ಪ್ರತಿದಿನ ಕೆಲವೊಂದು ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸೇವಿಸುತ್ತಿದ್ದರೂ ಕೂಡ ಅದರ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ಆದರೆ ದೊಡ್ಡ ದೊಡ್ಡ ಕಾಯಿಲೆಗಳನ್ನು ಉಪಶಮನ ಮಾಡುವ ತಾಕತ್ತು ಮಜ್ಜಿಗೆಗಿದೆ. ಹೆಚ್ಚಿನ ಭಾರತೀಯರ ಮನೆಗಳಲ್ಲಿ ಊಟದ ನಂತರ ಮಜ್ಜಿಗೆ ದಿನನಿತ್ಯ ಕುಡಿಯುವ ಸಂಪ್ರದಾಯವಿದೆ. ಕೆಲವರು ರುಚಿಯಾಗಲಿ ಎಂದು ಮಜ್ಜಿಗೆಗೆ ಜೀರಿಗೆ ಪುಡಿ, ಮೆಣಸು, ಶುಂಠಿ, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪಿನಂತಹ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡಿ ಕುಡಿಯುತ್ತಾರೆ. ಆದ್ದರಿಂದ ನಾವು ಇಲ್ಲಿ ಮಜ್ಜಿಗೆಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸಂಸ್ಕೃತದಲ್ಲಿ ಮಜ್ಜಿಗೆಗೆ ತಕ್ರ ಎಂದು ಕರೆಯುತ್ತಾರೆ. ಹೆಚ್ಚು ಉಷ್ಣತೆ ದೇಹದಿಂದ ಕೂಡಿರುವವರು ಮಜ್ಜಿಗೆಯನ್ನು ದಿನನಿತ್ಯ ಕುಡಿಯಬೇಕು. ಬೇಸಿಗೆಯಲ್ಲಿ ದಿನನಿತ್ಯ ಒಂದು ಗ್ಲಾಸ್ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಪೌಷ್ಟಿಕ ಮತ್ತು ಸಮತೋಲಿತ ಆಹಾರದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್ ಗಳು, ಕನಿಷ್ಠ ಲಿಪಿಡ್ ಗಳು, ಜೀವಸತ್ವಗಳು ಮತ್ತು ಕಿಣ್ವಗಳನ್ನು ಹೊಂದಿರುತ್ತದೆ. ಮಜ್ಜಿಗೆ ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಯಾವುದೇ ರುಚಿಯ ಪಾನೀಯ ಅಥವಾ ಸರಳ ನೀರಿಗಿಂತ ಮಜ್ಜಿಗೆಯನ್ನು ಕುಡಿಯುವುದು ಉತ್ತಮ. ಜೈವಿಕವಾಗಿ ಮಾನವ ದೇಹ ಮತ್ತು ಅಂಗಾಂಶಗಳಿಗೆ ಬಹಳ ಪೌಷ್ಟಿಕ ಪಾನೀಯವಾಗಿದೆ. ಮಜ್ಜಿಗೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಮೃದ್ಧವಾಗಿದೆ. ಅಂತಹ ಬ್ಯಾಕ್ಟೀರಿಯಾಗಳನ್ನು ಪ್ರೋಬಯಾಟಿಕ್‌ಗಳು ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರ ಕೊಲೊನ್‌ನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ಬ್ಯಾಕ್ಟೀರಿಯಾಗಳು ವ್ಯಕ್ತಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಇದರಿಂದ ದೇಹ ತಂಪಾಗಿರುತ್ತದೆ.
ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಸಾಲೆಯುಕ್ತ ಆಹಾರ ಸೇವಿಸಿದಾಗ ಖಡ್ಡಾಯವಾಗಿ ಮಜ್ಜಿಗೆ ಕುಡಿಯಿರಿ. ಆಗ ಹೊಟ್ಟೆಯಲ್ಲಿ ಯಾವುದೇ ಕಿರಿಕಿರಿ ಇದ್ದರೂ ನಿವಾರಿಸುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡಲು ಮಜ್ಜಿಗೆ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣುಮಕ್ಕಳು ಋತುಬಂಧಕ್ಕೆ ಮುಂಚೆ ಮತ್ತು ನಂತರ ಹೆಚ್ಚು ಮಜ್ಜಿಗೆ ಕುಡಿಯಬೇಕು. ಮಹಿಳೆಯರಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ ಎಂದು ಹೇಳಬಹುದು. ಮಜ್ಜಿಗೆಗೆ ಏನನ್ನೂ ಸೇರಿಸದೇ ಸೇವನೆ ಮಾಡಿದರೆ ಬಹಳ ಒಳ್ಳೆಯದು.