ಕೃಷಿ ಅಂದರೆ ಸ್ವಚ್ಛಂದ ಹಸಿರಿನ ತೋಟ, ತೋಟದ ಮಧ್ಯದಲ್ಲಿ ಸ್ವಚ್ಛಂದವಾಗಿ ಹರಿಯುವ ನೀರು ನೋಡಲು ಎರಡು ಕಣ್ಣು ಸಾಲುವುದಿಲ್ಲ, ಇಷ್ಟು ಚಂದವಾಗಿರುವ ತೋಟದ ಹಿಂದೆ ರೈತನ ಶ್ರಮ, ಬೆವರು ಇರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೂ ಇಂದಿನ ಯುವಕರು ಕೃಷಿ ಮಾಡುವುದು ಕಷ್ಟ ಎನ್ನುತ್ತಾರೆ ಆದರೆ ಹಳೆಯ, ಪರಿಸರ ಸ್ನೇಹಿ ಮಾದರಿಯಲ್ಲಿ ಸುರಂಗ ಕೊರೆದು ನೀರನ್ನು ಹರಿಸಿದ ಮಹಾಲಿಂಗ ನಾಯ್ಕ್ ಅವರ ಬಗ್ಗೆ ಹಾಗೂ ಅವರು ಮಾಡಿದ ಕೃಷಿ ಕೆಲಸದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕೃಷಿ ಮಾಡುವುದೇನು ಅಂದುಕೊಂಡಷ್ಟು ಸುಲಭವಲ್ಲ. ಜಮೀನಿನ ಜೊತೆ ನೀರು ಕೂಡ ಅವಶ್ಯಕವಾಗಿ ಬೇಕಾಗಿರುತ್ತದೆ. ಕೃಷಿ ಕೆಲಸ ಹೆಚ್ಚಾದಂತೆ ಕೆರೆ, ಬಾವಿ ನೀರು ಸಾಕಾಗದೆ ರೈತರು ಕೊಳವೆಬಾವಿಯ ಮೊರೆಹೋಗುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಹಾಲಿಂಗ ನಾಯ್ಕ್ ಎಂಬ 70 ವರ್ಷದ ರೈತ ಇಂದಿಗೂ ಕೃಷಿ ಕೆಲಸದಲ್ಲಿ ಆಕ್ಟೀವ್ ಆಗಿ ತೊಡಗಿಕೊಂಡಿದ್ದಾರೆ. ನೀರಿಗಾಗಿ ಅವರು ಮಾಡಿರುವ ಸಾಹಸ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ಕೃಷಿ ಕೂಲಿ ಕಾರ್ಮಿಕರಾದ ಮಹಾಲಿಂಗ ನಾಯ್ಕ್ ಅಡಿಕೆ, ತೆಂಗಿನ ಮರವನ್ನು ಸಲೀಸಾಗಿ ಹತ್ತುತ್ತಾರೆ. 40 ವರ್ಷಗಳ ಹಿಂದೆ ಸ್ವಂತ ತೋಟವನ್ನು ನಿರ್ಮಿಸುವ ಕನಸನ್ನು ಹೊಂದಿದ್ದರು ಆದರೆ ಅವರ ಬಳಿ ಜಮೀನಿರಲಿಲ್ಲ, ಬೇರೆಯವರ ತೋಟಕ್ಕೆ ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ಕೂಲಿಯಿಂದ ಬಂದ ಹಣದಲ್ಲಿ ಸಂಸಾರ ರಥವನ್ನು ಸಾಗಿಸುತ್ತಿದ್ದರು.

ನಂತರ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ತೋಟದ ಮಾಲೀಕರು ಮಹಾಬಲ ಭಟ್ಟರು ತಮ್ಮ ಎರಡು ಎಕರೆ ಗುಡ್ಡವನ್ನು ಮಹಾಲಿಂಗ ನಾಯ್ಕ್ ಅವರಿಗೆ ಕೊಟ್ಟರು. ಮನೆ ಕಟ್ಟಲು ಅಸಾಧ್ಯವಾದ ನೀರಿಲ್ಲದ ಇಳಿಜಾರಿನ ಬೋಳು ಗುಡ್ಡದಲ್ಲಿ ಕೃಷಿ ತೋಟ ನಿರ್ಮಿಸುವುದು ಮಹಾಲಿಂಗ ನಾಯ್ಕ್ ಅವರಿಗೆ ಸವಾಲಾಗಿತ್ತು. ಆದರೆ ಮಹಾಲಿಂಗ ನಾಯ್ಕ್ ಅವರು ಎದೆಗುಂದದೆ ನೀರಿಗಾಗಿ ಪ್ರಯತ್ನವನ್ನು ಪ್ರಾರಂಭಿಸಿದರು. ಆ ಜಾಗದಲ್ಲಿ ಬಾವಿ ತೋಡಿದರೆ ನೀರು ಬರುವ ಸಾಧ್ಯತೆ ಇರಲಿಲ್ಲ ಹಾಗೂ ಏಕಾಂಗಿಯಾಗಿ ಬಾವಿ ತೋಡುವುದು ಕಷ್ಟವಾಗಿತ್ತು. ಆಗ ಅವರಿಗೆ ಹೊಳೆದದ್ದು ಸುರಂಗ ನಿರ್ಮಾಣ ಮಾಡುವುದು, ಮೊದಲಿನ ಕಾಲದಲ್ಲಿ ಜಮೀನಿಗೆ ಪಂಪ್ಸೆಟ್ ವ್ಯವಸ್ಥೆ ಇಲ್ಲದೆ ಇರುವುದರಿಂದ, ಸುರಂಗ ನಿರ್ಮಾಣದಲ್ಲಿ ನಂಬಿಕೆ ಇಟ್ಟಿದ್ದರು, ಅದನ್ನೆ ಮಹಾಲಿಂಗ ನಾಯ್ಕ್ ನಂಬಿ ಏಕಾಂಗಿಯಾಗಿ 7 ಸುರಂಗಗಳನ್ನು ನಿರ್ಮಿಸಿದ್ದಾರೆ. ಅರ್ಧ ಹೊತ್ತು ಕೂಲಿ ಕೆಲಸ ಮಾಡಿದ ನಂತರ ಉಳಿದ ಸಮಯ ಹಾಗೂ ರಾತ್ರಿ ಹೊತ್ತು ಸುರಂಗವನ್ನು ನಿರ್ಮಿಸಲು ಪ್ರಾರಂಭಿಸಿದರು. ಮಹಾಲಿಂಗ ನಾಯ್ಕ್ ಅವರು ವರ್ಷಕ್ಕೆ ಒಂದು ಸುರಂಗದಂತೆ 25-30 ಮೀಟರ್ ಉದ್ದದ ಸುರಂಗಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ಅವರ ಪ್ರಯತ್ನಕ್ಕೆ ನೀರು ಬರಲಿಲ್ಲ. ಅವರ ಅಪಾಯಕಾರಿ ಪ್ರಯತ್ನವನ್ನು ನೋಡಿ ಬಹಳಷ್ಟು ಜನರು ಗೇಲಿ ಮಾಡಿದ್ದರು ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮಹಾಲಿಂಗ ನಾಯ್ಕ್ ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿದರು

75 ಮೀಟರ್ ಉದ್ದದ 6ನೆ ಸುರಂಗವನ್ನು ನಿರ್ಮಿಸಿದಾಗ ನೀರು ಯಥೇಚ್ಛವಾಗಿ ಹರಿದುಬಂದಿತು ಅಲ್ಲದೆ ಅವರು ಗುರುತ್ವಾಕರ್ಷಣ ಬಲದ ನೆರವಿನಿಂದ ತುಂತುರು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ. ಸುರಂಗದ ಮೂಲಕ ಬಂದ ನೀರನ್ನು ಸಂಗ್ರಹಿಸಲು ಅವರೆ ಮಣ್ಣಿನ ಟ್ಯಾಂಕ್ ಅನ್ನು ನಿರ್ಮಿಸಿದ್ದಾರೆ. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ತೆಂಗು, ಬಾಳೆ, ಅಡಕೆ ತೋಟವನ್ನು ನಿರ್ಮಿಸಿದರು. ತಾವು ಬೆಳೆದ ಬೆಳೆಗಳಿಗೆ ಮಣ್ಣಿನ ಟ್ಯಾಂಕ್ ಮೂಲಕ ವಿದ್ಯುತ್ ಸಹಾಯವಿಲ್ಲದೆ ನೀರುಣಿಸುತ್ತಾರೆ. ಅವರ ತೋಟದಲ್ಲಿ ಪ್ರಸ್ತುತವಾಗಿ 300 ಅಡಿಕೆ, 20 ತೆಂಗು, 200 ಬಾಳೆಗಿಡಗಳೊಂದಿಗೆ ಹಲಸು, ಗೇರು, ಕೋಕೊ ಬೆಳೆಗಳಿವೆ. ಹಟ್ಟಿ ಗೊಬ್ಬರ ಹಾಗೂ ಕಂಪೋಸ್ಟ್ ಗೊಬ್ಬರದ ಹೊರತು ಇವರು ಬೇರೆ ಯಾವುದೆ ರೀತಿಯ ಗೊಬ್ಬರವನ್ನು ಬಳಸುವುದಿಲ್ಲ. ಇವರ ಜಮೀನಿನಲ್ಲಿ ಇಂಗುಗುಂಡಿಗಳ ಮೂಲಕ ಜಲಕೊಯ್ಲನ್ನು ಮಾಡುತ್ತಾರೆ. ಮಹಾಲಿಂಗ ನಾಯ್ಕ್ ಅವರ ತೋಟದಲ್ಲಿ ನೀರಿನ ವ್ಯವಸ್ಥೆ ಮಾಡಿರುವುದನ್ನು ನೋಡುವ ಸ್ಥಳೀಯರು ನೀರಿನ ವ್ಯವಸ್ಥೆ ನೋಡಿದರೆ ಮೈ ಜುಮ್ಮೆನ್ನುತ್ತದೆ ಇನ್ನು ಸುರಂಗವನ್ನು ನಿರ್ಮಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಬೋಳು ಗುಡ್ಡದಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸನ್ನು ಬೆಳೆಸಿರುವುದು ನಿಜಕ್ಕೂ ಅಚ್ಚರಿಯ ವಿಷಯ. ಮಹಾಲಿಂಗ್ ನಾಯ್ಕ್ ಅವರು ಸಾಲ ಮಾಡದೆ ತಮ್ಮ ಸ್ವಂತ ಆದಾಯದಿಂದಲೆ ಮನೆ ಕಟ್ಟಿದ್ದಾರೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಮಹಾಲಿಂಗ ನಾಯ್ಕ್ ಅವರೊಂದಿಗೆ ಅವರ ಪತ್ನಿ ಹಾಗೂ ಮಕ್ಕಳು ಕೈಜೋಡಿಸಿದ್ದಾರೆ. ಮಹಾಲಿಂಗ ನಾಯ್ಕ್ ಅವರ ಕೃಷಿಯ ಮೇಲಿನ ಆಸಕ್ತಿ ಹಾಗೂ ಅವರ ಸಾಧನೆಗೆ ನಾವೆಲ್ಲರೂ ತಲೆಬಾಗಲೇಬೇಕು. ಅವರಿಗೆ ಲಯನ್ಸ್ ಸಾಧಕ ಪುರಸ್ಕಾರ, ಇನ್ನಿತರ ಕೃಷಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ಸಾಧಕನ ಜೀವನ ನಮಗೆ ಮಾದರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!