ಬಾಯಿಹುಣ್ಣು ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತಿರುತ್ತದೆ. ಇದರಿಂದ ಯಾವುದೇ ರೀತಿಯ ಹುಳಿ, ಉಪ್ಪು ಮತ್ತು ಖಾರದ ಪದಾರ್ಥಗಳನ್ನು ಸೇವಿಸಲು ಬಹಳ ಕಷ್ಟವಾಗುತ್ತದೆ. ಹುಣ್ಣು ಆದಲ್ಲಿ ಏನಾದರೂ ತಾಗಿದರೆ ಉರಿಯುತ್ತದೆ. ಇದಕ್ಕೆ ಸುಲಭದ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.
ಬಾಯಿಹುಣ್ಣು ಆಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಬಾಯಿ ಸ್ವಚ್ಛವಾಗಿ ಇರದೇ ಇರುವುದು, ಬಿ. ಕಾಂಪ್ಲೆಕ್ಸ್ ಕೊರತೆ ಉಂಟಾಗುವುದು, ವೈರಸ್, ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್ಫೆಕ್ಷನ್ ಇರುವುದು, ಆಗಾಗ್ಗೆ ಟೂತ್ ಪೇಸ್ಟ್ ನ್ನು ಬದಲಾವಣೆ ಮಾಡುತ್ತಿರುವುದು, ಹಲ್ಲಿನ ಸಮಸ್ಯೆಯಿಂದ, ಹೊಟ್ಟೆಯ ಉರಿಯಿಂದ, ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ. ಇವೆಲ್ಲ ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಸಂಭವಿಸಬಹುದು. ಇದನ್ನು ಮನೆಮದ್ದಿನಿಂದ ಕಡಿಮೆ ಮಾಡಿಕೊಳ್ಳಬಹುದು.
ಬಿ.ಕಾಂಪ್ಲೆಕ್ಸ್ ಅಧಿಕವಾಗಿ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ನೀರು ಮತ್ತು ಎಳೆನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಬಾಯಿಹುಣ್ಣು ಬರದಂತೆ ನೋಡಿಕೊಳ್ಳಬಹುದು. ಹಾಗೆಯೇ ಖಾಲಿ ಹೊಟ್ಟೆಯಲ್ಲಿ 4 ತುಳಸಿ ಎಲೆಗಳನ್ನು ಅಗೆದು ತಿನ್ನುವುದರಿಂದ ಬಾಯಿಹುಣ್ಣಿನಿಂದ ಉಪಶಮನ ಪಡೆಯಬಹುದು. ತೆಂಗಿನಕಾಯಿಯ ಹಾಲಿನಲ್ಲಿ ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣಿನಿಂದ ಉಪಶಮನ ಪಡೆಯಬಹುದು. ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿಕೊಂಡು ಬಾಯಿ ಮುಕ್ಕಳಿಸಿದರೆ ಕಡಿಮೆಯಾಗುತ್ತದೆ.
ನೀರಿನಲ್ಲಿ ಮೆಂತ್ಯೆಯನ್ನು ಮಿಕ್ಸ್ ಮಾಡಿ ಕುದಿಸಿದ ನಂತರ ಆ ನೀರನ್ನು ಫಿಲ್ಟರ್ ಮಾಡಿ ಸ್ವಲ್ಪ ತಣ್ಣಗಾದ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಇದು ಬಾಯಿಹುಣ್ಣಿಗೆ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಬಾಯಿಹುಣ್ಣು ಆದ ಜಾಗದಲ್ಲಿ ಅರಿಶಿನ ಅಥವಾ ಜೇನುತುಪ್ಪವನ್ನು ನಯವಾಗಿ ಹಚ್ಚುವುದರಿಂದ ಹುಣ್ಣು ಕಡಿಮೆಯಾಗುತ್ತದೆ. ಇವುಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲ. ಹಾಗಾಗಿ ಬಾಯಿಹುಣ್ಣು ಆದಲ್ಲಿ ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಮಾಡಬಹುದು.