ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ಯಾವ ವಸ್ತುವನ್ನು ಕೊಂಡುಕೊಳ್ಳಬೇಕಾದರೂ ಹೆಚ್ಚಿನ ಹಣವನ್ನು ಕೊಡಬೇಕಾಗುತ್ತದೆ. ಪೆಟ್ರೋಲ್ ಡಿಸೇಲ್ ಬೆಲೆಯಂತೂ ಗಗನದಲ್ಲಿ ಇದೆ, ಇದೀಗ ಸಿಮೆಂಟ್ ನ ಬೆಲೆಯಲ್ಲಿ ಹೆಚ್ಚಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮಾರುಕಟ್ಟೆಯಲ್ಲಿ ಈಗಾಗಲೆ ಬೆಲೆಗಳು ಗಗನಮುಖಿಯಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ, ಚಿಕನ್ ಈ ಎಲ್ಲದರ ಬೆಲೆ ಏರಿದೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ದೊಡ್ಡ ಶಾಕ್ ಬಂದಿದೆ. ಅದೇನೆಂದರೆ ಸಿಮೆಂಟ್ ಬೆಲೆಯೂ ತೀವ್ರ ಏರಿಕೆಯಾಗಿದೆ. ಮನೆ ಕಟ್ಟಲು ಮುಂದಾಗಿರುವ ಜನರಿಗೆ ಸಿಮೆಂಟ್ ಕಂಪನಿಗಳು ಶಾಕ್ ನೀಡಿವೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ 50 ಕೆಜಿ ಸಿಮೆಂಟ್ ಚೀಲದ ಬೆಲೆಯನ್ನು 20 ರಿಂದ 30 ರೂಪಾಯಿವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸಿಮೆಂಟ್ ಉದ್ಯಮದ ಮೂಲಗಳ ಪ್ರಕಾರ ಜೂನ್ 2ರಿಂದ ಈ ಏರಿಕೆ ಜಾರಿಗೆ ಬಂದಿದೆ, ಈಗಾಗಲೆ ಬೆಲೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆ ಹಾಗೂ ಇಂಧನ ವೆಚ್ಚದಿಂದಾಗಿ ಸಿಮೆಂಟ್ ಬೆಲೆಯನ್ನು ಏರಿಸಬೇಕಾಗಿದೆ ಎಂದು ಕಂಪನಿಗಳು ತಿಳಿಸಿವೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 50 ಕೆಜಿಯ ಸಿಮೆಂಟ್ ಮೂಟೆಗೆ 20 ರೂಪಾಯಿ, ತಮಿಳುನಾಡಿನಲ್ಲಿ 20 ರಿಂದ 30 ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನೂ ಕರ್ನಾಟಕದಲ್ಲಿ ಬ್ರ್ಯಾಂಡ್ ಮತ್ತು ಸ್ಥಳದ ಮೇಲೆ ಬೆಲೆ ಏರಿಕೆ ನಿಗಧಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಲೆ ಏರಿಕೆಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಿಮೆಂಟ್ ಬಸ್ಟ್ ಬೆಲೆ 320 ರಿಂದ 400 ರೂಪಾಯಿ ತಲುಪಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ 360-450 ರೂಪಾಯಿಗೆ ಏರಿದೆ. ಅಲ್ಟ್ರಾಟೆಕ್ ಸಿಮೆಂಟ್, ಇಂಡಿಯಾ ಸಿಮೆಂಟ್ಸ್, ಕೆಸಿಪಿ, ಎನ್ಸಿಎಲ್ ಇಂಡಸ್ಟ್ರೀಸ್, ಸಾಗರ್ ಸಿಮೆಂಟ್ಸ್, ದಾಲ್ಮಿಯಾ ಭಾರತ್, ಶ್ರೀ ಸಿಮೆಂಟ್, ರಾಮ್ಕೊ ಸಿಮೆಂಟ್ಸ್ ಮತ್ತು ಓರಿಯಂಟ್ ಸಿಮೆಂಟ್ ಬೆಲೆಗಳನ್ನು ಹೆಚ್ಚಿಸಿವೆ.
ವಾಸ್ತವವಾಗಿ ಸಿಮೆಂಟ್ ಕಂಪನಿಗಳು ಈ ಹಣಕಾಸು ವರ್ಷದ ಆರಂಭದಲ್ಲಿ ಏಪ್ರಿಲ್ ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದ್ದವು ಆದರೆ ಈಗಾಗಲೆ ಖರೀದಿ ಕಡಿಮೆಯಾಗಿದೆ ಮತ್ತೆ ಬೆಲೆ ಏರಿಕೆಯಾದರೆ ಮತ್ತಷ್ಟು ಕುಸಿಯಬಹುದು ಎಂದು ವಿತರಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಂಪನಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದವು. ಈಗ ಖರೀದಿ ಹೆಚ್ಚಾದಂತೆ ಬೆಲೆ ಏರಿಕೆಯಾಗಿದೆ.
ಕಳೆದ ಒಂದು ವಾರದಿಂದ ಸಿಮೆಂಟ್ ಕಂಪನಿಗಳು ಡೀಲರ್ ಗಳಿಗೆ ಪೂರೈಕೆ ನಿಲ್ಲಿಸಿವೆ. ಈಗಿರುವ ಹಳೆಯ ಸ್ಟಾಕ್ ಮಾರಾಟ ಮಾಡಬೇಕು ಎಂದು ಸೂಚಿಸಿದೆ. ಈಗಾಗಲೆ ಹಲವೆಡೆ ದಾಸ್ತಾನು ಇಲ್ಲವಾಗಿದೆ. ಹೊಸ ದರದ ಪ್ರಕಾರ ಸಿಮೆಂಟ್ ವಿತರಕರು ಗುರುವಾರ ಸಂಜೆಯಿಂದಲೆ ಸಿಮೆಂಟ್ ಪೂರೈಕೆ ಆರಂಭಿಸಲಿದ್ದಾರೆ. ಸಿಮೆಂಟ್ ಜತೆಗೆ ಉಕ್ಕು, ಕಬ್ಬಿಣದ ಬೆಲೆಯೂ ದಿಢೀರ್ ಏರಿಕೆಯಾಗಿರುವುದರಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಮುಂದಾಗಿರುವವರಿಗೆ ಭಾರಿ ಹೊರೆಯಾಗಲಿದೆ. ಕೆಲವೆ ತಿಂಗಳಲ್ಲಿ ದರಗಳು ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಈ ರೀತಿಯಾಗಿ ಬೆಲೆ ಹೆಚ್ಚಾದಲ್ಲಿ ಜನಸಾಮಾನ್ಯರು ಜೀವನ ಮಾಡುವುದು ಕಷ್ಟವಾಗುತ್ತದೆ. ತಾವು ದುಡಿಯುವ ಆದಾಯ ಕಡಿಮೆಯಾಗಿದ್ದು ಜೀವನ ನಿರ್ವಹಣೆಗೆ ಹಣ ಸಾಕಾಗುವುದಿಲ್ಲ.