ಪ್ರತಿಯೊಂದು ಹೆಣ್ಣಿಗೂ ತನ್ನ ತಂದೆ ಮಾದರಿಯಾಗಿರುತ್ತಾನೆ. ಹಾಗೆಯೆ ಅತಿ ಹೆಚ್ಚು ಪ್ರೀತಿ ಎಂದರೆ ಅಪ್ಪನೆ ಆಗಿರುತ್ತಾನೆ. ಪ್ರಪಂಚಕ್ಕೆ ಎಷ್ಟೆ ಕೆಟ್ಟವನಾದರೂ ತನ್ನ ಮಗಳಿಗೆ ಅವನು ಒಳ್ಳೆಯವನೆ. ಎಂದಿಗೂ ತನ್ನ ಮಗಳಿಗೆ ಕೆಟ್ಟದ್ದನ್ನು ಬಯಸಲಾರ. ತನ್ನ ಮಗಳಿಗೆ ಕಷ್ಟ ಬಂದರೆ ಸಹಿಸಲಾರ. ಇವರ ಸಾಲುಗಳಲ್ಲಿ ದುರ್ಯೋಧನನು ಒಬ್ಬ. ಅವನು ಪ್ರಪಂಚದ ಕಣ್ಣಿನಲ್ಲಿ ದುರ್ಯೋಧನ ಕೆಟ್ಟವನು ಆದರೆ ಅವನ ಮಗಳಾದ ಲಕ್ಷ್ಮಣಳಿಗೆ ಅವನಷ್ಟು ಒಳ್ಳೆಯವನು ಯಾರು ಇಲ್ಲ. ದುರ್ಯೋಧನನು ಅಷ್ಟೇ ಮಗಳು ಲಕ್ಷ್ಮಣ ಹಾಗೂ ಮಡದಿ ಭಾನುಮತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಹೀಗಿದ್ದು ಲಕ್ಷ್ಮಣಳು ಕೃಷ್ಣನ ಮಗನನ್ನು ಮದುವೆಯಾದಳು. ದುರ್ಯೋಧನನು ತನ್ನ ಪರಮ ಮಿತ್ರನಾದ ಕರ್ಣನ ಬಂಧುತ್ವ ಬೆಳೆಸುವ ಆಸೆಯಿಂದ ಇರುವ ತಂದೆಯ ಆಸೆ ನಿರಾಸೆಯಾಗುವಂತೆ ಲಕ್ಷ್ಮಣಳು ಮಾಡಲು ಕಾರಣವೇನು? ಹೆಣ್ಣಿನ ಸ್ವಾತಂತ್ರ್ಯದ ಪರವಾಗಿ ಇದ್ದ ಕೃಷ್ಣ ತನ್ನ ಮಗ ಲಕ್ಷ್ಮಣಳನ್ನು ಅಪಹರಿಸುವಾಗ ಯಾಕೆ ತಡೆಯಲಿಲ್ಲ? ಇವೆಲ್ಲ ಪ್ರಶ್ನೆಗಳ ಮೇಲೆ ಒಂದು ಉಪಕಥೆ ಇದೆ. ಆ ಉಪಕಥೆಯ ಬಗ್ಗೆ ಇಲ್ಲಿ ನೀಡಿರುವ ಮಾಹಿತಿಯ ಮೂಲಕ ತಿಳಿಯೋಣ.
ಕುರುಕ್ಷೇತ್ರದ ಸಮಯದಲ್ಲಿಯೆ ಇರಲಿ ಅಥವಾ ರಾಜ ಸಭೆಗಳಲ್ಲಿ ದುರ್ಯೋಧನನ ಬಗ್ಗೆ ಕೆಟ್ಟ ವಿಚಾರಗಳನ್ನು ಕೇಳುತ್ತಿದ್ದರು ಮಗಳು ಲಕ್ಷ್ಮಣಳಿಗೆ ತಂದೆಯೆಡೆಗೆ ಅತೀವ ಪ್ರೀತಿ ಇತ್ತು. ಎಷ್ಟು ಕೆಟ್ಟವನಾದರೂ ತನ್ನ ಮಗಳನ್ನು ಪಂಜರದ ಗಿಳಿಯಾಗಿಸದೆ ಎಲ್ಲಾ ತರಹದ ವಿದ್ಯೆಯನ್ನು ಕಲಿಸಿದ್ದ. ರಥ ವಿದ್ಯೆಯಲ್ಲಿ ಪರಿಣಿತಳಾಗಿದ್ದಳು. ಲಕ್ಷ್ಮಣಳು ಮದುವೆಯ ವಯಸ್ಸಿಗೆ ಬಂದಾಗ ಎಲ್ಲಾ ರಾಜ್ಯದ ರಾಜ ಕುಮಾರರಿಗೂ ಆಮಂತ್ರಣ ಕಳಿಸಿದ್ದ. ನೂರಾರು ರಾಜಕುಮಾರರು ಆಗಮಿಸಿದ್ದರು ಬಲಿಷ್ಠ ಸಾಮ್ರಾಜ್ಯವಾದ ಕುರು ಕುಲದ ಅಳಿಯನಾಗಲು. ಆದರೆ ಲಕ್ಷ್ಮಣಳಿಗೆ ಋಷಸೇನ ಎಂಬ ರಾಜ ಕುಮಾರ ಇಷ್ಟವಾಗಿದ್ದ. ಸ್ವಯಂವರದಲ್ಲಿಯೂ ಅವನನ್ನು ವರಿಸಯಮುವ ಆಸೆ ಪಟ್ಟಿದ್ದಳು. ಇವನು ಕರ್ಣ ಹಾಗೂ ವೃಷಾಲಿ ದಂಪತಿಯ ಪುತ್ರನಾಗಿದ್ದ. ಬಾಲಲಯದ ಸ್ನೇಹ ಪ್ರೀತಿಯಾಗಿತ್ತು. ಆದರೆ ಋಷಸೇನ ಹಾಗೂ ಲಕ್ಷ್ಮಣ ತಮ್ಮ ಒಳಗೂ ಈ ವಿಷಯದ ವಿನಿಮಯ ಮಾಡಿಕೊಂಡಿರಲಿಲ್ಲ.
ಸ್ವಯಂವರ ಮಾಡಲು ಅನುವಾದಾಗ ಕರ್ಣ ಹಾಗೂ ದುರ್ಯೋಧನ ಸಂಬಂಧಿಕರಾಗುವ ಸಂತಸದಲ್ಲಿದ್ದರು. ಸ್ವಯಂವರದ ದಿನ ಋಷಸೇನನ ವರಿಸುವಷ್ಟರಲ್ಲಿ ಸಾಂಬ ಬಂದವನೆ ಅವಳನ್ನು ಅಪಹರಿಸುತ್ತಾನೆ. ಸಾಂಬ ಕೃಷ್ಣ ಹಾಗೂ ಜಾಂಬವತಿಯ ಮಗ. ಲಕ್ಷ್ಮಣಳ ಸೌಂದರ್ಯಕ್ಕೆ ಮನಸೋತ ಸಾಂಬ ಸ್ನೇಹಿತರ ಸಹಾಯದಿಂದ ಅವಳ ಅಪಹರಣಕ್ಕೆ ಮುಂದಾಗಿದ್ದ. ಆಗಿನ ಕಾಲದಲ್ಲಿ ಒತ್ತಾಯದ ಮದುವೆಗೆ ಕಡಿಮೆ ಇರಲಿಲ್ಲ, ಅಂಬಾ ಅಂಬಾಲಿಕೆಯರ ಮದುವೆ, ಗಾಂಧಾರಿಯ ಮದುವೆ ಇದಕ್ಕೆ ಉದಾಹರಣೆ. ದುರ್ಯೋಧನನ ಮಡದಿ ಭಾನುಮತಿ ಕೂಡ ದುರ್ಯೋಧನ ಅಪಹರಿಸಿ ಮದುವೆಯಾಗಿರುವುದೆ. ತಾನೆ ಅಪಹರಿಸಿ ಮದುವೆ ಆದವನಾದರೂ ತನ್ನ ಮಗಳ ಅಪಹರಣ ದಿಗ್ಬ್ರಾಂತಿಗೊಳಿಸಿತ್ತು. ಅವರು ಸಾಂಬನನ್ನು ತಡೆಯುವ ವೇಳೆಗಾಗಲೆ ಸಾಂಬ ದ್ವಾರಕೆ ತಲುಪಿ, ಜಾಂಬವತಿ ಲಕ್ಷ್ಮಣಳನ್ನು ಮನೆ ತುಂಬಿಸಿಕೊಂಡು ಆಗಿತ್ತು. ದುರ್ಯೋಧನ ಸೈನ್ಯದೊಂದಿಗೆ ದ್ವಾರಕೆಯ ಮೇಲೆ ಯುದ್ಧ ಸಾರಿದ್ದ. ಆದರೆ ಯುದ್ಧ ಮುಗಿಯುವುದರೊಳಗೆ ಒಂದು ರಾತ್ರಿ ಸರಿದು ಹೋಗಿತ್ತು. ಒಂದು ರಾತ್ರಿ ಬೇರೆಯವರ ಮನೆಯಲ್ಲಿ ಕಳೆದ ಲಕ್ಷ್ಮಣಳನ್ನು ಕರೆತರಲು ದುರ್ಯೋಧನ ಎಷ್ಟು ಬೇಡಿಕೊಂಡರು ಭೀಷ್ಮರು ಒಪ್ಪಿಕೊಳ್ಳಲಿಲ್ಲ. ಕಾರಣ ಅಂದಿನ ಕಟ್ಟುಪಾಡುಗಳು ಅಡ್ಡ ಬಂದಿದ್ದವು.
ಅನಿವಾರ್ಯವಾಗಿ ಸಾಂಬನಿಗೆ ಮದುವೆ ಮಾಡೊಕೊಟ್ಟ ದುರ್ಯೋಧನ. ಸಾಂಬನು ಕೆಟ್ಟವನಾಗಿರಲಿಲ್ಲ, ಸುರದ್ರುಪಿಯಾಗಿದ್ದ. ಲಕ್ಷ್ಮಣಳು ಅವನನ್ನು ಸ್ವೀಕರಿಸಿದಳು. ಈ ಕಾರಣದಿಂದಲೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ದುರ್ಯೋಧನನ ಮನವಿ ಅಲ್ಲಗಳೆಯಲು ಸಾಧ್ಯವಾಗಲಿಲ್ಲ. ದುರ್ಯೋಧನ ಅಕ್ಷೋಹಿಣಿ ಸೈನ್ಯ ಆರಿಸಿದ್ದ, ಅರ್ಜುನ ಕೃಷ್ಣನನ್ನು ಆರಿಸಿದ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನನ ಅವಸಾನವಾಗಿ, ಕುರು ವಂಶ ನಾಶವಾಗಿದ್ದು ನೋಡಿ ಗಾಂಧಾರಿ ಕೃಷ್ಣನ ಮೇಲೆ ಕೋಪಗೊಂಡು ” ಇದನ್ನೆ ಬಯಸಿದ್ದೆಯಾ ಕೃಷ್ಣ, ತನ್ನ ಭಕ್ತಿಯ ಹೊರತಾಗಿ ನನ್ನ ಮಕ್ಕಳ ವಿನಾಶಕ್ಕೆ ಕಾರಣ ಆದೆಯ, ದೈವ ಶಕ್ತಿಯಿಂದ ಯುದ್ಧ ತಡೆಯಲು ಸಾಧ್ಯವಿತ್ತು, ಮನ ಪರಿವರ್ತನೆ ಮಾಡಬಹುದಿತ್ತು” ಎಂದವಳೆ ಶಾಪ ನೀಡಿದ್ದಳು. ಕುರು ವಂಶದ ನಾಶವಾದಂತೆಯೆ ಯಾದವ ವಂಶ ನಾಶವಾಗಲಿ ಎಂದಳು. ಯಾದವ ಕುಲ ಮೂವತ್ತಾರು ವರ್ಷಗಳ ನಂತರ ಅಂತಃಕಲಹದಲ್ಲಿ ಕೃಷ್ಣ ಬಲರಾಮರ ಹೊರತಾಗಿ ಎಲ್ಲರೂ ನಾಶವಾಗಿದ್ದರು. ಇದಕ್ಕೆಲ್ಲ ಕಾರಣ ಸಾಂಬ ಲಕ್ಷ್ಮಣಳ ಮದುವೆಯಾಗಿತ್ತು. ಋಷಿ ಮುನಿಗಳ ತೊಂದರೆಗೆ ಕಾರಣ ಸಾಂಬ. ಜಾಂಬವತಿ ಹಾಗೂ ಕೃಷ್ಣ ಪರಶಿವನ ಕುರಿತು ತಪಸ್ಸಾಚರಿಸಿ ಪಡೆದ ಮಗ ಈ ಸಾಂಬ. ಸಾಂಬ ಯದು ಕುಲದ ವಿನಾಶ ಮಾಡುತ್ತಾನೆ ಎಂಬ ಅರಿವು ಕೃಷ್ಣನಿಗಿತ್ತು.
ಇವೆಲ್ಲವೂ ಮಹಾಭಾರತದ ಉಪಕಥೆಗಳಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಎಲ್ಲಾ ಗೊತ್ತಿದ್ದರೂ ವಿಧಿಯ ವಿರುದ್ಧ ನಡೆಯಲಾಗದೆ ಕೃಷ್ಣ ಸುಮ್ಮನಿದ್ದ. ಇಂತಹ ಹಲವಾರು ಉಪಕಥೆಗಳು ಮಹಾಭಾರತದಲ್ಲಿ ಇವೆ. ಇಂತಹ ಕಥೆಗಳ ಜೊತೆಗೆ ನೀತಿಯು ಇರುತ್ತದೆ. ಆತುರದ ನಿರ್ಧಾರ ಹಾಗೂ ಬಲ್ಲವರ ಮಾತು ಕೇಳದೆ ಹೋದಲ್ಲಿ ವಿನಾಶ ಖಂಡಿತ ಎಂಬುದು ಒಂದು ನೀತಿಯಾಗಿದೆ.