ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು, ನೆಗಡಿ ಬರುವುದು ಸರ್ವೆ ಸಾಮಾನ್ಯ. ಕೆಮ್ಮು ನೆಗಡಿಗೆ ಕೆಲವರು ಮಾತ್ರೆಯ ಮೊರೆ ಹೋದರೆ ಕೆಲವರು ಮನೆಯಲ್ಲಿಯೆ ಔಷಧಿ ಮಾಡಿ ಕುಡಿಯುತ್ತಾರೆ. ಹಳೆಯ ಕಾಲದಲ್ಲಿ ಮಾತ್ರೆಗಳ ಬಗ್ಗೆ ತಿಳಿದೆ ಇರಲಿಲ್ಲ. ಮನೆಯ ಸುತ್ತ ಸಿಗುವ ಗಿಡಮೂಲಿಕೆ ಗಿಡಗಳು, ಅಡುಗೆ ಮನೆಯ ಕೆಲವು ಸಾಂಬಾರು ಪದಾರ್ಥಗಳೆ ಔಷಧಗಳು.. ಅಂತಹದ್ದೆ ಒಂದು ಮನೆಯ ಔಷಧದ ಬಗೆಗಿನ ಮಾಹಿತಿ ಇಲ್ಲಿದೆ. ನೆಗಡಿ, ಕೆಮ್ಮು, ಶೀತ, ಗಂಟಲು ನೋವಿಗೆ ಪರಿಹಾರ ಒದಗಿಸುವ ಶುಂಠಿ ಕಷಾಯ.
ಬೇಕಾಗುವ ಸಾಮಗ್ರಿಗಳು: ಒಂದು ಗ್ಲಾಸ್ ಹಾಲು, ಎರಡು ಟೇಬಲ್ ಸ್ಪೂನ್ ಸಕ್ಕರೆ, ಒಂದು ಇಂಚು ಉದ್ದದ ಶುಂಠಿ, ಒಂದು ಟೀ ಸ್ಪೂನ್ ದನಿಯಾ ಕಾಳು, ಹತ್ತು ಮೆಣಸಿನ ಕಾಳು, ಕಾಲು ಟೀ ಸ್ಪೂನ್ ಅರಿಶಿನ.
ಮಾಡುವ ವಿಧಾನ: ಶುಂಠಿ ಕಷಾಯವನ್ನು ತೀರ ಗಟ್ಟಿಯಾಗಿ ಹಾಗೂ ಖಾರವಾಗಿ ಮಾಡಿ ಕುಡಿಯಬಾರದು. ಯಾಕೆಂದರೆ ಕೆಲವೊಬ್ಬರು ಉಷ್ಣ ಪ್ರಕೃತಿ ಇರುವವರಿಗೆ ಖಾರವಾಗಿ ಇಲ್ಲವೇ ಗಟ್ಟಿಯಾಗಿ ಕಷಾಯ ಮಾಡಿಕೊಟ್ಟರೆ ಇನ್ನು ಉಷ್ಣ ಜಾಸ್ತಿಯಾಗುತ್ತದೆ. ಶೀತ ಪ್ರಕೃತಿ ಉಳ್ಳವರು ಮಾತ್ರ ಖಾರವಾಗಿ ಕುಡಿದರೆ ಒಳ್ಳೆಯದು. ಸ್ಟವ್ ಮೇಲೆ ಇಟ್ಟ ಪಾತ್ರೆಯಲ್ಲಿ ಒಂದು ಗ್ಲಾಸ್ ಹಾಲು ಹಾಕಿ, ಹಾಲಿನಷ್ಟೆ ಪ್ರಮಾಣದಲ್ಲಿ ಅಥವಾ ಹೆಚ್ಚು ನೀರನ್ನು ಹಾಕಬೇಕು. ನಂತರ ಸಕ್ಕರೆ ಹಾಕಿ ಒಂದು ಕುದಿ ಬರುವವರೆಗೂ ಕುದಿಸಬೇಕು.. ಒಂದು ಕುದಿ ಬಂದ ನಂತರ ಅದಕ್ಕೆ ಮೆಣಸಿನ ಕಾಳು, ದನಿಯಾ, ಶುಂಠಿಯನ್ನು ಹಾಕಿ ಅರಿಶಿನ ಹಾಕಿ ಸಣ್ಣ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಕುದಿಸಿಕೊಳ್ಳಬೇಕು. ದನಿಯಾ ಕಾಳು ಮತ್ತು ಶುಂಠಿ ತಲೆನೋವು, ನೆಗಡಿ ಕಡಿಮೆ ಮಾಡಿದರೆ, ಕಾಳು ಮೆಣಸು ಗಂಟಲು ಕೆರೆತ, ಗಂಟಲಿನ ನೋವನ್ನು ಹೋಗಲಾಡಿಸುತ್ತದೆ. ಸಕ್ಕರೆಯ ಬದಲು ನಾವು ಬೆಲ್ಲವನ್ನು ಹಾಕಿಕೊಳ್ಳಬಹುದು. ಹಾಲಿಗೆ ಬೆಲ್ಲ ಹಾಕಿದರೆ ಹಾಲು ಒಡೆಯುತ್ತದೆ ಎಂಬ ಮಾತು ಇದೆ. ಒಂದು ವೇಳೆ ಖಾರವಾಗಿ ಬೇಕಾದಲ್ಲಿ ಉಪಯೋಗಿಸಿದ ಸಾಮಾಗ್ರಿಗಳನ್ನು ಜಜ್ಜಿ ಹಾಕಿಕೊಳ್ಳಬೇಕು. ನಂತರ ಶೋಧಿಸಿಕೊಂಡು ಕುಡಿಯಬಹುದು.. ಬಾಣಂತಿ, ಮಕ್ಕಳು, ವಯಸ್ಸಾದವರು ಎಲ್ಲರೂ ಇದನ್ನು ಬಳಸಬಹುದು.