ಪವಿತ್ರ ವಿಭೂತಿ ಹೇಗೆ ತಯಾರಿಸುತ್ತಾರೆ ಹಾಗೂ ಅದರ ಪ್ರಯೋಜನಗಳು, ಮೊದಲಾದವುಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಹಿಂದೂ ಧರ್ಮದಲ್ಲಿ ವಿಭೂತಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಶರಣರು ಪೂಜೆ, ಪುನಸ್ಕಾರಗಳಿಗೆ ವಿಭೂತಿಯನ್ನು ಬಳಸುತ್ತಾರೆ. ಶರಣರ ನಾಡು ಬಾಗಲಕೋಟೆಯಲ್ಲಿ ಮಠಗಳು, ಗುಡಿಗಳೆ ಜಾಸ್ತಿ. ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಪ್ರಸಿದ್ಧವಾಗಿದೆ. ಶಿವಯೋಗ ಮಂದಿರದ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಪವಿತ್ರವಾದ ವಿಭೂತಿಯನ್ನು ತಯಾರಿಸಲಾಗುತ್ತದೆ. ಇಲ್ಲಿನ ಗೋಶಾಲೆಯಲ್ಲಿ ಸಾಕಷ್ಟು ಸಂಖ್ಯೆಯ ದನಕರುಗಳನ್ನು ಸಾಕಲಾಗಿದೆ. ಇಲ್ಲಿ ಸಾಕಲಾದ ಆಕಳು, ಎತ್ತುಗಳ ಸಗಣಿಯನ್ನು ಬಳಸಲಾಗುತ್ತದೆ. ಇಲ್ಲಿ ಕ್ರಿಯಾ ಭಸ್ಮ ಮತ್ತು ಸಾದಾ ಭಸ್ಮ ಎಂಬ ಎರಡು ರೀತಿಯ ವಿಭೂತಿಯನ್ನು ತಯಾರಿಸಲಾಗುತ್ತದೆ. ಕ್ರಿಯಾ ಭಸ್ಮ ಸಮಾಧಿಗೆ ಬಳಸಿದರೆ. ಸಾದ ಭಸ್ಮ ಹಣೆಗೆ ಮತ್ತು ದೇವಸ್ಥಾನಗಳಲ್ಲಿ ಬಳಸಲಾಗುತ್ತದೆ. ದೇಶದಲ್ಲಿ ಎರಡು ಕೇಂದ್ರಗಳಲ್ಲಿ ಕ್ರಿಯಾ ಭಸ್ಮ ತಯಾರಿಸಲಾಗುತ್ತದೆ ಅದರಲ್ಲಿ ಬಾದಾಮಿಯ ಶಿವಯೋಗ ಮಂದಿರವು ಒಂದು. ಆಕಳು ಮತ್ತು ಎತ್ತಿನ ಸಗಣಿಯನ್ನು ಸುಮಾರು 8 ದಿನಗಳ ಕಾಲ ಸೂರ್ಯನ ಬಿಸಿಲಿಗೆ ಒಣಗಿಸಿ ಕೆಂಡದಲ್ಲಿ ಸುಡಲಾಗುತ್ತದೆ.
ನಂತರ ಅದನ್ನು ಭಟ್ಟಿ ಇಳಿಸಿ ಯಂತ್ರದ ಮೂಲಕ 8 ದಿನಗಳ ಕಾಲ ಕುಟ್ಟಿ ಪುಡಿ ಮಾಡಿ ನಂತರ 8 ದಿನಗಳ ಕಾಲ ಸೋಸುತ್ತಾರೆ. ನಂತರ ಅದನ್ನು ಮುದ್ದೆ ರೀತಿ ಗುಂಡಗೆ ಮಾಡಿ ಕಟ್ಟಿಗೆಯಿಂದ ಹೊಡೆದು ಆಕಾರವನ್ನು ನೀಡಲಾಗುತ್ತದೆ. ನಂತರ ಬಿಸಲಿನಲ್ಲಿ ಒಣಗಿಸಿ ಬೆಂಕಿಯ ಹೊಂಡದಲ್ಲಿ ಸುಡಲಾಗುತ್ತದೆ. ಆಗ ವಿಭೂತಿ ತಯಾರಾಗುತ್ತದೆ ನಂತರ ಪ್ಯಾಕ್ ಮಾಡಲಾಗುತ್ತದೆ. ವಿಭೂತಿ ಹಚ್ಚುವುದರಿಂದ ಚರ್ಮ ರೋಗ ಬರುವುದಿಲ್ಲ ಹಾಗೂ ಮನಸ್ಸು ಶಾಂತವಾಗಿರುತ್ತದೆ. ಶಿವಯೋಗ ಮಂದಿರದಲ್ಲಿ ಸಿಗುವ ವಿಭೂತಿ ಬೇರೆ ಬೇರೆ ರಾಜ್ಯಗಳಲ್ಲಿ, ದೇಶ ವಿದೇಶಗಳಲ್ಲಿ ಹೆಸರುವಾಸಿ. ದಿನಕ್ಕೆ ಸುಮಾರು 200-300 ವಿಭೂತಿ ತಯಾರಾಗುತ್ತದೆ. ಇಲ್ಲಿ ಶಾಸ್ತ್ರೋಕ್ತವಾಗಿ ವಿಭೂತಿಯನ್ನು ತಯಾರಿಸಲಾಗುತ್ತದೆ. ಇಂತಹ ಪವಿತ್ರ ವಿಭೂತಿಯನ್ನು ಬಾಗಲಕೋಟೆಯಲ್ಲಿ ತಯಾರಿಸುತ್ತಾರೆ ಎನ್ನುವುದೇ ಹೆಮ್ಮೆಯ ವಿಷಯ. ಶಿವಯೋಗ ಮಂದಿರದಲ್ಲಿ ಹೆಚ್ಚು ವಿಭೂತಿ ತಯಾರಾಗಲಿ ಎಂದು ಆಶಿಸೋಣ