ರೈತರ ಜಮೀನನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದರೆ. ರೈತರು ಅವರ ಜಮೀನಿಗೆ ಹದ್ದುಬಸ್ತು ಮಾಡಿಸಲು ಅಥವಾ ಸೂಕ್ತ ಬಂದೋಬಸ್ತು ಮಾಡಿಸಲು ಭೂ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ.
ಅರ್ಜಿ ಪರಿಶೀಲನೆ ಮಾಡಿ ಭೂ ಸರ್ವೇ ಇಲಾಖೆಯವರು ಜಮೀನನ್ನು ಸರ್ವೇ ಮಾಡಲು ಬಂದಾಗ ಅಕ್ಕಪಕ್ಕದ ಜಮೀನಿನ ಜನರು ಅವರ ಕೆಲಸಕ್ಕೆ ಅಡ್ಡಿ ಉಂಟು ಮಾಡುವರು. ಕೆಲವು ಸಾರಿ ಅವರು ಒತ್ತುವರಿ ಮಾಡಿಕೊಂಡ ಜಾಗ ಬಿಡಲು ಕೂಡ ಅವರು ಸಿದ್ದ ಇರುವುದಿಲ್ಲ.
ಈ ಒತ್ತುವರಿ ಜಾಗ ಪಡೆಯಲು ಯಾವ ಕ್ರಮ ಕೈಗೊಳ್ಳಬೇಕು ಎಂದು ತಿಳಿಯೋಣ.
ಮೊದಲಿಗೆ ಹದ್ದುಬಸ್ತು ಎಂದರೆ ಜಮೀನಿನ ಮೂಲ ದಾಖಲೆಗಳ ಅನುಸಾರ ಕಾನೂನಿನ ಅಡಿಯಲ್ಲಿ ಭೂ ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ, ಗಡಿ ರೇಖೆ ಗುರುತಿಸುವುದು.
ಇದಕ್ಕೆ, ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಮತ್ತು ಒತ್ತುವರಿಯಾದ ಜಮೀನು
ಬಿಡಿಸುವುದು ಹೇಗೆ ಎನ್ನುವ ವಿಧಾನವನ್ನು ವಿವರವಾಗಿ ನೋಡೋಣ :-
ಇತ್ತೀಚಿನ ಜಮೀನಿನ ಪಹಣಿ ತೆಗೆದುಕೊಂಡು ಹದ್ದುಬಸ್ತಿ’ಗೆ ಅರ್ಜಿ ಸಲ್ಲಿಕೆ ಮಾಡಬೇಕು.
ಭೂ ಸರ್ವೇ ಕಾರ್ಯ ಆರಂಭ ಮಾಡುವ ಮುನ್ನ ಇಲಾಖೆಯವರು ಬಂದು ಕೆಲವು ಮಾಹಿತಿ ಪಡೆಯುವರು, ಈ ಸಮಯದಲ್ಲಿ ಅಕ್ಕ ಪಕ್ಕದ ಜಮೀನಿನ ಜನರ ವಿಳಾಸವನ್ನು ಕೊಡಬೇಕು. ಅದರಿಂದ, ಅವರಿಗೆ ಸೂಚನೆ ಪತ್ರವನ್ನು ಅವರ ವಿಳಾಸಕ್ಕೆ ಕಳುಹಿಸಿ ಕೊಡಲು ಸಹಾಯ ಆಗುತ್ತದೆ. ಅಳತೆ ಮಾಡುವ ಸಮಯದಲ್ಲಿ ಅಕ್ಕ ಪಕ್ಕದ ಜಮೀನಿನ ರೈತರು ಮತ್ತು ಊರಿನ ಪ್ರಮುಖರ ಹಾಜರಿ ಖಡ್ಡಾಯವಾಗಿ ಇರುತ್ತದೆ.
ಭೂ ಸರ್ವೇ ಮಾಡಿದ ಮೇಲೆ ಚಿತ್ರ ಸಹಿತ ವರದಿ ಕೊಡವರು ಅದನ್ನು ತಪ್ಪದೆ ಪಡೆದುಕೊಳ್ಳಬೇಕು. ಜಮೀನು ಬೇರೆಯವರಿಂದ ಒತ್ತುವರಿ ಆಗಿದ್ರೆ ಏನು ಮಾಡಬೇಕು?. ಅಕ್ಕ ಪಕ್ಕದ ಜಮೀನಿನ ರೈತರಿಗೆ ಒತ್ತುವರಿಯಾದ ಜಾಗದ ಬಗ್ಗೆ ಮಾಹಿತಿ ಕೊಡಿ ಮತ್ತು ಸರ್ವೇ ಸ್ಕೆಚ್ ತೋರಿಸಿ.
ಅವರು ಜಾಗ ಮರಳಿ ಕೊಡಲು ಇಚ್ಚಿಸದೆ ಹೋದರೆ, ಊರಿನ ಪ್ರಮುಖರ ಬಳಿ ಅಗತ್ಯ ಇರುವ ದಾಖಲೆಗಳ ಜೊತೆ ಹೋಗಿ ಪಂಚಾಯಿತಿ ಮಾಡಬೇಕು ಮತ್ತು ಜಾಗ ಮರಳಿ ಕೊಡಲು ಮನವಿ ಮಾಡಬೇಕು. ಒಂದುವೇಳೆ ಅದಕ್ಕೂ ಒಪ್ಪಿಗೆ ನೀಡದೆ ಇದ್ದರೆ, ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲೆ ಮಾಡಬೇಕು ಜೊತೆಗೆ ಜಮೀನಿನ ಸರ್ವೇ ಸ್ಕೆಚ್, ಒತ್ತುವರಿ ಜಾಗದ ಮಾಹಿತಿ, ಪೂರ ಜಮೀನಿನ ಮಾಹಿತಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಕೊಡಬೇಕು.
ಇದರಿಂದ, ಜಮೀನು ಮರಳಿ ಸಿಗಬಹುದು.
ಒತ್ತುವರಿ ಮಾಡಿದ ರೈತ ಮತ್ತೊಮ್ಮೆ ಹದ್ದುಬಸ್ತು ಅರ್ಜಿ ಸಲ್ಲಿಸಲು ಹೇಳಿದರೆ ಮತ್ತೆ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ ಇದರಿಂದ, ಮುಂದೆ ಸಹಾಯ ಆಗುತ್ತದೆ. ಇಷ್ಟು ಮಾಡಿಯು ಕೂಡ ಒತ್ತುವರಿ ಮಾಡಿದ ಜಮೀನು ಸಿಗದೇ ಹೋದರೆ ವಕೀಲರ ಮೂಲಕ ಕೇಸ್ ದಾಖಲು ಮಾಡಬಹುದು.
ಈ ಕೋರ್ಟ್ ವ್ಯಾಜ್ಯಗಳು ಪರಿಹಾರ ಕಾಣಲು ಎಷ್ಟು ವರ್ಷ ಬೇಕಾದರೂ ಹಿಡಿಯಬಹುದು. ಕೋರ್ಟ್ ಕೇಸ್ ಪರಿಹಾರ ಆಗಲು ಅಂದಾಜಿನ ಪ್ರಕಾರ 10 ವರ್ಷಕ್ಕೂ ಮೇಲೆ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಿಂತ ಒಳ್ಳೆಯ ಆಯ್ಕೆ ಎಂದರೆ ಪರಸ್ಪರ ಒಪ್ಪಿಗೆಯಿಂದ ರಾಜಿಯಾಗುವುದು ಒಳಿತು. ಇದರಿಂದ, ಇಬ್ಬರು ವ್ಯಕ್ತಿಗಳಿಗೆ ಜಮೀನಿನ ವಿಷಯವಾಗಿ ಕೋರ್ಟ್’ಗೆ ಖರ್ಚು ಮಾಡುವ ಹಣ ಉಳಿತಾಯ ಆಗುತ್ತದೆ. ಮುಂದಿನ ಪೀಳಿಗೆಗೆ ಜಮೀನ ವ್ಯಾಜ್ಯಗಳು ಎದುರಾಗಬಾರದು ಎಂದರೆ ಈಗಲೇ ಹದ್ದುಬಸ್ತು ಅರ್ಜಿ ಸಲ್ಲಿಸಿ ಗಡಿಯನ್ನು ಹಾಕಿಸಿ.