ಮರವಂತೆಯು ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಹಳ್ಳಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ, ತಾಲೂಕು ಕೇಂದ್ರದಿಂದ ೨೦ ಕಿ.ಮೀ.ದೂರದಲ್ಲಿದೆ. ಈ ಹಳ್ಳಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದ್ದರೂ ಊರಿನ ಅಭಿವೃದ್ದಿಗೆ ಅದರಿಂದೇನೂ ಉಪಯೋಗವಾದಂತಿಲ್ಲ. ನದಿ ಮತ್ತು ಸಮುದ್ರ ತೀರ ಹತ್ತಿರ ಬಂದರೂ ಒಂದಾಗದೇ ದೂರಸಾಗುವ ಅಪರೂಪದ ಭೌಗೋಳಿಕ ಸ್ಥಳ ಇದು. ಮಧ್ಯ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದು ಭಾರತದಲ್ಲಿ ಇಂತಹ ಇನ್ನೊಂದು ದೃಶ್ಯ ಇಲ್ಲ ಎನ್ನಲಾಗಿದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೊಲ್ಲೂರಿನ ಮೂಲಕ ಹರಿದು ಬರುವ ಸೌಪರ್ಣಿಕಾ ನದಿಯು ಈ ಊರಿನಲ್ಲಿ ಸುಂದರವಾದ ತಿರುವಿನ ಮೂಲಕ ಹರಿದು ಹೋಗುತ್ತದೆ. ನದಿ ತೀರದಲ್ಲಿ ಬೆಳೆದಿರುವ ತೆಂಗಿನ ಮರಗಳು, ಪುಟ್ಟ ಪುಟ್ಟ ದ್ವೀಪಗಳು, ನೀಲ ನೀರು ಚಂದದ ದೃಶ್ಯವಾಗಿವೆ. ಕೊಡಚಾದ್ರಿ ಪರ್ವತವು ಈ ನೀರಿನಲ್ಲಿ ಪ್ರತಿಫಲಿತವಾಗುವ ಅಪರೂಪದ ದೃಶ್ಯವು ಮಾರಸ್ವಾಮಿ ದೇವಾಲಯದ ಬಳಿ ಕಾಣಸಿಗುತ್ತದೆ. ಇತ್ತ ಸಮುದ್ರ ತೀರ ಅತ್ತ ಸೌಪರ್ಣಿಕಾ ನದಿ ಈ ಮಧ್ಯೆ ಇರುವ ಪುಟ್ಟ ಪ್ರದೇಶದಲ್ಲಿ ಆಕರ್ಷಕವಾದ ಮಾರಸ್ವಾಮಿ ದೇವಾಲಯವಿದೆ.
ಮರವಂತೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ದೇವಾಲಯದ ಹಿನ್ನೆಲೆ ಕುತೂಹಲಕಾರಿಯಾಗಿದೆ. ಬಹು ಹಿಂದೆ ವ್ಯಾಪಾರಿ ಹಡಗೊಂದು ಅಲ್ಲಿನ ಸಮುದ್ರತೀರಕ್ಕೆ ಬಂದು ಸೇರಿತು. ನೋಡಿದಾಗ ಮಹಾರಾಜರ ಶವವು ಅದರಲ್ಲಿ ಮೂರು ಚೂರುಗಳಾಗಿ ಬಿದ್ದಿತ್ತು. ಅವುಗಳನ್ನು ಪೂಜಿಸುವ ಹಿನ್ನೆಲೆಯಲ್ಲಿ ಮೂರು ಗರ್ಭಗುಡಿಗಳುಳ್ಳ ದೇವಾಲಯ ಸ್ಥಾಪನೆಗೊಂಡಿತು. ಕ್ರಿ.ಶ. ಆರಂಭದಲ್ಲಿ ಆ ಭಾಗದಲ್ಲಿದ್ದ ಸಮುದ್ರವ್ಯಾಪಾರದ ನೆನಪುಗಳು ಈ ದೇವಾಲಯದ ಸ್ಥಾಪನೆಯಲ್ಲಿದೆ ಎನ್ನಬಹುದು.
ಈಗ ಅಲ್ಲಿ ವರಾಹ, ವಿಷ್ಣು ಮತ್ತು ನರಸಿಂಹನ ಪೂಜೆ ನಡೆಯುತ್ತಿದ್ದು, ಮೂರು ಗರ್ಭಗುಡಿಗಳುಳ್ಳ ದೇವಾಲಯವಿದೆ. ಆ ಗರ್ಭಗುಡಿಗಳ ಮುಂಭಾಗದಲ್ಲಿ ಆಮೆ, ಮೀನು ಮತ್ತು ಮೊಸಳೆಗಳ ಶಿಲ್ಪಗಳಿರುವುದು ನಿಜಕ್ಕೂ ಕುತೂಹಲಕಾರಿ. ಇದು ಸಮುದ್ರದ ಜಲಚರಗಳ ಪೂಜೆಗೆ ಮೀಸಲಾಗಿದ್ದ ದೇವಾಲಯವಾಗಿರಬೇಕು. ಕಾಲ ಕ್ರಮೇಣ ಇತರ ದೇವರುಗಳ ಪ್ರತಿಷ್ಠಾಪನೆ ಆಗಿರಬಹುದು. ದೇವಾಲಯದ ಪಕ್ಕದಲ್ಲಿರುವ ನದಿಯಲ್ಲಿರುವ ದೊಡ್ಡ ಮೊಸಳೆ ಅಥವಾ ನೆಗಳಕ್ಕೆ ಈಗಲೂ ವರುಷಕ್ಕೊಮ್ಮೆ ಪೂಜೆ ನಡೆಯುತ್ತಿರುವುದೂ ಒಂದು ವಿಶೇಷ. ಇಲ್ಲಿಯ ಈ ಆಕರ್ಷಣೆಯನ್ನು ಕಣ್ತುಂಬಿಕೊಳ್ಳಲೆಂದೆ ಜನ ಸಾಗರವೇ ಹರಿದು ಹೋಗುತ್ತದೆ.