ಇದ್ದಕ್ಕಿದ್ದ ಹಾಗೆ ಯಾವುದೇ ಸುಳಿವಿಲ್ಲದೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಸಹ ಒಂದು. ಈ ಹುಣ್ಣು ಉಂಟಾಗುವಾಗ ದೇಹದಲ್ಲಿ ಯಾವುದೇ ಅಹಿತಕರ ಮುನ್ಸೂಚನೆ ಉಂಟಾಗುವುದಿಲ್ಲ. ಒಂದೇ ಸಮನೆ ನೋವಿನಿಂದ ಕೂಡಿರುವ ಗುಳ್ಳೆ ಹುಟ್ಟಿಕೊಳ್ಳುತ್ತದೆ. ನಂತರ ಅದು ಒಡೆದು ಗಾಯ ಅಥವಾ ಹುಣ್ಣಿನ ರೂಪವನ್ನು ಪಡೆಯುತ್ತದೆ. ಬಾಯಿಯ ಒಳಗಿನ ಭಾಗವು ಅತ್ಯಂತ ಮೃದು ಹಾಗೂ ಸೂಕ್ಷ್ಮತೆಯಿಂದ ಕೂಡಿರುವುದರಿಂದ ಹುಣ್ಣಿನ ನೋವು ತೀವ್ರವಾಗಿರುತ್ತದೆ. ಪದೇ ಪದೇ ಮಾತನಾಡುವುದು ಮತ್ತು ಊಟ ತಿಂಡಿ ಮಾಡುವುದರಿಂದ ಗಾಯವು ಬಹುಬೇಗ ಗುಣಮುಖವಾಗುವುದಿಲ್ಲ. ಕ್ಷಣ ಕ್ಷಣಕ್ಕೂ ನೋವನ್ನು ನೀಡುತ್ತಲೇ ಇರುತ್ತದೆ. ಹಾಗಾಗಿ ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಎಲ್ಲದಕ್ಕೂ ವೈದ್ಯರನ್ನು ಭೇಟಿ ಆಗುವ ಬದಲು ನಾವು ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಬಾಯಿ ಹುಣ್ಣನ್ನು ಕಡಿಮೆ ಮಾಡಿಕೊಳ್ಳಬಹುದು. ಅಂತಹ ಮನೆಮದ್ದುಗಳು ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ರೀತಿ ನೋವನ್ನು ಉಂಟುಮಾಡುವ ಹುಣ್ಣು ನಮ್ಮ ದೇಹದಲ್ಲಿ ಉಂಟಾಗುವ ವಿಟಮಿನ್ಗಳ ಕೊರತೆಯನ್ನು ಸೂಚಿಸುವುದು. ಹಾಗಾಗಿ ಅದಕ್ಕೆ ಮೊದಲು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಬಾಯಲ್ಲಿ ಉಂಟಾದ ಹುಣ್ಣಿನಿಂದ ಬಹುಬೇಗ ಶಮನವನ್ನು ಪಡೆದುಕೊಳ್ಳಲು ಕೆಲವು ಮನೆ ಮದ್ದಿನ ಪ್ರಯೋಗ ಮಾಡಬಹುದು. ಅವು ಬಹುಬೇಗ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತವೆ. ಕೆಲವು ಸುಲಭ ಮನೆಮದ್ದುಗಳನ್ನು ನೋಡುವುದಾದರೆ. ಮೊದಲಿಗೆ ಸೀಬೆ ಎಲೆ ಅಥವಾ ಪೇರಳೆ ಎಲೆಯ ಕಷಾಯ ಇದು ಬಾಯಿ ಹುಣ್ಣಿಗೆ ಉತ್ತಮ ಮನೆಮದ್ದು ಎಂದೇ ಹೇಳಬಹುದು. ಸೀಬೆ ಎಲೆಗಳ ಚಿಗುರುಗಳನ್ನು ಹಾಗೂ ಗರಿಕೆ ಹುಲ್ಲು ಅಥವಾ ದುರ್ವೆ ಇದನ್ನು ಬಿಸಿ ನೀರಿಗೆ ಹಾಕಿ ಕುದಿಸಬೇಕು. ನೀರು ಕುದಿಯುವಾಗ ಒಂದು ಚಿಟಿಕೆ ಉಪ್ಪನ್ನು ಹಾಕಿ ಕುದಿಸಿ ತಣ್ಣಗಾದ ನಂತರ ಸೋಸಿಕೊಂಡು ಬಾಯಿಗೆ ಈ ಕಷಾಯವನ್ನು ಹಾಕಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು. ಒಂದು ವೇಳೆ ಸೀಬೆ ಎಲೆ ಸಿಗದೇ ಇದ್ದರೆ ಅದರ ಬದಲು ಮಾವಿನ ಚಿಗುರು ಇಲ್ಲವೇ ಹುಣಸೆ ಎಲೆ ಅಥವಾ ಬೇವಿನ ಎಲೆಗಳನ್ನು ಸಹ ಬಳಸಿಕೊಳ್ಳಬಹುದು. ಹೆಚ್ಚೆಚ್ಚು ನೀರು ಕುಡಿಯಬೇಕು.
ಇನ್ನು ತೆಂಗಿನ ಎಣ್ಣೆ. ತೆಂಗಿನ ಎಣ್ಣೆ ಸೆಳೆತವನ್ನು ಕಡಿಮೆ ಮಾಡುವ ಮೂಲಕ ಹುಣ್ಣಿನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿನ ಉರಿಯೂತದ ಸಂಯುಕ್ತಗಳು ಹಾಗೆ ಮಾಡಲು ಸಹಾಯ ಮಾಡುತ್ತದೆ. ನೀವು ಮಾಡಬೇಕಿರುವುದು ತೆಂಗಿನ ಎಣ್ಣೆಯಲ್ಲಿ ಹತ್ತಿಯ ಉಂಡೆಗಳನ್ನು ಹಾಕಿ ಹುಣ್ಣು ಆದ ಜಾಗದ ಮೇಲೆ ಹಚ್ಚಬೇಕು ಹಾಗೂ ಆಗಾಗ ಇದನ್ನು ಪುನರಾವರ್ತಿಸಬೇಕು. ನೀವು ಮೂರನೇ ಮನೆಮದ್ದು ಎಂದರೆ , ದನಿಯಾ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಕಲಸಿ ಬಾಯಿಹುಣ್ಣು ಆದ ಜಾಗದಲ್ಲಿ ಹಚ್ಚುವುದರಿಂದ ಸಹ ಹುಣ್ಣು ಬೇಗನೆ ಕಡಿಮೆ ಆಗುವುದು. ಇನ್ನೊಂದು ಸರಳ ಉಪಾಯ ಎಂದರೆ ಅರ್ಧ ಲೋಟ ಉಗುರು ಬೆಚ್ಚನೆಯ ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾವನ್ನು ಹಾಕಿ ಬಾಯಿ ಮುಕ್ಕಳಿಸಬೇಕು.
ಈ ರೀತಿಯಾಗಿ ನಾವು ನಮ್ಮ ಮನೆಯ ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಬಾಯಿ ಹುಣ್ಣನ್ನು ಕಡಿಮೆ ಮಾಡಿಕೊಳ್ಳಬಹುದು. ಇದೇ ರೀತಿ ನಮಗೇ ಗೊತ್ತಿಲ್ಲದಂತೆ ನಮ್ಮ ಅಡುಗೆ ಮನೆಯಲ್ಲಿಯೇ ನಮ್ಮ ಆರೋಗ್ಯಕ್ಕೆ ಔಷಧೀಯ ರೂಪದಲ್ಲಿ ಸಹಾಯ ಆಗುವಂತಹ ಪದಾರ್ಥಗಳು ಇವೆ ಅವುಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.