ಅಲರ್ಜಿ ಮತ್ತು ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿ ಎಂಟು ಮಂದಿ ಭಾರತೀಯರಲ್ಲಿ ಒಬ್ಬರು ಗಂಭೀರವಾದ ಸೈನಸೈಟಿಸ್ ಸಮಸ್ಯೆಯಿಂದ ನರಳುತ್ತಿದ್ದಾರೆ. ಮೂಗು ಮತ್ತು ಗಂಟಲಿನ ಉರಿಯಿಂದ ಈ ಸಮಸ್ಯೆ ಬರುತ್ತದೆ. ಇದರಿಂದ ಮೂಗಿನ ಹೊರಳೆಯಲ್ಲಿ ಸಿಂಬಳದಂತಹ ಲೋಳೆ ಪದಾರ್ಥ ಸಂಗ್ರಹವಾಗಿ ಮುಖ, ಕಣ್ಣು ಮತ್ತು ಮೆದುಳಿನಲ್ಲಿ ಒತ್ತಡ ಉಂಟಾಗುತ್ತದೆ. ಉಸಿರಾಟದ ಅಂಗದ ಕೆಳಗಿನ ಭಾಗದಲ್ಲಿ ಉಂಟಾಗುವ ಉರಿಯಿಂದ ಎದೆ ಕಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಶ್ವಾಸಕೋಶದಲ್ಲಿ ಹೆಚ್ಚಿನ ಪ್ರಮಾಣದ ಸಿಂಬಳ ಅಥವಾ ಲೋಳೆಯಂತಹ ಪೊರೆ ಕಟ್ಟಿಕೊಳ್ಳುವುದರಿಂದ ಉಂಟಾಗುತ್ತದೆ. ವಾತಾವರಣ ಅಥವಾ ಕಾಲದ ಬದಲಾವಣೆ, ಅಲರ್ಜಿ, ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಕಾರಣಗಳಿಂದ ಪ್ರಾಥಮಿಕ ಹಂತದಲ್ಲಿ ಕಂಡುಬರುವ ಕಫದ ಸಮಸ್ಯೆ ಕ್ರಮೇಣ ಎದೆಯ ದೀರ್ಘಾವಧಿ ಕಫದ ಸಮಸ್ಯೆಯಾಗಿ ಬದಲಾಗುತ್ತದೆ. ಈ ರೀತಿ ಎದೆಯಲ್ಲಿ ಕಫ ಕಟ್ಟಿ ಅದರಿಂದ ಸಮಸ್ಯೆ ಎದುರಿಸುತ್ತಾ ಇರುವವರಿಗೆ ಸುಲಭವಾಗಿ ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಒಂದು ಔಷಧೀಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವ ಕಾರಣದಿಂದಾಗಿ ಎದೆಯಲ್ಲಿ ದಟ್ಟನೆ ಉಂಟಾಗಬಹುದು. ಇದರಿಂದ ಎದೆಯ ಭಾಗ ಭಾರವಾಗಿರುವ ಅನುಭವವಾಗಬಹುದು. ಸಣ್ಣ ಮಟ್ಟದ ಎದೆ ನೋವು, ಕಫ, ಉಸಿರಾಟದ ಸಮಸ್ಯೆ, ಕಿರಿಕಿರಿ ಮತ್ತು ಆಯಾಸ ಎದೆ ದಟ್ಟನೆಯ ಅಥವಾ ಎದೆ ದಟ್ಟಣೆಯ ಕೆಲವು ಲಕ್ಷಣಗಳಾಗಿವೆ. ಕಫದ ಸಮಸ್ಯೆ ಬಗ್ಗೆ ರೋಗಿಗಳಲ್ಲಿ ಇರುವ ತಪ್ಪು ಕಲ್ಪನೆ ಅದೊಂದು ಗಂಭೀರವಾದ ಸಮಸ್ಯೆಯಾಗಿ ಬದಲಾಗಲು ಕಾರಣವಾಗಿದೆ. ಕಫದಲ್ಲಿ ಎರಡು ವಿಧಗಳಿವೆ. ಅವೆಂದರೆ ಒಣ ಕಫ ಮತ್ತು ಹಸಿ ಕಫ.
ಒಣ ಕಫದ ಸಮಸ್ಯೆ ಇರುವವರಲ್ಲಿ ಕೆಮ್ಮುವಾಗ ಕಫ ಅಥವಾ ಸಿಂಬಳ ಉತ್ಪತ್ತಿಯಾಗುವುದಿಲ್ಲ. ಆದರೆ ಹಸಿ ಕೆಮ್ಮು ಇದ್ದವರಲ್ಲಿ ಕಫ ಉತ್ಪತ್ತಿ ಆಗುತ್ತದೆ. ಬಿಡುವಿಲ್ಲದ ಕೆಲಸ, ಕಡಿಮೆಯಾದ ನಿದ್ದೆಯ ಪ್ರಮಾಣ, ಒತ್ತಡ, ಸುಸ್ತು ಮುಂತಾದವು ಈ ಸಮಸ್ಯೆಗಳನ್ನು ಉಲ್ಬಣಿಸಬಹುದು. ಅದೇನೆ ಇದ್ದರೂ ಸಮಸ್ಯೆಯ ಲಕ್ಷಣಗಳನ್ನು ನಾವು ಸರಿಯಾಗಿ ಗಮನಿಸದಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸಾಧ್ಯವಿಲ್ಲ.
ಹಾಗಾದರೆ ಕಫ ಕಟ್ಟಿ ಸಮಸ್ಯೆ ಆಗ್ತಾ ಇದ್ರೆ ಅದರಿಂದ ನಾವು ಮನೆಯಲ್ಲೇ ಪರಿಹಾರ ಕಂಡುಕೊಳ್ಳುವುದು ಹೇಗೆ? ಅನ್ನೋದನ್ನ ನೋಡೋಣ. ಸಾಮಾನ್ಯವಾಗಿ ನಮ್ಮ ಮನೆಯ ಸುತ್ತಮುತ್ತಲೂ ಆಡುಸೋಗೆ ಸೊಪ್ಪು ಅಥವಾ ಆಡು ಮುಟ್ಟದ ಸೊಪ್ಪು ಇದಂತೂ ಇದ್ದೆ ಇರುತ್ತದೆ. ಈ ಆಡು ಮುಟ್ಟದ ಸೊಪ್ಪು ಇದನ್ನ ತಂದು ಸ್ವಚ್ಚವಾಗಿ ತೊಳೆದು ನಂತರ ಬಾಳೆ ಎಲೆಯಲ್ಲಿ ಹಾಕಿ ಉಗಿಯಲ್ಲಿ ಬೇಯಿಸಬೇಕು. ನಂತರ ಇದರಿಂದ ಬರುವ ರಸವನ್ನು ತೆಗೆದಿಟ್ಟುಕೊಳ್ಳಬೇಕು. ಆಡು ಮುಟ್ಟದ ಸೊಪ್ಪಿನ ಎರಡು ಚಮಚ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ಸ್ವಲ್ಪ ಹಿಪ್ಪಲಿ ಪುಡಿಯನ್ನು ಸೇರಿಸಿ ಇದನ್ನು ದಿನಕ್ಕೆ ಮೂರು ಬಾರಿ ಅಂದ್ರೆ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೀಗೇ ಮೂರು ಹೊತ್ತು ಆಹಾರಕ್ಕೂ ಮೊದಲು ಸೇವಿಸಬೇಕು ಹೀಗೇ ಮಾಡುವುದರಿಂದ ನಾವು ಕಟ್ಟಿದ ಕಫದ ಸಮಸ್ಯೆಯಿಂದ ಸುಲಭವಾಗಿ ನಿವಾರಣೆ ಹೊಂದಬಹುದು.
ಗಂಟಲಿನಲ್ಲಿ ಕಫ ಹೆಚ್ಚಿದ್ದರೆ ನಿಂಬೆ ಹಣ್ಣಿನ ತುಂಡಿಗೆ ಸ್ವಲ್ಪ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಉದುರಿಸಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ. ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಕಲಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿದರೆ ಕಫ ಬೇಗ ಕರಗುತ್ತದೆ. ಚಕ್ಕೆ ಮತ್ತು ಹಸಿ ಶುಂಠಿಯನ್ನು ನೀರಲ್ಲಿ ಸೇರಿಸಿ ಮಾಡಿದ ಕಷಾಯವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಗಂಟಲ ಕಫ ಶಮನವಾಗುತ್ತದೆ. ಒಂದು ಚಮಚ ಅರಿಶಿನ ಪುಡಿಯನ್ನು ಬಿಸಿನೀರಲ್ಲಿ ಕಲಸಿ ಪದೇ ಪದೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ. ಈ ಎಲ್ಲಾ ಸುಲಭ ವಿಧಾನಗಳನ್ನು ಅನುಸರಿಸುವುದರಿಂದ ಸಹ ಕಫ ನಿವಾರಣೆ ಆಗುತ್ತದೆ.