ಚಿನ್ನದ ನಾಡು, ಏಷ್ಯಾ ಎರಡನೇಯ ಅತೀ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಏಕೈಕ ಜಿಲ್ಲೆ ಕೋಲಾರ. ಕುವಲಾಲಪುರ ಅಂತಾ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶ ತದನಂತರ ಕೋಲಾರವಾಗಿದೆ. ಇದಷ್ಟೇ ಅಲ್ಲ, ಅನೇಕ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ ಈ ಜಿಲ್ಲೆ. ಅದರಲ್ಲೊಂದು ಐತಿಹಾಸಿಕ ಸ್ಥಳ, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದಲ್ಲಿರೋ ಗರುಡ ದೇವಸ್ಥಾನ.

ರಾಮಾಯಣ ಮತ್ತು ಮಹಾಭಾರತದ ಹಿನ್ನೆಲೆ ಹೊಂದಿರುವ ಸ್ಥಳ ಇದಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ಸೇವೆ ಸಲ್ಲಿಸಿದರೆ 8 ರೀತಿಯ ಸರ್ಪ ದೋಷಗಳು ನಿವಾರಣೆ ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ವಾಮಾಚಾರ, ಮಾಟಗಳು ಇಲ್ಲಿ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬಿಕೆ ಇಟ್ಟಿದ್ದಾರೆ. ಪ್ರತಿ ಶನಿವಾರ, ಭಾನುವಾರ ದೇವಾಲಯಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಭಾರತ ದೇಶದ ಪ್ರತಿ ಗ್ರಾಮದಲ್ಲಿಯು ವಿಷ್ಣುವಿನ ದೇವಾಲಯ ಇರುವುದು ಸರ್ವೆ ಸಾಮಾನ್ಯ. ಅದೇವಿಷ್ಣುವಿನ ವಾಹನವಾದ ಗರುಡನಿಗೆ ಇರುವ ದೇವಾಲಯಗಳು ಕೆಲವು ಮಾತ್ರ ಎಂದೇ ಹೇಳಬಹುದು. ಅಂತಹ ದೇವಾಲಯಗಳಲ್ಲಿ ಕರ್ನಾಟಕದಲ್ಲಿನ ದೇವಾಲಯವು ಒಂದು. ಈ ದೇವಾಲಯದ ಬಗ್ಗೆ ಅಷ್ಟುಪ್ರಚಾರ ಇಲ್ಲದೆ ಇರುವ ಕಾರಣದಿಂದ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಆದರೆ ಪ್ರಸ್ತುತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದುತ್ತಿರುವುದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ.

ಈ ದೇವಾಲಯದಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವುದು ವಿಷ್ಣುವಿನವಾಹನವಾದ ಗರುಡ. ಇಲ್ಲಿರುವ ಹಾಗೆ ಗರುಡ ಮೂರ್ತಿಯು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಗರುಡನು ಒಂದು ಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಹೊಂದಿದ್ದಾನೆ. ಅಷ್ಟೇ ಅಲ್ಲ ಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ.

ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೂ ದೇವಾಲಯಕ್ಕೆ ಸಂಬಂಧವಿದೆ. ರಾವಣ ಸೀತೆಯನ್ನ ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದುಕೊಂಡು ಹೋಗುವಾಗ, ವಿಷ್ಣುವಿನ ವಾಹನ ಜಠಾಯು ಪಕ್ಷಿ ಸೀತೆಯನ್ನ ಕಾಪಾಡಲು ಮುಂದಾಗುತ್ತೆ. ಆಗ ರಾವಣ ಹಾಗೂ ಜಠಾಯುವಿಗೆ ಯುದ್ಧ ನಡೆಯುತ್ತೆ. ಈ ವೇಳೆ ಜಠಾಯುವಿನ ಎರಡು ರೆಕ್ಕೆಗಳನ್ನ ರಾವಣ ಕತ್ತರಿಸಿ ಹಾಕುತ್ತಾನೆ. ಆಗ ಆ ಎರಡು ರೆಕ್ಕೆಗಳು ಬಿದ್ದ ಜಾಗವೇ ಈ ಗರುಡ ದೇವಸ್ಥಾನ ಎಂಬ ನಂಬಿಕೆಯಿದೆ.

ಇಲ್ಲಿರುವ ಆಂಜನೇಯ ಸ್ವಾಮಿಯನ್ನ ಎಲ್ಲಿಯೂ ಕಂಡಿರಲು ಸಾಧ್ಯವಿಲ್ಲ, ಯಾಕಂದ್ರೆ ಈ ಆಂಜನೇಯ ತನ್ನ ಕೈಯಲ್ಲಿ ಬ್ರಹ್ಮಾಸ್ತ್ರವನ್ನ ಹೊಂದಿದ್ದಾನೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆಯೆ ತಮಿಳುನಾಡಿನ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಷ್ಣು ವರ ಕೊಟ್ಟು ಭೂಲೋಕಕ್ಕೆ ಹೋಗು ಎಂದಾಗ ಗರುಡ ಇಲ್ಲಿ ಬಂದು ನೆಲೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಗರುಡ ದೇವರ ದರ್ಶನ ಮಾಡಿದಾಗ ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಗರುಡ ಪುರಾಣಗಳಲ್ಲಿ ಕಾಣಬಹುದಾಗಿದೆ.

ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮಿಯನ್ನ ಹೊಂದಿರುವ ವಿಶ್ವದ ಏಕೈಕ ಗರುಡ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈ ದೇವಾಲಯ ಪಾತ್ರವಾಗಿದೆ. ಮಹಾಭಾರತದ ವೇಳೆ ಅರ್ಜುನನಿಂದ ಶ್ರೀ ಗರುಡ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಾವಣನಿಂದ ಜಠಾಯು ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದರಿಂದ ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಅನ್ನೋದು ಪ್ರತೀತಿ. ಅಷ್ಟೇ ಅಲ್ಲ, ಹಲವು ಶತಮಾನಗಳ ಹಿಂದೆ ಭೃಘು ಮಹರ್ಷಿಗಳಿಂದ ಈ ಪ್ರದೇಶಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಅಂತಾನೂ ಹೇಳಲಾಗುತ್ತಿದೆ.

ಈ ಗರುಡ ದೇವರನ್ನು ದರ್ಶನ ಮಾಡಿದ್ರೆ 8 ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗಿವೆ. ವಾಮಾಚಾರ, ಮಾಟ – ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ. ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾನೆ ಎಂಬ ಪ್ರತೀತಿ ಇಲ್ಲಿದೆ. ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ. ಹಾಗಾಗಿ ಇಲ್ಲಿಗೆ ನೆರೆಯ ಆಂಧ್ರ ಹಾಗೂ ತಮಿಳುನಾಡಿನ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಮುಳಬಾಗಿಲು ತಾಲೂಕಿನಿಂದ ಈ ಗ್ರಾಮಕ್ಕೆ 15 ಕಿಲೋಮೀಟರ್ ದೂರವಿದ್ದು, ಕೋಲಾರದಿಂದ ಮೂಡಿಯನೂರು ಕ್ರಾಸ್ ಮಾರ್ಗವಾಗಿಯೂ ಹೋಗಬಹುದು. ಬೆಂಗಳೂರಿನಿಂದ ಮುಳಬಾಗಿಲಿಗೆ 100 ಕಿ.ಮೀ ದೂರವಿದ್ದು, ಬೆಂಗಳೂರಿನಿಂದ ಕೋಲಾರಕ್ಕೆ 80 ಕಿ.ಮೀ ದೂರವಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!