ಯುಗಗಳಲ್ಲಿ ಅತ್ಯಂತ ಭಯಾನಕ ಯುಗ ಕಲಿಯುಗ ಇಂತಹ ಯುಗದ ಅಂತ್ಯವು ಭಯಾನಕವಾಗಿರುತ್ತದೆ. ಹಾಗಾದರೆ ಶ್ರೀಕೃಷ್ಣ ಪರಮಾತ್ಮನು ಕಲಿಯುಗದ ಅಂತ್ಯದ ಬಗ್ಗೆ ಏನು ಹೇಳಿದ್ದಾನೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಹಿಂದೂ ಧರ್ಮಗ್ರಂಥಗಳಲ್ಲಿ ಕಲಿಯುಗವನ್ನು ಅತ್ಯಂತ ಭಯಾನಕ ಯುಗ ಎಂದು ಉಲ್ಲೇಖಿಸಿದ್ದಾರೆ. ಕಲಿಯುಗ ಒಂದು ಕಾರಾಗ್ರಹವಿದ್ದಂತೆ ಪೂರ್ವ ಜನ್ಮದ ಪಾಪಗಳನ್ನು ಈ ಯುಗದಲ್ಲಿ ಅನುಭವಿಸಲು ಜನಿಸಿರುತ್ತಾರೆ ಎಂದು ಹೇಳಲಾಗುತ್ತದೆ. ಕಲಿಯುಗದಲ್ಲಿ ಯಾವಾಗಲೂ ಸಂತೋಷವಾಗಿರುವ ಒಬ್ಬ ವ್ಯಕ್ತಿಯು ಸಿಗಲಾರನು. ಕಲಿಯುಗದಲ್ಲಿ ಮುಂಬರುವ ದಿನಗಳು ಭಯಾನಕವಾಗಿರುತ್ತದೆ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ.
ಮಹಾಭಾರತದಲ್ಲಿ ಶ್ರೀಕೃಷ್ಣನು ಕಲಿಯುಗದ ಅಂತ್ಯ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಅಂತ್ಯವಾಯಿತು ಪಾಂಡವರು ಹಸ್ತಿನಾಪುರವನ್ನು ತಮ್ಮದಾಗಿಸಿಕೊಂಡರು. ಈ ಸಮಯದಲ್ಲಿ ಪಾಂಡವರಿಗೆ ಕಲಿಯುಗದ ಅಂತ್ಯ ಹೇಗಿರಲಿದೆ ಎಂಬ ಕುತೂಹಲ ಉಂಟಾಯಿತು.
ಧರ್ಮರಾಯನು ಇಲ್ಲದೆ ಇದ್ದಾಗ ಭೀಮಾರ್ಜುನ ಹಾಗೂ ನಕುಲ-ಸಹದೇವನು ತಮ್ಮ ಸಂದೇಹವನ್ನು ನಿವಾರಿಸಿಕೊಳ್ಳಲು ಶ್ರೀಕೃಷ್ಣನ ಹತ್ತಿರ ಕೇಳಿದರು. ಅವರ ಪ್ರಶ್ನೆಯನ್ನು ಕೇಳಿದ ಶ್ರೀಕೃಷ್ಣನು ಕಿರು ನಗುತ್ತಾ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಣಗಳನ್ನು ಪ್ರಯೋಗಿಸಿ ಪಾಂಡವರಲ್ಲಿ ನೀವು ನಾಲ್ಕು ಜನ ನಾಲ್ಕು ದಿಕ್ಕುಗಳಿಗೆ ಹೋಗಿ ಬಾಣವನ್ನು ಹಿಂದೆ ತರುವಂತೆ ಆದೇಶ ನೀಡುತ್ತಾನೆ.
ನಾಲ್ಕು ಜನ ಪಾಂಡವರು ನಾಲ್ಕು ದಿಕ್ಕುಗಳಲ್ಲಿ ಬಾಣವನ್ನು ಹುಡುಕಿಕೊಂಡು ಹೋಗುತ್ತಾರೆ. ಅರ್ಜುನನಿಗೆ ಬಾಣ ಸಿಗುತ್ತದೆ ಅಷ್ಟರಲ್ಲಿಯೇ ಅರ್ಜುನನಿಗೆ ಹಿಂಬದಿಯಿಂದ ಮಧುರವಾದ ಸ್ವರ ಕೇಳಿಸುತ್ತದೆ. ಅರ್ಜುನನು ಹಿಂದೆ ತಿರುಗಿ ನೋಡಿದಾಗ ಕೋಗಿಲೆಯು ಮಧುರವಾಗಿ ಹಾಡುತ್ತಾ ಜೀವವಿರುವ ಮೊಲವನ್ನು ಕಿತ್ತು ತಿನ್ನುತ್ತಿತ್ತು.
ಈ ದೃಶ್ಯವನ್ನು ನೋಡಿದ ಅರ್ಜುನನಿಗೆ ಸರಸ್ವತಿ ದೇವಿಯು ಮೈಮರೆಯುವಂತೆ ಹಾಡುತ್ತಿರುವ ಕೋಗಿಲೆ ಇಂತಹ ಕೃತ್ಯ ಹೇಗೆ ಎಸಗಲು ಸಾಧ್ಯ ಎಂದು ಯೋಚಿಸುತ್ತಾ ಬಾಣದೊಂದಿಗೆ ಹಿಂದುರುಗಿ ಕೃಷ್ಣನ ಬಳಿ ಅವನ ಸಂದೇಹವನ್ನು ಕೇಳುತ್ತಾನೆ.
ಆಗ ಶ್ರೀಕೃಷ್ಣನು ಕಲಿಯುಗದಲ್ಲಿ ಸರಸ್ವತಿ ದೇವಿಯನ್ನು ಮೆಚ್ಚಿಸಿ ವಿಜ್ಞಾನದ ಗಣಿಗಳಂತೆ ಬದಲಾಗುವ ಪಂಡಿತರು, ವಿದ್ವಾಂಸರು, ಬುದ್ಧಿವಂತರು ತಮ್ಮ ಜ್ಞಾನವನ್ನು ಲೋಕದ ಅಭಿವೃದ್ಧಿಗೆ ಬಳಸದೆ ಅಮಾಯಕ ಪ್ರಜೆಗಳನ್ನು, ಬಡವರನ್ನು ತಮ್ಮ ಮೋಸದ ಮಾತುಗಳಿಂದ ಅವರ ಬಳಿ ಇರುವುದನ್ನು ದೋಚಿ ಕೊಳ್ಳುತ್ತಾರೆ, ರಣಹದ್ದುಗಳಂತೆ ಅವರನ್ನು ಕಿತ್ತು ತಿನ್ನುತ್ತಾರೆ. ಜನರಲ್ಲಿರುವ ಭಕ್ತಿಯನ್ನು ಉಪಯೋಗಿಸಿಕೊಂಡು ಅವರನ್ನು ಮೋಸ ಮಾಡುತ್ತಾರೆ.
ಸತ್ತ ಹೆಣಕ್ಕೆ ಚಿಕಿತ್ಸೆ ಕೊಡಿಸಿ ಹಣವನ್ನು ದೋಚಿ ಕೊಳ್ಳುವ ವೈದ್ಯರು ಹುಟ್ಟಿಕೊಳ್ಳುತ್ತಾರೆ. ದುಡ್ಡಿಗಾಗಿ ವೃತ್ತಿಯನ್ನು ಮಾರಿಕೊಳ್ಳುವ ಅಧಿಕಾರಿಗಳು ಬರುತ್ತಾರೆ. ನಿಜವಾದ ಸಾಧು-ಸಂತರು ಎಲ್ಲೊ ಒಬ್ಬರಂತೆ ಮೂಲೆಯಲ್ಲಿ ಉಳಿದುಬಿಡುತ್ತಾರೆ ಎಂದು ಹೇಳುತ್ತಾನೆ.
ಇತ್ತ ಭೀಮನಿಗೆ ಬಾಣವು ಕಾಣಿಸಿತು ಅಲ್ಲಿ ಅವನಿಗೆ ಐದು ಬಾವಿಗಳು ಕಾಣಿಸಿದವು ಆದರೆ ನಾಲ್ಕು ಬಾವಿಗಳಲ್ಲಿ ನೀರು ತುಂಬಿತುಳುಕುತ್ತಿತ್ತು ಆದರೆ ಮಧ್ಯದಲ್ಲಿರುವ ಒಂದು ಬಾವಿ ನೀರಿಲ್ಲದೆ ಒಣಗಿಹೋಗಿತ್ತು. ಭೀಮನು ತನ್ನ ಬಾಣದಿಂದ ಹಿಂದಿರುಗಿ ಶ್ರೀಕೃಷ್ಣನ ಬಳಿ ತನ್ನ ಸಂದೇಹವನ್ನು ಕೇಳುತ್ತಾನೆ. ಆಗ ಶ್ರೀಕೃಷ್ಣನು ಕಲಿಯುಗದಲ್ಲಿ ಶ್ರೀಮಂತ ಇನ್ನಷ್ಟು ಶ್ರೀಮಂತನಾಗುತ್ತಾನೆ, ಬಡವ ಇನ್ನಷ್ಟು ಬಡತನದಲ್ಲಿ ಬೆಂದು ಹೋಗುತ್ತಾನೆ.
ಶ್ರೀಮಂತರು ತಮ್ಮ ದರ್ಪ ತೋರಿಸಿಕೊಳ್ಳಲು ಮದುವೆ, ಇನ್ನಿತರ ಸಮಾರಂಭಗಳಲ್ಲಿ ಆಡಂಬರವನ್ನು ತೋರಿಸುತ್ತಾರೆ ಆದರೆ ಹಸಿವಿನಿಂದ ಒದ್ದಾಡುತ್ತಿರುವ ಭಿಕ್ಷುಕ ಅವನ ಬಳಿ ಬೇಡಿದರೆ ಶ್ರೀಮಂತರ ಮನಸ್ಸು ಕರಗುವುದಿಲ್ಲ ಎಂದು ಹೇಳುತ್ತಾನೆ. ಭಾರತದಲ್ಲಿರುವ ಒಟ್ಟು ಸಂಪತ್ತಿನಲ್ಲಿ ಹೆಚ್ಚುಭಾಗ ಶ್ರೀಮಂತರ ಬಳಿಯೆ ಇದೆ ಬಡವರು ಮತ್ತು ಮಧ್ಯಮ ವರ್ಗದವರ ಬಳಿ ಸಣ್ಣ ಭಾಗ ಇದೆ ಎಂಬುದು ಇತ್ತೀಚೆಗೆ ನಡೆದ ಒಂದು ಸರ್ವೆಯಿಂದ ತಿಳಿದಿದೆ.
ಮತ್ತೊಂದು ಕಡೆ ನಕುಲನಿಗೆ ಬಾಣ ಸಿಕ್ಕಿತು ಅಲ್ಲಿ ಒಂದು ಹಸುವು ತನ್ನ ಕರುವನ್ನು ಪ್ರೀತಿಯಿಂದ ನೆಕ್ಕುತ್ತಿತ್ತು. ಹಸು ಯಾವ ರೀತಿ ನೆಕ್ಕುತ್ತಿತ್ತು ಎಂದರೆ ಕರುವಿಗೆ ಗಾಯವಾಗಿ ರಕ್ತ ಸೋರುತ್ತಿತ್ತು. ನಕುಲನು ಬಾಣದೊಂದಿಗೆ ಹಿಂದಿರುಗಿ ತನ್ನ ಸಂದೇಹವನ್ನು ಶ್ರೀಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣನು ಮುಂಬರುವ ದಿನಗಳಲ್ಲಿ ತಂದೆತಾಯಿಗಳು ಅವರ ಮಕ್ಕಳ ಮೇಲೆ ಎಷ್ಟು ಪ್ರೀತಿ ತೋರಿಸುತ್ತಾರೆ ಎಂದರೆ ಮಕ್ಕಳ ಅಭಿವೃದ್ಧಿ ಅಲ್ಲಿಯೆ ನಿಂತು ಹೋಗುತ್ತದೆ.
ಅವರು ಭೂಮಿಗೆ ಭಾರವಾಗಿ ಸೊಂಬೇರಿಗಳಾಗಿ ಉಳಿದು ಹೋಗುತ್ತಾರೆ. ತಮ್ಮ ಮಕ್ಕಳು ಎಲ್ಲಿ ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಎಂಬ ಭಯದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಸಮಯದಲ್ಲಿ ಅವರಿಗೆ ಮದುವೆ ಮಾಡಿ ಕುಟುಂಬದ ಜವಾಬ್ದಾರಿಯನ್ನು ಹೊರಿಸುತ್ತಾರೆ.
ತಂದೆ ತಾಯಿಗೆ ಮಗನ ಮೇಲೆ ಅಧಿಕಾರ ಇರುವುದಿಲ್ಲ ಅವನ ಹೆಂಡತಿಗೆ ಅಧಿಕಾರವಿರುತ್ತದೆ, ಮಗಳ ಮೇಲೆ ಅವಳ ಗಂಡನಿಗೆ ಅಧಿಕಾರವಿರುತ್ತದೆ, ನಮ್ಮ ಶರೀರದ ಮೇಲೆ ಸಾವಿಗೆ ಅಧಿಕಾರವಿರುತ್ತದೆ, ಆತ್ಮದ ಮೇಲೆ ಪರಮಾತ್ಮನಿಗೆ ಮಾತ್ರ ಅಧಿಕಾರವಿರುತ್ತದೆ ಎಂದು ಹೇಳುತ್ತಾನೆ.
ಮತ್ತೊಂದು ಕಡೆ ಸಹದೇವನಿಗೆ ಬಾಣ ಸಿಕ್ಕ ಕಡೆಯಲ್ಲಿ ಒಂದು ದೊಡ್ಡ ಬೆಟ್ಟದಿಂದ ದೊಡ್ಡ ಬಂಡೆಕಲ್ಲು ಉರುಳಿ ಬರುತ್ತಿತ್ತು ಅದರ ಭಾರಕ್ಕೆ ಸಿಕ್ಕ ಮರಗಳು ನೆಲಸಮವಾಗುತ್ತಿತ್ತು ಆದರೆ ಒಂದು ಸಣ್ಣ ಸಸಿಯ ಹತ್ತಿರ ಬರುತ್ತಿದ್ದಂತೆ ಬಂಡೆಕಲ್ಲು ನಿಂತುಹೋಯಿತು. ಬಾಣದೊಂದಿಗೆ ಹಿಂದಿರುಗಿದ ಸಹದೇವನು ಶ್ರೀಕೃಷ್ಣನ ಬಳಿ ತನ್ನ ಆಶ್ಚರ್ಯವನ್ನು ವ್ಯಕ್ತ ಪಡಿಸಿದನು.
ಆಗ ಶ್ರೀಕೃಷ್ಣ ಕಲಿಯುಗದಲ್ಲಿ ಮನುಷ್ಯ ತನ್ನ ಆಲೋಚನಾಶಕ್ತಿ ಕಳೆದುಕೊಳ್ಳುತ್ತಾನೆ ತನ್ನ ಪತನಕ್ಕೆ ತಾನೇ ಕಾರಣನಾಗುತ್ತಾನೆ. ಅವನ ಬಳಿ ಇರುವ ಅಧಿಕಾರಬಲ ಅವನ ಪತನವನ್ನು ತಡೆಯುವುದಿಲ್ಲ ಆದರೆ ಚಿಕ್ಕ ಸಸಿ ಅಂದರೆ ಭಗವಂತನ ನಾಮಸ್ಮರಣೆ ಮನುಷ್ಯನ ಪತನವನ್ನು ತಡೆಯುತ್ತದೆ ಎಂದು ಹೇಳುತ್ತಾನೆ. ಕಲಿಯುಗ ಹೇಗೆ ಅಂತ್ಯವಾಗುತ್ತದೆ ಎಂಬುದನ್ನು ಶ್ರೀ ಮನ್ನಭಾಗವತ ಪುರಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಕಲಿಯುಗದಲ್ಲಿ ಯಾವ ವ್ಯಕ್ತಿ ಅಹಂಕಾರ, ದರ್ಪದಿಂದ ವರ್ತಿಸುತ್ತಾನೊ, ಅಮಾಯಕರನ್ನು ಮೋಸಗೊಳಿಸುತ್ತಾನೊ ಅವನು ಮಾತ್ರ ಸುಖವಾಗಿರುತ್ತಾನೆ. ಭಗವಂತನನ್ನು ನಂಬುವವರ ಸಂಖ್ಯೆ ಗಣನೀಯವಾಗಿ ಇಳಿದುಹೋಗುತ್ತದೆ.
ಮಾನವನ ಆಯಸ್ಸು 20 ವರ್ಷಗಳಿಗೆ ಕರಗಿ ಹೋಗುತ್ತದೆ. 16 ವರ್ಷಕ್ಕೆ ಕೂದಲು ಬೆಳ್ಳಗಾಗುತ್ತದೆ, ಎತ್ತರ ಕಡಿಮೆಯಾಗಿ ಕುಬ್ಜರಾಗುತ್ತಾರೆ. ಚಿಕ್ಕಪುಟ್ಟ ಕಾರಣಗಳಿಗಾಗಿ ಒಬ್ಬರನ್ನೊಬ್ಬರು ಕೊಲೆ ಮಾಡುತ್ತಾರೆ. ಕಾಮ, ಕ್ರೋಧ, ಮದ, ಮಾತ್ಸರ್ಯಗಳು ಮನುಷ್ಯನನ್ನು ದಾಸನನ್ನಾಗಿ ಮಾಡಿಕೊಳ್ಳುತ್ತವೆ. ಮನುಷ್ಯನಿಗೆ ನಾನು ಎಂಬ ಸ್ವಾರ್ಥ ಹೆಚ್ಚಾಗಿ ತನ್ನ ಸಂತೋಷಕ್ಕಾಗಿ ಕುಟುಂಬದವರನ್ನು, ತಂದೆತಾಯಿಗಳನ್ನು ಕೊಲ್ಲಲು ಹಿಂಜರಿಯುವುದಿಲ್ಲ. ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಗಂಡ-ಹೆಂಡತಿ ಎಲ್ಲಾ ಸಂಬಂಧಗಳು ಕೇವಲ ಚರಿತ್ರೆಯಾಗಿ ಉಳಿದುಹೋಗುತ್ತದೆ.
ಅ ತ್ಯಾ ಚಾರ, ಜೂಜಾಟ ಸಾಮಾನ್ಯವಾಗಿ ಹೋಗುತ್ತದೆ. ಕಲಿಯುಗದ ಅಂತ್ಯದಲ್ಲಿ ಪ್ರಜೆಗಳೆಲ್ಲರೂ ಚಿತ್ರವಿಚಿತ್ರವಾದ ರೋಗಗಳಿಗೆ ಬಲಿಯಾಗುತ್ತಾರೆ. ಎಲ್ಲೊ ಒಬ್ಬರು-ಇಬ್ಬರು ದೇವರ ನಾಮಸ್ಮರಣೆ ಮಾಡುತ್ತಾ ಕಲಿಯುಗದ ಅಂತ್ಯದ ಘೋರ ಘಟನೆಗಳಿಂದ ದೂರವಾಗಿ ಬದುಕುತ್ತಾರೆ. ಆಹಾರ ಸಿಗದೆ ಜನರು ಹಸಿವಿನಿಂದ ಒದ್ದಾಡುತ್ತಾರೆ. ಮಳೆಯಿಲ್ಲದೆ ಭೂಮಿ ಬರಡಾಗಿ ಕುಡಿಯಲು ನೀರಿಲ್ಲದೆ ಜನರು ಪರದಾಡುವ ಸ್ಥಿತಿ ಮುಂದೆ ಬರಲಿದೆ.
ಭೂಮಿಯಲ್ಲಿ ಬೆಳೆ ಬೆಳೆಯುವುದಿಲ್ಲ, ಗಿಡಗಳು ಹಣ್ಣು ಬಿಡುವುದಿಲ್ಲ, ಹೂವುಗಳು ಅರಳುವುದಿಲ್ಲ, ಮನುಷ್ಯತ್ವ ಎನ್ನುವುದು ಅಳಿದುಹೋಗುತ್ತದೆ. ಜನರಲ್ಲಿ ಭಕ್ತಿಭಾವಗಳು ಕ್ಷೀಣಿಸುವುದರಿಂದ ಗುಡಿಗೋಪುರಗಳು ಪಾಳು ಬೀಳುತ್ತವೆ ಇದರಿಂದ ನಕಾರಾತ್ಮಕ ಶಕ್ತಿ ಎಲ್ಲೆಲ್ಲೂ ಕಾಣಿಸುತ್ತದೆ. 15 ವರ್ಷ ತುಂಬುವುದರೊಳಗೆ ಹೆಣ್ಣುಮಕ್ಕಳು ಗರ್ಭವತಿಯರಾಗುತ್ತಾರೆ.
ಕಲಿಯುಗದಲ್ಲಿ 5000 ವರ್ಷ ಕಳೆದ ನಂತರ ಗಂಗಾ ನದಿ ಶಾಶ್ವತವಾಗಿ ಒಣಗಿಹೋಗುತ್ತದೆ. ಭೂಲೋಕದಲ್ಲಿ ನೆಲೆಸಿರುವ ದೇವತೆಗಳು ಈ ಕರ್ಮವನ್ನು ನೋಡಲಾರದೆ ಅವರವರ ಲೋಕಗಳಿಗೆ ಹಿಂದಿರುಗುತ್ತಾರೆ. ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿಲ್ಲದೆ ಮನುಷ್ಯ ಮನುಷ್ಯನನ್ನೆ ಕೊಂದು ತಿನ್ನುವ ಕಾಲ ಬರಲಿದೆ.