ಮಲೆನಾಡಿನ ವಿಶೇಷವಾದ ಸಿಹಿತಿಂಡಿಯಾದ ಕಾಯಿ ಹೋಳಿಗೆಯನ್ನು ಮನೆಯಲ್ಲಿ ಸುಲಭವಾಗಿ ಮಾಡುವುದನ್ನು ಈ ಲೇಖನದ ಮೂಲಕ ತಿಳಿಯೋಣ.
ಹೋಳಿಗೆ ಮಾಡಲು ಮೊದಲು ಕಣಕ ಕಲೆಸಿಡಬೇಕು, ಕಣಕಕ್ಕೆ ಒಂದು ಪಾತ್ರೆಯಲ್ಲಿ ಎರಡು ಸ್ಪೂನ್ ಸಕ್ಕರೆ, ಕಾಲು ಗ್ಲಾಸ್ ನೀರು ಹಾಕಿ ಸಕ್ಕರೆ ಕರಗಿದ ನಂತರ ಎರಡು ಗ್ಲಾಸ್ ಮೈದಾ ಹಿಟ್ಟು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಬೇಕು ಚಪಾತಿ ಹಿಟ್ಟಿಗಿಂತ ಮೃದುವಾಗಬೇಕು. ಇದಕ್ಕೆ ಎರಡು ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿ ಮುಚ್ಚಿಡಬೇಕು. ಎರಡು ಹಸಿ ತೆಂಗಿನ ಕಾಯಿಯನ್ನು ತುರಿದು ಮಿಕ್ಸರ್ ಗೆ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಬೇಕು. 200 ಗ್ರಾಂ ಬೆಲ್ಲವನ್ನು ಪಾಕ ಮಾಡಿಕೊಂಡು ಅದಕ್ಕೆ ಪುಡಿ ಮಾಡಿದ ಕಾಯಿತುರಿ ಹಾಕಿ, ಒಂದು ಸ್ಪೂನ್ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು.
ಒಂದು ಬಾಳೆ ಎಲೆಗೆ ಎಣ್ಣೆ ಹಾಕಿಕೊಳ್ಳಬೇಕು ಅದರ ಮೇಲೆ ಕಣಕವನ್ನು ನಿಂಬೆ ಗಾತ್ರದಲ್ಲಿ ಮಾಡಿ ಬಾಳೆ ಎಲೆಯ ಮೇಲೆ ಇಡಬೇಕು. ಬೆಲ್ಲ ಮತ್ತು ಕಾಯಿತುರಿ ಮಿಶ್ರಣವನ್ನು ಉಂಡೆ ಮಾಡಿಕೊಳ್ಳಬೇಕು. ಕೈಗೆ ಮೈದಾವನ್ನು ಲೇಪಿಸಿಕೊಂಡು ನಿಂಬೆ ಗಾತ್ರದ ಉಂಡೆಯಲ್ಲಿ ಹೂರಣದ ಉಂಡೆಯನ್ನು ತುಂಬಿ ಮಣೆಗೆ ಮೈದಾವನ್ನು ಲೇಪಿಸಿ ಉಂಡೆಯನ್ನು ಮೃದುವಾಗಿ ಹಾಗೂ ಒಂದೇ ಬದಿ ಲಟ್ಟಿಸಿ ಕಾದ ಕಾವಲಿಗೆ ಹಾಕಿ ಎರಡು ಕಡೆ ಹದವಾಗಿ ಬೇಯಿಸಬೇಕು. ಈ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.