ಅಡುಗೆ ಅನಿಲ (LPG) ಬಳಕೆದಾರರಿಗೂ ಸಂತಸದ ವಿಚಾರ ನೀಡಿರುವ IOCL ಅಡುಗೆ ಅನಿಲ ಸಿಲಿಂಡರ್ ದರವನ್ನು 10 ರೂಪಾಯಿ ಇಳಿಕೆ ಮಾಡಿದೆ. ಈ ಮೂಲಕ ಪ್ರತೀ ಸಿಲಿಂಡರ್ ದರ ದೆಹಲಿಯಲ್ಲಿ 809 ರೂಪಾಯಿ ಆಗಿದೆ. ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರು ಇದೀಗ ಕೊಂಚ ನಿರಾಳರಾಗಲಿದ್ದಾರೆ. ಎಪ್ರಿಲ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಡುಗೆ ಗ್ಯಾಸ್ ಸಿಲಿಂಡರ್ ದರದಲ್ಲಿ ಹತ್ತು ರೂಪಾಯಿ ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿಯಮಿತ (IOCL) ಮಾರ್ಚ್ 31ರಂದು ಘೋಷಣೆ ಮಾಡಿದೆ. ಏಪ್ರಿಲ್ 1ರ ಬಳಿಕ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ನವೆಂಬರ್ 2020ರಿಂದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿತ್ತು. ಭಾರತವು ಕಚ್ಚಾ ತೈಲಗಳ ಆಮದನ್ನು ಅವಲಂಬಿಸಿಕೊಂಡಿತ್ತು. ಹಾಗೂ ತೈಲ ಬೆಲೆ ಅಥವಾ ಅಡುಗೆ ಅನಿಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬೆಲೆ ಏರಿಕೆ ದೇಶಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಪರಿಣಾಮ ಬೀರಿತ್ತು.
ಆದರೆ, ಕೊವಿಡ್-19 ಹಾಗೂ ಯುರೋಪ್ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಕೊರೊನಾ ಲಸಿಕೆಯ ಅಡ್ಡಪರಿಣಾಮಗಳು ಹೆಚ್ಚಾದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮಾರ್ಚ್ ದ್ವಿತೀಯಾರ್ಧದಲ್ಲಿ ಇಳಿಕೆಯಾಯಿತು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ತೈಲ ಕಂಪೆನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಕೆ ಮಾಡಿತ್ತು. ಪೆಟ್ರೋಲ್ ದರವನ್ನು ದೆಹಲಿ ಮಾರುಕಟ್ಟೆಯಲ್ಲಿ 61 ಪೈಸೆ ಮತ್ತು ಡೀಸೆಲ್ ದರವನ್ನು 60 ಪೈಸೆ ಇಳಿಸಿತ್ತು. ಈ ಅವಧಿಯಲ್ಲಿ ದೇಶದ ಇತರ ನಗರಗಳಲ್ಲಿ ಕೂಡ ಇಂಧನ ದರ ಕೊಂಚ ಇಳಿಕೆ ಕಂಡಿತ್ತು. ಇದರಿಂದ ವಾಹನ ಸವಾರರಿಗೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಂಕಷ್ಟದ ಬಿಗಿ ಹಿಡಿತದಿಂದ ಸ್ವಲ್ಪ ಸಡಿಲವಾದಂತಾಗಿತ್ತು.
ಕಳೆದ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಗೂಳಿಯಂತೆ ನೆಗೆದಿತ್ತು. ಫೆಬ್ರವರಿ ಒಂದೇ ತಿಂಗಳು ನಾಲ್ಕು ಬಾರಿ ಹಾಗೂ ಮಾರ್ಚ್ ಮೊದಲ ದಿನ ಮತ್ತೊಂದು ಬಾರಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು. ಇದು ಜನಸಾಮಾನ್ಯರಿಗೆ ತೀವ್ರ ಹೊಡೆತ ನೀಡಿತ್ತು. ಇದೀಗ ಎಪ್ರಿಲ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ಸೂಚನೆ ಸಿಕ್ಕಿದೆ. ಎಪ್ರಿಲ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ 10 ರೂಪಾಯಿ ಕಡಿಮೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದ್ದರೆ, ದೆಹಲಿಲ್ಲಿ 819 ರೂಪಾಯಿ, ಕೋಲ್ಕತಾದಲ್ಲಿ 845 ರೂಪಾಯಿ, ಮುಂಬೈನಲ್ಲಿ 819 ರೂಪಾಯಿ ಹಾಗೂ ಚೆನ್ನೈನಲ್ಲಿ 835 ರೂಪಾಯಿ ಆಗಿದೆ. ಜನವರಿ ತಿಂಗಳಲ್ಲಿ 694 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಫೆಬ್ರವರಿ ಆರಂಭದಲ್ಲಿ 719 ರೂಪಾಯಿ ಆಗಿದೆ. ಇನ್ನು ಫೆಬ್ರವರಿ 15ಕ್ಕೆ 769ರೂಪಾಯಿಗೆ ಏರಿಕೆಯಾಗಿದ್ದರೆ, ಫಬ್ರವರಿ 25ಕ್ಕೆ 794 ರೂಪಾಯಿ ಆಗಿತ್ತು. ಮಾರ್ಚ್ ಆರಂಭಕ್ಕೆ 819 ರೂಪಾಯಿ ಆಗಿತ್ತು. ಇದೀಗ 10 ರೂಪಾಯಿ ಇಳಿಕೆಯಾಗುವ ಸೂಚನೆ ಸಿಕ್ಕಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಇಳಿಕೆ ಕುರಿತು ಯಾವುದೇ ಖಚಿತತೆ ಇಲ್ಲ.