ಲಕ್ಷ್ಮೀ ಪೂಜೆಗೆ ಅಲಂಕಾರ ಸಾಕಷ್ಟು ಮಾಡ್ತೀವಿ ಆದರೆ ಕೆಲವೊಮ್ಮೆ ಅಥವಾ ಹೊಸದಾಗಿ ಪೂಜೆ ಮಾಡುವವರಿಗೆ ಪೂಜೆಗೆ ಇಡುವ ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅಂತ ಗೊತ್ತಿರಲ್ಲ. ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅನ್ನೋದನ್ನ ನೋಡೋಣ.
ಎರಡು ರೀತಿಯಲ್ಲಿ ಬಿಂದಿಗೆಗೆ ಸೀರೆ ಉಡಿಸಬಹುದು. ಮೊದಲು ಸೆರಗನ್ನು ರೆಡಿ ಮಾಡಿಕೊಳ್ಳಬೇಕು. ಸೆರಗಿಗೆ 8 ರಿಂದ ಒಂಭತ್ತು ನೆರಿಗೆಗಳನ್ನು ಸಣ್ಣದಾಗಿ ಮಾಡಿಕೊಳ್ಳಬೇಕು. ನೆರಿಗೆ ಮಾಡಿಕೊಂಡು ರೇಷ್ಮೆ ಸೀರೆ ಆಗಿರುವುದರಿಂದ ಪಿನ್ ಬಳಕೆ ಮಾಡದೇ ಕ್ಲಿಪ್ ಬಳಕೆ ಮಾಡುವುದು ಒಳ್ಳೆಯದು. ನೀಟ್ ಆಗಿ ನೆರಿಗೆ ಮಾಡಿಕೊಂಡು ಸ್ವಲ್ಪವೂ ಆಚೆ ಈಚೆ ಆಗದಂತೆ ಸರಿಯಾಗಿ ಕ್ಲಿಪ್ ಹಾಕಿಕೊಂಡು ಸರಿಯಾಗಿ ನೆರಿಗೆ ರೆಡಿ ಮಾಡಿಟ್ಟುಕೊಳ್ಳಬೇಕು. ಸೆರಗು ರೆಡಿ ಆದ ನಂತರ ಉಳಿದ ಸೀರೆಯ ಭಾಗವನ್ನು ಎತ್ತರ ನೋಡಿಕೊಂಡು ಮಡಚಿ , ಜಾರಿ ಹೋಗದಂತೆ ಅಲ್ಲಲ್ಲಿ ಕ್ಲಿಪ್ ಹಾಕಿಕೊಂಡು ಮತ್ತೆ ನೆರಿಗೆ ಮಾಡಿಕೊಳ್ಳಬೇಕು. ನೆರಿಗೆ ಎಲ್ಲ ಒಳಗೆ ಸೇರಿಕೊಳ್ಳದಂತೆ ಸರಿಯಾಗಿ ತೆಗೆದುಕೊಂಡು ಕ್ಲಿಪ್ ಹಾಕಿ ಸರಿ ಮಾಡಿ ಇಟ್ಟುಕೊಳ್ಳಬೇಕು.
ನಂತರ ಮಂಟಪದ ಮೇಲೆ ಬಿಂದಿಗೆ ಇಟ್ಟು ಅದಕ್ಕೆ ಒಂದು ಕಡೆ ಸ್ಕೇಲ್ ಅಥವಾ ಯಾವುದೇ ಪಟ್ಟಿಯನ್ನು ಇಟ್ಟು ಕಟ್ಟಿಕೊಳ್ಳಬೇಕು. ನಂತರ ನೆರಿಗೆ ಮಾಡಿಟ್ಟುಕೊಂಡ ಸೀರೆಯ ಭಾಗವನ್ನು ಸ್ವಲ್ಪ ತುದಿಗೆ ದಾರದಿಂದ ಕಟ್ಟಿ ಅದನ್ನು ಬಿಂದಿಗೆಗೆ ಕಟ್ಟಬೇಕು. ನಂತರ ಕ್ಲಿಪ್ ಗಳನ್ನು ತೆಗೆದು ಎಡಗಡೆ ಭಾಗದಲ್ಲಿ ಕೋಲು ಕಟ್ಟಿದ್ದು ಕಾಣದ ಹಾಗೆ ಸರಿಯಾಗಿ ಮುಚ್ಚಿ ನಂತರ ಸೆರಗನ್ನು ಬಲ ಭಾಗದಿಂದ ತಂದು ಸುತ್ತಿ ಎಡಗಡೆಗೆ ಮುಂದೆ ಬಿಡಬೇಕು. ಹೀಗೆ ಮಾಡಿ ಸೀರೆ ಉಡಿಸಿದಾಗ ದೇವಿ ಕುಳಿತಿರುವ ಹಾಗೇ ಕಾಣಿಸುತ್ತದೆ. ನಂತರ ಎಲ್ಲ ಕ್ಲಿಪ್ ಗಳನ್ನೂ ತೆಗೆದು ಮಧ್ಯದಲ್ಲಿ ಸೊಂಟದ ಪಟ್ಟಿ ಕಟ್ಟಲು ಮೊದಲು ಒಂದು ಬಂಗಾರದ ಬಣ್ಣದ ದಾರವನ್ನು ಕಟ್ಟಿಕೊಂಡು ನಂತರ ನೆರಿಗೆಗಳನ್ನು ಸರಿಯಾಗಿ ಹರಡಿ ಸೊಂಟದ ಪಟ್ಟಿ ಕಟ್ಟಿ ನಂತರ ಒಡವೆಗಳನ್ನೆಲ್ಲ ಹಾಕಿ ನಂತರ ಲಕ್ಷ್ಮಿ ಮುಖವನ್ನು ಇಡಬಹುದು.
ಇನ್ನೊಂದು ವಿಧಾನದಲ್ಲಿ ಸೀರೆ ಉಡಿಸುವುದು. ಮೊದಲು ಸೀರೆಗೆ ಸರಿಯಾಗಿ ಅರ್ಧಕ್ಕೆ ಮಡಿಚಿ ಅಲ್ಲಲ್ಲಿ ಕ್ಲಿಪ್ ಹಾಕಿಟ್ಟುಕೊಳ್ಳಬೇಕು. ನಂತರ ಇದಕ್ಕೂ ಸಹ ಚಿಕ್ಕದಾಗಿ ಸೆರಗಿನ ನೆರಿಗೆ ಮಾಡಿಟ್ಟುಕೊಳ್ಳಬೇಕು. ನಂತರ ಉಳಿದ ಸೀರೆಯನ್ನು ಸ್ವಲ್ಪ ಬಿಟ್ಟು ಉಳಿದ ಎಲ್ಲವನ್ನೂ ಮತ್ತೆ ನೆರಿಗೆ ಮಾಡಿಕೊಳ್ಳಬೇಕು. ನಂತರ ನೆರಿಗೆ ಮಾಡಿಕೊಂಡ ಮೇಲೆ ಇದಕ್ಕೂ ಸಹ ಒಂದು ದಾರದಿಂದ ಕಟ್ಟಿ ಅದನ್ನು ಬಿಂದಿಗೆಗೆ ಕಟ್ಟಬೇಕು. ಇಲ್ಲಿ ಮಂಟಪವನ್ನು ಬಳಸಲಾಗುವುದಿಲ್ಲ ಹಾಗೆ ನೇರವಾಗಿ ಬಿಂದಿಗೆ ಮಾತ್ರ ಇದ್ದಿರುತ್ತೆ. ಮೇಲೆ ಹೇಳಿದ ಹಾಗೆ ಬಿಂದಿಗೆಗೆ ಒಂದು ಪಟ್ಟಿ ಕಟ್ಟಿಕೊಂಡು ಸೀರೆ ಕಟ್ಟಿದ ನಂತರ ನಿಧಾನವಾಗಿ ಬಿಂದಿಗೆಯ ಸುತ್ತಲೂ ನೆರಿಗೆಯನ್ನು ಹರಡಬೇಕು. ನೆರಿಗೆ ಸರಿಯಾಗಿ ಹರಡಿದ ನಂತರ ದಾರವನ್ನು ಸರಿಯಾಗಿ ಕಟ್ಟಿಕೊಳ್ಳಬೇಕು. ನಂತರ ಮೊದಲು ಸೊಂಟದ ಪಟ್ಟಿ ಕಟ್ಟಿ ಆಮೇಲೆ ಸೆರಗನ್ನು ತಂದು ಮುಂದೆ ಬಿಡಬೇಕು. ನಂತರ ಒಡವೆಗಳನ್ನು ಹಾಕಬೇಕು. ಮುಖ್ಯವಾಗಿ ನೆನಪಲ್ಲಿಡಬೇಕಾದ ವಿಷಯ ಎಂದರೆ , ಖಾಲಿ ಬಿಂದಿಗೆಗೆ ಸೀರೆ ಉಡಿಸಬಾರದು. ಹಾಗಾಗಿ ಒಂದು ಅರಿಶಿನದ ದಾರಕ್ಕೆ ಅರಿಶಿನದ ಕೊಂಬು ಕಟ್ಟಿ ಅದನ್ನು ಮೊದಲೇ ಬಿಂದಿಗೆಗೆ ಕಟ್ಟಬೇಕು. ಈ ಕೆಳಗಿನ ವಿಡಿಯೋ ನೋಡಿ..