ಕೋಟೆಯ ನಾಡು ಎಂಬ ಕೀರ್ತಿ ಹೊತ್ತ ಗಂಡು ಭೂಮಿ ಚಿತ್ರದುರ್ಗ. ಏಳು ಸುತ್ತಿನ ಕೋಟೆಯ ಸುಂದರ, ಅಪರೂಪದ ಹಿಮವತ್ ಕೇದಾರ ಫಾಲ್ಸ್, ಇವೆಲ್ಲದರ ಜೊತೆಗೆ ಮುರುಘಾ ಮಠವು ಚಿತ್ರದುರ್ಗದ ಹೆಸರನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಈ ಮುರುಘಾ ಮಠದ ವಿಶೇಷತೆ ಎಂದರೆ ಕಲಾಕೃತಿಗಳು. ಯಾವ ಯಾವ ರೀತಿಯ ಕಲಾಕೃತಿಗಳನ್ನು ಹೊಂದಿದೆ ಮುರುಘಾ ಮಠ ನಾವು ನೋಡೊಣ.
ಕುಸ್ತಿ ಅಖಾಡದ ಸುಂದರ ಕಲಾಕೃತಿಗಳು ಮುರುಘಾ ಮಠದಲ್ಲಿ ಕೆತ್ತಲಾಗಿದೆ. ನೋಡಿದರೆ ನಿಜವಾಗಿಯು ಇಬ್ಬರೂ ಕುಸ್ತಿ ಆಡುತ್ತಿದ್ದರೆ, ಸ್ಥಳೀಯರು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಾ ಕುಸ್ತಿ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾಯುತ್ತಾ ನಿಂತತೆ ಕಾಣಿಸುತ್ತದೆ. ಶಿಲ್ಪಗಳ ಕೆತ್ತನೆಯಲ್ಲಿ ನಿರತವಾಗಿರುವ ಶಿಲ್ಪಿ, ಕೊಡಗಿನ ವೇಷ ತೊಟ್ಟ ಜೋಡಿ ಒಂದು ಕೈಯಲ್ಲಿ ಕಲಶ ಹಿಡಿದು ನಡೆಯುತ್ತಿರುವಂತೆ, ಒಂದು ಹುಡುಗಿ ಮತ್ತೆ ಹೆಂಗಸು ಮಾತನಾಡುತ್ತಿರುವಂತೆ, ಒಬ್ಬ ಬಡಕಲು ಅಜ್ಜ ಜಗುಲಿಯಲ್ಲಿ ಮಲಗಿದಂತೆ, ಕತ್ತಿ ಹಿಡಿದು ಕೆಲಸಕ್ಕೆ ಹೊರಟಂತೆ, ಒಂದು ತಾಯಿ ಮಗುವನ್ನು ಕಾಲ ಮೇಲೆ ಮಲಗಿಸಿ ಕೊಂಡಿರುವಂತೆ, ಹಾಲು ಕುಡಿಸುತ್ತಿರುವಂತೆ, ಒಂದು ಮಗುವನ್ನು ಸೊಂಟದಲ್ಲಿ ಒಂದು ಮಗು ಹೊತ್ತು ಇನ್ನೊಂದು ಕೈಯಲ್ಲಿ ಮಗಳ ತಲೆ ನೆವರಿಸುತ್ತಿರುವಂತೆ, ರಾಗಿ ಬೀಸುತ್ತಿರುವ ತಾಯಿಯ ಬಳಿ ಮಗು ಅಂಬೆಗಾಲಿಟ್ಟು ಬರುತ್ತಿರುವಂತೆ, ಕೆಲಸ ಮಾಡುವ ಅಮ್ಮ ಆಸರೆ ಪಡೆದು ನಿಂತ ಕಂದನ ಕಲಾಕೃತಿಗಳನ್ನು ಅತ್ಯಂತ ಸುಂದರವಾಗಿ ರೂಪಿಸಲಾಗಿದೆ.
ನೆಗಿಲು ಹಿಡಿದು ಉಳುತ್ತಿರುವಂತೆ ಹಾಗೂ ಹಿಂದಿನಿಂದ ಬೀಜ ಹಾಕುತ್ತಾ ಎರಡು ಹೆಂಗಸರು ಬರುತ್ತಿರುವಂತೆ, ಎತ್ತುಗಳನ್ನು ಕಟ್ಟಿ ಹೂಳಲು ಹೋಗುತ್ತಿರುವ ರೈತರು, ತರಕಾರಿಗಳನ್ನು ಕೊಳ್ಳಲು ಸಂತೆಗೆ ಬಂದ ಜನರು ಹಾಗೂ ಮಾರುತ್ತಿರುವ ವ್ಯಾಪಾರಿಗಳು, ಧಾನ್ಯ ಕೊಳ್ಳುತ್ತಿರುವವರು, ಬಾವಿ ಕಟ್ಟೆಯಲ್ಲಿ ನೀರು ಸೇದುತ್ತಿರುವ ಹೆಂಗಸರು, ಬೆಳ್ಳಕ್ಕಿಗಳು, ಕುರ್ಚಿಯಲ್ಲಿ ಕುಳಿತು ದಾರಿ ನೋಡುತ್ತಿರುವ ಹಿರಿಯರು, ನೀರಿನ ಕೊಡ ಹೊತ್ತ ಗೆಜ್ಜೆ ಕಟ್ಟಿದ ಹುಡುಗಿ, ಶಾಲೆಯಲ್ಲಿನ ಮಕ್ಕಳು, ಪಾಠ ಮಾಡುತ್ತಿರುವ ಶಿಕ್ಷಕರು, ಬಾಳೆ ಹಣ್ಣು ತಿನ್ನುತ್ತಿರುವ ಹುಡುಗ, ಅಪ್ಪನ ಹೆಗಲ ಮೇಲೆ ಕುಳಿತ ಹುಡುಗ, ವಿವಿಧ ಆಟಗಳನ್ನು ಆಡುತ್ತಿರುವ ಹುಡುಗಿಯರು, ಶೇವ್ ಮಾಡುತ್ತಿರುವ ಕಲಾಕೃತಿಗಳು, ನೈವೇದ್ಯ ಹಿಡಿದು ಹೊರಟ ಗೃಹಿಣಿ, ಮೀನು ಬುಟ್ಟಿ ಹೊತ್ತ ಹೆಂಗಸು, ಪುಟ್ಟ ಕರುವಿನೊಂದಿಗೆ ನಿಂತ ಗೋವು, ಪಾತ್ರೆ ತೋಳೆಯುವ ಕೆಲಸವನ್ನು ಆಸ್ಥೆಯಿಂದ ನೋಡುತ್ತಿರುವ ನಾಯಿ, ಗಾಡಿಗೆ ಕಟ್ಟಿ ಇಟ್ಟ ಎತ್ತು, ಪಟ್ಟು ಹಾಕಿ ಹಿಡಿದಿರುವ ಕುಸ್ತಿ ಪಟುಗಳು, ಮುದ್ದು ಮುದ್ದಾಗಿ ಮಲಗಿದ ಪುಟ್ಟ ಮಗು ಇಂತಹ ಹಲವಾರು ಅದ್ಭುತ ಕಲಾಕೃತಿಗಳು ಕಣ್ಣಿಗೆ ತಂಪೆರೆಯುತ್ತವೆ.
ಮುರುಘಾ ಮಠದ ಈ ಕಲಾಕೃತಿಗಳು ನಿಜವಾಗಿ ಇರುವಂತೆ ಅನಿಸುತ್ತದೆ. ಕಲಾಕೃತಿಗಳಲ್ಲಿ ಜೀವಂತಿಕೆ ಇದೆ ಇಲ್ಲಿ. ಯಾವ ಕಲಾಕೃತಿಗಳು ಒಂದು ಬೊಂಬೆಯಂತೆ ಅನಿಸುವುದಿಲ್ಲ ಯಾವುದೋ ಮನುಷ್ಯನೆ ನಿಂತಿರುವ ಭಾವ ಉಂಟಾಗುತ್ತದೆ. ಅಷ್ಟು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ.