ಮೀನ ರಾಶಿಯ ಮಕ್ಕಳು ಉದಾರಿಗಳಾಗಿರುತ್ತವೆ. ಜತೆಗೆ ವಿನಯವಂತಿಕೆಗೇನೂ ಕೊರತೆ ಇರಲ್ಲ. ಕುಟುಂಬದ ಸದಸ್ಯರ ಬಗ್ಗೆ ಹಾಗೂ ಸೋದರ-ಸೋದರಿಯರ ಬಗ್ಗೆ ಉತ್ಕಟವಾದ ಪ್ರೀತಿ ಇರುತ್ತದೆ.
ಅವರ ಹೃದಯದಲ್ಲಿ ಮೃದುವಾದ ಭಾವನೆಗಳಿಗೇ ಹೆಚ್ಚಿನ ಸ್ಥಾನವಾದ್ದರಿಂದ ಅವರಿಗೆ ಒಳಿತು- ಕೆಡುಕುಗಳು ಸುಲಭಕ್ಕೆ ಅರ್ಥವಾಗಲ್ಲ. ಆದ್ದರಿಂದ ಆ ರಾಶಿಯ ಪೋಷಕರು ಸರಿ-ತಪ್ಪುಗಳ ಬಗ್ಗೆ ಅವರಿಗೆ ತಿಳಿ ಹೇಳಬೇಕು. ಮೀನ ರಾಶಿಯ ಮಕ್ಕಳ ಓದಿನ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ತುಂಬ ಬುದ್ಧಿವಂತಿಕೆ ಇರುವ ಈ ಮಕ್ಕಳಿಗೆ ಹೇಳಿಕೊಡುವ ಪಾಠ ಥಟ್ಟನೆ ಅರ್ಥವಾಗುತ್ತದೆ. ಕ್ರಿಯೇಟಿವ್ ಅನಿಸುವ ವಿಚಾರಗಳ ಬಗ್ಗೆಯೇ ಇವರ ಒಲವು ಹೆಚ್ಚು. ಭಾವನಾಜೀವಿಗಳಾದ ಇವರನ್ನು ಪೋಷಕರು ಸ್ವಲ್ಪ ನಿಯಂತ್ರಿಸಬೇಕು. ನಿಮ್ಮ ಮಗನೋ ಮಗಳೋ ಮೀನ ರಾಶಿಯವರಾದರೆ ಕಲೆ, ನೃತ್ಯ, ನಾಟಕ ಮತ್ತು ಸಂಗೀತದ ಆಸಕ್ತಿಗಳನ್ನು ಪ್ರೋತ್ಸಾಹಿಸಿ. ಈ ಕ್ಷೇತ್ರಗಳಲ್ಲಿ ಅವರು ಮಿಂಚಬಲ್ಲರು.
ಹೇಗೆ ಚಿನ್ನಕ್ಕೆ ಹಾಲ್ ಮಾರ್ಕ್ ಅಂತೀವೋ ಹಾಗೆ, ಮೀನ ರಾಶಿಯವರ ಗುಣದಲ್ಲಿ ಸೂಕ್ಷ್ಮತೆ ಹಾಸುಹೊಕ್ಕಾಗಿರುತ್ತದೆ. ಇದರರ್ಥ ಆ ಮಗುವಿಗೆ ನಿಮ್ಮ ಗಮನ ಹೆಚ್ಚು ಅಗತ್ಯವಿರುತ್ತದೆ. ನಿಮ್ಮ ಕನ್ನಡಿಯಂತೆ ಆ ಮಗು. ನಿಮ್ಮ ಸುಪ್ತ ಪ್ರಜ್ಞೆಯಲ್ಲಿ ಕಾಣಿಸಿಕೊಳ್ಳುವ ಭಾವನೆಗಳೂ ಅದರ ಮೇಲೆ ಪ್ರಭಾವ ಬೀರುತ್ತದೆ. ಶಿಸ್ತಿನ ವಿಚಾರಕ್ಕೆ ಬಂದರೆ ದೊಡ್ಡ ಕಣ್ಣು ಬಿಟ್ಟು ನೋಡಿದರೂ ಸಾಕು, ಪುಟ್ಟ ಮೀನಿಗೆ ಅರ್ಥವಾಗಿ ಬಿಡುತ್ತದೆ. ಯಾಕೋ ಯಾರೂ ತನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ ಎನಿಸಿದಾಗ ವರ್ತನೆಯಲ್ಲಿ ಬದಲಾವಣೆ ಗೋಚರಿಸುತ್ತದೆ. ಆಗ ಆ ಸನ್ನಿವೇಶದಿಂದ ಒಂದು ಹೆಜ್ಜೆ ಹಿಂದೆ ಸರಿದು ಬಿಡುತ್ತದೆ ಮೀನ ರಾಶಿಯ ಮಗು.
ತೀರಾ ಹಚ್ಚಿಕೊಂಡು ನೋವು ಪಡುವುದು ಅದಕ್ಕೆ ಇಷ್ಟವಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ಪ್ರೀತಿ, ಬೆಂಬಲ ನೀಡಿದರೂ ತುಂಬ ದೀರ್ಘಾವಧಿವರೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಜತೆಗೆ ತನ್ನದೇ ಚಿಪ್ಪಿನಿಂದ ಆಚೆ ಬಂದು ಬೆರೆಯುತ್ತದೆ. ಮೀನರಾಶಿಯ ಮಕ್ಕಳಿಗೆ ಅದ್ಭುತವಾದ ಊಹಾ ಶಕ್ತಿ ಇರುತ್ತದೆ. ಒಳ್ಳೆ ಕಥೆಗಾರರ ಮನಸ್ಸು ಅವರದು. ಅವರ ಕ್ರಿಯೇಟಿವಿಟಿಯನ್ನು ಪ್ರೋತ್ಸಾಹಿಸಿ. ಏನೂ ಎಲ್ಲದಕ್ಕೂ ಕಥೆ ಹೇಳುತ್ತಲ್ಲಾ, ಹೀಗೇ ಆದರೆ ಮುಂದೇನು ಅಂತ ಗಾಬರಿ ಆಗಬೇಡಿ.
ಬೇಗನೇ ಜನರನ್ನು ನಂಬಿಬಿಡ್ತಾರೆ ಈ ಮಕ್ಕಳ ಗುಣವೇ ಹಾಗೆ, ಎಲ್ಲದರಲ್ಲೂ ಒಳಿತೇ ಕಾಣುತ್ತದೆ. ಎಲ್ಲರೂ ಒಳ್ಳೆಯವರಾಗಿಯೇ ಕಾಣ್ತಾರೆ. ಅವರ ಪರಿಸರದಲ್ಲಿನ ಎಲ್ಲರನ್ನೂ ಬೇಗ ನಂಬಿಬಿಡ್ತಾರೆ. ಜನರಲ್ಲಿ ನಂಬಿಕೆ ಇಡುವುದು ಖಂಡಿತಾ ತಪ್ಪಲ್ಲ. ಆದರೆ ಯಾರೋ ತನಗೆ ಕೇಡು ಬಗೆಯಲು ಬಯಸಿದವರನ್ನೂ ನಂಬಿಬಿಡುವುದು ಅಪಾಯ.
ಸೂಕ್ಷ್ಮ ಮನಸ್ಸಿನ ಮಗು
ಸೂಕ್ಷ್ಮವಾದ ಮೀನ ರಾಶಿಯ ಮಕ್ಕಳು ಎಲ್ಲವನ್ನೂ ಹೃದಯಕ್ಕೆ ತೆಗೆದುಕೊಂಡು ಬಿಡುತ್ತವೆ. ಜನರನ್ನು ಬಹಳ ನಂಬುವ ಇವರಿಗೆ ಯಾವುದೇ ವಿಚಾರದಲ್ಲಿ ದ್ರೋಹ ಆಯಿತು ಎಂದಾಗ ಜೀರ್ಣಿಸಿಕೊಳ್ಳುವುದು ಕಷ್ಟ. ಅದಕ್ಕೆ ಅಂತ ಅವರು ಇತರರನ್ನು ದೂಷಿಸುವುದಿಲ್ಲ. ತಮ್ಮನ್ನೇ ಹಳಿದುಕೊಳ್ಳುತ್ತಾರೆ.
ಯಾವುದಾದರೂ ಕೆಲಸ ಈ ಮಕ್ಕಳಿಗೆ ತೃಪ್ತಿ ನೀಡುತ್ತದೆ ಅಂದರೆ ಅದರಲ್ಲಿ ಮುಳುಗಿ ಹೋಗ್ತಾರೆ. ತನಗೆ ಪ್ರಿಯವಾದ ಕೆಲಸ ಅಂದರೆ ಮುಗಿಯಿತು ಅದರಲ್ಲೇ ತನ್ಮಯರಾಗಿರುತ್ತಾರೆ. ಯಾವುದೋ ಒಂದು ಗೊಂಬೆ ಇಷ್ಟವಾಯಿತು ಅಂದರೂ ಸದಾ ಅದು ಜತೆಗೆ ಇರಬೇಕು. ಅದು ಜ್ಯೋತಿಷ್ಯದಲ್ಲೇ ಇರುವ ಮೀನ ರಾಶಿಯ ಮಕ್ಕಳ ಗುಣ. ವಯಸ್ಸು ಆದಂತೆ ಆರಿಸಿಕೊಂಡ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಈ ಗುಣ ನೆರವಾಗುತ್ತದೆ.
ಎಲ್ಲದರಲ್ಲೂ ಹೀಗೇ ಇರಬೇಕು ಎಂಬ ಧೋರಣೆ ಈ ಮಕ್ಕಳದು. ಅಂದುಕೊಂಡ ಆದರ್ಶಗಳಲ್ಲಿ ಸ್ವಲ್ಪವೂ ರಾಜಿಯಾಗದ ಇವರ ಗುಣ ಮೆಚ್ಚತಕ್ಕದ್ದೇ. ಆದರೆ ಉಳಿದವರಿಂದಲೂ ಅದೇ ಮಟ್ಟ ನಿರೀಕ್ಷಿಸುವುದು ಹೇಗೆ ಸಾಧ್ಯ ತಾವಂದುಕೊಂಡಂತೆ ನಡೆದಿಲ್ಲ ಎಂಬುದನ್ನು ಈ ರಾಶಿಯ ಮಕ್ಕಳು ಉಳಿದ ರಾಶಿಯವರಿಗಿಂತ ಹೆಚ್ಚಾಗಿ ಹೃದಯಕ್ಕೆ ತೆಗೆದುಕೊಳ್ತಾರೆ. ಆ ಮಕ್ಕಳ ಪೋಷಕರು ಅಂಥ ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.