ಬೆಂಗಳೂರು (ಏ. 26) ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಇನ್ನಿಲ್ಲ. ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
52 ವರ್ಷದ ರಾಮು ಅವರಿಗೆ ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಕನ್ನಡ ಚಿತ್ರರಂಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೋಲಿಬಾರ್ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಹೆಚ್ಚು ಹಣ ಹೂಡಿಕೆ ಮಾಡಿ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ ಕಾರಣಕ್ಕೆ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದರು. ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಪರಿಚಯವಾಗಿದ್ದ ರಾಮ ಅಧಿಪತಿ ಸಿನಿಮಾದಿಂದ ನಿರ್ಮಾಪಕ ರಾಗಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದರು. ಅರ್ಜುನ್ ಗೌಡ ರಾಮು ನಿರ್ಮಾಣದ ಕೊನೆಯ ಸಿನಿಮಾ. ಪತ್ನಿ ಮಾಲಾಶ್ರೀಗೆ ಇನ್ನೆರಡು ಸಿನಿಮಾ ನಿರ್ಮಾಣ ಮಾಡಬೇಕು, ತಾವೇ ನಿರ್ದೇಶನ ಮಾಡಬೇಕು ಎಂಬ ಆಸೆ ಹೊಂದಿದ್ದರು. ರಾಮು ಅವರಿಗೆ ಕಳೆದವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮೂರು ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರಿಗೆ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಲೇ ಇದ್ದರು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಹೀಗಾಗಿ, ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಮು ನಿಧನಕ್ಕೆ ಸ್ಯಾಂಡಲ್ವುಡ್ ಶೋಕ ವ್ಯಕ್ತಪಡಿಸಿದೆ. ಅವರನ್ನು ನಾವು ಇಷ್ಟು ಬೇಗನೆ ಕಳೆದುಕೊಳ್ಳಬಾರದಿತ್ತು ಎಂದು ಸ್ಯಾಂಡಲ್ವುಡ್ ಮಂದಿ ಮರುಗಿದ್ದಾರೆ. ಕೊರೊನಾ ಕಾರಣದಿಂದಲೂ ಚಿತ್ರರಂಗದ ಅನೇಕರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಹಿರಿಯ ನಟ ಕಿಶೋರ್ ನಂದಲಸ್ಕರ್ ಅವರು ಕೊವಿಡ್ನಿಂದ ಮೃತರಾದರು. ಗುರುವಾರ (ಏ.22) ರಾತ್ರಿ ಹಿರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ನಿಧನರಾದರು.ಕನ್ನಡ ಚಿತ್ರರಂಗ ಒಬ್ಬ ಅದ್ಭುತ ನಿರ್ಮಾಪಕನನ್ನು ಕಳೆದುಕೊಂಡಿದೆ. ಎಲ್ಲರನ್ನೂ ಪ್ರೀತಿಸುವ, ಮೃದುಭಾಷಿ ರಾಮು ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಕೋವಿಡ್ ನಿಯಮಗಳ ಹಿನ್ನೆಲೆಯಲ್ಲಿ ಅಂತಿಮ ದರ್ಶನವನ್ನೂ ಮಾಡಲಾಗುತ್ತಿಲ್ಲ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಚಿತ್ರನಟರಾದ ಪುನೀತ್ ರಾಜ್‌ಕುಮಾರ್, ಶ್ರೀಮುರಳಿ, ಸಂಸದೆ ಸುಮಲತಾ ಅಂಬರೀಷ್ ಸಹಿತ ಹಲವರು ನೋವು ತೋಡಿಕೊಂಡರು.