ಗೋಧಿ ಮತ್ತು ಅರಿಶಿಣ ಬಣ್ಣ ಹೇಗಿರುತ್ತೆ ಅಂತಾ ಎಲ್ಲರಿಗೂ ಗೊತ್ತಿರುತ್ತೆ. ಆದರೆ ನಾವು ಕಪ್ಪು ಅರಿಶಿಣ ಮತ್ತು ಕಪ್ಪು ಗೋಧಿಯ ಬಗ್ಗೆ ಮಾತನಾಡುವಾಗ ಯಾರೂ ಅದನ್ನು ನಂಬುವುದಿಲ್ಲ. ಅಂತಹ ವಿಷಯಗಳ ಬಗ್ಗೆ ಮಾತನಾಡುವುದು ಸ್ವಲ್ಪ ವಿಚಿತ್ರವೆನಿಸಿದರೂ ಇದು ಸತ್ಯ. ಗದಗ್​​ ನಲ್ಲಿ ವಕೀಲರು ಒಬ್ಬರು ಕಪ್ಪು ಗೋಧಿ ಬೆಳೆದು ಯಶಸ್ವಿಯಾಗಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಎಂಬುವರು ವೃತ್ತಿಯಲ್ಲಿ ವಕೀಲರಾಗಿದ್ದು ಕೃಷಿ ಇವರ ಹವ್ಯಾಸವಾಗಿದೆ. ಇವರು ಬೆಳೆದ ಕಪ್ಪು ಗೋಧಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿ ವರ್ಷ ಕೃಷಿಯಲ್ಲಿ ಒಂದು ಹೊಸ ಪ್ರಯೋಗ ಮಾಡೋದು, ಅದರಲ್ಲಿ ಏನಾದರೂ ಒಂದು ಹೊಸತನ ಕಂಡುಕೊಳ್ಳುವುದು ಇವರಿಗೆ ಅಚ್ಚುಮೆಚ್ಚು. ಹಾಗೇನೆ ಬಹಳಷ್ಟು ಸಾರಿ ಕೃಷಿಯಲ್ಲಿ ಬೇರೆ ಬೇರೆ ಬೆಳೆ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದ ಇವರು ಕಳೆದ ಲಾಕ್​ಡೌನ್​​ಲ್ಲಿ ಹುಟ್ಟಿಕೊಂಡ ಇನ್ನೊಂದು ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 1 ಲಕ್ಷ 70 ಸಾವಿರಕ್ಕಿಂತ ಹೆಚ್ಚು ಬೆಲೆ ಬರುವ ಕಪ್ಪುಗೋಧಿ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಕಪ್ಪು ಗೋಧಿ ಅಂತ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಈ ಕಪ್ಪು ಗೋಧಿಯನ್ನ ಕರ್ನಾಟಕದಲ್ಲಿ ಎಲ್ಲಿಯೂ ಬೆಳೆಯುವುದಿಲ್ಲ ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಬೆಳೆಯನ್ನ ಎಲ್ಲಿಯೂ ಬೆಳೆಯೋದಿಲ್ಲ. ಇದರ ಬದಲಾಗಿ ಉತ್ತರ ಭಾರತದ ಕೇವಲ‌ ನಾಲ್ಕು ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಉತ್ತರ ಪ್ರದೇಶ ಬಿಹಾರ ಪಂಜಾಬ್ ಹರಿಯಾಣದ ಜಿಲ್ಲೆಗಳಲ್ಲಿ ಮಾತ್ರ ಅದೂ ಕೇವಲ ಕೆಲವು ಆಯ್ದ ಭಾಗಗಳಲ್ಲಿ ಮಾತ್ರ ಬೆಳೆಯುತ್ತಾರೆ.

ಇದು ಎಲ್ಲೆಂದರಲ್ಲಿ ಬೆಳೆಯೋದಕ್ಕೆ ಆಗುವುದಿಲ್ಲ ಹಾಗೆಯೇ ಅದೂ ಬೆಳೆಯೋದು ಕೂಡಾ ಇಲ್ಲ. ಇಂತಹ ಒಂದು ಬೆಳೆಯನ್ನ ಗದಗ ಜಿಲ್ಲೆಗೆ ಅಲ್ಲಿನ ರೈತ ಪರಿಚಯ ಮಾಡಿಕೊಟ್ಟಿದ್ದಾರೆ. ಇನ್ನು ಈ ಬೆಳೆಗೆ ಒಂದು ಕ್ವಿಂಟಲ್​​ಗೆ 1.7 ಲಕ್ಷ ರೂಪಾಯಿ. ಇಷ್ಟೊಂದು ಬೆಲೆ ಯಾಕೆ ಎಂದು ಪ್ರಶ್ನೆ ಬರಬಹುದು ಆದರೆ ಇದರಲ್ಲಿ ಔಷಧಿಯಗುಣ ಮತ್ತು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ ಎನ್ನಲಾಗಿದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಫಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮೆಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನು ಇದು ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಒಬೀಸಿಟಿ, ಬಿಪಿ ಇರುವಂತ ರೋಗಿಗಳಿಗೆ ಇದು ಬಹಳ ಉಪಯುಕ್ತ ಎಂದೇ ಹೇಳಬಹುದು.

ಇನ್ನು ಈ ಭಾಗದಲ್ಲಿ ಸಾಮಾನ್ಯವಾಗಿ ಕೆಂಪು ಗೋಧಿ ಬೆಳೆಯಲಾಗುತ್ತದೆ. ಕಪ್ಪುಗೋಧಿ ಬಹುತೇಕ ಜನರಿಗೆ ಗೊತ್ತಿಲ್ಲ. ಇಂತಹ ಬೆಳೆಗಳು ನಮ್ಮ ರೈತರಿಗೂ ಪರಿಚಯ ಆಗಲಿ ಅವರೂ ಸಹ ಇಂತಹ ಬೆಳೆಗಳಿಂದ ಅಭಿವೃದ್ಧಿ ಹೊಂದಲಿ ಎನ್ನುತ್ತಾರೆ ವಕೀಲ ವೃತ್ತಿ ಮಾಡುವ ಮೃತ್ಯುಂಜಯ ಅವರು. ಮೃತ್ಯುಂಜಯ ಅವರಿಗೆ ಈ ಪ್ರಯೋಗ ಹೊಳೆದಿದ್ದು ಲಾಕ್​ಡೌನ್​ ಸಮಯದಲ್ಲಿ.  ಖಾಲಿ ಕುಳಿತಾಗ ಹೀಗೆ ಗೂಗಲ್ ಸರ್ಚ್ ಮಾಡುತ್ತಾ ಈ ಹೊಸ ಪ್ರಯೋಗ ಹೊಳೆದಿದೆಯಂತೆ. ಇನ್ನು ಇದರ ಜೊತೆಗೆ ಕಡಲೆ, ಜೋಳ, ಮೆಣಸಿನಕಾಯಿ ಹೀಗೆ ಹಲವು ಬೆಳೆಗಳನ್ನು ಸಹ ಬೆಳೆಯುತ್ತಾರೆ. ಇದಕ್ಕಾಗಿ ಓರ್ವ ರೈತನನ್ನ ಕೂಡಾ ಇಟ್ಟುಕೊಂಡಿದ್ದಾರೆ. ಅವರೇ ಇವರ ಪ್ರಯೋಗಕ್ಕೆ ಸಾಥ್ ಕೊಟ್ಟು ವಕೀಲರು ಹೇಳಿದಂತೆ ಉಳುಮೆ ಮಾಡಿದ್ದಾರೆ. ಆನ್​ಲೈನ್​ ಮೂಲಕ ಕರಿಗೋಧಿ ತರಿಸಿಕೊಂಡು ಬಿತ್ತಿದ್ದಾರಂತೆ. ಮೊದಲು ಬೆಳೆ ಬಗ್ಗೆ ಅವರಿಗೂ ಅನುಮಾನವಿತ್ತು. ಆದರಿಗ ಇದರಲ್ಲಿ ಯಶಸ್ವಿಯಾಗಿದ್ದಾರೆ. ಜನ ಈಗ ಇವರ ಪ್ರಯೋಗ ನೋಡೋದಕ್ಕೆ ಬರುತ್ತಿದ್ದಾರೆ. ನಾವು ಈ ರೀತಿ ಬೆಳೆ ಬೆಳೆಯಬಹುದ ಅಂತ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!