ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ! ಎಂಬ ಈ ಹಾಡನ್ನು ಗುನುಗದ ಜನರು ಜಗತ್ತಿನಲ್ಲಿ ಯಾರೂ ಇಲ್ಲ. ತಾಯಿ ಎಂದರೆ ಕರುಣಾಮಯಿ , ತ್ಯಾಗಮಯಿ. ತಾಯಿಯನ್ನು ವರ್ಣಿಸಲು , ಬಣ್ಣನೆ ಮಾಡಲು ಪದಗಳು ಎಷ್ಟೇ ಇದ್ದರೂ ಕಡಿಮೆಯೇ. ಕೇವಲ ಒಂದು ಲೇಖನ ಅಥವಾ ಕವನದಿಂದ ತಾಯಿಯ ವರ್ಣನೆ ಮಾಡುವುದು ಅಸಾಧ್ಯವೇ. ಮಮತಾಮಯಿ , ಉದಾರತೆ ಮತ್ತು ತಾಳ್ಮೆಯ ಪ್ರತೀಕ ಎಂದರೆ ಅದು ತಾಯಿಯೇ ಹೊರತು ತಾಯಿಯನ್ನು ಬಿಟ್ಟು ಇನ್ನಾರೂ ಇರಲಾರರು. ಒಂಭತ್ತು ತಿಂಗಳು ತನ್ನ ಮಗುವನ್ನು ಒಡಲಲ್ಲಿ ಇಟ್ಟುಕೊಂಡು ಹೊತ್ತು ಹೆತ್ತು ಸಾಕಿ ಸಲಹಿದಂತಹ ತಾಯಿಗೆ ನಾವು ನೀವು ಮಾಡುವ ಸೇವೆ ಎಷ್ಟೇ ಮಾಡಿದರೂ ಕಡಿಮೆಯೇ. ತಾಯಿಯ ಋಣ ತೀರಿಸಲಾಗದು. ಜಗತ್ತಿನಲ್ಲಿ ಎಷ್ಟೋ ಜನರು ದೇವರಿಗಾಗಿ ಗುಡಿ ಕಟ್ಟಿಸಿ ಪೂಜಿಸುತ್ತಾರೆ ಆದರೆ ಇಲ್ಲಿ ಒಬ್ಬರು ತಾಯಿಗಾಗಿ ಗುಡಿ ಕಟ್ಟಿ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾ ಇದ್ದಾರೆ. ಅವರು ಯಾರು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಜಗತ್ತಿನಲ್ಲಿ ಅತಿ ಅಮೂಲ್ಯವಾದುದು ಎಂದರೆ ಅದು ಯಾವುದೋ ವಜ್ರವೋ ಅಥವಾ ಇನ್ನಾವುದೋ ಬೆಲೆ ಬಾಳುವ ವಸ್ತುವೋ ಅಲ್ಲ ಏಕೆಂದರೆ ಆ ಅಮೂಲ್ಯವಾದ ವಸ್ತುವಿಗೆ ಬೆಲೆ ಕಟ್ಟಲಾಗುವುದಿಲ್ಲ ಅಂತಹ ಅತ್ಯಮೂಲ್ಯವಾದ ವಸ್ತು ಎಂದರೆ ಅದು ತಾಯಿ ಮತ್ತು ತಾಯಿಯ ಪ್ರೀತಿ. ಆಕೆಯ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ತಾಯಿಯ ಪ್ರೀತಿಗೆ ಸರಿಸಮನಾದ ಪ್ರೀತಿಯನ್ನು ತೋರುವವರು ಕೂಡಾ ಇನ್ನಾರೂ ಇರಲು ಸಾಧ್ಯವಿಲ್ಲ. ಹೀಗೆ ನಿಸ್ವಾರ್ಥ ವಾದ ಪ್ರೀತಿಯನ್ನು ತೋರುವ ಈ ತಾಯಿ ಪ್ರೀತಿಗೆ ಪ್ರತಿಯಾಗಿ ಏನನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ಕೂಡಾ ವಾಸ್ತವ. ಆದರೆ ಹಿರಿಯ ನಟ ಹಾಗೂ ನಿರ್ಮಾಪಕರೊಬ್ಬರು ತಮ್ಮ ತಾಯಿಗಾಗಿ ಆಲಯವೊಂದನ್ನು ನಿರ್ಮಾಣ ಮಾಡಿದ್ದಾರೆ.
ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಅಗಿರುವ ರಾಜ್ ಶೇಖರ್ ಕೋಟ್ಯಾನ್ ಅವರು ತಮ್ಮ ತಾಯಿಯ ನೆನಪಿಗಾಗಿ ಅವರ ತಾಯಿಯ ಅಂದವಾದ ಮೂರ್ತಿಯನ್ನು ನಿರ್ಮಾಣ ಮಾಡಿಸಿ, ಅದನ್ನು ಒಂದು ಸುಂದರವಾದ ದೇವಾಲಯದಲ್ಲಿ ಇರಿಸಿ ಪೂಜೆ ಮಾಡುವ ಮೂಲಕ ತಾಯಿಯ ಮೇಲಿನ ತನ್ನ ಪ್ರೀತಿ ಹಾಗೂ ಶಕ್ತಿಯನ್ನು ಮೆರೆದಿದ್ದಾರೆ. ತಮ್ಮ ದಿವಂಗತ ತಾಯಿ ಕಲ್ಯಾಣಿ ಅವರ ನೆನಪಿನಲ್ಲಿ ತಮ್ಮ ಹುಟ್ಟೂರಾದ ಉಡುಪಿಯ ಬಳಿಯ ಸಾಂತೂರಿನಲ್ಲಿ ಅವರು ತಾಯಿ ಗುಡಿಯನ್ನು ನಿರ್ಮಾಣ ಮಾಡಿಸಿದ್ದಾರೆ. ಸಾಂತೂರಿನಲ್ಲಿ ಇರುವ ಗರಡಿ ಮನೆಯಲ್ಲಿ ಅವರು ತಮ್ಮ ತಾಯಿಯ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ರಾಜಸ್ಥಾನದ ಪೃಥ್ವಿರಾಜ್ ಎಂಬ ಕಲಾವಿದರಿಂದ ಈ ಏಕಶಿಲಾ ಮೂರ್ತಿಯನ್ನು ಕೆತ್ತನೆಯ ಕೆಲಸವನ್ನು ಮಾಡಿಸಲಾಗಿದೆ. ರಾಜೇಶ್ ಕೋಟ್ಯಾನ್ ಅವರ ತಾಯಿಯ ಮೂರ್ತಿ ಕೆತ್ತನೆ ಮಾಡಲು ಸುಮಾರು ಆರು ತಿಂಗಳ ಕಾಲಾವಕಾಶ ಹಿಡಿದಿದ್ದು , ಕೆತ್ತನೆಯ ಕಾರ್ಯ ಸಂಪೂರ್ಣವಾಗಿ ಮುಗಿದ ಮೇಲೆ ಲಕ್ಷಾಂತರ ರೂಪಾಯಿ ಹಣ ನೀಡಿ ತರಿಸಿಕೊಂಡಿದ್ದಾರೆ. ಅಂದಹಾಗೆ ಈ ಮೂರ್ತಿಯನ್ನು ಬಿಳಿಯ ಮಾರ್ಬಲ್ ನಿಂದ ನಿರ್ಮಾಣ ಮಾಡಲಾಗಿದೆ.
ರಾಜಶೇಖರ್ ಕೋಟ್ಯಾನ್ ಅವರು ತಮ್ಮ ತಾಯಿಯ ಈ ದೇವಾಲಯ ಮನಸ್ಸಿಗೆ ಸಮಾಧಾನ, ಖುಷಿಯನ್ನು ನೀಡುವುದರ ಜೊತೆಗೆ ತಾಯಿ ತಮ್ಮೊಡನೆ ಸದಾ ಇರುವರು ಎನ್ನುವ ಭಾವನೆಯನ್ನು ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ನಿತ್ಯ ಬೆಳಿಗ್ಗೆ ತಾಯಿಗೆ ಪೂಜೆ ಮಾಡಲಾಗುವುದು ಹಾಗೂ ಬೇಕಾದಾಗ ತಾಯಿಯ ಜೊತೆ ಮಾತನಾಡಬಹುದು ಎಂದು ಕೂಡಾ ಬಹಳ ಸಂತೋಷವಾಗಿ ಅವರು ಹೇಳಿಕೊಂಡಿದ್ದಾರೆ. ಇಂದಿನ ಕಾಲದಲ್ಲಿ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೇ ಹೆಚ್ಚಾಗಿ ಇರುವಾಗ , ಮರಣ ಹೊಂದಿದ ತಾಯಿಗೇ ಒಂದು ಗುಡಿಯನ್ನು ನಿರ್ಮಿಸಿ ಪೂಜಿಸುವ ರಾಜಶೇಖರ್ ಕೋಟ್ಯಾನ್ ಅವರಿಗೆ ನಾವೆಲ್ಲರೂ ಒಂದು ಮೆಚ್ಚುಗೆಯನ್ನು ನೀಡಲೇಬೇಕು.