ರಾಜ ತಂತ್ರ ನಿಪುಣ ಚಾಣಕ್ಯನ ಒಂದೊಂದು ಮಾತುಗಳು ಎಷ್ಟು ಸ್ಪೂರ್ತಿದಾಯಕ ಎಂದರೆ ಸಂಪೂರ್ಣವಾಗಿ ಸೋತು ಹೋದೆ ಎಂದುಕೊಂಡವನು ಮತ್ತೆ ಎದ್ದು ನಿಲ್ಲುತ್ತಾನೆ. ಅಂತಹ ಒಂದು ಶಕ್ತಿ ಚಾಣಕ್ಯನ ಮಾತುಗಳಲ್ಲಿ ಅಡಕವಾಗಿದೆ. ಇಂತಹ ಕೆಲವು ಚಾಣಕ್ಯನ ವಚನಗಳನ್ನು ನಾವೂ ಇಲ್ಲಿ ತಿಳಿಯೋಣ.
ಆಚಾರ್ಯ ಚಾಣಕ್ಯರ ಕೆಲವು ವಚನಗಳು ಇಂತಿವೆ. ಯಶಸ್ಸು, ಗೌರವ ಹಾಗೂ ಕೀರ್ತಿ ಪಡೆಯುವುದಾದರೆ ಬೆಣ್ಣೆ ಮೇಲೆ ನಡೆಯುವ ಹಾಗೆ ಹೆಜ್ಜೆ ಇಡಬೇಕು. ಹೇಗೆ ನಡೆಯಬೇಕೆಂಬ ತಂತ್ರದ ಅರಿವಿದ್ದವನಿಗೆ ಮಾತ್ರ ಈ ಮೂರು ಲಭ್ಯವಾಗುತ್ತದೆ. ಸಾಧಿಸಲು ಹೆಜ್ಜೆ ಮುಂದಿಟ್ಟಾಗ ಎಲ್ಲರೂ ತಮಾಷೆ ಮಾಡುವವರೆ. ಆದರೆ ಸಾಧಿಸಿ ತೋರಿಸಿದಾಗ ಎಲ್ಲರೂ ಬೆನ್ನು ತಟ್ಟುತ್ತಾರೆ. ಆದ್ದರಿಂದ ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಡಿ. ಒಂದು ಸಣ್ಣ ಅಂಕುಶ ದೊಡ್ಡ ಆನೆಯನ್ನು ನಿಯಂತ್ರಿಸುತ್ತದೆ. ಒಂದು ಸಣ್ಣ ದೀಪ ದೊಡ್ಡ ಅಂಧಕಾರವನ್ನು ಅಳಿಸುತ್ತದೆ. ಒಂದು ಸಿಡಿಲು ಬಡಿತ ದೊಡ್ಡ ಬೆಟ್ಟವನ್ನೆ ಪುಡಿ ಪುಡಿ ಮಾಡುತ್ತದೆ. ನಿಮ್ಮಲ್ಲಿರುವ ಸಾಮರ್ಥ್ಯ, ಆತ್ಮ ವಿಶ್ವಾಸ ತುಂಬಾ ಮುಖ್ಯವಾದುದು. ನಿಮ್ಮ ಬಾಹ್ಯ ಸೌಂದರ್ಯವಲ್ಲ. ಯಾವ ಮನುಷ್ಯನು ಹುಟ್ಟುವಾಗ ಏನು ಇರುವುದಿಲ್ಲ. ಆದರೆ ಸಾಯುವಾಗ ಮಾತ್ರ ಹೆಸರು ಪಡೆದು ಸಾಯುತ್ತಾರೆ. ಹೀಗೆ ಪಡೆದ ಹೆಸರು ಬರಿಯ ಅಕ್ಷರದಿಂದ ಕೂಡಿರದೆ ಇತಿಹಾಸ ಸೃಷ್ಟಿಸಿರಬೇಕು. ಒಬ್ಬ ದೊಡ್ಡ ಮನುಷ್ಯ ಆಗಬೇಕಾದರೆ ಅವನ ಕರ್ಮಗಳಿಂದಲೆ ಸಾಧ್ಯ. ಹುಟ್ಟಿನಿಂದ ಯಾರೂ ದೊಡ್ಡ ಮನುಷ್ಯ ಆಗಲು ಸಾಧ್ಯವಿಲ್ಲ.
ಭಾಗ್ಯದಿಂದ ಬಡತನ ಬೆಳಗಬಹುದು, ಬಟ್ಟೆಗಳು ಕೂಡಾ ಸ್ವಚ್ಛವಾಗಿದ್ದರೆ ಸುಂದರವಾಗಿ ಕಾಣುತ್ತದೆ. ರುಚಿ ಇರದ ಆಹಾರವು ಬಿಸಿ ಬಿಸಿಯಾಗಿ ಸೇವಿಸಿದರೆ ಇಷ್ಟವಾಗುತ್ತದೆ. ಒಳ್ಳೆಯ ಗುಣ ಹೊಂದಿರುವ ವ್ಯಕ್ತಿಗಳು ಶ್ರೀಮಂತಿಕೆ, ಸೌಂದರ್ಯ ಇಲ್ಲದಿದ್ದರೂ ಎಲ್ಲರಿಗೂ ಇಷ್ಟವಾಗುತ್ತಾರೆ. ಒಂದು ಕೆಲಸ ಪ್ರಾರಂಭಿಸಿದ ನಂತರ ಯಶಸ್ಸಿನ ಯೋಚನೆ ಮಾಡದೆಯೆ ಕೆಲಸದ ಬಗ್ಗೆ ಗಮನ ನೀಡುವುದು ಉತ್ತಮ. ನಿಯತ್ತು ಇದ್ದಲ್ಲಿ ಫಲ ಸಿಕ್ಕೆ ಸಿಗುತ್ತದೆ. ಅಳತೆಯನ್ನು ಮೀರಿ ತೆಗೆದುಕೊಂಡ ಸಾಲ, ಅದ್ದೂರಿಯಾಗಿ ಮಾಡಿದ ಮದುವೆ, ಸರಳತೆಯನ್ನು ಮೀರಿ ನಡೆಸಿದ ತೋರಿಕೆಯ ಬದುಕು, ಅತಿಯಾಗಿ ಇನ್ನೊಬ್ಬರನ್ನು ನಂಬುವುದು, ಅತಿಯಾದ ಪ್ರೀತಿ, ಇವುಗಳು ಯಾವತ್ತು ಒಳ್ಳೆಯದಲ್ಲ. ಹಾಲನ್ನು ಸೇರಿ ನೀರು ಹಾಲಾಗುವಂತೆ ಗುಣ ಹೀನನು ಗುಣವಂತನ ಆಶ್ರಯ ಪಡೆದರೆ ಗುಣವಂತನಾಗಿ ಬದಲಾಗುತ್ತಾನೆ. ದುರ್ಗುಣ ಉಳ್ಳವರು ಮತ್ತು ಸರ್ಪದ ನಡುವಿನ ಆಯ್ಕೆ ಮಾಡಬೇಕಾದರೆ ಸರ್ಪವನ್ನೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ದುರ್ಜನರು ಯಾವಾಗಲೂ ವಿಷ ಕಾರುತ್ತಲೆ ಇರುತ್ತಾರೆ. ಆದರೆ ಸರ್ಪ ತೊಂದರೆ ಆದಾಗ ಮಾತ್ರ ಕಚ್ಚುತ್ತದೆ.
ಆಚಾರ್ಯ ಚಾಣಕ್ಯರ ಮಾತುಗಳು ಜೀವನದ ಕಟು ಸತ್ಯಗಳಾಗಿವೆ. ಆಚಾರ್ಯ ಚಾಣಕ್ಯರ ಮಾತುಗಳನ್ನು ಅನುಸರಿಸಿ, ಯಶಸ್ಸು ಗಳಿಸುವಲ್ಲಿ ಸಫಲರಾಗುತ್ತಾರೆ.