ನಮ್ಮ ರಾಜ್ಯ ದೇವಾಲಯಗಳ ಬೀಡು. ಇಲ್ಲಿ ಅನೇಕ ದೇವಾಲಯಗಳನ್ನು ನಾವು ನೋಡುತ್ತೇವೆ. ಒಂದೊಂದು ದೇವಾಲಯವು ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ ಅಲ್ಲದೆ ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂದು ವಿಶೇಷತೆಯನ್ನು ಹೊಂದಿದ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ನಾವು ಹರಕೆಯ ರೂಪದಲ್ಲಿ ಏನಾದರೂ ಕೊಡುತ್ತೇವೆ ಅದರಲ್ಲೂ ನಾವು ಬೇಡುವ ದೇವರಿಗೆ ಪ್ರಿಯವಾದ ವಸ್ತುಗಳನ್ನು ಹರಕೆಯ ರೂಪದಲ್ಲಿ ಒಪ್ಪಿಸಿದರೆ ದೇವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ದೇವರಿಗೆ ಹೂವು, ಹಣ್ಣು, ಕಾಯಿ ಇತ್ಯಾದಿಗಳನ್ನು ಅರ್ಪಿಸುವುದನ್ನು ನಾವು ನೋಡಿದ್ದೇವೆ. ಕೆಲವು ದೇವರಿಗೆ ಹೂವು ಇಷ್ಟವಾದರೆ, ಇನ್ನು ಕೆಲವು ದೇವರಿಗೆ ಹಣ್ಣು ಇಷ್ಟವಾದರೆ, ಹಲವು ದೇವರಿಗೆ ಚಿನ್ನ ಇಷ್ಟವಾದರೆ ಇನ್ನು ಹಲವು ದೇವರಿಗೆ ಬೆಳ್ಳಿ ಇಷ್ಟವಾಗುತ್ತದೆ.
ಬಳ್ಳಾರಿಯಿಂದ 94 ಕಿಮೀ ದೂರದಲ್ಲಿ ಕೊಟ್ಟೂರಿನಿಂದ 26 ಕಿಮೀ ದೂರದಲ್ಲಿರುವ ಬಳ್ಳಾರಿ ಜಿಲ್ಲೆಯ ಗಾಣಗಟ್ಟೆ ಎಂಬಲ್ಲಿ ಮಾಯಮ್ಮ ದೇವಿ ದೇವಸ್ಥಾನವಿದೆ. ಈ ತಾಯಿಗೆ ದುಡ್ಡಿನಿಂದ ಅಲಂಕಾರ ಮಾಡಲಾಗುತ್ತದೆ 10 ರೂಪಾಯಿಯ ನೋಟಿನಿಂದ ಹಿಡಿದು 2,000 ರೂಪಾಯಿ ನೋಟಿನವರೆಗೆ ಹಾರವನ್ನಾಗಿ ಮಾಡಿ ದೇವರಿಗೆ ಹಾಕಲಾಗುತ್ತದೆ. ತಾಯಿಯ ಗರ್ಭಗುಡಿಯಲ್ಲಿ ನೋಟಿನಿಂದಲೆ ಶೃಂಗಾರ ಮಾಡಲಾಗುತ್ತದೆ. ದುಡ್ಡು ಈ ದೇವರಿಗೆ ಪ್ರಿಯವಾಗಿದೆ. ಈ ತಾಯಿಗೆ ಭಕ್ತಿಯಿಂದ ಹಣವನ್ನು ಅರ್ಪಿಸಿದರೆ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿ ಸಂತಾನ ಭಾಗ್ಯ, ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಭಕ್ತರು ಹರಕೆ ಹೇಳುತ್ತಾರೆ. ಮಕ್ಕಳಾಗದೆ ಇದ್ದವರು ಇಲ್ಲಿ ಹರಕೆ ಹೇಳಿಕೊಂಡು ನಂತರ ಮಕ್ಕಳಾದರೆ ಮಗುವಿನ ತೂಕದ ಹಣವನ್ನು ದೇವರಿಗೆ ಅರ್ಪಿಸುತ್ತಾರೆ ಅಂದರೆ ತುಲಾಭಾರ ಮಾಡಿಸಿ ಮಗುವಿನ ತೂಕದ ಹಣವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಈ ತಾಯಿ ಕೊಲ್ಲಾಪುರದ ಲಕ್ಷ್ಮೀ ಸ್ವರೂಪ ಎಂದು ನಂಬಲಾಗಿದೆ.
ಸ್ಥಳ ಪುರಾಣದ ಪ್ರಕಾರ ನೂರಾರು ವರ್ಷಗಳ ಹಿಂದೆ ಕೊಲ್ಲಾಪುರದಿಂದ ಚಿನ್ನವನ್ನು ಕೋಣನ ಮೇಲೆ ಹೇರಿಕೊಂಡು ವ್ಯಾಪಾರಿಗಳು ದಾರಿಯಲ್ಲಿ ಬರುತ್ತಿದ್ದರು, ಒಬ್ಬ ವ್ಯಾಪಾರಿ ಚಿನ್ನದ ಜೊತೆ ತೂಕದ ಕಲ್ಲು ತೆಗೆದುಕೊಂಡು ಬರುತ್ತಿರುತ್ತಾನೆ. ಯಾವುದೊ ಕಾರಣಕ್ಕೆ ಕಲ್ಲನ್ನು ಅಲ್ಲಿಯೆ ಬಿಟ್ಟು ಹೋಗುತ್ತಾನೆ ಮುಂದೆ ಅದೆ ಕಲ್ಲು ಮಾಯಮ್ಮ ದೇವಿಯಾದಳು ಎಂದು ಇಲ್ಲಿನ ಇತಿಹಾಸ ಸಾರುತ್ತದೆ. ನಂತರ ದೇವಿ ಬಾಲಕಿಯೊಬ್ಬಳ ದೇಹದಲ್ಲಿ ಬಂದು ತನಗೆ ದೇವಾಲಯವನ್ನು ನಿರ್ಮಿಸಿ ಎಂದು ಹೇಳುತ್ತಾಳೆ ಅದರಂತೆ ಊರಿನ ಜನರು ಮಾಯಮ್ಮ ದೇವಿ ದೇವಸ್ಥಾನವನ್ನು ನಿರ್ಮಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಮಾಯಮ್ಮನ ದರ್ಶನಕ್ಕೆ ಜನರು ಕಾತುರದಿಂದ ಕಾಯುವುದನ್ನು ಕಾಣಬಹುದು. ಪ್ರತಿ ಮಂಗಳವಾರ, ಶುಕ್ರವಾರ ಅಮಾವಾಸ್ಯೆಯ ದಿನ ದೇವಿಯ ದರ್ಶನಕ್ಕೆ ಬೇರೆ ಬೇರೆ ಊರುಗಳಿಂದ ಆಗಮಿಸುತ್ತಾರೆ. ಪ್ರತಿದಿನ ಸಂಜೆ 6-30ಕ್ಕೆ ದೇವಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರು ಸುತ್ತಿಸಿ ರಾತ್ರಿ 8 ಗಂಟೆಗೆ ಪುನಃ ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯ ಮೊದಲಿನಿಂದ ನಡೆದುಕೊಂಡು ಬಂದಿದೆ.
ಇಲ್ಲಿಗೆ ಬರುವ ಭಕ್ತರು ತಮ್ಮ ಬೇಡಿಕೆಯನ್ನು ಒಂದು ಚೀಟಿಯಲ್ಲಿ ಬರೆದು ದೇವಸ್ಥಾನದ ಮೂಲೆಯಲ್ಲಿ ಮಣ್ಣಿನ ಕೆಳಗೆ ಮುಚ್ಚಿಡುತ್ತಾರೆ ದೇವಿಯನ್ನು ಹೊತ್ತ ಅರ್ಚಕರು ಚೀಟಿ ಇರುವ ಸ್ಥಳವನ್ನು ಪತ್ತೆಹಚ್ಚಿ ತೆಗೆದುಕೊಡುತ್ತಾರೆ ಅದರ ಆಧಾರದ ಮೇಲೆ ಭಕ್ತರು ತಮ್ಮ ಬೇಡಿಕೆಯ ಸಾಧ್ಯ ಅಸಾಧ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಪ್ರತಿ ಅಮಾವಾಸ್ಯೆಯ ದಿನ ಈ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ಇಲ್ಲಿ ತಂಗಲು 15 ಕೊಠಡಿಗಳಿವೆ. ಸದ್ಯದಲ್ಲಿ ದೇವಾಲಯಕ್ಕೆ ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣವಾಗಿದೆ.
ಈ ದೇವಾಲಯಕ್ಕೆ ಹೋಗಲು ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ದೇವಿಗೆ ಚಿನ್ನದ ಬಳೆ, ಸೀರೆ, ಗಾಜಿನ ಬಳೆ ಇಡುವ ಸಂಪ್ರದಾಯವಿದೆ. ಈ ದೇವಾಲಯದಲ್ಲಿ ಒಂದು ರಾತ್ರಿ ಕಳೆದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿದೆ. ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಇಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಬಳ್ಳಾರಿಗೆ ಭೇಟಿ ಕೊಟ್ಟರೆ ಮಾಯಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬನ್ನಿ.