ಚಿಕ್ಕಬಳ್ಳಾಪುರ ಇದು ಜಿಲ್ಲೆಗಳಲ್ಲಿ ಒಂದು. ಬರಪೀಡಿತ ಜಿಲ್ಲೆ ಎಂದು ಚಿಕ್ಕಬಳ್ಳಾಪುರವನ್ನು ಕರೆಯುತ್ತಾರೆ. ಇಲ್ಲಿ ನೀರಿನ ಮೂಲಗಳು ಬಹಳ ಕಡಿಮೆ. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ರೈತ ಇಲ್ಲಿ ಸಾಧನೆ ಮಾಡಿದ್ದಾರೆ. ಹಿಪ್ಪುನೇರಳೆ ಸೊಪ್ಪನ್ನು ಇಲ್ಲಿ ಬೆಳೆದಿದ್ದಾರೆ. ಆದ್ದರಿಂದ ನಾವು ಇಲ್ಲಿ ಇವನ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚಿಕ್ಕಬಳ್ಳಾಪುರದಲ್ಲಿ ಕುಪ್ಪಳ್ಳಿ ಎಂಬ ಒಂದು ಹಳ್ಳಿ ಇದೆ. ಅಲ್ಲಿ ಮುನಿಯಪ್ಪ ಎಂಬ ರೈತ ಇದ್ದಾರೆ. ಇಲ್ಲಿ ನದಿ ಮತ್ತು ಕೆರೆಗಳು ಇಲ್ಲ. ಒಂದು ಸಾವಿರ ಅಡಿ ಆಳದಲ್ಲಿ ಕೊಳವೆಬಾವಿ ಕೊರೆದರೂ ಸಹ ನೀರು ಬರುವುದು ಬಹಳ ಕಷ್ಟ. ಕಳೆದ ಮೂರು ವರ್ಷಗಳ ಹಿಂದೆ ಇವರು ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಗಿಡವನ್ನು ನೆಟ್ಟಿದ್ದಾರೆ. ಒಟ್ಟಾರೆಯಾಗಿ 330 ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ 20 ಲೀಟರ್ ನೀರನ್ನು ತೆಗೆದುಕೊಂಡು ಬರುತ್ತಾರೆ.
ಹಾಗೆಯೇ ಮನೆಯಲ್ಲಿ ಬಳಸಿದ ನೀರನ್ನು ಸಹ ಹಾಳು ಮಾಡದೇ ಇಲ್ಲಿ ತಂದು ಗಿಡಗಳಿಗೆ ಹಾಕುತ್ತಾರೆ. ಇವರು ಪ್ರತಿಯೊಂದು ಗಿಡದ ಬುಡಕ್ಕೂ ಒಂದೊಂದು ಅಥವಾ ಎರಡು ಬಾಟಲಿಯನ್ನು ಹಾಕಿದ್ದಾರೆ. ಹಾಗಾಗಿ ದಿನನಿತ್ಯ ತಂದ ನೀರನ್ನು ಆ ಬಾಟಲಿಗೆ ಹಾಕುತ್ತಾರೆ. ಅದು ಹನಿಹನಿಯಾಗಿ ಗಿಡದ ಬುಡಕ್ಕೆ ಬೀಳುತ್ತದೆ. ಮೊದಲು ಟ್ಯಾಂಕರ್ ನಿಂದ ನೀರನ್ನು ತಂದು ಬಾಟಲಿಗೆ ತುಂಬುತ್ತಿದ್ದರು. ಆದರೆ ಅದು ಇವರಿಗೆ ಬಹಳ ಖರ್ಚು ಬೀಳುತ್ತಿತ್ತು. ಹೀಗಾಗಿ ಒಂದು ಉಪಾಯ ಮಾಡಿ ಮನೆಯ ನೀರನ್ನೇ ಬಳಸುತ್ತಿದ್ದಾರೆ. ಇದರಿಂದ ಗಿಡ ಯಾವಾಗಲೂ ಹಸಿರಾಗಿ ಇರುತ್ತದೆ. 2 ರಿಂದ 3 ತಿಂಗಳಿಗೊಮ್ಮೆ ಇದರ ಸೊಪ್ಪನ್ನು ಮಾರಾಟ ಮಾಡುತ್ತಾರೆ. ಇದರಿಂದ ಎರಡು ಸಾವಿರದಿಂದ ನಾಲ್ಕು ಸಾವಿರ ಆದಾಯವಾಗುತ್ತದೆ.
ಇದಕ್ಕೆ ನೀರು ಉಣಿಸುವ ಕೆಲಸ ಬಿಟ್ಟರೆ ಯಾವುದೇ ಬೇರೆ ಕೆಲಸದ ಅವಶ್ಯಕತೆ ಇಲ್ಲ. ಹೆಚ್ಚಿನ ಬಂಡವಾಳವನ್ನು ಇವರು ಹೂಡಿಕೆ ಮಾಡಿಲ್ಲ. ಹಾಗಾಗಿ ನಾವು ಇದರಿಂದ ತಿಳಿಯುವುದೇನೆಂದರೆ ಕಷ್ಟಪಟ್ಟರೆ ಮಾತ್ರ ಸುಖ ಸಿಗುತ್ತದೆ. ಹಾಗೆಯೇ ಎಷ್ಟೇ ಕಷ್ಟ ಬಂದರೂ ವಿಭಿನ್ನವಾಗಿ ಆಲೋಚನೆ ಮಾಡಬೇಕು. ಸುಲಭದ ದಾರಿಯನ್ನು ಹುಡುಕಬೇಕು. ಯಾವ ದಾರಿಯಲ್ಲಿ ಲಾಭ ಸಿಗುತ್ತದೆ ಎಂದು ನೋಡಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಮನಸ್ಸು ಕೊಟ್ಟು ಮಾಡಿದರೆ ಎಂತಹ ಕಠಿಣ ಕೆಲಸವನ್ನು ಬೇಕಾದರೂ ಮಾಡಬಹುದು.