ಉಪ್ಪಿನಕಾಯಿ ಎನ್ನುವ ಪದ ಕೇಳಿದರೆ ಸಾಮಾನ್ಯವಾಗಿ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಎಂದರೆ ಕೆಲವರಿಗೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನು ಈ ಉಪ್ಪಿನಕಾಯಿಯನ್ನು ಸಾಕಷ್ಟು ವಿಧಗಳು ಇವೆ. ಮಾವಿನಕಾಯಿ ಉಪ್ಪಿನಕಾಯಿ , ನಿಂಬೆ ಉಪ್ಪಿನಕಾಯಿ ಅದರಲ್ಲೇ ಸಿಹಿ ಮತ್ತು ಖಾರ ಉಪ್ಪಿನಕಾಯಿ, ಮಿಶ್ರ ತರಕಾರಿಗಳ ಉಪ್ಪಿನಕಾಯಿ ಹೀಗೇ ತರಹೇವಾರಿ ವಿಧಗಳು ಇವೆ ಉಪ್ಪಿನಕಾಯಿಯಲ್ಲಿ. ಆದರೂ ಇವು ಎಲ್ಲದರಲ್ಲಿ ಎಲ್ಲರಿಗೂ ಬಹಳ ಇಷ್ಟ ಪಟ್ಟು ತಿನ್ನುವ ಉಪ್ಪಿನಕಾಯಿ ಎಂದರೆ ಅದು ಮಾವಿನಕಾಯಿ ಉಪ್ಪಿನಕಾಯಿ. ಇನ್ನು ಈ ಲೇಖನದಲ್ಲಿ ನಾವು ಮಾವಿನಕಾಯಿಯ ಉಪ್ಪಿನಕಾಯಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ತಿಳಿಯೋಣ.
ಈ ಲೇಖನದಲ್ಲಿ ಆಂದ್ರ ಶೈಲಿಯ ಖಾರವಾದ ರುಚಿಯಾಗಿ ಘಮ ಘಮ ಎನ್ನುವ ಮಾವಿನಕಾಯಿ ಉಪ್ಪಿನಕಾಯಿ ಹೇಗೆ ಮಾಡೋದು ಎಂದು ನೋಡೋಣ. ಈ ರೀತಿಯ ಉಪ್ಪಿನಕಾಯಿಯನ್ನು ನಾವು ಮಾರ್ಕೆಟ್ ನಲ್ಲಿ ತೆಗೆದುಕೊಂಡು ಬಂದರೆ ನೂರಾರು ರೂಪಾಯಿ ಖರ್ಚು. ಅದೇ ನಾವು ಮನೆಯಲ್ಲಿಯೇ ಮಾಡಿಕೊಂಡರೆ ಐವತ್ತು ರೂಪಾಯಿ ಅಷ್ಟರಲ್ಲಿ ಖರ್ಚು ಮುಗಿದು ವರ್ಷಕ್ಕೆ ಪೂರ್ತಿ ಸಾಕಾಗುವಷ್ಟು ಉಪ್ಪಿನಕಾಯಿ ಮಾಡಿ ಶೇಖರಿಸಿ ಇಟ್ಟುಕೊಳ್ಳಬಹುದು. ಈ ಉಪ್ಪಿನಕಾಯಿ ಮಾಡುವುದು ಹೇಗೆ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು ಎನ್ನುವುದನ್ನು ನೋಡೋಣ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು :- ಮಾವಿನಕಾಯಿ, ಮೆಂತೆ ಪುಡಿ ಮುಕ್ಕಾಲು ಕಪ್ , ಸಾಸಿವೆ ಪುಡಿ ಒಂದು ಕಪ್ , ಉಪ್ಪು ಒಂದೂವರೆ ಕಪ್, ಕೆಂಪು ಮೆಣಸಿನ ಪುಡಿ ಒಂದೂವರೆ ಕಪ್ , ಸಾಸಿವೆ ಎಣ್ಣೆ ಎರಡೂವರೆ ಕಪ್ , ಬೆಳ್ಳುಳ್ಳಿ ಒಂದು ಕಪ್ ,
ಮಾಡುವ ವಿಧಾನ :- ಮೊದಲು ಮಾವಿನಕಾಯಿಯನ್ನು ಸ್ವಚ್ಛವಾಗಿ ತೊಳೆದು ಕಾಟನ್ ಬಟ್ಟೆಯಿಂದ ಒರೆಸಿ ಇಟ್ಟುಕೊಳ್ಳಬೇಕು. ನಂತರ ಮಾವಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ , ಉಪ್ಪಿನಕಾಯಿಗೆ ಬಳಸುವ ಯಾವೊಂದು ಪಾತ್ರೆಯನ್ನು ಸಹ ಒದ್ದೆಯಾಗಿ ನೀರು ತಾಗಿಸಿ ಬಳಸಬಾರದು ಒಣಗಿದ ಮಾತ್ರೆಗಳನ್ನು ಮಾತ್ರ ಬಳಸಬೇಕು. ಇಲ್ಲವಾದಲ್ಲಿ ಉಪ್ಪಿನಕಾಯಿ ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ. ನಂತರ ಎಂದು ದೊಡ್ಡ ಬೌಲ್ ಗೆ ಹುರಿಯದೆ ಮೆಂತೆ ಪುಡಿ , ಹುರಿಯದೆ ಪುಡಿ ಮಾಡಿದ ಸಾಸಿವೆ, ಒಂದೂವರೆ ಕಪ್ ಉಪ್ಪನ್ನು ಸೇರಿಸಿಕೊಳ್ಳಬೇಕು ನಂತರ ಕೆಂಪು ಮೆಣಸಿನ ಪುಡಿ ಒಂದೂವರೆ ಕಪ್ ಇವೆಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಎರಡೂವರೆ ಕಪ್ ಅಷ್ಟು ಶೇಂಗಾ ಎಣ್ಣೆ ಅಥವಾ ಅದು ಇಲ್ಲದಿದ್ದರೆ ಸಾಸಿವೆ ಎಣ್ಣೆಯನ್ನು ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಬೇಕು. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಬೇಕಿದ್ದರೂ ಹಾಕಬಹುದು. ಆದರೆ ಎಣ್ಣೆಯನ್ನು ಕಾಯಿಸದೆ ಹಾಗೆಯೇ ಹಾಕಬೇಕು.
ಇವಿಷ್ಟು ಮಸಾಲೆ ತಯಾರಿಸಿ ಆದ ನಂತರ ಇನ್ನೊಂದು ಒಣಗಿದ ಪಾತ್ರೆಗೆ ನೀವು ಮಸಾಲೆ ಪದಾರ್ಥಗಳನ್ನು ಅಳೆಯಲು ತೆಗೆದುಕೊಂಡ ಕಪ್ / ಲೋಟದಲ್ಲಿಯೆ ಸರಿಯಾಗಿ ಹದಿಮೂರರಿಂದ ಹದಿನೈದು ಕಪ್ ಕಟ್ ಮಾಡಿದ ಮಾವಿನಕಾಯಿ ಹಾಕಿಕೊಳ್ಳಬೇಕು. ನಂತರ ಮಾವಿನಕಾಯಿ ಗೆ ಎಲ್ಲಾ ಮಸಾಲೆಗಳನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಎಲ್ಲಾ ಚೆನ್ನಾಗಿ ಮಿಶ್ರಣ ಆದ ನಂತರ ಬೆಳ್ಳುಳ್ಳಿ ಹಾಕಿ ಕಲಸಿ ನಂತರ ಉಪ್ಪಿನಕಾಯಿಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಅದರ ಮುಚ್ಚಳ ಮುಚ್ಚಬಾರದು . ಮುಚ್ಚಳದ ಬದಲು ಒಂದು ಕಾಟನ್ ಬಟ್ಟೆ ಕಟ್ಟಿ ಇಡಬೇಕು. ಒಂದುವಾರದವರೆಗೂ ಹಾಗೆಯೇ ಇಡಬೇಕು ಒಂದು ವಾರದ ನಂತರ ಮಾವಿನಕಾಯಿ ಹುಳಿ ಉಪ್ಪು ಖಾರ ಎಲ್ಲವೂ ಸರಿಯಾಗಿ ಹಿಡಿದಿರುತ್ತದೆ. ನಂತರ ಪ್ರತಿ ನಿತ್ಯ ಬಳಕೆ ಮಾಡಬಹುದು. ಆದರೆ ಮೊದಲಿನ ಹಾಗೆ ಕಾಟನ್ ಬಟ್ಟೆ ಕಟ್ಟಿಯೆ ಇಡಬೇಕು. ಈ ರೀತಿ ಮಾಡಿಕೊಂಡರೆ ಒಂದು ವರ್ಷದವರೆಗೂ ಕೆಡದೇ ಹಾಗೆಯೇ ಇಟ್ಟುಕೊಳ್ಳಬಹುದು.