ಒಬ್ಬ ವ್ಯಕ್ತಿಯ ಬದುಕಿನಲ್ಲಿ ದೃಷ್ಟಿ ಬಹಳ ಮುಖ್ಯ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಕಣ್ಣುಗಳ ವಿಚಾರ ಎಂದು ಬಂದರೆ ಕೆಲವರಿಗೆ ಚಿಕ್ಕ ವಯಸ್ಸಿಗೆ ದೃಷ್ಟಿ ದೋಷದ ಸಮಸ್ಯೆ ಶುರುವಾಗುತ್ತದೆ, ಇನ್ನು ಕೆಲವರಿಗೆ ವಯಸ್ಸಾದ ನಂತರ ಶುರುವಾಗುತ್ತದೆ. ಈ ರೀತಿಯ ದೃಷ್ಟಿ ದೋಷ ಸಮಸ್ಯೆ ಇರುವವರಿಗೆ ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು ಆಶಾಕಿರಣ ಯೋಜನೆ ಆಗಿದೆ.
ಮೊನ್ನೆಯಷ್ಟೇ ಹಾವೇರಿಯಲ್ಲಿ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈ ಯೋಜನೆಯ ಮೂಲಕ ಉಚಿತ ಕಣ್ಣಿನ ತಪಾಸಣೆ ನಡೆಸಿ, ಸುಮಾರು 2 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆಯ ಮೂಲಕ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ.
ಮೊದಲ ಹಂತದಲ್ಲಿ ಚಾಮರಾಜನಗರ, ಹಾವೇರಿ, ಕಲಬುರ್ಗಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 56,59,036 ಜನರಿಗೆ ಕಣ್ಣಿನ ಟೆಸ್ಟ್ ಮಾಡಿಸಲಾಗಿದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ. ಇವರುಗಳ ಪೈಕಿ 8,28,884 ಜನರಿಗೆ ಕಣ್ಣಿನ ಸಮಸ್ಯೆ ಇದೆ. ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ, 2,45,588 ಜನರಿಗೆ ದೃಷ್ಟಿ ದೋಷ ಇದೆ ಎಂದು ತಿಳಿದುಬಂದಿದ್ದು, ಅವರಿಗೆಲ್ಲಾ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುತ್ತದೆ. ಇವರಲ್ಲಿ 39,336 ಜನರಿಗೆ ಕಣ್ಣಿನ ಪೊರೆ ಸಮಸ್ಯೆ ಇದ್ದು,ಇಂಥವರಿಗೆ ಉಚಿತವಾಗಿ ಆಪರೇಷನ್ ಮಾಡಿಸಲಾಗುತ್ತದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಎರಡನೇ ಹಂತದಲ್ಲಿ ಮಂಡ್ಯ, ರಾಯಚೂರು, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆಯ ಮೂಲಕ ಉಚಿತ ತಪಾಸಣೆ ಶುರುವಾಗಿದೆ. ಇಲ್ಲಿ 5,277,235 ಜನರಿಗೆ ಟೆಸ್ಟ್ ಮಾಡಿಸಲಾಗಿದೆ, ಇವರುಗಳ ಪೈಕಿ 943,398 ಜನರಿಗೆ ಸಮಸ್ಯೆ ಕಂಡುಬಂದಿದೆ. ಇವರಿಗೆಲ್ಲಾ ಕನ್ನಡಕ ಕೊಡಲಾಗುತ್ತದೆ ಹಾಗೂ ಆಪರೇಷನ್ ಮಾಡಿಸಲಾಗುತ್ತದೆ. ನಂತರ ರಾಮನಗರ, ಕೊಡಗು, ಬೀದರ್, ಗದಗ, ಚಿಕ್ಕಮಗಳೂರು, ಬೀದರ್, ಕೋಲಾರ, ಬಾಗಲಕೋಟೆ ಈ ಎಲ್ಲಾ ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆಯ ಮೂಲಕ ತಪಾಸಣೆ ನಡೆಸಲಾಗುತ್ತದೆ. ಈ ಯೋಜನೆಯ ಮೂಲಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗು ಎಲ್ಲರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬಹುದು.