ದಾಳಿಂಬೆ ಕೃಷಿಯು ಲಾಭದಾಯಕವಾಗಿದ್ದು ಹೆಚ್ಚಿನ ಆದಾಯ ನೀಡುತ್ತದೆ.ವಿಶ್ವದ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳ ಪ್ರಮುಖ ಹಣ್ಣಿನ ಬೆಳೆ.ಇದನ್ನು ಭಾರತ, ಇರಾನ್, ಚೀನಾ, ಟರ್ಕಿ, ಯುಎಸ್ಎ, ಸ್ಪೇನ್, ಅಜರ್ಬೈಜಾನ್, ಅರ್ಮೇನಿಯಾ, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಪಾಕಿಸ್ತಾನ, ಟುನೀಶಿಯಾ, ಇಸ್ರೇಲ್, ಆಗ್ನೇಯ ಏಷ್ಯಾಯದ ಶುಷ್ಕ ಪ್ರದೇಶಗಳು, ಪೆನಿನ್ಸುಲರ್ ಮಲೇಷಿಯಾ, ಈಸ್ಟ್ ಇಂಡಿಯಾ ಮತ್ತು ಉಷ್ಣವಲಯದ ಆಫ್ರಿಕಾ ಇತ್ಯಾದಿ ದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಭಾರತ ದಾಳಿಂಬೆ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿದೆ.
ಭಾರತದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ದಾಳಿಂಬೆ ವಿಸ್ತೀರ್ಣ, ಉತ್ಪಾದನೆ ಮತ್ತು ರಫ್ತುಗಳಲ್ಲಿ ಸ್ಥಿರವಾದ ಹೆಚ್ಚಳವಾಗುತ್ತಿದೆ. ಅದೇ ರೀತಿ ದೊಡ್ಡಉಳ್ಳಾರ್ತಿಯ ಭೀಮಾ ರೆಡ್ಡಿ ಎಂಬ ಹೆಸರಿನ ರೈತ 13 ವರ್ಷಗಳಿಂದ ದಾಳಿಂಬೆ ಬೆಳೆಯುತ್ತಿದ್ದು ಈ ಕೃಷಿಯಿಂದ ವಾರ್ಷಿಕ 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದಾಳಿಂಬೆ ಹಣ್ಣು ನಮ್ಮ ಆರೋಗ್ಯಕ್ಕೆ ಬಹಳವೇ ಪ್ರಯೋಜನಕಾರಿ ಹಾಗಾಗಿ ಈ ಹಣ್ಣಿಗೆ ಪ್ರತಿದಿನವೂ ಬೇಡಿಕೆ ಇದ್ದೇ ಇರುತ್ತದೆ. ಬೇಡಿಕೆ ಹೆಚ್ಚಾದ ಕಾರಣಕ್ಕೆ ನಿರಂತರ ಹದಿಮೂರು ವರ್ಷಗಳಿಂದ ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಬೆಳೆಗಾರ ಭೀಮಾ ರೆಡ್ಡಿ ಹೆಸರಿನ ರೈತ12 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಲೆಯನ್ನು ಬೆಳೆದು ಪ್ರತಿ ವರ್ಷ 40 ಲಕ್ಷದಿಂದ 50 ಲಕ್ಷ ರೂಪಾಯಿ ಆದಾಯವನ್ನು ಪಡೆಯುತ್ತಿದ್ದಾರೆ. ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ಎಂಬ ಸ್ಥಳೀಯ ಬ್ಯಾಂಕ್ ನಲ್ಲಿ 4ರಿಂದ 5 ಲಕ್ಷ ರೂಪಾಯಿಯಷ್ಟು ಹಣವನ್ನು ಸಾಲವನ್ನಾಗಿ ಪಡೆದು ಕೊಳವೆಬಾವಿ ಕೊರೆಸಿ ಅದರಿಂದ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿದರು.
ಮಳೆಯನ್ನೆ ಆಶ್ರಯವಾಗಿಸಿಕೊಂಡಿದ್ದ 12 ಎಕರೆ ಭೂಮಿಯನ್ನು ಕೊಳವೆ ಬಾವಿಯ ಸಹಾಯದಿಂದ ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿ ಆ ಪ್ರದೇಶದಲ್ಲಿ ವರ್ಷ ಒಂದೇ ಬಾರಿ ಬರೀ ದಾಳಿಂಬೆ ಬೆಲೆಯನ್ನು ಬೆಳೆದು ಉತ್ತಮ ಆದಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಣಮಟ್ಟದ ಹಣ್ಣುಗಳು ದೊರೆತಲ್ಲಿ ತಮಿಳುನಾಡು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಮುಂತಾದ ಭಾಗಗಳಿಂದ ಮಾರಾಟಗಾರರು ಹೊಲಕ್ಕೆ ಬಂದು ಖರೀದಿ ಮಾಡುತ್ತಾರೆ. ಹಾಗಾಗಿ ಮಾರುಕಟ್ಟೆಯ ಸಮಸ್ಯೆಯೇ ಎದುರಾಗುವುದಿಲ್ಲ.
12 ಎಕರೆಗೆ ಪ್ರತಿ ವರ್ಷ ದಾಳಿಂಬೆ ಬೆಲೆಯನ್ನು ಬೆಳೆಯಲು ಕನಿಷ್ಠ 7 ರಿಂದ 8 ಲಕ್ಷ ವೆಚ್ಚ ಮಾಡುತ್ತಾರೆ ನಾಟಿ ಮಾಡಿದ ಪ್ರತಿ ಗಿಡ ಫಲ ಕೊಡುವವರೆಗೂ ಮಕ್ಕಳಂತೆ ಕಾಪಾಡುತ್ತಾರೆ. ಹೀಗಾಗಿ ಬೇಸಾಯ, ಕೂಲಿ, ಗೊಬ್ಬರ ಹಾಗೂ ಔಷಧ ಖರ್ಚು ಇವುಗಳನ್ನು ಬಿಟ್ಟು ಪ್ರತಿ ಎಕರೆಗೆ 5 ರಿಂದ 6 ಲಕ್ಷದವರೆಗೆ ವರ್ಷಕ್ಕೆ 12 ಎಕರೆ ಬೆಳೆಗೆ 50 ರಿಂದ 60 ಲಕ್ಷ ಆದಾಯ ಬರುತ್ತದೆ ಎಂದು ಭೀಮಾ ರೆಡ್ಡಿ ತಿಳಿಸಿದ್ದಾರೆ.
ಭೀಮಾ ರೆಡ್ಡಿ ಅವರು ಬೆಲೆ ಬೆಳೆಯುವ ವಿಧಾನ ಈ ರೀತಿಯಾಗಿವೆ. 2ರಿಂದ 3 ಬಾರಿ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿಕೊಳ್ಳುತ್ತಾರೆ ಮತ್ತು 5 ರಿಂದ 6 ಅಡಿಗಳ ಅಂತರದಲ್ಲಿ ಗುಂಡಿ ನಿರ್ಮಾಣ ಮಾಡಿ ಹಸಿರು ಸೊಪ್ಪು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಆ ಗುಂಡಿಗೆ ಹಾಕುತ್ತಾರೆ. 6 ತಿಂಗಳ ನಂತರ ಗುಂಡಿಯಲ್ಲಿ ಸಸಿಯನ್ನು ನಾಟಿ ಮಾಡಿ ನಂತರ ಕೋಲಿನ ಆಸರೆ ಕೊಟ್ಟು ಸಸಿಗಳನ್ನು ರಕ್ಷಿಸಿದ್ದಾರೆ. ವಾರಕ್ಕೆ 2–3 ಬಾರಿ ಸಸಿಗಳಿಗೆ ನೀರು ಹಾಯಿಸಿ, ಗಿಡದ ಬುಡದಲ್ಲಿ ಬೆಳೆದ ರೆಂಬೆಗಳನ್ನು ಕತ್ತರಿಸಬೇಕು. ಹೀಗೆ ಬೆಳೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.
ನಾಟಿ ಮಾಡಿದ ಎರಡು ವರ್ಷಗಳಿಗೆ ಫಲ ನೀಡುತ್ತವೆ. ಹಣ್ಣಿನ ರಕ್ಷಣೆಗೆ ಪ್ರತಿ ಗಿಡಕ್ಕೂ ಬಲೆಯನ್ನು ಹೊದೆಸಬೇಕು. ವರ್ಷಕ್ಕೆ ಎರಡು ಬಾರಿ ಬೆಳೆ ತೆಗೆಯಬಹುದು. ಹಣ್ಣಿನ ಗಾತ್ರ, ಬಣ್ಣ, ರುಚಿಯ ಜೊತೆಗೆ ಬೆಳೆ ಉತ್ತಮ ಇಳುವರಿ ನೀಡಬೇಕೆಂದರೆ ವರ್ಷಕ್ಕೆ ಒಂದೇ ಬಾರಿ ಹಣ್ಣನ್ನು ಕಟಾವ್ ಮಾಡುವುದು ಸೂಕ್ತ ಎಂದು ಹೇಳುತ್ತಾರೆ ದಾಳಿಂಬೆಬೆಳೆಗಾರ ಭೀಮಾ ರೆಡ್ಡಿ ಅವರು. ಹಾಗೂ ಇವರ ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಗಾತ್ರ, ಬಣ್ಣ ಹಾಗೂ ರುಚಿ ಭಿನ್ನವಾಗಿರುವುದರಿಂದ ಈ ಭಾಗದ ಹಣ್ಣಿಗೆ ಹೊರ ದೇಶ ಹಾಗೂ ರಾಜ್ಯದಲ್ಲಿ ಭಾರಿ ಬೇಡಿಕೆ ಇದೆ. ಕಡಿಮೆ ನೀರಿನಲ್ಲಿ ಹೆಚ್ಚು ದಾಳಿಂಬೆ ಬೆಳೆದು ಉತ್ತಮ ಆದಾಯ ಪಡೆಯಬಹುದು. ಫಲಕ್ಕೆ ಬರುವವರೆಗೆ ದಾಳಿಂಬೆ ಬೆಳೆ ನಡುವೆ ತರಕಾರಿ ಬೆಳೆದು ಆದಾಯ ಪಡೆಯಬಹುದು.
ಪ್ರತಿಯೊಂದು ಬೆಳೆಗೂ ಒಂದೊಂದು ರೋಗ ಬಂದೆ ಬರುತ್ತದೆ ಅದೇ ರೀತಿ ಭೀಮಾ ರೆಡ್ಡಿ ಅವರು ತಾವು ಬೇಳೆದಂತಹ ದಾಳಿಂಬೆ ಹಣ್ಣುಗಳನ್ನು ಯಾವ ರೀತಿ ರೋಗ ನಿವಾರಣೆ ಮಾಡಿದ್ದಾರೆ ಎಂದು ನೋಡುವುದಾದರೆ, ದಾಳಿಂಬೆ ಬೆಳೆಗೆ ಸಾಮಾನ್ಯವಾಗಿ ಹಣ್ಣುಕೊರಕ, ಕಾಂಡಕೊರಕ, ಥ್ರಿಪ್ಸ್, ನುಸಿ, ತಿಗಣೆ, ಎಲೆಚುಕ್ಕೆ ಹಾಗೂ ಬೂದು ರೋಗ ಕಾಣಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ 2.5 ಗ್ರಾಂ, ಕ್ಲೋರೋಪೈರಿಫಾಸ್, 1.5 ಗ್ರಾಂ, ಮಾನೋಕ್ರೋಟೊಫಾನ್ ಮತ್ತು 1 ಗ್ರಾಂ, ಕಾರ್ಬೆಂಡೈಜಿಂ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬೇಕು. ಇದರಿಂದ ರೋಗ ಹತೋಟಿಗೆ ಬರುತ್ತದೆ. ಗಿಡದಲ್ಲಿ ಹಣ್ಣುಗಳು ಬಿಟ್ಟ ನಂತರ 4 ಗ್ರಾಂ ಕಾರ್ಬಾರಿಲ್ ನೀರಿನೊಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪರಣೆ ಮಾಡಬೇಕು. ಇದರಿಂದ ಹಣ್ಣು ಬಣ್ಣ ಬರುವುದರ ಜತೆಗೆ ಗಾತ್ರವೂ ದೊಡ್ಡದಾಗುತ್ತದೆ ಎಂದು ಹೇಳುತ್ತಾರೆ.