಾಗಿ ಸುಲಭವಾಗಿ ಚೆನ್ನಾಗಿ ರಾಗಿ ಅಂಬಲಿ ಮಾಡುವ ವಿಧಾನವನ್ನು ತಿಳಿಸಲಾಗಿದೆ. ರಾಗಿ ಅಂಬಲಿ ಮಾಡುವುದರ ಜೊತೆಗೆ ಚಿಕ್ಕದಾಗಿ ರಾಗಿಯ ಪ್ರಯೋಜನಗಳನ್ನು ಕೂಡಾ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರಾಗಿ ಏಕದಳ ಧಾನ್ಯವಾಗಿದ್ದು ಸಾಸಿವೆಯನ್ನೇ ಹೋಲುವ ಆದರೆ ಸಾಸಿವೆಗೂ ಚಿಕ್ಕ ಗಾಢ ಕಂದು ಬಣ್ಣದ ಹೊರಪದರವಿರುವ ಧಾನ್ಯವಾಗಿದೆ. ಇಡಿಯ ಧಾನ್ಯದ ಖಾದ್ಯ ತಯಾರಿಸುವುದು ಸುಲಭವೂ ಅಲ್ಲ ಹಾಗೂ ಬೆಂದಾಗ ಇದು ಒಡೆಯುವ ಕಾರಣ ಸಾಮಾನ್ಯವಾಗಿ ರಾಗಿ ಹಿಟ್ಟನ್ನೇ ಆಹಾರಕ್ಕಾಗಿ ಬಳಸಲಾಗುತ್ತದೆ. ರಾಗಿ ಹಿಟ್ಟನ್ನು ರೊಟ್ಟಿ, ಮುದ್ದೆ, ಉಂಡೆ ಮೊದಲಾದ ಖಾದ್ಯಗಳನ್ನು ತಯಾರಿಸಲು ಬಳಸುವಾಗ ಅತಿ ನುಣುಪಲ್ಲದ ಕೊಂಚ ದೊರಗಾಗಿ ಇರುವಂತೆ ಬೀಸಲಾಗುತ್ತದೆ.
ಆದರೆ ರಾಗಿ ಉಂಡೆ ಮೊದಲಾದ ಸಿಹಿ ಪದಾರ್ಥಗಳಿಗೆ ನುಣ್ಣಗೆ ಬೀಸಿಕೊಳ್ಳಬಹುದು. ರಾಗಿ ತಿಂದವ ನಿರೋಗಿಯಾಗಿರಬೇಕಾದರೆ ಇದರ ಮಹತ್ವವೇನೋ ಇರಲೇಬೇಕಲ್ಲ? ರಾಗಿಯ ಮಹತ್ವವನ್ನು ಒಂದೊಂದಾಗಿ ನೋಡೋಣ. ಸಾಮಾನ್ಯವಾಗಿ ಪ್ರೋಟೀನ್ ಪ್ರಾಣಿಜನ್ಯ ಆಹಾರದಿಂದ ಲಭಿಸುವ ಪೋಷಕಾಂಶವಾಗಿದೆ. ಆದರೆ ಸಸ್ಯಾಹಾರಿಗಳಿಗೆ ಕೆಲವು ಆಹಾರಗಳಿಂದಲೂ ಪ್ರೋಟೀನ್ ದೊರಕುತ್ತದೆ. ಅತ್ಯಧಿಕ ಪ್ರಮಾಣದ ಪ್ರೋಟೀನ್ ಮೊಳಕೆ ಬರಿಸಿದ ಕಾಳುಗಳಿಂದ ದೊರಕುತ್ತದೆ.
ಉಳಿದಂತೆ ರಾಗಿಯೂ ಪ್ರೋಟೀನ್ ನಿಂದ ಸಮೃದ್ದವಾಗಿದೆ. ಎಷ್ಟು ಎಂದರೆ ಒಂದು ಕಪ್ ರಾಗಿಯಲ್ಲಿ (ಸುಮಾರು 144 ಗ್ರಾಂ) 10.3ಗ್ರಾಂ ಪ್ರೋಟೀನ್ ಇದೆ. ಒಂದುಕಪ್ ರಾಗಿಯಲ್ಲಿ ಸುಮಾರು 16.1 ಗ್ರಾಂ ಕರಗದ ನಾರು ಇದೆ. ಈ ನಾರಿನಂಶ ಬಹುತೇಕವಾಗಿ ಇದರ ಕಂದು ಬಣ್ಣದ ಸಿಪ್ಪೆಯಲ್ಲಿಯೇ ಇದೆ. ಈ ನಾರಿನಂಶ ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಹೊತ್ತು ಇರುವಂತೆ ಮಾಡಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಪಚನಗೊಂಡ ಆಹಾರ ಚಲಿಸಲು ಮತ್ತು ಸುಲಭವಾಗಿ ತ್ಯಾಜ್ಯಗಳು ವಿಸರ್ಜನೆಗೊಳ್ಳಲೂ ಈ ನಾರಿನಂಶ ಅಗತ್ಯವಾಗಿದೆ.
ಉತ್ಕರ್ಷಣಶೀಲ ಒತ್ತಡ ಅಥವಾ ಆಕ್ಸಿಡೇಷನ್ ಎಂಬ ಪ್ರಕ್ರಿಯೆಯನ್ನು ತಡೆಯಲು ಇದರ ವಿರುದ್ದ ಗುಣವಿರುವ ಪೋಷಕಾಂಶಗಳ ಅಗತ್ಯವಿದೆ. ಇವನ್ನೇ ಆಂಟಿ ಆಕ್ಸಿಡೆಂಟುಗಳು ಎಂದು ಕರೆಯುತ್ತಾರೆ. ರಾಗಿಯಲ್ಲಿ ಇಂತಹ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ಹಲವಾರು ಬಗೆಯ ಕ್ಯಾನ್ಸರ್ ವಿರುದ್ದ ರಕ್ಷಣೆ ಒದಗಿಸುತ್ತದೆ. ರಾಗಿಯು ಶೂನ್ಯ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಅನ್ನು ಹೊಂದಿರುತ್ತದೆ. ಕ್ಯಾಲ್ಸಿಯಂ, ವಿಟಮಿನ್, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ಗಳನ್ನು ರಾಗಿ ಹೊಂದಿದೆ. ದೈನಂದಿನ ಆಹಾರದಲ್ಲಿ ರಾಗಿಯನ್ನು ಸೇರಿಸುವ ಮೂಲಕ, ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಬಹುದು ಮತ್ತು ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
ಮೂಳೆಗಳಿಗೆ ಒಳ್ಳೆಯದು. ರಾಗಿ ಮೂಳೆಗೆ ಸಂಬಂಧಿಸಿದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿ 344 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಮೂಳೆಗಳು ಬಲಗೊಳ್ಳುವುದಷ್ಟೇ ಅಲ್ಲ ಆಸ್ಟಿಯೊಪೊರೋಸಿಸ್ ಅಪಾಯವು ಕಡಿಮೆಯಾಗುತ್ತದೆ. ಹೃದಯಕ್ಕೆ ಒಳ್ಳೆಯದು. ರಾಗಿ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಮುಕ್ತವಾಗಿದೆ. ಇದು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ರಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ಬಿಪಿ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
ಇಷ್ಟೆಲ್ಲಾ ಪ್ರಯೋಜನ ಇರುವ ರಾಗಿಯಿಂದ ಅಂಬಲಿ ತಯಾರಿಸುವ ವಿಧಾನ ಹೇಗೆ ಮತ್ತು ಬೇಕಾಗುವ ಸಾಮಗ್ರಿಗಳು ಏನೂ ಎನ್ನುವುದನ್ನು ನೋಡೋಣ. ಬೇಕಾಗುವ ಸಾಮಾಗ್ರಿಗಳು
ರಾಗಿ ಹಿಟ್ಟು – ಅರ್ಧ ಕಪ್, ಕತ್ತರಿಸಿದ ಈರುಳ್ಳಿ – ಅರ್ಧ ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ – ಒಂದು ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು – ಎರಡು ಚಮಚ, ಉಪ್ಪು – ರುಚಿಗೆ ಬೇಕಾದಷ್ಟು, ಜೀರಿಗೆ – ಒಂದು ಚಮಚ, ಬೆಳ್ಳುಳ್ಳಿ – 6 ಎಸಳು, ಮಜ್ಜಿಗೆ – ಎರಡು ಕಪ್ , ನಿಂಬೆಹಣ್ಣು – ಒಂದು, ನೀರು – ಅರ್ಧ ಲೀಟರ್
ಇನ್ನೂ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ, ದಲಿಗೆ ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ರಾಗಿ ಹಿಟ್ಟನ್ನು ಹಾಕಿ, ಗಂಟು ಬರದಂತೆ ಮಿಕ್ಸ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಅರ್ಧ ಲೀಟರ್ ನೀರನ್ನು ಕುದಿಸಿ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಅದರಲ್ಲಿ ನಾವು ಮೊದಲು ತಯಾರಿ ಮಾಡಿಕೊಂಡ ರಾಗಿ ಮಿಶ್ರಣವನ್ನು ಇದರಲ್ಲಿ ಹಾಕಿ ಗಂಟು ಆಗದ ಹಾಗೆ ಕೈಯಾಡಿಸುತ್ತಾ ಇರಬೇಕು. ಸುಮಾರು 7 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿರಿ ಸ್ಟೌವ್ ಆರಿಸಿ ತಣ್ಣಗಾಗಲು ಬಿಡಬೇಕು. ಬಳಿಕ ಅದು ತಣ್ಣಗಾದ ಮೇಲೆ ಮಜ್ಜಿಗೆ ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ನಂತರ ಜೀರಿಗೆ ಪುಡಿ, ಜಜ್ಜಿದ ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿಸೊಪ್ಪು, ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ರಾಗಿ ಅಂಬಲಿ ಸವಿಯಿರಿ.