ರಕ್ತದಲ್ಲಿ ಹಿಮೋಗ್ಲೋಬಿನ್ ಹಾಗೂ ಕೆಂಪುರಕ್ತ ಕಣಗಳ ಪ್ರಮಾಣ ಅಗತ್ಯದಷ್ಟು ಇಲ್ಲವಾದಾಗ ಉಂಟಾಗುವ ಸ್ಥಿತಿಯೇ ರಕ್ತಹೀನತೆ. ದೇಹದಲ್ಲಿ ಕಬ್ಬಿಣದಂಶ ಕೊರತೆಯಾದಾಗ ಹಾಗೂ ಕೆಲವು ಬಾರಿ ನಾವು ಸೇವಿಸುವ ಔಷಧಗಳು ರಕ್ತದ ಮೇಲೆ ಪರಿಣಾಮ ಬೀರಿದಾಗಲೂ ಸಹ ರಕ್ತಹೀನತೆ ಸಮಸ್ಯೆ ಕಂಡುಬರುತ್ತಿರುತ್ತದೆ. ರಕ್ತಹೀನತೆಯನ್ನು ನಿವಾರಿಸಿಕೊಳ್ಳಲು ಮನೆಯಲ್ಲಿಯೇ ದೊರೆಯಬಹುದಾದ ಸರಳ ಚಿಕಿತ್ಸಾ ಪರಿಹಾರಗಳು ಇಲ್ಲಿವೆ.
ಜೇನುತುಪ್ಪ, ಬಾದಾಮಿ, ಬಾಳೆಹಣ್ಣು, ಒಣದ್ರಾಕ್ಷಿ, ಮೆಂತ್ಯ, ಈರುಳ್ಳಿ, ಪಾಲಾಕ್, ದ್ರಾಕ್ಷಿ, ಟೊಮೇಟೊ, ಕ್ಯಾರೆಟ್, ನೆಲ್ಲಿಕಾಯಿ, ಬೀಟ್ರೂಟ್, ಸೇಬು, ದಾಳಿಂಬೆಯಂತಹ ಪದಾರ್ಥಗಳನ್ನು ನಿತ್ಯ ಸೇವಿಸುವುದರಿಂದ ರಕ್ತಹೀನತೆಯನ್ನು ನಿವಾರಿಸಿಕೊಳ್ಳಬಹುದು.ನಿಂಬೆರಸ ಚಿಮುಕಿಸಿದ ಕ್ಯಾರೆಟ್, ಬೀಟ್ರೂಟ್‌ಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಎ ಅನ್ನಾಂಗದ ಜೊತೆಗೆ ಸಿ ಅನ್ನಾಂಗವೂ ದೊರೆತು ದೇಹವು ಸದೃಢವಾಗುತ್ತದೆ.ರಕ್ತಹೀನತೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಹೀಗಾಗಿ, ನೀವು ಸೋಂಕು ಮತ್ತು ಉರಿಯೂತದ ಕಾಯಿಲೆಗಳಿಗೆ ಹೆಚ್ಚು ಸುಲಭವಾಗಿ ತುತ್ತಾಗುತ್ತೀರಿ. ವಿಟಮಿನ್ ಸಿ ಯ ಸಾಕಷ್ಟು ಪ್ರಮಾಣವು ನಿಮ್ಮನ್ನು ಒಳಗಿನಿಂದ ಬಲಪಡಿಸಲು ನೆರವಾಗುತ್ತದೆ ಮತ್ತು ಅದೇ ಸಮಯದಲ್ಲಿ ಇದು ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ಸಹ ಸಹಾಯ ಮಾಡುತ್ತದೆ. ವಿಟಮಿನ್ ಸಿ ಇರುವ ಯಾವುದೇ ಆಹಾರಗಳನ್ನು ನೀವು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಅತ್ಯುತ್ತಮ ವಿಟಮಿನ್ ಸಿ ಮೂಲಗಳೆಂದರೆ ಕಿತ್ತಳೆ ಮತ್ತು ಲಿಂಬೆ.
ಹಸಿರು ತರಕಾರಿಗಳಾದ ಪಾಲಕ್, ಸೆಲರಿ, ಸಾಸಿವೆ ಸೊಪ್ಪು ಮತ್ತು ಬ್ರೋಕೋಲಿ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರೊಫಿಲ್ ಇರುತ್ತದೆ. ಕ್ಲೋರೋಫಿಲ್ ಕಬ್ಬಿಣದ ಉತ್ತಮ ಮೂಲವಾಗಿದೆ. ಅಲ್ಲದೇ ಹಸಿರು ಎಲೆಗಳಲ್ಲಿ ಆಕ್ಸಲಿಕ್ ಆಮ್ಲ ಸಹಾ ಇರುವುದರಿಂದ ಇವು ದೇಹ ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯಬಹುದು. ಹಾಗಾಗಿ ಹಸಿರು ತರಕಾರಿಗಳನ್ನು ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಒಂದು ಬೀಟ್ರೂಟನ್ನ ಸಣ್ಣದಾಗಿ ಹೆಚ್ಚಿ ಅದಕ್ಕೆ ನಾಲ್ಕರಿಂದ ಐದು ಎಲೆ ಪಾಲಕ್ ಎಲೆಯನ್ನು ಹಾಕಿ ಚೆನ್ನಾಗಿ ರುಬ್ಬಿ ಅದಕ್ಕೆ ಮುಕ್ಕಾಲು ಲೋಟ ನೀರನ್ನು ಬೆರೆಸಿ ಜ್ಯೂಸ್ ರೀತಿ ಮಾಡಿ ದಿನನಿತ್ಯ ಸೇವಿಸಿದರೆ ರಕ್ತಹೀನತೆಯನ್ನು ನಿವಾರಿಸಬಹುದು.